Kannada News  /  Nation And-world  /  Kcr Jumps Into National Politics With Bharat Rashtra Samithi
ಕೆ ಚಂದ್ರಶೇಖರ್‌ ರಾವ್
ಕೆ ಚಂದ್ರಶೇಖರ್‌ ರಾವ್

Bharat Rashtra Samithi: ಹಳೆ ಕಾರಿಗೆ ಹೊಸ ಹೆಸರು, ಬದಲಾಗುತ್ತಾ ಕೆಸಿಆರ್ ವರ್ಚಸ್ಸು?

05 October 2022, 18:31 ISTJayaraj
05 October 2022, 18:31 IST

ಕೆಸಿಆರ್ ವಿನಾಕಾರಣ ಕೆಲಸ ಮಾಡುವ ರಾಜಕಾರಣಿಯಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಅಲ್ಲಾಡಿಸುವ ಉದ್ದೇಶವಿಲ್ಲದೆ, ಯಾವುದೇ ಸಾಹಸಕ್ಕೂ ಇವರು ಕೈ ಹಾಕುವವರಲ್ಲ. ಬಿಜೆಪಿ ಎಂದರೆ ಮುಖ ಕೆಂಪಗಾಗಿಸುವ ಇವರು, ಬಲಹೀನವಾಗಿರುವ ಪ್ರತಿಪಕ್ಷಗಳಿಗೆ ಶಕ್ತಿ ತುಂಬುವ ಮಹತ್ವಾಕಾಂಕ್ಷೆಯಿಂದ ರಾಷ್ಟ್ರೀಯ ರಾಜಕೀಯಕ್ಕೆ ಪ್ರವೇಶಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌, ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ರಾಷ್ಟ್ರ ರಾಜಕಾರಣವನ್ನು ಗೆಲ್ಲುವ ವಿಶ್ವಾಸದಿಂದ ತಮ್ಮ ಪಕ್ಷಕ್ಕೆ ಹೊಸ ನಾಮಕರಣ ಮಾಡಿದ್ದಾರೆ. ಈವರೆಗೆ ತೆಲಂಗಾಣ ರಾಷ್ಟ್ರ ಸಮಿತಿ (TRS) ಎಂದು ಕರೆಸಿಕೊಳ್ಳುತ್ತಿದ್ದ ತೆಲಂಗಾಣದ ಆಡಳಿತ ಪಕ್ಷ, ಈಗ ಭಾರತ್ ರಾಷ್ಟ್ರ ಸಮಿತಿ (Bharat Rashtra Samiti) ಎಂದು ಬದಲಾಗಿದೆ.

ಟ್ರೆಂಡಿಂಗ್​ ಸುದ್ದಿ

ತೆಲಂಗಾಣ ರಾಷ್ಟ್ರಂ ಸಮಿತಿ ಎರಡು ದಶಕಗಳಷ್ಟು ಹಳೆಯದಾದ ಪಕ್ಷ. ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದಂದಿನಿಂದ ಟಿಆರ್‌ಎಸ್‌ ಪಕ್ಷ, ಇಲ್ಲಿ ಅಜೇಯವಾಗಿ ರಾಜ್ಯಭಾರ ನಡೆಸುತ್ತಿದೆ. ತೆಲಂಗಾಣ ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಏಕಮಾತ್ರ ಉದ್ದೇಶದಿಂದ ಈ ಪಕ್ಷ 2001ರಲ್ಲಿ ಸ್ಥಾಪನೆಯಾಯ್ತು. ಈಗ ಈ ಪಕ್ಷಕ್ಕೆ ಹೊಸ ಹೆಸರಿಟ್ಟಿರುವುದರ ಬಗ್ಗೆ ರಾಜಕೀಯ ಪಂಡಿತರು ಭಿನ್ನ ವಿಭಿನ್ನವಾಗಿ ವಿಮರ್ಷಿಸುತ್ತಿದ್ದಾರೆ. ಈ ಮಹತ್ವದ ನಿರ್ಧಾರದಿಂದ ಕೆಸಿಆರ್‌ ವರ್ಚಸ್ಸು ಬದಲಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಇದು ದುಸ್ಸಾಹಸವಾಗಿ ಬದಲಾಗಬಹುದೆಂದು ಇನ್ನೂ ಕೆಲ ವಿಮರ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

2023ರ ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯು ತನ್ನ ಪಕ್ಷದ ನೆಲೆಯನ್ನು ಈ ರಾಜ್ಯದಲ್ಲಿ ಬಲಪಡಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ನಡುವೆ ತನ್ನ ಸ್ಥಾನವನ್ನು ಗಟ್ಟಿಯಾಗಿ ಊರಲು ನಿರ್ಧರಿಸಿರುವ ಕೆಸಿಆರ್‌, ತಮ್ಮ ಪಕ್ಷದ ನೆಲೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ರಾಜ್ಯ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣವನ್ನು ಬದಲಾಯಿಸುವ ಗುರಿ ಹೊಂದಿದ್ದಾರೆ.

ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂಬ ಗುರಿಯೊಂದಿಗೆ ಹುಟ್ಟಿಕೊಂಡ ಪಕ್ಷ, ಈಗ ರಾಷ್ಟ್ರವನ್ನು ಗೆಲ್ಲಲು ಮುಂದಾಗಿದೆ. ಹೀಗಾಗಿ ರಾಷ್ಟ್ರೀಯ ರಾಜಕೀಯದಲ್ಲಿ ಒಂದು ಸ್ಥಾನಮಾನ ಸೃಷ್ಟಿಸಲು ಪಕ್ಷ ಯಶಸ್ವಿಯಾಗುತ್ತದೆಯೇ ಎಂಬುದು ಇಲ್ಲಿ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಕೆಸಿಆರ್ ನಾಯಕತ್ವವನ್ನು ತೆಲಂಗಾಣದ ಜನರು ಕಣ್ಣುಮುಚ್ಚಿಕೊಂಡು ಒಪ್ಪಿದ್ದಾರೆ. ಆದರೆ ಇದೇ ಒಪ್ಪಿಗೆ ಬೇರೆ ರಾಜ್ಯಗಳಲ್ಲೂ ಸಿಗುತ್ತದೆ ಎಂಬುದು ಸದ್ಯಕ್ಕಂತೂ ಕಷ್ಟದ ಮಾತು. ವಿಶೇಷವಾಗಿ ಉತ್ತರ ರಾಜ್ಯದಲ್ಲಂತೂ ಹೇಳಲಾಗದು.

ಕೆಸಿಆರ್ ವಿನಾಕಾರಣ ಕೆಲಸ ಮಾಡುವ ರಾಜಕಾರಣಿಯಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಅಲ್ಲಾಡಿಸುವ ಉದ್ದೇಶವಿಲ್ಲದೆ, ಯಾವುದೇ ಸಾಹಸಕ್ಕೂ ಇವರು ಕೈ ಹಾಕುವವರಲ್ಲ. ಬಿಜೆಪಿ ಎಂದರೆ ಮುಖ ಕೆಂಪಗಾಗಿಸುವ ಇವರು, ಬಲಹೀನವಾಗಿರುವ ಪ್ರತಿಪಕ್ಷಗಳಿಗೆ ಶಕ್ತಿ ತುಂಬುವ ಮಹತ್ವಾಕಾಂಕ್ಷೆಯಿಂದ ರಾಷ್ಟ್ರೀಯ ರಾಜಕೀಯಕ್ಕೆ ಪ್ರವೇಶಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ವಿವಿಧ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರು, ರೈತರು ಮತ್ತು ವಿವಿಧ ಸಮೂಹದ ಜನರ ವ್ಯಾಪಕ ಬೆಂಬಲ ಪಡೆದಿರುವ ಕೆಸಿಆರ್‌, ತಮ್ಮ ಪಕ್ಷದ ಯಶಸ್ಸಿನ ಬಗ್ಗೆ ಭಾರಿ ನಂಬಿಕೆ ಹೊಂದಿದ್ದಾರೆ. ರೈತು ಬಂಧು, ದಲಿತ ಬಂಧು, ಕೆಸಿಆರ್ ಕಿಟ್, ಆಸರಾ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ರಾಜ್ಯದ ವಿವಿಧ ಸಮುದಾಯಗಳ ಜನರನ್ನು ಕೆಸಿಆರ್‌ ತಲುಪಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಇವರಿಗೆ ಭಾರಿ ಬೆಂಬಲವಿದೆ.

ಕೇಂದ್ರದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು, ದೇಶದ ಚುನಾವಣಾ ರಾಜಕೀಯದಲ್ಲಿ ಮೇಲಿಂದ ಮೇಲೆ ವೈಫಲ್ಯ ಅನುಭವಿಸುತ್ತಿದೆ. ಹೀಗಾಗಿ ಹಳಿ ತಪ್ಪಿರುವ ಪ್ರತಿಪಕ್ಷ ರಾಜಕಾರಣವನ್ನು ಸರಿದಾರಿಗೆ ತರಲು ರಾಷ್ಟ್ರ ರಾಜಕಾರಣಕ್ಕೆ ಕೆಸಿಆರ್‌ ಧುಮುಕಿದ್ದಾರೆ. ದೇಶಾದ್ಯಂತ ಪ್ರಮುಖ ಪ್ರಾದೇಶಿಕ ಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಕಾಂಗ್ರೆಸೇತರ, ಬಿಜೆಪಿಯೇತರ ಪ್ರತಿಪಕ್ಷಗಳ ಕಲ್ಪನೆಯನ್ನು ದೀರ್ಘಕಾಲ ಪ್ರತಿಪಾದಿಸಿರುವ ಕೆಸಿಆರ್, ಅಂತಹ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಲು ಬಯಸಿದ್ದಾರೆ.

ಇನ್ನು ಕೆಸಿಆರ್‌ ಸಾಹಸದ ಬಗ್ಗೆ ಮಾತನಾಡಿರುವ ತೆಲಂಗಾಣ ಜನ ಸಮಿತಿಯ ಸಂಸ್ಥಾಪಕ ಮತ್ತು ರಾಜಕೀಯ ವಿಶ್ಲೇಷಕ ಎಂ ಕೋದಂಡರಾಮ್, “ಇದೇ ಮೊದಲ ಬಾರಿಗೆ, ಟಿಆರ್‌ಎಸ್‌ನಂತಹ ರಾಜ್ಯ ಪಕ್ಷವು ಬಿಆರ್‌ಎಸ್ ಎಂದು ಮರುನಾಮಕರಣ ಮಾಡುತ್ತಿದೆ. ಇದು ದುಸ್ಸಾಹಸವಾಗಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.

ಇಂದು ಪಕ್ಷದ ನೂತನ ಹೆಸರು ಘೋಷಿಸಿದ ಬಳಿಕ ಮಾತನಾಡಿದ ಕೆಸಿಆರ್‌, ಭಾರತ ರಾಷ್ಟ್ರ ಸಮಿತಿಯು ದೇಶದ ರಾಜಕಾರಣದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. 2024ರ ಲೋಕಸಭೆ ಚುನಾವಣೆ ಭಾರತದ ರಾಜಕಾರಣ ಇತಿಹಾಸದಲ್ಲಿ ಅತ್ಯಂತ ಮಹತ್ವದ ಚುನಾವಣೆಯಾಗಲಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಅಳಿವು-ಉಳಿವು ಈ ಚುನಾವಣೆಯ ಮೇಲೆ ಅವಲಂಬಿತವಾಗಿದೆ. 2024ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಲೇಬೇಕಿದೆ. ಇಲ್ಲದಿದ್ದರೆ ದೇಶದಿಂದ ಪ್ರಜಾಪ್ರಭುತ್ವ ಮಾಯವಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳೆಲ್ಲಾ ಒಂದೇ ವೇದಿಕೆಯಡಿ ಬರುವುದು ಅನಿವಾರ್ಯ ಎಂದು ಕೆಸಿಆರ್‌ ಹೇಳಿದ್ದಾರೆ.

2014ರಲ್ಲಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದಂದಿನಿಂದಲ್ಲೂ ತೆಲಂಗಾಣದಲ್ಲಿ‌ ಟಿಆರ್‌ಎಸ್‌ ಸರ್ಕಾರವನ್ನು ಮುನ್ನಡೆಸುತ್ತಿದೆ. ಸಿಎಂ ಕೆಸಿಆರ್‌ ಅದರ ಮುಖ್ಯಸ್ಥರಾಗಿದ್ದು, ತೆಲಂಗಾಣ ನೋಡಿರುವ ಏಕೈಕ ಮುಖ್ಯಮಂತ್ರಿ ಇವರು. ರಾಜ್ಯದಲ್ಲಿ ಈ ಪ್ರಬಲ‌ ಸ್ಥಳೀಯ ಪಕ್ಷವನ್ನು‌ ಅಲುಗಾಡಿಸಲು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೂ ಇದುವರೆಗೆ‌ ಸಾಧ್ಯವಾಗಿಲ್ಲ. ಆದರೆ ರಾಷ್ಟ್ರದ ವಿಚಾರಕ್ಕೆ ಬಂದ್ರೆ ಅದು ಯಶಸ್ವಿಯಾಗುತ್ತಾ ಎಂಬ ಪ್ರಶ್ನೆ ಎದುರಾಗುತ್ತದೆ.

ವಿಭಾಗ