ಕನ್ನಡ ಸುದ್ದಿ  /  Nation And-world  /  Ram Navami 2024 Ayodhya Ram Mandir And Politics Bjp Manifesto Lok Sabha Polls Analysis Uks

ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಮೊದಲ ರಾಮನವಮಿ, ಲೋಕಸಭೆಯಲ್ಲಿ ಬಿಜೆಪಿಗೆ ಬಲತುಂಬಿದ ರಾಮ ಮಂದಿರ ಚಳವಳಿ- ಅವಲೋಕನ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿ ಬಾಲರಾಮ ವಿರಾಜಮಾನನಾದ ಬಳಿಕ ಇದೇ ಮೊದಲ ಸಲ ರಾಮನವಮಿ (ಏಪ್ರಿಲ್ 17) ಆಚರಣೆ ನಡೆಯಲಿದೆ. ದಶಕಗಳಿಂದ ರಾಮಮಂದಿರ ಚುನಾವಣಾ ರಾಜಕೀಯದಲ್ಲಿ ಬಿಜೆಪಿಗೆ ಬಲತುಂಬುತ್ತ ಬಂದ ವಿಚಾರವಾಗಿತ್ತು. ಈ ಬಾರಿ ಕೂಡ ಇದು ಕೆಲಸ ಮಾಡಲಿದೆ ಎಂಬುದು ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಈ ಅವಲೋಕನ.

ಅಯೋಧ್ಯೆ ರಥಯಾತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾಣಿ (ಎಡ ಚಿತ್ರ), ಅಯೋಧ್ಯೆ ರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮ ( ಬಲ ಚಿತ್ರ)
ಅಯೋಧ್ಯೆ ರಥಯಾತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾಣಿ (ಎಡ ಚಿತ್ರ), ಅಯೋಧ್ಯೆ ರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮ ( ಬಲ ಚಿತ್ರ)

ನವದೆಹಲಿ: ಲೋಕಸಭೆ ಚುನಾವಣೆಯ ಹೊತ್ತು. ದಶಕಗಳ ಹಿಂದೆ ರಾಮ ಮಂದಿರ ನಿರ್ಮಾಣ ಸಂಬಂಧ ನೀಡಿದ್ದ ಚುನಾವಣಾ ಭರವಸೆಯನ್ನು ಬಿಜೆಪಿ ಈ ವರ್ಷ ಈಡೇರಿಸಿದ್ದು, ಹೀಗಾಗಿ ಈ ಸಲದ ರಾಮನವಮಿ (ಏಪ್ರಿಲ್ 17) ಕೂಡ ವಿಶೇಷ. ಬಿಜೆಪಿಯ ರಾಜಕಾರಣಕ್ಕೆ ಭದ್ರ ಬುನಾದಿ ಒದಗಿಸಿದ್ದು ರಾಮ ಮಂದಿರ ಚಳವಳಿ. 543 ಸದಸ್ಯರಿರುವ ಲೋಕಸಭೆಯಲ್ಲಿ 2 ಸದಸ್ಯ ಸ್ಥಾನ ಹೊಂದಿದ್ದ ಬಿಜೆಪಿಗೆ ಈಗ 300 + ಸದಸ್ಯರನ್ನು ಹೊಂದುವುದಕ್ಕೆ ಸಾಧ್ಯವಾಗಿದ್ದು ಕೂಡ ಇದೇ ರಾಮಮಂದಿರದಿಂದ. ಆದ್ದರಿಂದ ಈ ಬಾರಿ 400 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ.

ಇವೆಲ್ಲದರ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ಬಿಜೆಪಿ ನಾಯಕರು ರಾಮ ಮಂದಿರ ಈ ಸಲ ಚುನಾವಣಾ ವಿಷಯವೇ ಅಲ್ಲ ಎಂದು ಹೇಳತೊಡಗಿದ್ದಾರೆ. ಈಗ ಮೂರ್ನಾಲ್ಕು ದಿನಗಳ ಹಿಂದೆ ಪ್ರಕಟವಾದ ಸಿಎಸ್‌ಡಿಎಸ್ ಲೋಕನೀತಿ 2024 ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ರಾಮ ಮಂದಿರ ವಿಚಾರ ಪ್ರಸ್ತಾಪವಾಗಿತ್ತು. ಹಿಂದು ಭಾವವನ್ನು ರಾಮಮಂದಿರ ಉದ್ಘಾಟನೆ ಜಾಗೃತಗೊಳಿಸಲಿದೆಯೇ ಎಂಬ ಪ್ರಶ್ನೆಗೆ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇಕಡ 48 ಜನ ಹೌದು ಎಂದು ಉತ್ತರಿಸಿದ್ದಾರೆ. ಶೇಕಡ 25 ಜನ ಹಿಂದುಗಳ ಮೇಲೆ ಏನೂ ಪರಿಣಾಮ ಬೀರದು ಎಂದರೆ ಶೇಕಡ 24 ಜನ ಉತ್ತರಿಸಿಲ್ಲ. ಇದನ್ನು ಗಮನಿಸಿದರೆ, ಬಹುಪಾಲು ಜನರ ಮನಸ್ಸಿನ ಮೇಲೆ ರಾಮ ಮಂದಿರ ಉದ್ಘಾಟನೆ ಪರಿಣಾಮ ಬೀರಿದೆ ಎಂಬುದು ಸ್ಪಷ್ಟವಾಗುತ್ತದೆ.

ಈ ಹಿನ್ನೆಲೆಯಲ್ಲಿ ರಾಮಮಂದಿರ ಮತ್ತು ರಾಜಕೀಯ ಚಳವಳಿ, ಅಭಿಯಾನಗಳ ಅವಲೋಕನ ಮಾಡುವುದಕ್ಕೆ ಇದು ಸಕಾಲ. ವಾಸ್ತವದಲ್ಲಿ ಬಿಜೆಪಿ 1991ರಿಂದ ಹಿಡಿದು 2019ರ ತನಕವೂ ರಾಮ ಮಂದಿರದ ವಿಚಾರ ಪ್ರಸ್ತಾಪಿಸುತ್ತಲೇ ಬಂದಿತ್ತು. ಮಂದಿರವಲ್ಲೇ ಕಟ್ಟುವೆವು ಎಂಬ ಜನಪ್ರಿಯ ಘೋಷಣೆಯೊಂದಿಗೆ 1991ರಲ್ಲಿ ಬಿಜೆಪಿ ರಾಮಮಂದಿರ ವಿಚಾರವನ್ನು ಚುನಾವಣಾ ಭರವಸೆಯನ್ನಾಗಿ ಘೋ‍ಷಿಸಿತ್ತು. 1992ರಲ್ಲಿ ಬಾಬರಿ ಮಸೀದಿ ಕಟ್ಟಡವನ್ನು ಕರಸೇವಕರು ಧ್ವಂಸಗೊಳಿಸಿದರು. ಈ ವಿದ್ಯಮಾನವು ಬಿಜೆಪಿಯ ಚುನಾವಣಾ ಯಶಸ್ಸಿಗೆ ಬುನಾದಿ ಒದಗಿಸಿತು. ಇದಾಗಿ, ಬಿಜೆಪಿ ಮೊದಲ ಬಾರಿಗೆ 1996ರಲ್ಲಿ ಅಧಿಕೃತವಾಗಿ ರಾಮ ಮಂದಿರದ ವಿಷಯವನ್ನು ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತು.

ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರ 1996 ರಿಂದ 2019

ಈಗ ಲೋಕಸಭೆ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರದ ವಿಚಾರ ಪ್ರಸ್ತಾಪವಾಗಿರುವ ರೀತಿಯನ್ನು ಅವಲೋಕಿಸಬಹುದು.

1996ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಕಟಿಸಿದ ಚುನಾವಣಾ ಪ್ರಣಾಳಿಕೆಯಲ್ಲಿ"ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅಯೋಧ್ಯೆಯ ಜನ್ಮಸ್ಥಾನದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುತ್ತೇವೆ. ಈ ಕನಸು ಭಾರತವಾಸಿಗಳಾದ ಲಕ್ಷಾಂತರ ಜನರ ಭಾವನೆಗಳಿಗೆ ಸಂಬಂಧಿಸಿದ್ದು. ರಾಮನ ಪರಿಕಲ್ಪನೆಯು ಅವರ ಪ್ರಜ್ಞೆಯ ಮಧ್ಯಭಾಗದಲ್ಲಿದೆ" ಎಂದು ಹೇಳಿತು. ಆ ಮೂಲಕ ಮೊದಲ ಬಾರಿಗೆ ಸ್ಪಷ್ಟವಾಗಿ ತನ್ನ ಭರವಸೆಯನ್ನು ಅದು ದಾಖಲಿಸಿತು.

ಇನ್ನು 1998ರ ಲೋಕಸಭಾ ಚುನಾವಣೆಯ ವೇಳೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ, “ಬಾಲಗೃಹದಲ್ಲಿರುವ ರಾಮಲಲಾನನ್ನು ಹೊಸ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವುದು. ಶ್ರೀರಾಮ ಭಾರತೀಯರ ಪ್ರಜ್ಞೆಯ ಭಾಗವಾಗಿರುವುದನ್ನು ಪಕ್ಷ ಗೌರವಿಸುತ್ತದೆ. ಇದಕ್ಕೆ ಸಂಬಂಧಿಸಿ ಸಮಾಲೋಚನೆ, ಕಾನೂನು ಮತ್ತು ಸಂವಿಧಾನಾತ್ಮಕವಾಗಿ ಏನು ಮಾಡಬಹುದೋ ಅದೆಲ್ಲವನ್ನೂ ಪಕ್ಷ ಮಾಡಲಿದೆ” ಎಂದು ಘೋ‍ಷಿಸಿತು.

ಮುಂದೆ 2004ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಮತ್ತೊಮ್ಮೆ ನೀಡಿತು.

ಅದಾಗಿ 2009ರ ಲೋಕಸಭಾ ಚುನಾವಣೆಗೆ, “ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲಿ ಭವ್ಯ ಮಂದಿರವನ್ನು ನಿರ್ಮಿಸಬೇಕೆಂದು ಭಾರತ ಮತ್ತು ವಿದೇಶಗಳಲ್ಲಿರುವ ಭಾರತೀಯರ ಅದಮ್ಯ ಬಯಕೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಮಾತುಕತೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಗಳು ಸೇರಿ ಎಲ್ಲಾ ಸಾಧ್ಯತೆಗಳನ್ನು ಬಿಜೆಪಿ ಅನ್ವೇಷಿಸಲಿದೆ.” ಎಂದು ಪ್ರಣಾಳಿಕೆಯಲ್ಲಿ ಘೋಷಿಸಿತು.

2014ರ ಲೋಕಸಭಾ ಚುನಾವಣೆ ವೇಳೆ, “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸಂವಿಧಾನದ ಚೌಕಟ್ಟಿನೊಳಗೆ ಎಲ್ಲ ಸಾಧ್ಯತೆಗಳನ್ನು ಪಕ್ಷವು ಅನ್ವೇಷಿಸಲಿದೆ.” ಎಂದು ಬಿಜೆಪಿ ಪ್ರಣಾಳಿಕೆ ಘೋಷಿಸಿತು.

ಕಳೆದ ಲೋಕಸಭಾ ಚುನಾವಣೆ (2019)ಯಲ್ಲಿ “ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧಿಸಿದ ನಿಲುವಿನಲ್ಲಿ ಬದಲಾವಣೆ ಇಲ್ಲ. ಅದನ್ನು ಪಕ್ಷ ಈಡೇರಿಸಿಯೇ ಈಡೇರಿಸುತ್ತದೆ” ಎಂದು ಖಾತರಿ ನೀಡಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿತು.

ಲೋಕಸಭೆಯ 543 ಸ್ಥಾನಗಳಲ್ಲಿ ಕಾಂಗ್ರೆಸ್ - ಬಿಜೆಪಿ ಸ್ಥಾನಪಲ್ಲಟ

ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ರಾಮಮಂದಿರವನ್ನು ಸೇರಿಸಿ, ರಾಜಕೀಯ ಅಭಿಯಾನ, ಧಾರ್ಮಿಕ ಯಾತ್ರೆಗಳನ್ನು ಆಯೋಜಿಸಿದ ಬಳಿಕ ಲೋಕಸಭೆಯ 543 ಸ್ಥಾನಗಳಲ್ಲಿ ಆಗಿರುವ ಬದಲಾವಣೆಯ ಚಿತ್ರಣ ಹೀಗಿದೆ.

ಮೊದಲ ಲೋಕಸಭೆ ಚುನಾವಣೆ (1952)- ಲೋಕಸಭೆ ಸ್ಥಾನಗಳು 489. ಕಾಂಗ್ರೆಸ್‌ 364, ಭಾರತೀಯ ಜನ ಸಂಘ 3.

2ನೇ ಲೋಕಸಭೆ ಚುನಾವಣೆ (1957) - ಲೋಕಸಭೆ ಸ್ಥಾನಗಳು 494. ಕಾಂಗ್ರೆಸ್ 371. ಭಾರತೀಯ ಜನಸಂಘ 27

3ನೇ ಲೋಕಸಭಾ ಚುನಾವಣೆ (1962) - ಲೋಕಸಭೆ ಸ್ಥಾನಗಳು 494. ಕಾಂಗ್ರೆಸ್ 361.

4ನೇ ಲೋಕಸಭಾ ಚುನಾವಣೆ (1967) - ಲೋಕಸಭೆ ಸ್ಥಾನಗಳು 520. ಕಾಂಗ್ರೆಸ್‌ 283.

5ನೇ ಲೋಕಸಭಾ ಚುನಾವಣೆ (1971) - ಲೋಕಸಭೆ ಸ್ಥಾನಗಳು 518. ಕಾಂಗ್ರೆಸ್ 352.

6ನೇ ಲೋಕಸಭಾ ಚುನಾವಣೆ (1977) - ಲೋಕಸಭೆ ಸ್ಥಾನಗಳು 542. ಬಿಎಲ್‌ಡಿ 295. ಕಾಂಗ್ರೆಸ್‌ 154.

7ನೇ ಲೋಕಸಭಾ ಚುನಾವಣೆ (1980) - ಲೋಕಸಭೆ ಸ್ಥಾನಗಳು 529. ಕಾಂಗ್ರೆಸ್ 353. ಜನತಾ ಪಾರ್ಟಿ 32.

8ನೇ ಲೋಕಸಭಾ ಚುನಾವಣೆ (1984)- ಲೋಕಸಭೆ ಸ್ಥಾನಗಳು 514. ಕಾಂಗ್ರೆಸ್‌ 414.

9ನೇ ಲೋಕಸಭಾ ಚುನಾವಣೆ (1989)- ಲೋಕಸಭೆ ಸ್ಥಾನಗಳು 525. ಕಾಂಗ್ರೆಸ್‌ 197. ಜನತಾ ದಳ 143. ಬಿಜೆಪಿ 85.

10ನೇ ಲೋಕಸಭಾ ಚುನಾವಣೆ (1991)- ಲೋಕಸಭೆ ಸ್ಥಾನಗಳಲ್ಲಿ 244 ಕಾಂಗ್ರೆಸ್‌ಗೆ, ಬಿಜೆಪಿ 120. ಜನತಾದಳಕ್ಕೆ 59.

11ನೇ ಲೋಕಸಭಾ ಚುನಾವಣೆ (1996) - ಲೋಕಸಭೆ ಸ್ಥಾನಗಳು 543. ಬಿಜೆಪಿ 161. ಕಾಂಗ್ರೆಸ್ 140. ಜನತಾ ದಳ 46.

12ನೇ ಲೋಕಸಭಾ ಚುನಾವಣೆ (1998)- ಲೋಕಸಭೆ ಸ್ಥಾನಗಳು 543. ಬಿಜೆಪಿ 182. ಕಾಂಗ್ರೆಸ್ 141.

13ನೇ ಲೋಕಸಭಾ ಚುನಾವಣೆ (1999)- ಲೋಕಸಭೆ ಸ್ಥಾನಗಳು 543. ಬಿಜೆಪಿ 182. ಕಾಂಗ್ರೆಸ್‌ 114.

14ನೇ ಲೋಕಸಭಾ ಚುನಾವಣೆ (2004)- ಲೋಕಸಭೆ ಸ್ಥಾನಗಳು 543. ಕಾಂಗ್ರೆಸ್‌ (145) ಮೈತ್ರಿಕೂಟ 335. ಬಿಜೆಪಿ 138.

15ನೇ ಲೋಕಸಭಾ ಚುನಾವಣೆ (2009) - ಲೋಕಸಭೆ ಸ್ಥಾನಗಳು 543. ಕಾಂಗ್ರೆಸ್‌ 206. ಬಿಜೆಪಿ 116.

16ನೇ ಲೋಕಸಭಾ ಚುನಾವಣೆ (2014)- ಲೋಕಸಭೆ ಸ್ಥಾನಗಳು 543. ಬಿಜೆಪಿ 282. ಕಾಂಗ್ರೆಸ್ 44.

17ನೇ ಲೋಕಸಭಾ ಚುನಾವಣೆ (2019) - ಲೋಕಸಭೆ ಸ್ಥಾನಗಳು 543. ಬಿಜೆಪಿ 303. ಕಾಂಗ್ರೆಸ್ 52.

ಈ ಅಂಕಿ ಅಂಶಗಳನ್ನು ಗಮನಿಸಿದರೆ ರಾಮ ಮಂದಿರದ ವಿಷಯ ಪ್ರಸ್ತಾಪಿಸಿದ ಬಳಿಕ ಬಿಜೆಪಿ ಚುನಾವಣಾ ರಾಜಕೀಯ ಲಾಭವನ್ನು ಪಡೆದುಕೊಂಡಿರುವುದು ದಟ್ಟವಾಗಿ ಕಂಡುಬಂದಿದೆ. ಉತ್ತರಪ್ರದೇಶದಲ್ಲಿ ಕೂಡ 2012 ಮತ್ತು 2017 ವಿಧಾನಸಭಾ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ತುಂಬ ನೆರವಿಗೆ ಬಂದಿದೆ. ಎರಡು ಅವಧಿಗೂ ಅಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿರುವುದು ವಿಶೇಷ. ಈ ದೃಷ್ಟಿಯಿಂದ ಗಮನಿಸುವುದಾದರೆ, ಅಯೋಧ್ಯೆಯಲ್ಲಿನ ರಾಮಮಂದಿರವು ಬಹುಶಃ ಮೂರು ದಶಕಗಳಿಂದ ರಾಜಕೀಯವನ್ನು ರೂಪಿಸಿದ ಅತ್ಯಂತ ಪ್ರಚೋದನಾತ್ಮಕ ವಿಷಯವಾಗಿ ಕಂಡುಬಂದಿದೆ. ಈ ಸಲದ ಚುನಾವಣೆಯಲ್ಲೂ ಇದು ಪರಿಣಾಮ ಬೀರುತ್ತಿರುವುದು ಕಂಡುಬಂದಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ

IPL_Entry_Point