ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Moonlighting: ಇಷ್ಟಕ್ಕೂ ಉದ್ಯೋಗಿಗಳೇಕೆ ಎರಡನೇ ಉದ್ಯೋಗ ಬಯಸ್ತಾರೆ?; ಖರ್ಚು-ವೆಚ್ಚ ಸರಿದೂಗಿಸಲು ಸೆಕೆಂಡ್‌ ಜಾಬ್‌ ಮಾಡುವುದು ತಪ್ಪಾ?

Moonlighting: ಇಷ್ಟಕ್ಕೂ ಉದ್ಯೋಗಿಗಳೇಕೆ ಎರಡನೇ ಉದ್ಯೋಗ ಬಯಸ್ತಾರೆ?; ಖರ್ಚು-ವೆಚ್ಚ ಸರಿದೂಗಿಸಲು ಸೆಕೆಂಡ್‌ ಜಾಬ್‌ ಮಾಡುವುದು ತಪ್ಪಾ?

Moonlighting: ಕಾರ್ಪೊರೇಟ್‌ ಉದ್ಯೋಗ ವಲಯದಲ್ಲಿ ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯಲ್ಲಿರುವ ಮೂನ್‌ಲೈಟಿಂಗ್‌ನ ಇನ್ನೊಂದು ಮುಖವನ್ನು ಗಮನಿಸುವುದು ಮುಖ್ಯ. ಹೌದು, ಇಷ್ಟಕ್ಕೂ ಉದ್ಯೋಗಿಗಳೇಕೆ ಎರಡನೇ ಉದ್ಯೋಗ ಬಯಸ್ತಾರೆ? ಕೇವಲ ಹಣಗಳಿಸುವುದಕ್ಕೆ ಮಾತ್ರವೆ?; ಅಲ್ಲ ಎನ್ನುತ್ತಿದೆ ವರದಿ. ಇಲ್ಲಿದೆ ವಿವರ.

ಮೂನ್‌ಲೈಟಿಂಗ್‌ಗೆ ಬಂದಾಗ, ಜನರು ಎರಡನೇ ಕೆಲಸವನ್ನು ಅಂದರೆ ಪಾರ್ಟ್‌ಟೈಮ್‌ ಜಾಬ್‌, ಸೆಕೆಂಡ್‌ ಜಾಬ್‌ ಕೈಗೆತ್ತಿಕೊಳ್ಳುವುದಕ್ಕೆ ಹೆಚ್ಚಿನ ಹಣ ಗಳಿಕೆಯಷ್ಟೇ ಏಕೈಕ ಕಾರಣ ಆಗಿರುವುದಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಮೂನ್‌ಲೈಟಿಂಗ್‌ಗೆ ಬಂದಾಗ, ಜನರು ಎರಡನೇ ಕೆಲಸವನ್ನು ಅಂದರೆ ಪಾರ್ಟ್‌ಟೈಮ್‌ ಜಾಬ್‌, ಸೆಕೆಂಡ್‌ ಜಾಬ್‌ ಕೈಗೆತ್ತಿಕೊಳ್ಳುವುದಕ್ಕೆ ಹೆಚ್ಚಿನ ಹಣ ಗಳಿಕೆಯಷ್ಟೇ ಏಕೈಕ ಕಾರಣ ಆಗಿರುವುದಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಜಗತ್ತು ಕೋವಿಡ್‌ ಸಂಕಷ್ಟದ ಸುಳಿಯಿಂದ ಹೊರಬಂದಿಲ್ಲ. ಅದು ಕೊಟ್ಟ ಆರ್ಥಿಕ ಹೊಡೆತ ಹೆಚ್ಚಾಗಿ ತಗುಲಿರುವುದು ಮೇಲ್ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ. ಇನ್ನು ವಯಸ್ಸಿನ ದೃಷ್ಟಿಯಲ್ಲಿ ನೋಡಿದರೆ ಮಧ್ಯ ವಯಸ್ಸಿನವರೇ ಹೆಚ್ಚು ಸಫರ್‌ ಆಗಿರುವಂಥದ್ದು.

ಈ ಆರ್ಥಿಕ ಹೊಡೆತವು ಎರಡನೇ ವಿಶ್ವಮಹಾಯುದ್ಧದ ನಂತರದಲ್ಲಿ ಜಗತ್ತು ಕಂಡ ಬಹುದೊಡ್ಡ ಆರ್ಥಿಕ ಹಿಂಜರಿತ. ಹೆಚ್ಚಿನ ವ್ಯಾಪಾರ ವಹಿವಾಟುಗಳಿಗೆ ಸಂಕಷ್ಟ ಸಹಿಸುವ ಪ್ಲ್ಯಾನ್‌ ಬಿ ಇದೆ. ಕಾಸ್ಟ್‌ ಕಟ್ಟಿಂಗ್‌ ಅಥವಾ ನಷ್ಟ ಸರಿದೂಗಿಸುವಿಕೆ ಕ್ರಮ ಮತ್ತು ಇತರೆ ಕ್ರಮಗಳಿಗೆ ಕಂಪನಿಗಳು, ವ್ಯಾಪಾರ ವಹಿವಾಟುಗಳು ಮುಂದಾಗುತ್ತವೆ.

ಇದರಂತೆ ಆರ್ಥಿಕ ಹಿಂಜರಿಕೆ ಆದಾಗ, ಕಂಪನಿಗಳು ನಷ್ಟಕ್ಕೆ ಒಳಗಾದಾಗ ಉದ್ಯೋಗಿಗಳು ಏಕಾಕಿಯಾಗಿ ಕೆಲಸ ಕಳೆದುಕೊಳ್ಳುವುದು ಅಚ್ಚರಿ ಏನಲ್ಲ. ಸಾಮಾನ್ಯ ಉದ್ಯೋಗಿ, ಆದಾಗ್ಯೂ, ಅಂತಹ ಆರ್ಥಿಕ ಆಪತ್ತನ್ನು ಎದುರಿಸಲು ಯಾವಾಗಲೂ ಯಾವ ತಂತ್ರವನ್ನೂ ಹೊಂದಿರುವುದಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.

ಆದಾಗ್ಯೂ, ಮೂನ್‌ಲೈಟಿಂಗ್‌ ವಿಚಾರಕ್ಕೆ ಬಂದಾಗ, ಅದು ಹೆಚ್ಚು ಹಣಗಳಿಕೆಗೆ ಮಾತ್ರ ಸೀಮಿತವಾದ ವಿಚಾರ ಆಗಿರುವುದಿಲ್ಲ ಎಂಬುದನ್ನೂ ನಾವು ಗಮನಿಸಬೇಕು. ಇಷ್ಟಕ್ಕೂ ಜನ ಯಾಕೆ ಸೆಕೆಂಡ್‌ ಜಾಬ್‌, ಸೈಡ್‌ ಬಿಜಿನೆಸ್‌ ಅಥವಾ ಪಾರ್ಟ್‌ ಟೈಮ್‌ ಜಾಬ್‌ ಕಡೆಗೆ ಒಲವು ತೋರುತ್ತಾರೆ? ಆರ್ಥಿಕವಾಗಿ ಸಬಲರಾಗಬೇಕು ಎಂದು ದುಡಿಯುವುದು ತಪ್ಪಾ?

ಪ್ಲ್ಯಾನ್‌ ಬಿ

ವ್ಯಾಪಾರ ವಹಿವಾಟುಗಳಲ್ಲಿ ಇರುವಂಥೆಯೇ, ಉದ್ಯೋಗ ಖಾತ್ರಿ ಇಲ್ಲದ ಉದ್ಯೋಗಿಗಳೂ ಈಗ ಪ್ಲ್ಯಾನ್‌ ಬಿ ಮಾಡಿಕೊಳ್ಳುತ್ತಿದ್ದಾರೆ. ಇದು ಸೆಕೆಂಡ್‌ ಜಾಬ್‌ ಹೊಂದುವುದಕ್ಕೆ ಇರುವಂತಹ ಜನಪ್ರಿಯ ಕಾರಣ. ಯಾಕೆ ಹೀಗೆ ಒಂದೊಂದಾಗಿ ಕಾರಣ ಗಮನಿಸೋಣ.

1. ಈ ರೀತಿ ಸನ್ನಿವೇಶದಲ್ಲಿ ಕಂಪನಿಗಳು ಕಡಿಮೆ ಉದ್ಯೋಗಿಗಳನ್ನು ಹೊಂದಿರುತ್ತವೆ. ಬಿಟ್ಟು ಹೋದ ಉದ್ಯೋಗಿಗಳ ಜಾಗಕ್ಕೆ ಹೊಸ ಉದ್ಯೋಗಿಗಳ ನೇಮಕ ಆಗುವುದಿಲ್ಲ. ಅದಕ್ಕೆ ಬಜೆಟ್‌ ಇಲ್ಲ ಎಂಬ ಕಾರಣ ಮುಂದಿಡುತ್ತವೆ. ಕಂಪನಿ ನಷ್ಟದಲ್ಲಿರುವುದು ಬಹುತೇಕ ಈ ರೀತಿ ಸನ್ನಿವೇಶಕ್ಕೆ ಕಾರಣ.

2. ಹೀಗಾದಾಗ, ಅಂತಹ ಕಂಪನಿಯ ಉದ್ಯೋಗಿಗಳ ಮೇಲೆ ಹೆಚ್ಚಿನ ಕೆಲಸದ ಹೊರೆ ಬೀಳುತ್ತದೆ. ಆಗುವ ತಪ್ಪುಗಳಿಗೆ ದಂಡವೂ ಬೀಳುತ್ತದೆ. ಹೆಚ್ಚುವರಿ ಸಮಯ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಉದ್ಯೋಗಿ ಹೆಗಲೇರುತ್ತದೆ. ಹೆಚ್ಚುವರಿ ಸಮಯದ ಕೆಲಸ (OT) ಕ್ಕೆ ಯಾವುದೇ ಆರ್ಥಿಕ ಪ್ರಯೋಜನ ಸಿಗಲ್ಲ.

3. ಇನ್ನೊಂದೆಡೆ ಹಣದುಬ್ಬರ ಹೆಚ್ಚಳ, ಮನೆ ಬಾಡಿಗೆ, ಶಿಕ್ಷಣ ಶುಲ್ಕ, ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಇರುವಾಗ ಆದಾಯ ಏರದೇ ಇದ್ದರೆ ತೊಂದರೆಗೆ ಒಳಗಾಗುವವರು ಉದ್ಯೋಗಿಗಳು. ಅನಿವಾರ್ಯವಾಗಿ ಆರೋಗ್ಯದ ಕಡೆಗೂ ಗಮನಕೊಡದೆ ಸ್ಟ್ರೆಸ್‌ ತೆಗೆದುಕೊಂಡು ಸೆಕೆಂಡ್‌ ಜಾಬ್‌ ಮಾಡಬೇಕಾದ ಒತ್ತಡ ಅನುಭವಿಸುತ್ತಾರೆ.

4. ಹೊಸ ಅಧ್ಯಯನ ವರದಿ ಒಂದರ ಪ್ರಕಾರ, ಕೋವಿಡ್‌ ಸಂಕಷ್ಟದ ಬಳಿಕ ಜಾಗತಿಕ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ, ಅಂಡರ್‌ ಎಂಪ್ಲಾಯ್‌ಮೆಂಟ್‌ ಸಮಸ್ಯೆ ಎದುರಿಸುತ್ತಿರುವವರೆಲ್ಲ 45 ವರ್ಷ ಮತ್ತು ಮೇಲ್ಪಟ್ಟ ವಯೋಮಾನದವರು ಎಂಬುದು ಗಮನಾರ್ಹ. ಬಹುತೇಕ ಎಲ್ಲರಿಗೂ ಕುಟುಂಬ ಮುನ್ನಡೆಸುವ ಹೊಣೆಗಾರಿಕೆ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಹಲವು ಮೂಲಗಳಿಂದ ಆದಾಯ ಬರಬೇಕು

ಪರ್ಸನಲ್‌ ಫೈನಾನ್ಸ್‌ ದೃಷ್ಟಿಯಿಂದ ಹಣಕಾಸು ಸಲಹೆಗಾರ ಬಳಿ ಹೋಗಿ ಮಾತನಾಡಿ ಒಮ್ಮೆ. ಅವರು ಹೇಳುವುದು ಇಷ್ಟೆ- ಆದಾಯದ ವಿಚಾರಕ್ಕೆ ಬಂದರೆ ನಿಮಗೆ ಹಲವು ಮೂಲಗಳಿಂದ ಆದಾಯ ಬರುತ್ತಿರಬೇಕು. ಉದಾಹರಣೆಗೆ ಕೆಲವು ವ್ಯಕ್ತಿಗಳನ್ನು ಗಮನಿಸಿ ನೋಡಿ. ಅವರು ಉದ್ಯೋಗ ಮಾಡುತ್ತ ಸಣ್ಣ ವ್ಯಾಪಾರ ನಡೆಸುತ್ತಿರುತ್ತಾರೆ ಅಥವಾ ವಿವಿದ ಹಣಕಾಸಿನ ಉತ್ಪನ್ನಗಳಲ್ಲಿ ಹೂಡಿಕೆ ಮಾಡಿ ಅದರಿಂದ ಉಪ ಆದಾಯ ಗಳಿಸುತ್ತಿರುತ್ತಾರೆ.

ಇನ್ನು ಕೆಲವರ ಸೀಮಿತ ಆದಾಯದ ಕಾರಣ, ಉಳಿತಾಯ ಬಿಡಿ ನಿತ್ಯ ಬದುಕಿನ ಖರ್ಚು ವೆಚ್ಚ ಸರಿದೂಗಿಸುವುದು ಕೂಡ ಸಾಧ್ಯವಾಗದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅರ್ಧಕ್ಕರ್ಧ ಮನೆ ಬಾಡಿಗೆ ಕೊಟ್ಟು ಉಳಿದ ಖರ್ಚು ವೆಚ್ಚ ಸರಿದೂಗಿಸುವಷ್ಟರಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ ಇಂಥವರದ್ದು. ಅಂಥವರು ಸೆಕೆಂಡ್‌ ಜಾಬ್‌ ಮಾಡಬೇಕಾಗುತ್ತದೆ.

ಸೆಕೆಂಡ್‌ ಜಾಬ್‌ ಮಾಡುವುದಕ್ಕೇನು ಕಾರಣ?

  1. ಸಾಲದ ಹೊರೆ ತಗ್ಗಿಸಲು- ಕೋವಿಡ್‌ ಸಂಕಷ್ಟದ ಬಳಿಕ ಭಾರತವೂ ಸೇರಿ ಜಗತ್ತಿನಾದ್ಯಂತ ಭಾರಿ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ. ಕೋವಿಡ್‌ಗೆ ಒಳಗಾದವರು ಅದರ ಚಿಕಿತ್ಸೆಗಾಗಿ ತಮ್ಮ ಉಳಿತಾಯ ಕರಗಿಸಿಕೊಂಡಿದ್ದಾರೆ. ಸಾಲವನ್ನೂ ಮಾಡಿದವರಿದ್ದಾರೆ. ಇವೆಲ್ಲದರ ನಡುವೆ, ಮೊದಲೇ ಮಾಡಿಕೊಂಡಿರುವ ಮನೆ, ಕಾರು, ಬೈಕು, ಶಿಕ್ಷಣ, ವೈಯಕ್ತಿಕ ಸಾಲಗಳ ಹೊರೆಯೂ ಇದೆ. ಇವೆಲ್ಲದರ ಇಎಂಐ ಪಾವತಿಸಬೇಕಾದರೆ ಅನೇಕರು ಸೆಕೆಂಡ್‌ ಜಾಬ್‌ ಮಾಡಬೇಕಾದ ಪರಿಸ್ಥಿತಿ ಇದೆ.
  2. ಉದ್ಯೋಗ ಕ್ಷೇತ್ರ ಬದಲಾವಣೆ - ಕೋವಿಡ್‌ ಸಂಕಷ್ಟದ ಬಳಿಕ ಅನೇಕ ಉದ್ಯೋಗಗಳು ಅಸ್ತಿತ್ವ ಕಳೆದುಕೊಂಡಿವೆ. ಇನ್ನು ಕೆಲವು ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿವೆ. ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸೆಕೆಂಡ್‌ ಜಾಬ್‌ ಮಾಡುವ ಮೂಲಕ ಕೌಶಲ ಅಭಿವೃದ್ಧಿ ಮಾಡಿಕೊಂಡು ಹೊಸ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಹೊಸ ಉದ್ಯೋಗಕ್ಕೆ ಇದು ಔಪಚಾರಿಕ ಬುನಾದಿಯನ್ನು ಒದಗಿಸುತ್ತದೆ.
  3. ಪ್ಯಾಷನ್‌ ಕಾರಣಕ್ಕೆ - ಅನೇಕರು ಮಾಡುತ್ತಿರುವ ಉದ್ಯೋಗಕ್ಕೂ ಅವರ ಪ್ಯಾಷನ್‌ಗೂ ಸಂಬಂಧ ಇರುವುದಿಲ್ಲ. ಹೀಗಾಗಿ ಕೆಲವರು ಉದ್ಯೋಗದ ಅವಧಿ ಮುಗಿದ ಬಳಿಕ ತಮ್ಮ ಇಷ್ಟದ ಕೆಲಸ ಮಾಡಬಹುದು. ಇದರಲ್ಲಿ ರಾತ್ರಿ ವೇಳೆ ಡಿಜೆ ಆಗಿ ಕೆಲಸ ಮಾಡುವುದು, ಕಲಾವಿದನಾಗಿದ್ದರೆ ನಾಟಕ, ಸಂಗೀತ ಕಛೇರಿ, ಯಕ್ಷಗಾನ, ಸಾಹಿತ್ತಿಕ ಕಾರ್ಯಕ್ರಮಗಳು ಹೀಗೆ ಅನೇಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬಹುದು.
  4. ಸೃಜನಶೀಲತೆ - ಅನೇಕರು ಉದ್ಯೋಗದ ಏಕತಾನತೆಯಿಂದ ಹೊರಬರಲು ಸೆಕೆಂಡ್‌ ಜಾಬ್‌ ಮಾಡುತ್ತಿದ್ದಾರೆ. ಆದರೆ ಸೆಕೆಂಡ್‌ ಜಾಬ್‌ ಆಯ್ಕೆ ಮಾಡುವಾಗ ಅದರಲ್ಲಿ ಕ್ರಿಯೇಟಿವಿಟಿಗೆ ಅವಕಾಶ ಇದೆಯೇ ಎಂಬುದನ್ನು ಗಮನಿಸಿಯೇ ಆಯ್ಕೆ ಮಾಡಿಕೊಂಡಿರುತ್ತಾರೆ. ಇದು ಮನಸ್ಸನ್ನು ಹೆಚ್ಚು ಕ್ರಿಯಾಶೀಲವಾಗಿರಿಸಿ, ಬೋರ್‌ ಹುಟ್ಟಿಸುವ ಉದ್ಯೋಗದಲ್ಲೂ ಆಸಕ್ತಿಯಿಂದ ಮುಂದುವರಿಯುವಂತೆ ಮಾಡುತ್ತದೆ.

ಮೂನ್‌ಲೈಟಿಂಗ್‌ ನೈತಿಕವೇ ಅಥವಾ ಅನೈತಿಕವೇ ಎಂದು ದ ಮಿಂಟ್‌ ನಡೆಸಿದ ಸಮೀಕ್ಷೆಯ ಫಲಿತಾಂಶ ಇಲ್ಲಿದೆ.

IPL_Entry_Point