Imran Khan: ಪಾಕಿಸ್ತಾನದಲ್ಲಿ ಅಘೋಷಿತ ಸೇನಾ ಕಾನೂನು ಎಂದ ಮಾಜಿ ಪ್ರಧಾನಿ ಇಮ್ರಾನ್ ಖಾನ್; ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಪಾಕ್‌ನ ಹಲವು ಪ್ರಾಂತ್ಯಗಳಲ್ಲಿ 245 ನೇ ವಿಧಿ ಜಾರಿಗೊಳಿಸುವುದನ್ನು ತೀವ್ರವಾಗಿ ವಿರೋಧಿಸಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಇದು ಅಘೋಷಿತ ಸೇನಾ ಕಾನೂನು ಎಂದು ಕರೆದಿದ್ದಾರೆ. ಅಲ್ಲದೆ, ಇದೇ ವಿಚಾರ ಸಂಬಂಧ ಅಲ್ಲಿನ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ಆರ್ಥಿಕ ಬಿಕ್ಕಟ್ಟಿನ (Economic Crisis) ನಡುವೆ ಮಾಜಿ ಪ್ರಧಾನಿ ಇಮ್ರಾನ್ (Imran Khan) ಹಾಗೂ ಅಲ್ಲಿನ ಸರ್ಕಾರ (Pakistan Govt), ಸೇನೆ (Pakistan Army) ನಡುವಿನ ಸಮರ ಮುಂದುವರೆದಿದ್ದು, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಪಾಕ್‌ನ ಹಲವು ಪ್ರಾಂತ್ಯಗಳ 245 ನೇ ವಿಧಿ ಜಾರಿಗೊಳಿಸುವುದನ್ನು ತೀವ್ರವಾಗಿ ವಿರೋಧಿಸಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಇದು ಅಘೋಷಿತ ಸೇನಾ ಕಾನೂನು (Undeclared Martial Law) ಎಂದು ಕರೆದಿದ್ದಾರೆ. ಅಲ್ಲದೆ, ಇದೇ ವಿಚಾರ ಸಂಬಂಧ ಅಲ್ಲಿನ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪಾಕಿಸ್ತಾನ ಸಂವಿಧಾನದ 245 ನೇ ವಿಧಿಯ ಅಡಿಯಲ್ಲಿ ದೇಶವನ್ನು ರಕ್ಷಿಸಲು ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ಸೇನೆಯ ಕರೆದು ಅದರ ನೆರವು ಪಡೆಯುವ ಸಾಧ್ಯತೆ ಇದೆ ಎಂದು ಇಮ್ರಾನ್ ಖಾನ್ ದೂರಿದ್ದಾರೆ.
ಪಂಜಾಬ್, ಖೈಬರ್ ಪಖ್ತುಂಖ್ವಾ, ಬಲೂಚಿಸ್ತಾನ್ ಹಾಗೂ ಇಸ್ಲಾಮಾಬಾದ್‌ನಲ್ಲಿ 245 ನೇ ವಿಧಿ ಜಾರಿಗೊಳಿಸುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದೊಂದ ಅಷೋಷಿತ ಸೇನಾ ಕಾನೂನು ಅಂತ ಕರೆದಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಪ್ (ಪಿಟಿಐ) ಪಕ್ಷದ ಮುಖ್ಯಸ್ಥ ಹಾಗೂ 70 ವರ್ಷದ ಇಮ್ರಾನ್ ಖಾನ್ ಸಲ್ಲಿಸಿರುವ ಅರ್ಜಿಯಲ್ಲಿ, ಆರ್ಮಿ ಆಕ್ಟ್ 1952 ರ ಅಡಿಯಲ್ಲಿ ನಾಗರಿಕರ ಬಂಧನಗಳು, ತನಿಖೆಗಳು ಮತ್ತು ವಿಚಾರಣೆಗಳು ಅಸಂವಿಧಾನಿಕ ಮತ್ತು ಅನೂರ್ಜಿತವಾಗಿದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಸದಸ್ಯತ್ವ ಮತ್ತು ಕಚೇರಿಯನ್ನು ಬಲವಂತವಾಗಿ ತ್ಯಜಿಸುವಂತೆ ಮಾಡುವ ಮೂಲಕ ಪಿಟಿಐ ಅನ್ನು ನಿಷೇಧ ಮಾಡಲು ಹೊರಟಿರುವುದು ಅಸಂವಿಧಾನಿಕ ಮತ್ತು ಸಂವಿಧಾನದ 17ನೇ ವಿಧಿಗೆ ವಿರುದ್ಧವಾಗಿದೆ ಎಂದು ಖಾನ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಇದೇ ತಿಂಗಳ ಮೇ 9 ರಂದು ಪಾಕಿಸ್ತಾನದಲ್ಲಿ ನಡೆದಿದ್ದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಬೇಕೆಂದು ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಒತ್ತಾಯಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಪಿಎಂಎಲ್‌ಎನ್ ಮುಖ್ಯಸ್ಥ ನವಾಜ್ ಷರೀಪ್ ಹಾಗೂ ಷರೀಫ್ ಪುತ್ರಿ ಮರ್ಯಮ್ ನವಾಜ್, ಮಾಜಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜದ್ದಾರಿ, ಜೆಯುಐಎಫ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಹಾಗೂ ಇತರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ ಎಂದು ವರದಿ ಹೇಳಿದೆ.
ದೇಶದಲ್ಲಿನ ಶತ್ರುಗಳೇ ಮೇ 9 ರಂದು ಪಾಕಿಸ್ತಾನದ ಕಲ್ಪನೆಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಇಮ್ರಾನ್ ಖಾನ್ ವಿರುದ್ಧ ಪ್ರಧಾನಿ ಶೆಹಬಾಜ್ ಷರೀಫ್ ವಾಗ್ದಾಳಿ ನಡೆಸಿದ್ದರು.
ಈ ಬಗ್ಗೆ ಗುರುವಾರ (ಮೇ 25) ಟ್ವೀಟ್ ಮಾಡಿರುವ ಶೆಹಬಾಜ್, ಮೇ 9ರ ದುರಂತದ ಘಟನೆಗಳನ್ನು ಕೇವಲ ಹಿಂಸಾತ್ಮಕ ಪ್ರತಿಭಟನೆಗಳು ಎಂದು ನಾನು ನೋಡುವುದಿಲ್ಲ. ಅವುಗಳನ್ನು ಆಯೋಜಿಸಿದವರು ನಿಜವಾಗಿಯೂ ತುಂಬಾ ಕೆಟ್ಟವರು ಎಂದಿದ್ದರು.
ಕೆಲವರು ಅಧಿಕಾರದ ಆಸೆಯಿಂದ ಹಿಂದೆಂದೂ ಮಾಡಿದ್ದನ್ನು ಮಾಡುತ್ತಿದ್ದಾರೆ. ಇಡೀ ರಾಷ್ಟ್ರ ಸಂಪೂರ್ಣವಾಗಿ ಅಪನಂಬಿಕೆ ಮತ್ತು ಆಘಾತದ ಸ್ಥಿತಿಯಲ್ಲಿ ನೋಡಿದಾಗ ಇಂತಹ ನಾಚಿಕೆಗೇಡಿನ ಘಟನೆಗಳಿಗೆ ಸ್ಪಷ್ಟವಾದ ಪ್ಲಾನ್ ಮಾಡಿರುವಂತೆ ಕಾಡುತ್ತದೆ ಎಂದು ಇಮ್ರಾನ್ ಖಾನ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ವಿವಿಧ ಪ್ರಕರಣಗಳಲ್ಲಿನ ಎಫ್ಐಆರ್ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಇಸ್ಲಾಮಾಬಾದ್‌ನ ಹೈಕೋರ್ಟ್ ಬಳಿ ಸೇನಾ ಪಡೆ ಅರೆಸ್ಟ್ ಮಾಡಿತ್ತು. ಖಾನ್ ಬಂಧನ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಭಾರಿ ಹಿಂಸಾಚಾರ ನಡೆದಿತ್ತು.