ಕನ್ನಡ ಸುದ್ದಿ  /  ಜೀವನಶೈಲಿ  /  Viral Jokes: ಗಂಡ ಎದ್ದ ತಕ್ಷಣ ಹೆಂಡತಿಗೆ ಹೊದಿಕೆ ಹೊದಿಸ್ತಾನೆ ಅಂದ್ರೆ ಅರ್ಥ? ಜಾಣಕಿವುಡು ಅಂದ್ರೇನು? -ಇಲ್ಲಿದೆ 5 ಸಖತ್ ಜೋಕುಗಳು

Viral Jokes: ಗಂಡ ಎದ್ದ ತಕ್ಷಣ ಹೆಂಡತಿಗೆ ಹೊದಿಕೆ ಹೊದಿಸ್ತಾನೆ ಅಂದ್ರೆ ಅರ್ಥ? ಜಾಣಕಿವುಡು ಅಂದ್ರೇನು? -ಇಲ್ಲಿದೆ 5 ಸಖತ್ ಜೋಕುಗಳು

ಕನ್ನಡ ಜೋಕುಗಳು: ಹಾಸ್ಯ ಪ್ರವೃತ್ತಿ ಇರುವವರಿಗೆ ಪರಿಹಾರಗಳೂ ಸುಲಭವಾಗಿ ಹೊಳೆಯುತ್ತವೆ. ಸಕಾರಾತ್ಮಕವಾಗಿ ಯೋಚಿಸುವುದೂ ಸಾಧ್ಯವಾಗುತ್ತದೆ. ಹೀಗಾಗಿಯೇ ದೈನಂದಿನ ಬದುಕಿನ ಭಾಗವಾಗಿರುವ, ಬಹುತೇಕರ ಜೀವನದಲ್ಲಿ ನಡೆದಿರಬಹುದಾದ 5 ಹಾಸ್ಯ ಪ್ರಸಂಗಗಳನ್ನು ಇಲ್ಲಿ ನೀಡಲಾಗಿದೆ. ಮನಸಾರೆ ನಗಿ, ನಿಮ್ಮ ಆಪ್ತರಿಗೂ ಶೇರ್ ಮಾಡಿ.

ವೈರಲ್ ಜೋಕುಗಳು
ವೈರಲ್ ಜೋಕುಗಳು

ನಿತ್ಯದ ಬದುಕಿನಲ್ಲಿ ಸಾಕಷ್ಟು ಹಾಸ್ಯ ಪ್ರಸಂಗಗಳು ಎದುರಾಗುತ್ತವೆ. ಬದುಕನ್ನು ಅತಿ ಗಂಭೀರವಾಗಿ ತೆಗೆದುಕೊಂಡರೆ, ಸಣ್ಣಪುಟ್ಟ ವಿಷಯಗಳಿಗೆಲ್ಲ ಟೆನ್ಷನ್ ಮಾಡಿಕೊಳ್ಳುತ್ತಿದ್ದರೆ ನಾವು ನೆಮ್ಮದಿಯಾಗಿ ಇರಲು ಸಾಧ್ಯವೇ ಇಲ್ಲ. ಹಾಸ್ಯ ಪ್ರವೃತ್ತಿ ಇರುವವರಿಗೆ ಪರಿಹಾರಗಳೂ ಸುಲಭವಾಗಿ ಹೊಳೆಯುತ್ತವೆ. ಸಕಾರಾತ್ಮಕವಾಗಿ ಯೋಚಿಸುವುದೂ ಸಾಧ್ಯವಾಗುತ್ತದೆ. ಹೀಗಾಗಿಯೇ ದೈನಂದಿನ ಬದುಕಿನ ಭಾಗವಾಗಿರುವ, ಬಹುತೇಕರ ಜೀವನದಲ್ಲಿ ನಡೆದಿರಬಹುದಾದ 5 ಹಾಸ್ಯ ಪ್ರಸಂಗಗಳನ್ನು ಇಲ್ಲಿ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

1) ಬೆಳ್‌ಬೆಳಿಗ್ಗೆ ಗಂಡ ಹೆಂಡತಿಗೆ ಹೊದಿಕೆ ಹೊದೆಸಿದ ಅಂದ್ರೆ…

ಮದುವೆಯಾದ ನಂತರ ರಾಧಿಕಾ ಮೊದಲ ಸಲ ತವರುಮನೆಗೆ ಬಂದಿದ್ದಳು. ಸಹಜವಾಗಿಯೇ ಮಗಳ ಸಂಸಾರದ ಬಗ್ಗೆ ತಾಯಿಗೆ ಕುತೂಹಲವಿತ್ತು. 'ಹೇಗೆ ನೋಡಿಕೊಳ್ತಿದ್ದಾರೆ ಅಳಿಯಂದಿರು' ಎಂದಾಗ, ರಾಧಿಕಾ ತುಸು ನಾಚಿಕೊಂಡಳು. 'ಅವರು ತುಂಬಾ ಒಳ್ಳೆಯವರು ಅಮ್ಮ. ಬೆಳಿಗ್ಗೆ ನನಗಿಂತ್ಲೂ ಬೇಗನೇ ಎದ್ದು ಅವರ ಹೊದಿಕೆಯನ್ನೂ ನನಗೆ ಹೊದಿಸ್ತಾರೆ' ಅಂತ ನಾಚಿಕೊಂಡ್ಳು. ಅಮ್ಮನಿಗೆ ಏಕ್‌ದಂ ಸಿಟ್ಟು ಬಂತು. 'ಅಯ್ಯೋ ಎಷ್ಟು ದಡ್ಡೀನೇ ನೀನು. ತಲೆಮಾರು ಬದಲಾದ್ರೂ ಹೆಣ್ಮಕ್ಕಳ ದಡ್ಡತನ ಬದಲಾಗಲ್ವಾ? ಅವನಿಗೆ ಹೊದಿಕೆ ಮಡಿಸಲು ಸೋಮಾರಿತನ. ಅದಕ್ಕೆ ನಿನಗೆ ಹೊದಿಸ್ತಾನೆ' ಅಂತ ಹಣೆ ಚಚ್ಚಿಕೊಂಡಳು. 'ಹೌದಾ ಅಮ್ಮಾ' ಅಂತ ರಾಧಿಕಾ ಕತ್ತು ಕೆಳಗೆ ಹಾಕಿದಾಗ, 'ನಿನ್ನ ಅಪ್ಪನೂ ಹೀಗೆಯೇ ಮಾಡ್ತಾ ಇದ್ದುದ್ದು. ನನಗೂ ನನ್ನ ಅಮ್ಮ ಹೇಳಿದ ಮೇಲೆ ಗೊತ್ತಾಯ್ತು' ಅಂದ್ರು ಅವಳ ಅಮ್ಮ.

2) ಬೇಜಾರಾದ್ರೆ ಚಪ್ಪಲಿ ಕಾಯ್ತೀನಿ

ಹುಡುಗ-ಹುಡುಗಿ ಕೈಕೈ ಹಿಡಿದುಕೊಂಡು ಓಡಾಡ್ತಾ ಇದ್ರು. ಕೆಲ ದಿನಗಳ ಮೊದಲಷ್ಟೇ ಹುಡುಗ ಲವ್ ಪ್ರಪೋಸ್‌ ಮಾಡಿದ್ದ ಹುಡುಗಿ ಓಕೆ ಅಂದಿದ್ಳು. ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರು.

ಹುಡುಗಿ: ನಿಮಗೆ ಸಖತ್ ಬೇಜಾರಾದ್ರೆ ಏನ್ರೀ ಮಾಡ್ತೀರೀ?

ಹುಡುಗ: ನಾನು ದೇವಸ್ಥಾನಕ್ಕೆ ಹೋಗ್ತೀನಿ.

ಹುಡುಗಿ: ಓಹ್! ಎಷ್ಟ್ ಒಳ್ಳೆಯವ್ರು ನೀವು. ಅಲ್ಲಿ ಧ್ಯಾನ ಮಾಡ್ತೀರಾ?

ಹುಡುಗ: ಇಲ್ಲ, ದೇವಸ್ಥಾನದ ಹೊರಗೆ ಜನ ಚಪ್ಪಲಿ ಬಿಟ್ಟಿರ್ತಾರಲ್ಲ ಅಲ್ಲಿ ಕೂರ್ತೀನಿ. ಒಬ್ಬೊಬ್ಬರು ಚಪ್ಪಲಿ ಕಳುವಾಗಬಾರದು ಅಂತ ಒಂದು ಈ ಕಡೆ, ಮತ್ತೊಂದು ಬೇರೆ ಕಡೆ ಬಚ್ಚಿಟ್ಟಿರ್ತಾರೆ. ಒಂದೊಂದು ಚಪ್ಪಲಿ ಕಳೆದುಹೋಗುತ್ತೆ. ಆಗ ಅವರ ಹುಡುಕಾಟ ನೋಡಿದ್ರೆ ನನ್ನ ಬೇಜಾರು ಹೋಗುತ್ತೆ.

3) ಎದೆನೋಯ್ತಿದೆ, ಆದ್ರೆ ನನ್ನ ಫೋನ್‌ನಿಂದ ಕಾಲ್ ಮಾಡಬೇಡ

ಗುಂಡ-ರಂಗಿ ಮದುವೆಯಾಗಿ 5 ವರ್ಷವಾಗಿತ್ತು. ಒಂದು ಸಲ ಇದ್ದಕ್ಕಿದ್ದಂತೆ ಗುಂಡನಿಗೆ ಎದೆ ನೋವು ಬಂತು. 'ಅಯ್ಯಪ್ಪಾ, ಅಯ್ಯಯ್ಯೋ' ಅಂತ ಗುಂಡ ಎದೆ ಒತ್ತಿಕೊಂಡು ಕುಸಿದು ಕುಳಿತ. ರಂಗಿಗೆ ಗಾಬರಿ ಆಯ್ತು. ಓಡಿ ಬಂದು, ಆಂಬುಲೆನ್ಸ್‌ಗೆ ಕಾಲ್ ಮಾಡ್ತೀನಿ ಅಂತ ಗುಂಡನ ಮೊಬೈಲ್ ತಗೊಂಡ್ಳು.

'ರೀ ನಿಮ್ಮ ಬೆರಳು ಕೊಡ್ರೀ, ಇಲ್ಲಾಂದ್ರೆ ಪಾಸ್‌ವರ್ಡ್ ಹೇಳ್ರೀ. ಆಂಬುಲೆನ್ಸ್‌ಗೆ ಕಾಲ್‌ ಮಾಡ್ತೀನಿ' ಅಂತ ರಂಗಿ ಕೂಗಿಕೊಂಡ್ಳು. ಗುಂಡ ತಕ್ಷಣ ಅಲರ್ಟ್ ಆದ. 'ಕಾಲ್ ಮಾಡಬೇಡ ತಾಳು, ಸ್ವಲ್ಪ ನೀರು ಕೊಡು. ಎದೆನೋವು ಕಡಿಮೆಯಾಯ್ತು' ಅಂತ ಫೋನ್ ಕಿತ್ತುಕೊಂಡ.

4) ಇದು ಶಾಪವಲ್ಲ, ವರ

ಇಎನ್‌ಟಿ (ಕಿವಿ ಮೂಗು ಮತ್ತು ಗಂಟಲು ತಜ್ಞರು) ಡಾಕ್ಟರ್ ಬಳಿ ಬಂದಿದ್ದ ರಾಜೀವ ಕಿವಿ ತೋರಿಸಿದ. 'ಎಲ್ಲ ಸರಿಯಾಗೇ ಇದೆಯಲ್ರೀ' ಅಂತ ಡಾಕ್ಟರ್ ಹೇಳಿದ್ರು. ಅವನ ಹೆಂಡತಿ ಒಪ್ಪಲಿಲ್ಲ. 'ಇಲ್ಲ ಸಾರ್, ಏನೋ ಸಮಸ್ಯೆಯಾಗಿದೆ. ನಾನು ಏನು ತಗೊಂಡು ಬಾ ಅಂತ ಹೇಳಿದ್ರೂ ಇವನಿಗೆ ಕೇಳಿಸಲ್ಲ' ಅಂತ ದೂರು ಹೇಳಿದಳು. 'ಓಹೋ, ಹೀಗಾ ವಿಷ್ಯ. ಇದು ಜಾಣಕಿವುಡು ಕಣಮ್ಮ. ತರದಿದ್ರೆ ಬೀಳುತ್ವೆ' ಅಂತ ಕೊನೆಗೆ ಸೇರಿಸಿರು. ಆಗ ನೋಡು ಪರಿಣಾಮ. ಮುಂದಿನ ವಾರ ಬಂದು ನನ್ನ ಔಷಧಿ ಕೆಲಸ ಮಾಡ್ತಿದ್ಯಾ ತಿಳಿಸಿ' ಅಂತ ಡಾಕ್ಟರ್ ಕಳಿಸಿಕೊಟ್ಟರು.

ಒಂದು ವಾರ ಬಿಟ್ಟು ಬಂದು ರಾಜೀವನನ್ನು ಆಸ್ಪತ್ರೆಗೆ ಕರೆತಂದ ಹೆಂಡತಿ, 'ನಿಮ್ಮ ಔಷಧಿ ಸರಿಯಾಗಿ ಕೆಲಸ ಮಾಡ್ತಿದೆ ಸಾರ್. ಎಷ್ಟು ಒಳ್ಳೇ ಡಾಕ್ಟರ್ ನೀವು' ಅಂದ್ಳು. 'ಹೌದು ಕಣಮ್ಮ, ನನಗೂ ಇಂಥದ್ದೇ ಕಿವುಡು ಬಂದಿತ್ತು. ನನ್ನ ಹೆಂಡತಿ ನನಗೆ ಕೊಟ್ಟ ಔಷಧವನ್ನೇ ನಿನ್ನ ಗಂಡನಿಗೂ ಕೊಟ್ಟೆ ನೋಡು' ಅಂದ್ರು ಅವರು.

5) ಅಯ್ಯೋ ದೇವರೇ, ಇದು ಮುಗಿಯೋದು ಯಾವಾಗ?

ಕನ್ನಡದ ಜನಪ್ರಿಯ ಚಾನೆಲ್‌ನಲ್ಲಿ ಬರುತ್ತಿದ್ದ ಧಾರಾವಾಹಿ ಯಾವಾಗ ಮುಗಿಯುತ್ತೆ ಅಂತ ಚರ್ಚೆ ಆಗ್ತಾನೇ ಇತ್ತು. ತೊಟ್ಟಿಲಲ್ಲಿದ್ದ ಮಗುವಿಗೆ ಇದ್ದಕ್ಕಿದ್ದಂತೆ ಸಿಟ್ಟು ಬಂದು ಕಿಟಾರನೆ ಕಿರುಚಿತು. ಅಲ್ಲಿದ್ದ ಹೆಂಗಸರಲ್ಲೇ ರಪ್ ಅಂತ ಆ ಕಡೆಗೆ ತಿರುಗಿದರು.

'ಸಾಕು ನಿಲ್ಲಿಸ್ರೀ ನಿಮ್ ಪುರಾಣ. ಹಿಂದಿನ ಜನ್ಮದಲ್ಲಿ ನಾನು ನೋಡ್ತಿದ್ದ ಸೀರಿಯಲ್ ಅದು. ಮುಗಿದ ಮೇಲೆ ಸಾಯೋಣ ಅಂತಿದ್ದೆ ಆದರೆ ಯಮರಾಯ ಕಾಯಲಿಲ್ಲ. ಈ ಜನ್ಮ ಮುಗಿಯುವುದರ ಒಳಗಾದ್ರೂ ಮುಗಿಯುತ್ತೇನೋ ನೋಡಬೇಕು' ಅಂತ ಮಗು ಆವೇಶ ಬಂದಂತೆ ಜೋರಾಗಿ ಹೇಳಿತು.

ಎಲ್ಲರೂ ಗಪ್‌ಚುಪ್ ಅಂತ ಸುಮ್ಮನಾದ್ರು. ಮಗು ಮಾತ್ರ ತನಗೆ ಏನೂ ಗೊತ್ತಿಲ್ಲದಂತೆ ತೊಟ್ಟಿಲಲ್ಲಿ ಆಟ ಮುಂದುವರಿಸಿತು. ಅಲ್ಲಿದ್ದವರು ಧಾರಾವಾಹಿ ಮುಗಿಯುವುದರ ಬಗ್ಗೆ ಮಾತನಾಡಿದ್ದು ಅದೇ ಕೊನೆ ನೋಡಿ.

ಗಮನಿಸಿ: ಇದು ಶುದ್ಧ ಹಾಸ್ಯ. ಇದನ್ನು ತಮಾಷೆಯಾಗಿಯಷ್ಟೇ ನೋಡಿ, ಮನಸಾರೆ ನಗಿ. ಯಾರ ಭಾವನೆಗಳಿಗೂ ಯಾವುದೇ ರೀತಿಯಲ್ಲಿ ನೋವುಂಟು ಮಾಡುವ ಉದ್ದೇಶವನ್ನು ಹೊಂದಿಲ್ಲ.

(ನೀವೂ ಜೋಕುಗಳನ್ನು ಕಳಿಸಬಹುದು. ವಾಟ್ಸಾಪ್ ಸಂಖ್ಯೆ: 95991 30861)