Curb On Kotak Bank: ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ಆರ್‌ಬಿಐ ಮಿತಿ, ಆನ್‌ಲೈನ್ ಹೊಸ ಗ್ರಾಹಕರು, ಕ್ರೆಡಿಟ್ ಕಾರ್ಡ್ ಗೆ ಬ್ರೇಕ್
ಭಾರತೀಯ ರಿಸರ್ವ್ ಬ್ಯಾಂಕ್ ಕೋಟಕ್ ಮಹೀಂದ್ರ( Kotak Mahindra) ಬ್ಯಾಂಕ್ ಮೇಲೆ ಹಲವಾರು ನಿಬಂಧನೆಗಳನ್ನು ಹೇರಿದೆ. ಇಲ್ಲಿದೆ ಅದರ ವಿವರ.
ಮುಂಬೈ: ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್( RBI) ಮಿತಿ ಹೇರಿದೆ. ಹೊಸದಾಗಿ ಆನ್‌ಲೈನ್ ಗ್ರಾಹಕರನ್ನು ಮಾಡುವಂತಿಲ್ಲ. ಹೊಸದಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಂತಿಲ್ಲ ಎಂದು ಆರ್‌ಬಿಐ ನಿರ್ದೇಶನವನ್ನು ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ನೀಡಿದೆ. ಬ್ಯಾಂಕ್‌ನ ಮಾಹಿತಿ ತಂತ್ರಜ್ಞಾನದ ಮೂಲಸೌಕರ್ಯದ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿಂಗ್‌ನ ನಿರಂತರ ಅವ್ಯವಸ್ಥೆಗಳ ಕುರಿತು ಗ್ರಾಹಕರಿಂದ ಬಂದಿರುವ ದೂರು ಆಧರಿಸಿ ಆರ್‌ಬಿಐ ಈ ನಿರ್ಧಾರವನ್ನು ಬುಧವಾರ ಕೈಗೊಂಡಿದೆ.
ಬಹುತೇಕ ಎಲ್ಲಾ ಬ್ಯಾಂಕ್‌ಗಳು ಈಗ ಡಿಜಿಟಲ್ ಸೇವೆ ನೀಡುತ್ತಿವೆ. ಆದರೆ ಡಿಜಿಟಿಲ್ ಸೇವೆಯಲ್ಲಿನ ಡೆಟಾ ಭದ್ರತೆ ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮೂಲಸೌಕರ್ಯವನ್ನು ಖಚಿತಪಡಿಸಬೇಕು ಎಂದು ಆರ್‌ಬಿಐ ನಿಯಮಿತವಾಗಿ ಹೇಳಿಕೊಂಡು ಬರುತ್ತಲೇ ಇದೆ. ಈ ನಿಯಮವನ್ನು ಪಾಲಿಸದ ಕೋಟಕ್ ಮಹೀಂದ್ರ ಬ್ಯಾಂಕ್ ವಿರುದ್ದ ಹೊಸದಾಗಿ ಆನ್‌ಲೈನ್ ಚಟುವಟಿಕೆ ನಡೆಸುವ ಹಾಗಿಲ್ಲ ಹಾಗೂ ಹೊಸದಾಗಿ ಯಾರಿಗೂ ಕ್ರೆಡಿಟ್ ಕಾರ್ಡ್ ನೀಡುವಂತಿಲ್ಲ ಎನ್ನುವ ಕಟ್ಟುನಿಟ್ಟನ ಸೂಚನೆಯನ್ನು ರಿಸರ್ವ್ ಬ್ಯಾಂಕ್ ನೀಡಿದೆ.
ಆದರೆ ಈವರೆಗೂ ಇರುವ ಆನ್‌ಲೈನ್ ಗ್ರಾಹಕರಿಗೆ ಸೇವೆ ಮುಂದುವರೆಸಬಹುದು. ಅದೇ ರೀತಿ ಕೋಟಕ್ ಮಹೀಂದ್ರ ಕ್ರೆಡಿಟ್ ಕಾರ್ಡ್ ಪಡೆದಿರುವವರಿಗೆ ಸೇವೆ ನೀಡಲು ಯಾವುದೇ ಅಡೆತಡೆ ಇರುವುದಿಲ್ಲ. ಹೊಸದಕ್ಕೆ ಮಾತ್ರ ಮಿತಿ ಹೇರಲಾಗಿದೆ ಎಂದು ತಿಳಿಸಲಾಗಿದೆ.
ಆರ್‌ಬಿಐ ತನ್ನ ಅಧಿಕಾರವನ್ನು ಬಳಸಿ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ 35 ಎ ಸೆಕ್ಷನ್ ಅಡಿಯಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್‌ಗೆ ಈ ಸೂಚನೆಗಳನ್ನು ನೀಡಿದೆ.ಇನ್ನು ಮುಂದೆ ಆನ್‌ಲೈನ್ ಹಾಗೂ ಮೊಬೈಲ್ ಬ್ಯಾಂಕಿಗ್ ಮೂಲಕ ಹೊಸ ಗ್ರಾಹಕರು ಮಾಡುವಂತಿಲ್ಲ. ಅದೇ ರೀತಿ ಹೊಸದಾಗಿ ಕ್ರೆಡಿಟ್ ಕಾರ್ಡ್ ನೀಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಆದರೆ ಈಗಾಗಲೇ ಇರುವ ಆನ್‌ಲೈನ್ ಹಾಗೂ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸೇವ ನೀಡಲು ಅಡಚಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆರ್‌ಬಿಐ ಸತತ ಎರಡು ವರ್ಷಗಳ ಕಾಲ ನಡೆಸಿದ ಐಟಿ ಪರೀಕ್ಷೆಗಳು, ಆಗ ಬಂದ ವರದಿಗಳು, ಸೂಚನೆ ನಂತರವೂ ಸರಿಪಡಿಸಿಕೊಳ್ಳಲು ಕೋಟಕ್ ಮಹೀಂದ್ರ ಬ್ಯಾಂಕ್ ನಿಗದಿತ ಸಮಯದೊಳಗೆ ವಿಫಲವಾಗಿದ್ದರಿಂದ ಈ ಆದೇಶ ಜಾರಿಗೊಳಿಸಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಈ ಕ್ರಮಗಳು ಅನಿವಾರ್ಯವಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಕೋಟಕ್ ಮಹೀಂದ್ರ ಬ್ಯಾಂಕ್‌ನ ಐಟಿ ಸೇವೆಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಇನ್ವೆಂಟ್ರಿ, ವೆಂಡರ್ ನಿರ್ವಹಣೆ, ಡೆಟಾ ಭದ್ರತೆ ಹಾಗೂ ಡೆಟಾ ಸೋರಿಕೆ ತಡೆ ಕ್ರಮಗಳು ಅಪಾಯದ ಸ್ಥಿತಿಯಲ್ಲಿವೆ. ಆರ್‌ಬಿಐನ ಕೆಲವು ಮಾನದಂಡಗಳನ್ನು ಬ್ಯಾಂಕ್ ಪಾಲಿಸಿಲ್ಲ. ಆರ್‌ಬಿಐ ನಡೆಸಿದ ಮೌಲ್ಯಮಾಪನದ ವೇಳೆ ಎರಡು ವರ್ಷವೂ ಈ ನ್ಯೂನತೆ ಕಂಡು ಬಂದಿದೆ. ಇದನ್ನು ಸರಿಪಡಿಸಿಕೊಳ್ಳುವ ಗಂಭೀರ ಪ್ರಯತ್ನವೂ ಬ್ಯಾಂಕ್ ನಿಂದ ಆಗಿಲ್ಲ. ಗ್ರಾಹಕರ ಹಿತದೃಷ್ಟಿ ಹಾಗೂ ಬ್ಯಾಂಕಿಂಗ್ ಸೇವೆ ಮೇಲಿನ ವಿಶ್ವಾಸಾರ್ಹತೆ ದೃಷ್ಟಿಯಿಂದ ಈ ಆದೇಶ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ನಾಲ್ಕು ದಶಕದ ಹಿಂದೆ ಆರಂಭಗೊಂಡಿರುವ ಕೋಟಕ್ ಮಹೀಂದ್ರ ಎರಡು ದಶಕದ ಹಿಂದೆ ಬ್ಯಾಂಕಿಂಗ್ ಲೈಸೆನ್ಸ್ ಅನ್ನು ಆರ್ ಬಿಐನಿಂದ ಪಡೆದುಕೊಂಡಿದೆ. ಈಗ ವಾಣಿಜ್ಯ ಸೇವೆಯೂ ಸೇರಿದಂತೆ ಹಲವಾರು ಸೇವೆಗಳನ್ನು ಬ್ಯಾಂಕ್ ಒದಗಿಸುತ್ತಿದೆ. ಮುಚುಯಲ್ ಫಂಡ್‌ನಿಂದ ಸ್ಟಾಕ್ ಬ್ರೋಕಿಂಗ್ ವಲಯದಲ್ಲೂ ಹೂಡಿಕೆ ಮಾಡಿದೆ.
ಡಿಸೆಂಬರ್ ಅಂತ್ಯದ ಮಾಹಿತಿ ಪ್ರಕಾರ, ಕೋಟಕ್ ಮಹಿಂದ್ರಕ್ಕೆ ದೇಶಾದ್ಯಂತ 1,869 ಶಾಖೆಗಳಿದ್ದು, 3,239 ಎಟಿಎಂಗಳು ಸೇವೆ ನೀಡುತ್ತಿವೆ. 4.8 ಕೋಟಿ ಗ್ರಾಹಕರು ಬ್ಯಾಂಕ್‌ನ ಸೇವೆ ಪಡೆಯುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)