ಕನ್ನಡ ಸುದ್ದಿ  /  Nation And-world  /  Mangaluru News Voters Of Dakshina Kannada Dist Are On Election Duty In Kerala Why Are They Not Allowed To Vote Hsm

ಕೇರಳದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯನಿರತ ದಕ್ಷಿಣ ಕನ್ನಡದವರಿಗೆ ಫಾರಂ 12 ಕೊಡದ ಅಧಿಕಾರಿಗಳು, ಅವರಿಗೆ ಮತದಾನದ ಅವಕಾಶವಿಲ್ಲವೆ

ಕೇರಳದಲ್ಲಿ ಲೋಕ ಸಭಾ ಚುನಾವಣಾ ಕರ್ತವ್ಯದಲ್ಲಿದ್ದಾರೆ ಕೆಲವರು ದಕ್ಷಿಣ ಕನ್ನಡದವರು. ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳು ಅವರಿಗೆ ಫಾರಂ 12 ಕೊಡದ ಕಾರಣ ಈ ಬಾರಿ ಅವರೆಲ್ಲ ಮತದಾನದ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಫಾರಂ 12 ವಿತರಿಸಲು ನಾಳೆಯೇ ಕೊನೆದಿನವಾಗಿದ್ದು, ಈ ಕುರಿತ ಹೋರಾಟದ ಒಂದು ವರದಿ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕೇರಳದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯನಿರತ ದಕ್ಷಿಣ ಕನ್ನಡದವರಿಗೆ ಅಧಿಕಾರಿಗಳು ಫಾರಂ 12 ಕೊಡದ ಕಾರಣ ಅವರಿಗೆ ಈ ಬಾರಿ ಮತದಾನದ ಅವಕಾಶವಿಲ್ಲವೆ ಎಂಬ ಪ್ರಶ್ನೆ ಉದ್ಭವಿಸಿದೆ. (ಸಾಂಕೇತಿಕ ಚಿತ್ರ)
ಕೇರಳದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯನಿರತ ದಕ್ಷಿಣ ಕನ್ನಡದವರಿಗೆ ಅಧಿಕಾರಿಗಳು ಫಾರಂ 12 ಕೊಡದ ಕಾರಣ ಅವರಿಗೆ ಈ ಬಾರಿ ಮತದಾನದ ಅವಕಾಶವಿಲ್ಲವೆ ಎಂಬ ಪ್ರಶ್ನೆ ಉದ್ಭವಿಸಿದೆ. (ಸಾಂಕೇತಿಕ ಚಿತ್ರ)

ಮಂಗಳೂರು: ಕರ್ನಾಟಕದಲ್ಲಿ ನೆಲೆಸಿದ್ದು, ಕೇರಳದಲ್ಲಿ ಕೆಲಸ ಮಾಡುತ್ತಿರುವ ಸರಕಾರಿ ಉದ್ಯೋಗಿಗಳಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ತಪ್ಪಿಹೋಗಲಿದೆಯೇ? ಹೀಗೊಂದು ಆತಂಕ ಕೇರಳದಲ್ಲಿ ಉದ್ಯೋಗದಲ್ಲಿರುವ ಕರ್ನಾಟಕ ನಿವಾಸಿಗಳಿಗೆ ಕಾಡತೊಡಗಿದೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನಲ್ಲಿ ಒಂದೇ ದಿನ ಮತದಾನ ಇರುವುದು ಇದಕ್ಕೆ ಕಾರಣ. ಸಾಮಾನ್ಯವಾಗಿ ಸರಕಾರಿ ಉದ್ಯೋಗಿಗಳು ಚುನಾವಣಾ ಕರ್ತವ್ಯದಲ್ಲಿದ್ದರೆ, ಅಂಚೆ ಮತ ಚಲಾಯಿಸುತ್ತಾರೆ. ಆದರೆ ಈ ಬಾರಿ ಯಾವುದೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾಡಳಿತ ಸಹಿತ ಇಡೀ ಆಡಳಿತ ಯಂತ್ರ ಮತದಾನವನ್ನು ಕಡ್ಡಾಯವಾಗಿ ಮಾಡಿ ಎಂದು ನಾನಾ ಕಸರತ್ತುಗಳನ್ನು ಮಾಡುವ ಮೂಲಕ ಮತದಾರರ ಗಮನ ಸೆಳೆಯುತ್ತಿದೆ. ಆದರೆ ಸರಕಾರಿ ಸೇವೆಯಲ್ಲಿರುವ ಕೇರಳ ಉದ್ಯೋಗಿಗಳು ಈ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ದಕ್ಷಿಣ ಕನ್ನಡ ಜಿಲ್ಲೆಯ ಮತದಾರರೊಬ್ಬರು ತಿಳಿಸಿದರು.

ಸೂಪರ್‌ವೈಸರ್‌ ಫಾರಂ 12 ಕೊಡಲು ನಿರಾಕರಿಸುವುದೇಕೆ?

‘’ನನ್ನ ಮನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದೇನೆ. ನನ್ನಂತೆ ಹಲವರು ಸರಕಾರಿ ಉದ್ಯೋಗಿಗಳಿದ್ದಾರೆ. ಅವರನ್ನು ಕಾಸರಗೋಡು ಜಿಲ್ಲೆಯ ನಾನಾ ಕಡೆಗಳಿಗೆ ಚುನಾವಣೆಯ ಕರ್ತವ್ಯಕ್ಕೆಂದು ನಿಯೋಜಿಸಲಾಗಿದೆ. ಆದರೆ ಅವರು ಈ ಬಾರಿ ಮತದಾನ ಮಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿಯಲ್ಲಿದ್ದಾರೆ. ಕಾರಣ ಇಷ್ಟೇ. ದಕ್ಷಿಣ ಕನ್ನಡ ಜಿಲ್ಲ ಚುನಾವಣಾ ವಿಭಾಗದಿಂದ ಅಂಚೆ ಮತ ಹಾಕುವ ವ್ಯವಸ್ಥೆ ಕಲ್ಪಿಸಿಲ್ಲ. ದೂರವಾಣಿ ಮೂಲಕ ಈ ಕುರಿತು ಕೇಳಿದರೆ, ನೀವು ಹೊರರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರಣ, ಅಂಚೆ ಮತದಾನ ಅವಕಾಶ ಕಲ್ಪಿಸಲಾಗುತ್ತಿಲ್ಲ. ನಮ್ಮ ರಾಜ್ಯದೊಳಗಷ್ಟೇ ಈ ಅವಕಾಶವಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ’’ ಎಂದವರು ತಿಳಿಸಿದರು.

‘’ಈ ಸಲ ನಮಗೆ ಅಂಚೆ ಮತ ಹಾಕಲು ಸಂಬಂಧಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಸೂಪರ್ ವೈಸರ್ ಫಾರಂ 12 ಕೊಡ್ತಾ ಇಲ್ಲ. ಕೇಳಿದರೆ, ಅದನ್ನು ಕೇರಳದಲ್ಲಿ ಪಡೆಯಿರಿ ಎನ್ನುತ್ತಿದ್ದಾರೆ. ಕೇರಳದ ಅಧಿಕಾರಿಗಳು ನಿಮ್ಮ ಮತ ಎಲ್ಲಿದೆ ಅಲ್ಲೇ ಪಡೀಬೇಕು ಎನ್ನುತ್ತಾರೆ. ನಮಗೆ ತ್ರಿಶಂಕು ಪರಿಸ್ಥಿತಿ. ನಾವು ಮತದಾನದಿಂದ ವಂಚಿತರಾಗುತ್ತಿದ್ದೇವೆ ಎಂಬುದೇ ಬೇಸರ. ಏಪ್ರಿಲ್ 19 ಮತದಾನಕ್ಕೆ ಕೊನೇ ದಿನ. ಅಷ್ಟರೊಳಗೆ ಅಧಿಕಾರಿಗಳು ಸಮಸ್ಯೆ ಬಗೆಹರಿಸದೇ ಇದ್ದರೆ, ಎಲ್ಲರೂ ಮತದಾನ ಅವಕಾಶ ಕಳೆದುಕೊಳ್ಳುತ್ತೇವೆ’’ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಗಮನಕ್ಕೆ

ಈಗ ಈ ಕುರಿತು ಎರಡೂ ರಾಜ್ಯಗಳ ಚುನಾವಣಾ ಆಯೋಗಕ್ಕೆ ಮೈಲ್ ಮಾಡಲಿದ್ದೇವೆ ಎಂದು ಕೇರಳದಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಮತದಾರರು HTಕನ್ನಡಕ್ಕೆ ತಿಳಿಸಿದ್ದಾರೆ. ಕೇರಳ ರಾಜ್ಯದಲ್ಲಿ ಮತ ಹೊಂದಿದ್ದು, ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡಿರುವ ಉದ್ಯೋಗಿಗಳಿಗೆ ಚುನಾವಣಾ ಕರ್ತವ್ಯವಿಲ್ಲ. ಇದನ್ನೇ ಕಾಸರಗೋಡು ಜಿಲ್ಲಾಡಳಿತ ಮಾಡಿದರೆ, ನಮ್ಮ ಜಿಲ್ಲೆಯವರಿಗೆ ಅವಕಾಶ ದೊರಕಬಹುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸುತ್ತಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point