Budget 2023: ಆದಾಯ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗ ಬಯಸುತ್ತಿರುವ 5 ವಿನಾಯಿತಿಗಳು…
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2023: ಆದಾಯ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗ ಬಯಸುತ್ತಿರುವ 5 ವಿನಾಯಿತಿಗಳು…

Budget 2023: ಆದಾಯ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗ ಬಯಸುತ್ತಿರುವ 5 ವಿನಾಯಿತಿಗಳು…

Budget 2023:ಮಧ್ಯಮ ವರ್ಗದವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನಿರೀಕ್ಷಿಸಬಹುದಾದ ಆದಾಯ ತೆರಿಗೆ ಸುಧಾರಣೆಗಳ ಕುರಿತು, ಕ್ಲಿಯರ್‌ನ ಅರ್ಚಿತ್ ಗುಪ್ತಾ ಅವರು ಬಜೆಟ್ 2023 ರಲ್ಲಿ ಅವರು ನಿರೀಕ್ಷಿಸುತ್ತಿರುವ ಕೆಳಗಿನ 5 ಪರಿಹಾರಗಳನ್ನು ಈ ರೀತಿ ಪಟ್ಟಿ ಮಾಡಿದ್ದಾರೆ.

ಆದಾಯ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗ ಬಯಸುತ್ತಿರುವ 5 ವಿನಾಯಿತಿಗಳು (ಸಾಂಕೇತಿಕ ಚಿತ್ರ)
ಆದಾಯ ತೆರಿಗೆ ವಿಚಾರದಲ್ಲಿ ಮಧ್ಯಮ ವರ್ಗ ಬಯಸುತ್ತಿರುವ 5 ವಿನಾಯಿತಿಗಳು (ಸಾಂಕೇತಿಕ ಚಿತ್ರ) (livemint)

ಕೇಂದ್ರ ಮುಂಗಡ ಪತ್ರ ಮಂಡನೆ ದಿನ ಸಮೀಪಿಸುತ್ತಿದೆ. ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಮುಂಗಡಪತ್ರ ಇದು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇದನ್ನು ಮಂಡಿಸುತ್ತಿದ್ದು, ಜನಪ್ರಿಯ ಘೋಷಣೆಗಳು ಇರಬಹುದು ಎಂಬ ಸಾಮಾನ್ಯ ನಿರೀಕ್ಷೆ ಇದ್ದೇ ಇದೆ. ಅದರ ಜತೆಗೆ, ಮಧ್ಯಮ ವರ್ಗದ ಜನರು ಆದಾಯ ತೆರಿಗೆ ವಿಚಾರದಲ್ಲಿ ಹೆಚ್ಚು ಆಸಕ್ತರಾಗಿದ್ದು, ಕನಿಷ್ಠ ಐದು ವಿನಾಯಿತಿಗಳಿಗಾಗಿ ಎದುರುನೋಡುತ್ತಿದ್ದಾರೆ. ಮಧ್ಯಮ ವರ್ಗದ ಜನರು ಆದಾಯ ತೆರಿಗೆ ಸೆಕ್ಷನ್‌ 80ಸಿ, ಸೆಕ್ಷನ್‌ 80ಡಿ, ಸೆಕ್ಷನ್‌ 87ಎ ಮತ್ತು ಇತರೆ ಸೆಕ್ಷನ್‌ಗಳಲ್ಲಿ ವಿನಾಯಿತಿಯನ್ನು ಬಯಸುತ್ತಿದ್ದಾರೆ ಎಂಬುದರ ಕಡೆಗೆ ಗಮನಸೆಳೆದಿದೆ HT ಕನ್ನಡದ ಸೋದರ ಸಂಸ್ಥೆ ದ ಮಿಂಟ್‌ ವರದಿ.

ಆದಾಯ ತೆರಿಗೆ ಸುಧಾರಣೆ ಪ್ರಕ್ರಿಯೆ ಮಧ್ಯಮ ವರ್ಗದಲ್ಲಿ ಉತ್ಸಾಹ ಮೂಡಿಸಬಹುದು. ಈ ಕುರಿತು ಕ್ಲಿಯರ್‌ನ ಸಂಸ್ಥಾಪಕ, ಸಿಇಒ ಆರ್ಚಿತ್‌ ಗುಪ್ತಾ ಹೇಳಿರುವುದು ಹೀಗೆ- ಕೇಂದ್ರ ಬಜೆಟ್‌ 2023 ಕಡಿಮೆ ಮತ್ತು ಮಧ್ಯಮ ಆದಾಯ ಗಳಿಕೆಯವರಿಗೆ ಹೆಚ್ಚು ಖರ್ಚುಮಾಡಬಹುದಾದ ಆದಾಯವನ್ನು ಒದಗಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ನಾವು. ಈ ಕ್ರಮವು ಈ ವರ್ಗದ ಜನರಿಗೆ ಅವರ ಬಳಕೆಯ ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ ಆದಾಯ ಬಳಸಲು ಅವಕಾಶ ಒದಗಿಸಿಕೊಡುತ್ತದೆ.

ಆದಾಯ ತೆರಿಗೆಯ ಈ ರೀತಿ ವಿನಾಯಿತಿಯನ್ನು ಕೇಂದ್ರ ಸರ್ಕಾರದಿಂದ ಯಾಕೆ ಬಯಸಲಾಗುತ್ತಿದೆ ಎಂಬುದನ್ನು ವಿವರಿಸಿದ ಆರ್ಚಿತ್‌ ಗುಪ್ತಾ, ಚಾಲ್ತಿಯಲ್ಲಿರುವ ಕೋವಿಡ್‌ 19 ಸಂಕಷ್ಟವೂ ಸೇರಿ ಕಳೆದ ಕೆಲವು ವರ್ಷಗಳಿಂದ ಜನ ಅನೇಕ ರೀತಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಕೋವಿಡ್‌ 19 ಸಂಕಷ್ಟವಷ್ಟೇ ಅಲ್ಲ, ಹಣದುಬ್ಬರ, ಯುದ್ಧ ರೀತಿಯ ಬಿಕ್ಕಟ್ಟು, ಉದ್ಯೋಗ ನಷ್ಟ, ಏರಿದ ವೈದ್ಯಕೀಯ ವೆಚ್ಚ, ಜಾಗತಿಕ ಆರ್ಥಿಕ ಹಿಂಜರಿತದ ಭಯ ಇವೆಲ್ಲವೂ ಇದರಲ್ಲಿ ಸೇರಿಕೊಂಡಿವೆ. ಈ ಎಲ್ಲ ಸಂಕಷ್ಟಗಳಿಗೆ ಪರಿಹಾರಕಂಡುಕೊಳ್ಳಲು ಭಾರತ ಸರ್ಕಾರವು ವಿವಿಧ ಕೈಗಾರಿಕೆಗಳ ಬೇಡಿಕೆಯನ್ನು ಉತ್ತೇಜಿಸುವ ಸಾಧ್ಯತೆ ದಟ್ಟವಾಗಿದೆ.

ಮಧ್ಯಮ ವರ್ಗದವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನಿರೀಕ್ಷಿಸಬಹುದಾದ ಆದಾಯ ತೆರಿಗೆ ಸುಧಾರಣೆಗಳ ಕುರಿತು, ಕ್ಲಿಯರ್‌ನ ಅರ್ಚಿತ್ ಗುಪ್ತಾ ಅವರು ಬಜೆಟ್ 2023 ರಲ್ಲಿ ಅವರು ನಿರೀಕ್ಷಿಸುತ್ತಿರುವ ಕೆಳಗಿನ 5 ಪರಿಹಾರಗಳನ್ನು ಈ ರೀತಿ ಪಟ್ಟಿ ಮಾಡಿದ್ದಾರೆ -

ಮೂಲ ತೆರಿಗೆ ವಿನಾಯಿತಿ ಮಿತಿಯಲ್ಲಿ ಏರಿಕೆ

ಅರ್ಥವ್ಯವಸ್ಥೆಯಲ್ಲಿ ಬಳಕೆಯನ್ನು ಹೆಚ್ಚಿಸಲು ಹಲವಾರು ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ. ಆದರೆ, ಮೂಲ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಸಲು ಪರಿಗಣಿಸಲಾಗುತ್ತಿದೆ ಎಂದು ವಿವಿಧ ವರದಿಗಳು ಹೇಳುತ್ತಿವೆ. ಸೆಕ್ಷನ್ 87A ಪ್ರಕಾರ ಯಾವಾಗಲೂ 5 ಲಕ್ಷ ರೂಪಾಯಿ ತನಕ ರಿಯಾಯಿತಿ ಅನುಭವಿಸುತ್ತಿರುವವರ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಇದು ಅವರು ಕಡ್ಡಾಯವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯವನ್ನು ತೆಗೆದುಹಾಕುತ್ತದೆ. ಹೀಗೆ ಸಣ್ಣ ತೆರಿಗೆದಾರರಿಗೆ ಅನುಸರಣೆಯನ್ನು ಸುಲಭಗೊಳಿಸುವ ಸರ್ಕಾರದ ಗುರಿಯನ್ನು ಬೆಂಬಲಿಸುತ್ತದೆ.

ಸೆಕ್ಷನ್‌ 80 ಸಿ ಮಿತಿಯನ್ನು ಏರಿಸುವುದು

ಸದ್ಯ ಆದಾಯ ತೆರಿಗೆ ಸೆಕ್ಷನ್‌ 80 ಸಿ ಪ್ರಕಾರ ಒಂದೂವರೆ ಲಕ್ಷ ರೂಪಾಯಿ ತನಕದ ಹೂಡಿಕೆಗೆಗೆ ವಿನಾಯಿತಿ ಇದೆ. ಇದು ಸರಿಸುಮಾರು ಒಂದು ದಶಕದಿಂದ ಪರಿಷ್ಕರಣೆಗೆ ಒಳಗಾಗಿಲ್ಲ. ಉಳಿತಾಯ ಹೆಚ್ಚಿಸಲು ಮತ್ತು ಹೆಚ್ಚಿನ ತೆರಿಗೆ ಉಳಿಸುವ ಸಲುವಾಗಿ ಈ ಮಿತಿಯನ್ನು ಏರಿಸುವ ಅಗತ್ಯ ಇದೆ.

ಸೆಕ್ಷನ್‌ 80 ಡಿ ಮಿತಿ ಪರಿಷ್ಕರಣೆ

ಭಾರತದ ಮಧ್ಯಮ ವರ್ಗದ ಜನರು ಕೈಗೆಟಕುವ ದರದ ವಸತಿ ಮತ್ತು ಸುಧಾರಿತ ಆರೋಗ್ಯ ಸೌಲಭ್ಯಗಳನ್ನು ಬಯಸುತ್ತಿದೆ. ಆ ಮೂಲಕ ತಮ್ಮ ಜೀವನ ಗುಣಮಟ್ಟ ಸುಧಾರಿಸುವುದಕ್ಕೆ ಮಾರ್ಗಗಳನ್ನು ಹುಡುಕುತ್ತಿದೆ. ಕೋವಿಡ್‌ ಸಂಕಷ್ಟದ ಬಳಿಕ ವೈದ್ಯಕೀಯ ವಿಮೆಯ ವೆಚ್ಚವೂ ಹೆಚ್ಚಾಗಿದೆ. ಇದರ ಪರಿಣಾಮ ಮಧ್ಯಮ ವರ್ಗದ ಮೇಲಾಗಿದ್ದು, ಆರ್ಥಿಕ ಹೊರೆ ತಗ್ಗಿಸಲು ಈ ವಿನಾಯಿತಿ ಮಿತಿ ಹೆಚ್ಚಿಸಬೇಕು. ವೈದ್ಯರ ಸಮಾಲೋಚನಾ ಶುಲ್ಕ, ರೋಗ ನಿರ್ಣಯ ಪರೀಕ್ಷಾ ವೆಚ್ಚ ಮುಂತಾದ ವೆಚ್ಚಗಳನ್ನು ಆದಾಯ ತೆರಿಗೆಯ ಸೆಕ್ಷನ್‌ 80 ಡಿ ವ್ಯಾಪ್ತಿಗೆ ತರಬೇಕು.

ಮನೆ ಖರೀದಿದಾರರಿಗೆ ವಿನಾಯಿತಿ

ಮಧ್ಯಮ ವರ್ಗದ ತೆರಿಗೆದಾರರ ಪಾಲಿಗೆ ಮನೆ ಎಂಬುದು ಇನ್ನು ಕೂಡ ಐಷಾರಾಮಿ ಎಂದೇ ಪರಿಗಣಿಸಲ್ಪಟ್ಟಿದೆ. ಈ ಹೊರೆಯನ್ನು ತಗ್ಗಿಸುವ ಸಲುವಾಗಿ, ಗೃಹ ಸಾಲದ ಬಡ್ಡಿಯನ್ನು 2 ಲಕ್ಷ ರೂಪಾಯಿಗೆ ಏರಿಸಬೇಕು ಎಂಬುದು ತೆರಿಗೆದಾರರ ಆಗ್ರಹ. ಇದಲ್ಲದೆ, ಮನೆ ಖರೀದಿದಾರರು ಆದಾಯ ತೆರಿಗೆ ಸೆಕ್ಷನ್‌ 80ಇಇಎ ಪ್ರಕಾರ 2019ರ ಏಪ್ರಿಲ್‌ 1ರಿಂದ 2022ರ ಮಾರ್ಚ್‌ 31ರ ನಡುವೆ ಅನುಮೋದಿಸಲ್ಪಟ್ಟ ಮನೆ ಸಾಲದ ಮೇಲಿನ ಬಡ್ಡಿಗೆ 1.5 ಲಕ್ಷ ರೂಪಾಯಿ ತನಕ ವಿನಾಯಿತಿ ಪಡೆಯಬಹುದು. ಮನೆ ಖರೀದಿ ಹೆಚ್ಚಿಲು ಅಂದರೆ ಮನೆ ಮಾಲೀಕತ್ವ ಪಡೆಯುವುದನ್ನು ಉತ್ತೇಜಿಸುವ ಸಲುವಾಗಿ ಲಾಕ್‌ ಇನ್‌ ಅವಧಿ ಮತ್ತು ಈ ತೆರಿಗೆ ವಿನಾಯಿತಿ ಮಿತಿ ಏರಿಸುವ ನಿರೀಕ್ಷೆ ಇದೆ.

ಸ್ಟಾಂಡರ್ಡ್‌ ಡಿಡಕ್ಷನ್‌ ಏರಿಕೆ

ಐದು ವರ್ಷಗಳ ಹಿಂದೆ ಆರ್ಥಿಕ ವರ್ಷ 2018-19ರಲ್ಲಿ ಸ್ಟಾಂಡರ್ಡ್‌ ಡಿಡಕ್ಷನ್‌ ಪರಿಚಯಿಸಲ್ಪಟ್ಟಿತು. ಈಗ ವೈದ್ಯಕೀಯ ವೆಚ್ಚ, ಇಂಧನ ವೆಚ್ಚ ಹೆಚ್ಚಾಗಿರುವ ಕಾರಣ ಈ ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು ಈಗ ಇರುವ 50,000 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಏರಿಸಬೇಕು ಎಂಬ ಆಗ್ರಹ ಬಲವಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.