ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kakinada Accident: ಕಾಕಿನಾಡದಲ್ಲಿ ಭೀಕರ ದುರಂತ; ದೇವಸ್ಥಾನಕ್ಕೆ ನುಗ್ಗಿದ ಲಾರಿ; ಮೂವರ ಸಾವು

Kakinada Accident: ಕಾಕಿನಾಡದಲ್ಲಿ ಭೀಕರ ದುರಂತ; ದೇವಸ್ಥಾನಕ್ಕೆ ನುಗ್ಗಿದ ಲಾರಿ; ಮೂವರ ಸಾವು

ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ದೇವಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಕಾಕಿನಾಡದಲ್ಲಿ ನಡೆದಿದೆ.

ಡಿಕ್ಕಿಯ ರಭಸಕ್ಕೆ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ
ಡಿಕ್ಕಿಯ ರಭಸಕ್ಕೆ ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ

ಆಂಧ್ರಪ್ರದೇಶ: ಚಾಲಕನ ನಿಯಂತ್ರಣ ತಪ್ಪಿದ ಜಲ್ಲಿ ತುಂಬಿದ್ದ ಲಾರಿಯೆಂದು ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ದುರಂತ ಕಾಕಿನಾಡ ಜಿಲ್ಲೆಯಲ್ಲಿ (Kakinada Accident) ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಅನ್ನಾವರಂ ಕಡೆಯಿಂದ ಒಂಟಿಮಾಮಿಡಿ ಕಡೆಗೆ ಹೋಗುತ್ತಿದ್ದ ಜಲ್ಲಿ ತುಂಬಿದ್ದ ಲಾರಿ ಇಂದು ಬೆಳಗ್ಗೆ (ಜೂನ್ 4, ಭಾನುವಾರ) ಎ.ಕೊತ್ತಪಲ್ಲಿಯಲ್ಲಿ ನಿಯಂತ್ರಣ ತಪ್ಪಿ ಮೊದಲು ರಸ್ತೆ ಬದಿಯ ಕುಡಿಯುವ ನೀರಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ನಂತರ ಸಮೀಪದ ಗಣೇಶ ದೇವಸ್ಥಾನಕ್ಕೆ ನುಗ್ಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಭೀಕರ ದುರಂತದಲ್ಲಿ ಲಾರಿ ಚಾಲಕ ಧೋತಿ ಶೇಖರ್ (28), ಕ್ಲೀನರ್ ಕೋಣೂರು ನಾಗೇಂದ್ರ (23) ಹಾಗೂ ದೇವಸ್ಥಾನದಲ್ಲಿ ಮಲಗಿದ್ದ ಸೋಮು ಲಕ್ಷ್ಮಣ ರಾವ್ (48) ಮೃತ ದುರ್ದೈವಿಗಳು. ಮೃತ ಚಾಲಕ ಹಾಗೂ ಕ್ಲೀನರ್‌ ಪಟ್ಟಿಪಾಡು ಮಂಡಲದ ಗಜ್ಜನಪುಡಿ ಗ್ರಾಮಕ್ಕೆ ಸೇರಿದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಲ್ಲಿ ತುಂಬಿದ್ದ ಲಾರಿಯ ಡಿಕ್ಕಿಯ ರಭಸಕ್ಕೆ ಲಾರಿ ಗುರುತು ಸಿಗಲಾರದ ರೀತಿಯಲ್ಲಿ ನಜ್ಜುಗುಜ್ಡಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಪಲ್ನಾಡು ಜಿಲ್ಲೆಯ ಧಾಗೇಪಲ್ಲಿ ಬಳಿ ಇಂದು (ಜೂನ್ 4, ಭಾನುವಾರ) ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಖಾಸಗಿ ಟ್ರಾವೆಲ್ ಬಸ್ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಐವರು ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಅಪಘಾತದಲ್ಲಿ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ವೇಳೆ ಬಸ್‌ನಲ್ಲಿ 50 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್ ಹೈದರಾಬಾದ್‌ನಿಂದ ಓಂಗೋಲ್‌ಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದೆಡೆ ಅನ್ನಮಯ್ಯ ಜಿಲ್ಲೆಯಲ್ಲಿ ನಿನ್ನೆ (ಜೂನ್ 3, ಶನಿವಾರ) ಅಪಘಾತ ಸಂಭವಿಸಿದ್ದು, ಅನ್ನಮಯ್ಯ ಹಾಗೂ ಚಿತ್ತೂರು ಜಿಲ್ಲೆಗಳ ಗಡಿ ಭಾಗವಾದ ಪಿಲೇರು ಎಂಜಿಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಪಘಾತ ಸಂಭವಿಸಿದೆ.

ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ತುಫಾನ್ ವಾಹನ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 7 ಮಂದಿ ಗಂಭೀರವಾಗಿ ಗಾಯೆಗೂಂಡಿದ್ದಾರೆ. ಗಾಯಗೊಂಡವರಲ್ಲಿ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮೃತರು ಕರ್ನೂಲ್ ಮೂಲದ ಪ್ರತಾಪ್‌ರೆಡ್ಡಿ, ಶಿವಮ್ಮ ಹಾಗೂ ವಿಮಾನ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಪಿಲೇರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಿರುಪತಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಕುರಿತು ಕಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರತಿ ತಿಂಗಳು ಹುಣ್ಣಿಮೆಯಂದು ರಾಯಲಸೀಮಾ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಗಿರಿ ಪ್ರದಕ್ಷಣೆಗಾಗಿ ತಿರುವಣ್ಣಾಮೈಲೈಗೆ ಹೋಗುತ್ತಾರೆ. ಗಿರಿ ಪ್ರದಕ್ಷಣೆಗಾಗಿ ತುಫಾನ್‌ ವಾಹನದಲ್ಲಿ ತೆರಳುತ್ತಿದ್ದಾಗ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

IPL_Entry_Point