Friendship: ಸ್ನೇಹದಲ್ಲಿರಲಿ ಪ್ರೀತಿ ಗೌರವ ನಂಬಿಕೆ; ನಿಮ್ಮ ಗೆಳೆಯರಲ್ಲಿ ಈ ಸ್ವಭಾವಗಳಿದ್ರೆ ಅಂಥವರಿಂದ ಇಂದೇ ದೂರಾಗೋದು ಉತ್ತಮ-relationship is your friend also behaves like this then this is the right time to move on friendship nature arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Friendship: ಸ್ನೇಹದಲ್ಲಿರಲಿ ಪ್ರೀತಿ ಗೌರವ ನಂಬಿಕೆ; ನಿಮ್ಮ ಗೆಳೆಯರಲ್ಲಿ ಈ ಸ್ವಭಾವಗಳಿದ್ರೆ ಅಂಥವರಿಂದ ಇಂದೇ ದೂರಾಗೋದು ಉತ್ತಮ

Friendship: ಸ್ನೇಹದಲ್ಲಿರಲಿ ಪ್ರೀತಿ ಗೌರವ ನಂಬಿಕೆ; ನಿಮ್ಮ ಗೆಳೆಯರಲ್ಲಿ ಈ ಸ್ವಭಾವಗಳಿದ್ರೆ ಅಂಥವರಿಂದ ಇಂದೇ ದೂರಾಗೋದು ಉತ್ತಮ

Friendship: ಸ್ನೇಹಿತರಲ್ಲಿ ಪರಸ್ಪರ ಗೌರವ, ನಂಬಿಕೆ ಬಹಳ ಮುಖ್ಯ. ಸ್ನೇಹವನ್ನು ಒಳ್ಳೆಯ ರೀತಿಯಲ್ಲಿ ಕಾಪಾಡಿಕೊಂಡಾಗ ಮಾತ್ರ ಗೆಳೆತನ ಶಾಶ್ವತವಾಗಿರುತ್ತದೆ. ಇಲ್ಲವಾದರೆ ಆ ಸ್ನೇಹ ಸಂಬಂಧಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಹಾಗಾದರೆ ಯಾವುದು ನಿಜವಾದ ಗೆಳೆತನ? ಸ್ನೇಹದಲ್ಲಿ ಯಾವ ರೀತಿಯ ವರ್ತನೆ ಇರಬಾರದು? ಎಂಬುದನ್ನು ತಿಳಿಯಿರಿ. (ಬರಹ: ಅರ್ಚನಾ ವಿ. ಭಟ್‌)

ಸ್ನೇಹದಲ್ಲಿರಲಿ ಪ್ರೀತಿ ಗೌರವ ನಂಬಿಕೆ
ಸ್ನೇಹದಲ್ಲಿರಲಿ ಪ್ರೀತಿ ಗೌರವ ನಂಬಿಕೆ

ಗೆಳೆತನ ಅಥವಾ ಸ್ನೇಹ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಬಹಳ ವಿಶೇಷ. ಉತ್ತಮ ಗೆಳೆಯರ ಬಳಗವಿದ್ದರೆ ದೊಡ್ಡ ಗ್ರಂಥಾಲಯವೇ ನಮ್ಮ ಹತ್ತಿರ ಇದ್ದಂತೆ ಎಂದು ಹೇಳಲಾಗುತ್ತದೆ. ಗೆಳೆತನಕ್ಕೆ ಅಷ್ಟೊಂದು ಮಹತ್ವ ನೀಡಲಾಗಿದೆ. ದೊಡ್ಡವರು ಗೆಳೆತವನ್ನು ಸುಂದರವಾಗಿ ಕಾಯ್ದುಕೊಂಡು ಬಂದಿದ್ದನ್ನು ನಾವು ನೋಡಿರುತ್ತೇವೆ. ಇವನು/ಇವಳು ನನ್ನ ಬಹಳ ಹಳೆಯ ಸ್ನೇಹಿತ/ಸ್ನೇಹಿತೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಬಹಳ ಸಮಯದವರೆಗೆ ಗೆಳೆತನವನ್ನು ಕಾಪಾಡಿಕೊಂಡು ಬರುವುದು ಎಂದರೆ ಆ ಸ್ನೇಹದಲ್ಲಿ ಯಾವುದೇ ರೀತಿಯ ಭಾವನಾತ್ಮಕ ದೋಷಗಳಿಲ್ಲ ಎಂದು ಹೇಳಬಹುದು. ಆ ಗೆಳೆತನ ಪರಿಶುದ್ಧವಾದದ್ದು ಎಂದು ಹೇಳಬಹುದು. 

ವಿಷ್ಣು ಶರ್ಮರ ಪಂಚತಂತ್ರದ ಅದೆಷ್ಟೊ ನೀತಿ ಕಥೆಗಳನ್ನು ಕೇಳಿ ಬೆಳೆದಿದ್ದರೂ, ಗೆಳೆಯರನ್ನು ಆಯ್ದುಕೊಳ್ಳುವ ವಿಷಯದಲ್ಲಿ ಕೆಲವೊಮ್ಮೆ ಎಡವುತ್ತೇವೆ. ಗೆಳೆತನವೇ ಹಾಗೆ ಬಿಡಿ, ಎಲ್ಲಿಯವರೆಗೆ ಅದರಲ್ಲಿ ಕಹಿಯ ಅನುಭವವಾಗುವುದಿಲ್ಲವೋ ಅಲ್ಲಿಯವರೆಗೆ ಅದರ ಬಗ್ಗೆ ಯೋಚಿಸಲೂ ಹೋಗುವುದಿಲ್ಲ. ಆದರೆ ಒಮ್ಮೆ ಅದರ ಅರಿವಾಯಿತೆಂದರೆ, ಆಗ ಅದು ಭಾವನೆಗಳ ಮೇಲೆ ಮಾಡಿದ ಗಾಯವಾಗುತ್ತದೆ. ಅಂತಹ ಸ್ನೇಹ ಸಂಬಂಧ ಮುಂದುವರಿಸಬೇಕೇ ಅಥವಾ ಬೇಡವೇ ಎಂದು ಖಂಡಿತ ಯೋಚಿಸಲೇಬೇಕಾಗುತ್ತದೆ. ಸ್ನೇಹವಿದೆ ಎಂದು ಎಲ್ಲವನ್ನೂ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಸ್ನೇಹದಲ್ಲಿ ಪರಸ್ಪರ ಗೌರವ, ನಂಬಿಕೆ ಬಹಳ ಮುಖ್ಯ. ಅದಿಲ್ಲವೆಂದರೆ ಗೆಳೆತನಕ್ಕೆ ಯಾವುದೇ ಬೆಲೆ ಕೂಡಾ ಇರುವುದಿಲ್ಲ. ಹಾಗಾದರೆ ಯಾವುದು ನಿಜವಾದ ಗೆಳೆತನ? ಒಳ್ಳೆಯ ಸ್ನೇಹ ಗುರುತಿಸುವುದು ಹೇಗೆ? ಇಲ್ಲಿರುವ ಅಂಶಗಳು ನಿಮ್ಮ ಸ್ನೇಹದಲ್ಲೂ ಕಂಡುಬಂದರೆ, ನಿಮ್ಮ ಗೆಳೆತನವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ.

ನಿಮ್ಮ ಗೆಳೆತನದಲ್ಲೂ ಈ ರೀತಿಯ ಮಾತು ಕೇಳಿಬಂದಿದೆಯಾ?

* ನಿಮ್ಮ ಗೆಳೆಯರಲ್ಲಿ ಯಾರಾದರೊಬ್ಬರು ನಿಮಗೆ ‘ಏನಪ್ಪಾ ನೀನು ತುಂಬಾ ಸೂಕ್ಷ್ಮ’ ಎಂದು ಪದೇ ಪದೇ ಹೇಳುತ್ತಿದ್ದಾರೆ ಅಂದ್ರೆ ಅವರು ನಿಮ್ಮ ಭಾವನೆಗಳಿಗೆ ಮನ್ನಣೆ ಕೊಡುತ್ತಿಲ್ಲ ಎಂದು ಅರ್ಥ. ಒಳ್ಳೆಯ ಗೆಳೆತನದಲ್ಲಿ ನಿಮ್ಮ ಭಾವನೆಗಳಿಗೆ ಯಾವಾಗಲೂ ಗೌರವವಿರುತ್ತದೆ ಮತ್ತು ಅದು ನಿಮ್ಮ ಮತ್ತು ಅವರ ನಡುವಿನ ಆರೋಗ್ಯಕರ ಸಂಬಂಧವೂ ಹೌದು. ನಿಮಗೆ ಪದೇ ಪದೇ ಆ ರೀತಿ ಹೇಳುವುದು ನಿಮ್ಮ ಗೆಳಯರಿಗೆ ನಿಮ್ಮ ಮೇಲೆ ಸಹಾನುಭೂತಿ ಕಡಿಮೆಯಿದೆ ಎಂದಾಗುತ್ತದೆ.

* ಕೆಲವು ಸ್ನೇಹಿತರಿರುತ್ತಾರೆ, ಎಷ್ಟೇ ಜನರಿರಲಿ, ಎಲ್ಲೇ ಇರಲಿ ಸ್ನೇಹಿತನನ್ನು ಆಡಿಕೊಳ್ಳುತ್ತಾರೆ. ನಿನ್ನ ಮಾತಿನಿಂದ ನನಗೆ ಬೇಜಾರಾಗಿದೆ, ನೀವು ಈ ರೀತಿ ಹೇಳಿದ್ದು ನನಗೆ ಸರಿ ಕಾಣಲಿಲ್ಲ ಎಂದು ಹೇಳಿದರೆ, ಅದನ್ನು ಒಪ್ಪಿಕೊಳ್ಳುವ ಅಥವಾ ಕ್ಷಮೆ ಕೇಳುವ ಬದಲಿಗೆ ‘ಅದು ಒಂದು ಜೋಕ್‌ ಆಗಿತ್ತು, ಇದನ್ನು ತಮಾಷೆಯಾಗಿ ತೆಗೆದುಕೊಳ್ಳಲಿಕ್ಕೂ ನಿನಗೆ ಆಗುವುದಿಲ್ಲವಾ?ʼ ಎಂದು ತಮ್ಮ ತಪ್ಪನ್ನು ಮರೆ ಮಾಚುವವರಿರುತ್ತಾರೆ. ನಿಮ್ಮ ಸ್ನೇಹಿತರೂ ಹೀಗಿದ್ದರೆ ಒಮ್ಮೆ ಯೋಚಿಸಿ ನೋಡಿ, ಉತ್ತಮ ಸ್ನೇಹಿತರು ಯಾವಾಗಲೂ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ. ಎದುರಿಗಿರುವ ವ್ಯಕ್ತಿಗೆ ನೋವಾಗದಂತೆ ನಡೆದುಕೊಳ್ಳುತ್ತಾರೆ.

* ಆರೋಗ್ಯಕರ ಗೆಳೆತನದಲ್ಲಿ ಸಮಾನತೆಯಿರುತ್ತದೆ. ಅಲ್ಲಿ ಮೇಲು, ಕೀಳು ಭಾವನೆ ಇರುವುದಿಲ್ಲ. ನಾನೇ ಸರಿ, ನಾನೇ ಶ್ರೇಷ್ಠ ಎಂಬ ಮನಸಿನ ಗೆಳೆಯರಿದ್ದರೆ, ಅವರು ಯಾವಾಗಲೂ ‘ನನ್ನಂತಹ ಗೆಳೆಯನನ್ನು ಪಡೆಯಲು ನೀನು ಪುಣ್ಯ ಮಾಡಿದ್ದೀಯಾ’ ಎಂದು ಹೇಳುತ್ತಿರುತ್ತಾರೆ. ಅದರ ಅರ್ಥ ನಾನು ಸರಿ ಎಂಬ ಅಹಂ ಅವರಲ್ಲಿ ತುಂಬಿರುತ್ತದೆ. ಇದು ಸಂಬಂಧ ಸರಿಯಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಎದುರಿಗಿರುವ ವ್ಯಕ್ತಿಗೆ ಯಾವುದೇ ರೀತಿಯ ಬೆಲೆಯಿಲ್ಲ ಎಂದಾಗುತ್ತದೆ. ಈ ರೀತಿಯ ಸ್ನೇಹದಿಂದ ಮನಸ್ಸಿಗೆ ಕಿರಿಯಾಗುತ್ತದೆಯೇ ವಿನಃ ಅದರಿಂದ ಏನೂ ಪ್ರಯೋಜನವಿಲ್ಲ.

* ಕೆಲವರಿಗೆ ಕೆಟ್ಟ ಮನಸ್ಸಿರುತ್ತದೆ. ತಮ್ಮ ಸ್ನೇಹಿತರಲ್ಲಿ ಧನಾತ್ಮಕ ಬದಲಾವಣೆ ಅಥವಾ ಬೆಳವಣಿಗೆಯನ್ನು ಕಂಡರೆ ಅವರಿಗೆ ಇನ್ನಷ್ಟು ಪ್ರೋತ್ಸಾಹ ಕೊಡುವುದರ ಬದಲು ‘ನನಗೆ ಹಳೆಯ ಗೆಳಯನೇ ಇಷ್ಟವಾಗುತ್ತಿದ್ದ’ ಎಂದು ಹೇಳುವವರಿದ್ದಾರೆ. ಅಂದರೆ ಗೆಳೆಯನಲ್ಲಾದ ಉತ್ತಮ ಬದಲಾವಣೆಗಳನ್ನು ಸಂತೋಷದಿಂದ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಯಬೇಕಾಗುತ್ತದೆ. ಅಂದರೆ ಅವರು ನಿಮ್ಮ ಪ್ರಗತಿಯನ್ನು ಮನಸ್ಸಿನಿಂದ ಒಪ್ಪಿಕೊಳ್ಳುತ್ತಿಲ್ಲ ಎಂದಾಗುತ್ತದೆ. ಅಂತಹ ಗೆಳೆತನ ನಿಮ್ಮ ಯಶಸ್ಸನ್ನು ಎಂದಿಗೂ ಸಹಿಸುವುದಿಲ್ಲ.

* ಗೆಳೆತನ ಯಾವಾಲೂ ಇಬ್ಬರ ನಡುವೆ ಆಗುವಂಥದ್ದು. ನಿಮ್ಮ ಗೆಳೆಯ/ಗೆಳತಿ ಪ್ರತಿಯೊಂದಕ್ಕೂ ಇದು ನನ್ನಿಂದಲೇ ಆಯಿತು, ನಾನೇ ನಿನಗೆ ಅವಕಾಶಗಳನ್ನು ಮಾಡಿಕೊಟ್ಟಿದ್ದು ಅದಕ್ಕಾಗಿ ನೀನು ನನಗೆ ಋಣಿಯಾಗಿರಬೇಕು ಎಂಬ ಧೋರಣೆ ತೋರುತ್ತಿದ್ದರೆ ಆಗ ಅದು ವ್ಯವಹಾರವಾಗುತ್ತದೆಯೇ ಹೊರತು ಸ್ನೇಹವಾಗುವುದಿಲ್ಲ. ಅಲ್ಲಿ ಗೆಳೆಯ/ ಗೆಳತಿಗೆ ಏನು ಇಷ್ಟವಾಗುತ್ತದೊ ಅದು ನಿಮಗೂ ಇಷ್ಟವಾಗಬೇಕಾಗುತ್ತದೆ. ನಿಮ್ಮ ಸ್ವಂತ ವಿಚಾರ, ಯೋಚನೆಗಳಿಗೆ ಅಲ್ಲಿ ಜಾಗವೇ ಇರುವುದಿಲ್ಲ. ಅಂತಹ ಗೆಳತನದಿಂದ ದೂರವಿರುವುದೇ ಉತ್ತಮ.

* ನಿಮ್ಮ ಗೆಳೆಯ/ಗೆಳತಿ ನಿಮ್ಮ ಯಶಸ್ಸಿನಲ್ಲಿ ಆನಂದ ಪಡೆದೇ ನಿಮ್ಮನ್ನು ಅನುಮಾನಿಸುತ್ತಿದ್ದಾರೆ ಅಂದರೆ ಅವರು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲವೆಂದೇ ತಿಳಿದುಕೊಳ್ಳಿ. ಅವರು ನಿಮ್ಮ ಸಾಮರ್ಥ್ಯವನ್ನು ಕಡೆಗಣಿಸುತ್ತಿದ್ದಾರೆ ಮತ್ತು ನಿಮ್ಮ ಯಶಸ್ಸನ್ನು ಸಹಿಸುವುದಿಲ್ಲ ಎಂದು ತಿಳಿದುಕೊಳ್ಳಿ. ಈ ರೀತಿಯ ಸ್ನೇಹವನ್ನು ಎಂದಿಗೂ ಮಾಡಬೇಡಿ.

* ನಿಜವಾದ ಗೆಳೆತನ ಬಹಳ ಸೂಕ್ಷ್ಮ. ಮಾತು ಅಥವಾ ನಡತೆಯಿಂದ ನೋವಾದರೆ ಅದನ್ನು ಗ್ರಹಿಸುವ ಶಕ್ತಿ ಗೆಳೆತನಕ್ಕಿರುತ್ತದೆ. ನಿಮ್ಮ ಭಾವನೆಗಳೇ ಸರಿ ಇಲ್ಲ, ನಿಮ್ಮ ಯೋಚನೆಯೇ ಸರಿಯಿಲ್ಲ ಎಂದು ಹೇಳಿದರೆ, ಆಗ ಆ ಸ್ನೇಹ ಸಂಬಂಧ ಸರಿಯಾಗಿಲ್ಲ ಎಂದೇ ತಿಳಿದುಕೊಳ್ಳಿ. ನಿಮ್ಮ ಮನಸ್ಸಿಗೆ ನೋವಾಗಿದೆ ಎಂದು ತಿಳಿದ ನಂತರವೂ ಅದರ ಬಗ್ಗೆ ಯೋಚಿಸಿದೇ, ನೀನು ಆ ರೀತಿ ಯೋಚಿಸಿದ್ಯಾ? ಎಂದು ಕೇಳಿದರೆ, ಆ ಸ್ನೇಹದಿಂದ ಹೊರ ಬರುವುದೇ ಉತ್ತಮ.

* ಕೆಲವು ಸ್ನೇಹಿತರಿರುತ್ತಾರೆ, ಅವರು ಯಾವಾಗಲೂ ನಿಮಗೆ ನೋವು, ದುಃಖವನ್ನೇ ಕೊಡುತ್ತಿರುತ್ತಾರೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯನ್ನು ತರುತ್ತಾರೆ. ಎಂದಿಗೂ ನಿಮಗೆ ಗೌರವ ನೀಡುವುದಿಲ್ಲ. ಯಾವುದೇ ರೀತಿಯ ಸೂಚನೆ ಕೊಡದೆ ನಿಮ್ಮಿಂದ ದೂರವಿರುತ್ತಾರೆ. ಅವರಿಗೆ ಅವಶ್ಯಕತೆಯಿದ್ದಾಗ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ. ಉಳಿದ ಸಂದರ್ಭದಲ್ಲಿ ನಿಮ್ಮನ್ನು ಮಾತ್ರ ದೂರವಿರಿಸುತ್ತಾರೆ. ಅಂತಹವರು ಎಂದಿಗೂ ಸ್ನೇಹಕ್ಕೆ ಯೋಗ್ಯರಾಗಿರುವುದಿಲ್ಲ.

ಸ್ನೇಹ ಸಂಬಂಧ ಸರಿಯಾಗಿಲ್ಲವೆಂದು ಗುರುತಿಸುವುದು ಹೇಗೆ?

ಸ್ನೇಹ ಅನ್ನುವುದು ಭಾವನಾತ್ಮಕ ಚೌಕಟ್ಟಿನೊಳಗೆ ಇರುವ ಸಂಬಂಧ. ಇಲ್ಲಿ ಪರಸ್ಪರರಿಗೆ ಗೌರವವಿರುತ್ತದೆ. ಕಷ್ಟ, ದುಃಖದಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಾರೆ. ಸುಖ, ಸಂತೋಷದಲ್ಲಿ ಅವರೂ ಪಾಲ್ಗೊಳ್ಳುತ್ತಾರೆ. ಸ್ನೇಹ ಸಂಬಂಧದಲ್ಲಿ ಕೊರತೆಯನ್ನು ಗುರುತಿಸುವುದಾದರೂ ಹೇಗೆ? ಅದಕ್ಕೆ ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಆಗ ಉತ್ತರ ನೀವೇ ಪಡೆದುಕೊಳ್ಳಬಹುದು.

* ನಿಮಗೆ ಅತ್ಯವಿದ್ದಾಗ ನಿಮ್ಮ ಗೆಳೆಯ/ಗೆಳತಿ ಸಹಾಯ ಮಾಡಿದ್ದಾರೆಯೇ?

* ನಿಮ್ಮ ಸ್ನೇಹಿತರು ನಿಮಗೆ ಯಾವಾಗಲೂ ಒಳ್ಳೆಯದನ್ನೇ ಬಯಸಿದ್ದಾರೆಯೇ?

* ನಿಮಗೆ ಮಾನಸಿಕ ಬೆಂಬಲ ನೀಡಿದ್ದಾರೆಯೇ?

ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ. ಉತ್ತರ ಧನಾತ್ಮಕವಾಗಿದ್ದರೆ ನಿಮ್ಮ ಸ್ನೇಹ ಮುಂದುವರಿಸಿ, ಇಲ್ಲವಾದರೆ ಆ ಸ್ನೇಹದಿಂದ ಹೊರಬರುವುದೇ ಉತ್ತಮ.