Covid Variant: ಭಿನ್ನ ರೋಗಲಕ್ಷಣಗಳ ಕೋವಿಡ್ ರೂಪಾಂತರಿ ʼಆರ್ಕ್ಟುರಸ್ʼ: ಮಕ್ಕಳನ್ನು ಕಾಡುವ ಅಪಾಯ ಹೆಚ್ಚಿದ್ದು, ಮುನ್ನೆಚ್ಚರಿಕೆ ಅಗತ್ಯ
ಕೋವಿಡ್ ಮಹಾಮಾರಿಗೆ ಅಂತ್ಯವೆಂಬುದೇ ಇಲ್ಲ. ದಿನಕ್ಕೊಂದು ಬಗೆಯ ರೂಪಾಂತರಿ ತಳಿಗಳು ಸೃಷ್ಟಿಯಾಗುತ್ತಲೇ ಇವೆ. ಮಾರ್ಚ್ ಅಂತ್ಯದಲ್ಲಿ ಕಾಣಿಸಿದ ʼಎಕ್ಸ್‌ಬಿಬಿ 1.16 ಅಥವಾ ಆರ್ಕ್ಟುರಸ್ʼ ಇದೀಗ ಭಿನ್ನ ರೋಗಲಕ್ಷಣಗಳನ್ನು ಹರಡಲು ಕಾರಣವಾಗಿದೆ. ಅಲ್ಲದೆ ಇದು ಮಕ್ಕಳನ್ನು ಹೆಚ್ಚು ಬಾಧಿಸುವ ಸಾಧ್ಯತೆ ಇದೆ ಎನ್ನುತ್ತಿವೆ ಅಧ್ಯಯನಗಳು.
ಕೋವಿಡ್ ಮಹಾಮಾರಿಯೂ ದಿನಕ್ಕೊಂದು ರೂಪದಲ್ಲಿ ಜಗತ್ತಿನ ಮೇಲೆ ಸವಾರಿ ಮಾಡುತ್ತಿದೆ. ಇದರ ಹೊಸ ಹೊಸ ರೂಪಾಂತರಿ ತಳಿಗಳು ದಿನಕ್ಕೊಂದು, ಕ್ಷಣಕ್ಕೊಂದು ರೀತಿಯ ರೋಗಲಕ್ಷಣಗಳನ್ನು ಹುಟ್ಟು ಹಾಕುತ್ತಿವೆ. ಇದೀಗ ಕೋವಿಡ್‌ನ ರೂಪಾಂತರಿ ಎಕ್ಸ್‌ಬಿಬಿ 1.16 ಸದ್ದು ಮಾಡುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಹೊಸ ಕೋವಿಡ್ ರೂಪಾಂತರದ ಮೇಲೆ ದೃಷ್ಟಿ ನೆಟ್ಟಿದ್ದು, ಇದು ಇತರ ಓವಿಕ್ರಾನ್ ಉಪ ತಳಿಗಳಿಂತ ಭಿನ್ನವಾಗಿದೆ. ಈ ತಳಿಯು ವಿಶೇಷವಾಗಿ ಮಕ್ಕಳನ್ನು ಕಾಡುವ ಸಾಧ್ಯತೆ ಇದ್ದು, ಭಿನ್ನ ರೋಗಗಳನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
ʼಆರ್ಕ್ಟುರಸ್ʼ ಎಂಬ ಅಡ್ಡ ಹೆಸರಿನಿಂದಲೂ ಕರೆಯುವ, ಎಕ್ಸ್‌ಬಿಬಿ 1.16 ಕೋವಿಡ್ ಉಪತಳಿಯು ಅಮೆರಿಕಾ, ಸಿಂಗಾಪುರ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಉಲ್ಬಣವಾಗುತ್ತಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಕ್ಸ್‌ಬಿಬಿ 1.16 ಅನ್ನು ʼಮೇಲ್ವಿಚಾರಣೆಯಲ್ಲಿರುವ ರೂಪಾಂತರಿʼ ಎಂದು ಘೋಷಿಸಿತ್ತು. ಅಲ್ಲದೆ, ಇದು ಇನ್ನೂ ವ್ಯಾಪಕವಾಗಿ ಹರಡುವ ರೂಪಾಂತರವಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿತ್ತು.
ವಿಶ್ವಸಂಸ್ಥೆಯ ಕೋವಿಡ್ ತಾಂತ್ರಿಕ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಕೋವ್ ಈ ಕುರಿತು ಎಚ್ಚರಿಕೆ ನೀಡಿದ್ದರು. ಅಲ್ಲದೆ ಇದರ ಬಗ್ಗೆ ಒಂದು ಕಣ್ಣಿಡಬೇಕು ಅಂತಲೂ ಹೇಳಿದ್ದರು.
ಈ ರೋಗಲಕ್ಷಣಗಳ ಬಗ್ಗೆ ಎಚ್ಚರವಿರಲಿ
ಇಂಡಿಯನ್ ಆಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಸಮಿತಿಯ ಮಾಜಿ ಮುಖ್ಯಸ್ಥ ಹಾಗೂ ಶಿಶುವೈದ್ಯ ಡಾ. ವಿಪಿನ್ ವಶಿಷ್ಠ ಅವರ ಪ್ರಕಾರ ಈ ರೂಪಾಂತರವು ಮಕ್ಕಳಲ್ಲಿ ತೀವ್ರ ಥರದ ಜ್ವರ, ಕೆಮ್ಮೆ ಹಾಗೂ ತುರಿಕೆ, ಕಾಂಜಂಕ್ಟಿವಿಟಿಸ್ (ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗುವುದು - ಪಿಂಕ್ ಐ) ಮುಂತಾದ ರೋಗಲಕ್ಷಣವನ್ನು ಉಂಟು ಮಾಡಬಹುದು.
ಆರ್‌ಟಿಐ ಇಂಟರ್‌ನ್ಯಾಷನಲ್‌ನ ಸಾಂಕ್ರಾಮಿಕ ರೋಗಗಳ ರೋಗಶಾಸ್ತ್ರಜ್ಞ ರಿಚರ್ಡ್ ರೈಥಿಂಗರ್ ಫಾರ್ಚೂನ್ (ಅಮೆರಿಕಾ ಮೂಲದ ಪತ್ರಿಕೆ) ಗೆ ನೀಡಿದ ಹೇಳಿಕೆಯ ಪ್ರಕಾರ ʼವೈರಸ್‌ನ ರೋಗಲಕ್ಷಣಗಳು ನಿಜಕ್ಕೂ ಬದಲಾಗಿದ್ದರೆ, ಹಿಂದೆಯೇ ಈ ಬಗ್ಗೆ ತಿಳಿಸಲಾಗಿತ್ತುʼ ಎಂದಿದ್ದಾರೆ. ಯಾಕೆಂದರೆ ಈ ಹಿಂದೆ ಕೋವಿಡ್ ರೋಗಲಕ್ಷಣಗಳಲ್ಲಿ ಕಾಂಜಂಕ್ಟಿವಿಟಿಸ್ ಕೂಡ ಒಂದು ಎಂಬುದು ವರದಿಯಾಗಿದ್ದನ್ನು ಅವರು ಇಲ್ಲಿ ಉಲ್ಲೇಖಿಸುತ್ತಾರೆ.
ನೆಬ್ರಾಸ್ಕ್ ಮೆಡಸಿನ್‌ನ ಟ್ರುಹ್ಲ್‌ಸೆನ್ ಐ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಕಣ್ಣೀರಿನ ಚಿತ್ರದಲ್ಲಿ ವೈರಸ್ ಅನ್ನು ಗುರುತಿಸಿದ್ದಾರೆ, ಇದು ಕಾಂಜಂಕ್ಟಿವಿಟಿಸ್‌ಗೆ ಕಾರಣವಾಗಬಹುದು ಎಂದಿದ್ದಾರೆ. ಈ ಇನ್‌ಸ್ಟಿಟ್ಯೂಟ್ ಪ್ರಕಾರ ಕಾಂಜಂಕ್ಟಿವಿಟಿಸ್‌ನ ಲಕ್ಷಣಗಗಳು ಹೀಗಿವೆ; ಕಣ್ಣಲ್ಲಿ ನೀರು ಸೋರುವುದು, ಕಣ್ಣು ಕೆಂಪಾಗುವುದು, ಊತ, ನೋವು, ತುರಿಕೆ ಹಾಗೂ ಬಿಳಿದ್ರವ ಸೋರಿಕೆಯಾಗುವುದು.
ನ್ಯೂಯಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಸಿಸ್ಟೆಂಟ್ ಡೀನ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ರಾಜ್ ರಾಜನಾರಾಯಣ್ ಫಾರ್ಚೂನ್‌ಗೆ ನೀಡಿದ ಹೇಳಿಕೆಯಲ್ಲಿ ʼಎಕ್ಸ್‌ಬಿಬಿ 1.16 ಮತ್ತು ಅದರ ಉಪತಳಿಗಳು ಹೊರ ರೂಪಾಂತರವಾಗಿ ತ್ವರಿತವಾಗಿ ವಿಕಸನಗೊಳ್ಳುತ್ತವೆ. ಅಲ್ಲದೆ ಇದು ಕೋವಿಡ್ ರೂಪಾಂತರಗಳನ್ನು ಹೊರ ಹಾಕುವ ಓಮ್ಫ್‌ವನ್ನು ಹೊಂದಿದೆʼ ಎಂದಿದ್ದಾರೆ.
ಎಕ್ಸ್‌ಬಿಬಿ 1.16ಯು, ಬಿಎ.2ನ ಎರಡು ಉಪತಳಿಗಳ ಮರುಸಂಯೋಜನೆಯಾಗಿದೆ. ಟೊಕಿಯೊ ವಿಶ್ವವಿದ್ಯಾನಿಯಲದ ವಿಜ್ಞಾನಗಳ ಅಧ್ಯಯನವು ಎಕ್ಸ್‌ಬಿಬಿ 1.16 ಸಂಬಂಧಿಗಳಾದ ಎಕ್ಸ್‌ಬಿಬಿ.1 ಮತ್ತು ಎಕ್ಸ್‌ಬಿಬಿ.1.5 ಗಿಂತ 1.17 ರಿಂದ 1.27 ಪಟ್ಟು ಹೆಚ್ಚು ಇದು ಪರಿಣಾಮಕಾರಿಯಾಗಿ ಹರಡುತ್ತದೆ ಎಂಬ ಅಂಶವನ್ನು ತಿಳಿಸಿದೆ. ಅಲ್ಲದೆ ಸದ್ಯದಲ್ಲೇ ಪ್ರಪಂಚವ್ಯಾಪಿಯಾಗಿ ಹರಡುವ ಸಾಧ್ಯತೆ ಇದೆ ಎಂಬುದನ್ನೂ ಈ ಅಧ್ಯಯನ ತಿಳಿಸಿದೆ.
ವಿಭಾಗ