Pakistan Fuel Price Hike: ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದ ಪಾಕಿಸ್ತಾನ ಸರಕಾರ, ಹೊಸ ಇಂಧನ ದರ ಕೇಳಿ ಜನರು ತತ್ತರ
ಪಾಕಿಸ್ತಾನ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ. ಪ್ರತಿಲೀಟರ್ ಪೆಟ್ರೋಲ್ ದರವನ್ನು 35 ಪಾಕಿಸ್ತಾನ ರೂಪಾಯಿ (ಪಿಕೆಆರ್)ಯಷ್ಟು ಹೆಚ್ಚಿಸಿದೆ.
ಇಸ್ಲಾಮಾಬಾದ್: ಪಾಕಿಸ್ತಾನ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ. ಪ್ರತಿಲೀಟರ್ ಪೆಟ್ರೋಲ್ ದರವನ್ನು 35 ಪಾಕಿಸ್ತಾನ ರೂಪಾಯಿ (ಪಿಕೆಆರ್)ಯಷ್ಟು ಹೆಚ್ಚಿಸಿದೆ. ಜನವರಿ 29ರ ಬೆಳಗ್ಗೆ 11 ಗಂಟೆಗೆ ಜಾರಿ ಬರುವಂತೆ ಇಂಧನ ದರವನ್ನು ಹೆಚ್ಚಿಸಿ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಆದೇಶ ಹೊರಡಿಸಿದ್ದಾರೆ.
ಪಾಕಿಸ್ತಾನದ ಸುದ್ದಿಪತ್ರಿಕೆ ಡಾನ್ ವರದಿ ಪ್ರಕಾರ, ಸೀಮೆಎಣ್ಣೆ ಮತ್ತು ಲೈಟ್ ಡೀಸೆಲ್ ಆಯಿಲ್ ದರವನ್ನು ಲೀಟರ್‌ಗೆ 18 ಪಿಕೆಆರ್.ನಷ್ಟು ಹೆಚ್ಚಳ ಮಾಡಲಾಗಿದೆ. ಪಾಕಿಸ್ತಾನ ಹಣಕಾಸು ಸಚಿವಾಲಯದ ಟ್ವೀಟ್ ಪ್ರಕಾರ ಪೆಟ್ರೋಲ್ ದರವು 249.80 ರೂ. ಮತ್ತು ಡೀಸೆಲ್ ದರವು 262.ರೂ.ಗೆ ತಲುಪಿದೆ. ಇದು ಪಾಕಿಸ್ತಾನ ರೂಪಾಯಿ (ಪಿಕೆಆರ್).
"ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 35 ಪಿಕೆಆರ್‌ನಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ. ಇದೇ ಸಮಯದಲ್ಲಿ ಕೆರೋಸಿನ್ ಆಯಿಲ್ ಮತ್ತು ಲೈಟ್ ಡೀಸೆಲ್ ಆಯಿಲ್ ದರವನ್ನು 18 ಪಿಕೆಆರ್‌ನಷ್ಟು ಹೆಚ್ಚಳ ಮಾಡಲಾಗಿದೆ. ಹೈ ಸ್ಪೀಡ್ ಡೀಸೆಲ್ ದರವು ಲೀಟರ್‌ಗೆ 262.80 ಪಿಕೆಆರ್‌ಗೆ, ಎಂಎಸ್ ಪೆಟ್ರೋಲ್ ದರವು 249.80 ಪಿಕೆಆರ್‌ಗೆ, ಕೆರೊಸಿನ್ ಆಯಿಲ್ 189.83 ಪಿಕೆಆರ್, ಲೈಟ್ ಡೀಸೆಲ್ ಆಯಿಲ್ ದರವು ಲೀಟರ್‌ಗೆ 187 ಪಿಕೆಆರ್ ಇದೆʼʼ ಎಂದು ಪಾಕಿಸ್ತಾನ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
"ಈ ನಾಲ್ಕು ಇಂಧನ ದರವನ್ನು ಹೆಚ್ಚಿಸಲು ಸರಕಾರ ನಿರ್ಧರಿಸಿದೆ. ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಅವರ ಸೂಚನೆಯ ಮೇರೆಗೆ ಇಂಧನ ದರ ಹೆಚ್ಚಿಸಲಾಗಿದೆʼʼ ಎಂದು ಪಾಕಿಸ್ತಾನದ ಹಣಕಾಸು ಸಚಿವರಾದ ಇಶಾಕ್ ದಾರ್ ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಪೆಟ್ರೋಲಿಯಂ ದರಗಳ ಏರಿಕೆಗೆ ತಕ್ಕಂತೆ ದರ ಹೆಚ್ಚಿಸಿರುವುದಾಗಿ ಅವರು ಹೇಳಿದ್ದಾರೆ.
"ಕಳೆದ ವಾರ ಪಾಕಿಸ್ತಾನಿ ರೂಪಾಯಿ ಏರಿಳಿತಕ್ಕೆ ತಕ್ಕಂತೆ ದರ ಹೆಚ್ಚಿಸಲಾಗುತ್ತಿದೆʼʼ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ಪವರ್ ಗ್ರಿಡ್‌ಗಳಲ್ಲಿ ತೊಂದರೆ ಕಾಣಿಸಿಕೊಂಡು ಪ್ರಮುಖ ನಗರಗಳು ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ರಾಷ್ಟ್ರೀಯ ವಿದ್ಯುತ್ ಗ್ರಿಡ್‌ನಲ್ಲಿ ಆಗಿರುವ ತೊಂದರೆಯಿಂದಾಗಿ ದೇಶದ ಪ್ರಮುಖ ನಗರಗಳು ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸಿತ್ತು. ಪಾಕಿಸ್ತಾನದ ಬೃಹತ್ ನಗರ ಕರಾಚಿ, ರಾಜಧಾನಿ ಇಸ್ಲಾಮಾಬಾದ್ ಮಾತ್ರವಲ್ಲದೆ ಲಾಹೋರ್, ಪೇಶಾವರದಂತಹ ಹಲವು ನಗರಗಳಲ್ಲಿ ಪವರ್ ಕಟ್ ಉಂಟಾಗಿತ್ತು.
ಪಾಕಿಸ್ತಾನಕ್ಕೆ ಆಗಾಗ ವಿದ್ಯುತ್ ಬಿಕಟ್ಟು ಉಂಟಾಗುತ್ತಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ಸರಿಯಾಗಿ ಹೂಡಿಕೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಪಾಕಿಸ್ತಾನವು ಆಹಾರ ಬಿಕ್ಕಟ್ಟಿನಿಂದ ಸುದ್ದಿಯಲ್ಲಿತ್ತು. ಪಾಕಿಸ್ತಾನದ ಕರೆನ್ಸಿ ಮೀಸಲು 6.7 ಶತಕೋಟಿ ಡಾಲರ್‌ಗೆ ತಲುಪಿದೆ. ಚೀನಾದ ಸಹಾಯವೂ ಕಡಿಮೆಯಾಗಿದೆ. ಸರಕಾರವು ತನ್ನ ಉದ್ಯೋಗಿಗಳಿಗೆ ವೇತನ ನೀಡಲು ಕಷ್ಟಪಡುತ್ತಿದೆ. ಅಲ್ಲಿನ ಗ್ರಾಹಕ ಬೆಲೆ ಸೂಚ್ಯಂಕ ಶೇ.24.5ಕ್ಕಿಂತ ಹೆಚ್ಚಾಗಿದೆ. ಅಲ್ಲಿ ಗೋಧಿ ದಾಸ್ತಾನು ಬರಿದಾಗುತ್ತ ಬಂದಿದೆ. ಗೋದಿ ಹಿಟ್ಟಿಗಾಗಿ ಕಾಲ್ತುಳಿತ ಸಂಭವಿಸಿದೆ. ಜನರು ಆಹಾರ ಪದಾರ್ಥಗಳಿಗಾಗಿ ಹಲವು ಗಂಟೆಗಳ ಕಾಲ ಸರತಿಯಲ್ಲಿ ಕಾಯುವಂತಹ ದುಸ್ಥಿತಿ ಎದುರಾಗಿದೆ.
ಮಾಂಸ ಪ್ರಿಯರಾದ ಪಾಕಿಗಳಿಗೆ ಈಗ ಕೋಳಿ ಮಾಂಸದೂಟ ಕನಸಾಗಿದೆ. ಅಲ್ಲಿ ಕೋಳಿ ಮಾಂಸದ ಬೆಲೆ ಕೆ.ಜಿ.ಗೆ 650ರಿಂದ 700 ರೂ. ನಷ್ಟು ದುಬಾರಿಯಾಗಿತ್ತು.. ಚಿಕನ್ ತಿನ್ನಬೇಡಿ ಎಂದು ಆಹಾರ ಸಚಿವರೇ ಸಲಹೆ ನೀಡಿದ್ದರು. ಪಾಕ್‌ನಲ್ಲಿ ಕರೆಂಟ್ ಪ್ರಾಬ್ಲಂ ಕೂಡ ಇದೆ. ಇದಕ್ಕಾಗಿ ವಿದ್ಯುತ್ ಉಳಿತಾಯಕ್ಕಾಗಿ ಜನರಿಗೆ ಕರೆ ನೀಡಲಾಗಿದೆ. ಹಳೆ ಫ್ಯಾನ್, ಬಲ್ಬ್‌ಗಳನ್ನು ಬ್ಯಾನ್ ಮಾಡಲು ಉದ್ದೇಶಿಸಿದೆ. ಮಾರುಕಟ್ಟೆಗಳನ್ನು ರಾತ್ರಿ ಎಂಟು ಗಂಟೆಯ ನಂತರ ಮುಚ್ಚಿರಿ ಎಂದು ಅಲ್ಲಿನ ಸರಕಾರ ಆದೇಶಿಸಿತ್ತು.
ಇದೀಗ ಇಂಧನ ದರವೂ ಹೆಚ್ಚಳವಾಗಿದ್ದು, ಜನರ ಕಿಸೆಗೆ ಹೆಚ್ಚಿನ ಹೊರೆಯಾಗಿದೆ.