ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Stranded Astronauts: ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಮೂವರು ಗಗನಯಾತ್ರಿಗಳು: 'ಹೈ ಟೆನ್ಶನ್‌' ಕಾರ್ಯಾಚರಣೆಗೆ ಮುಂದಾದ ರಷ್ಯಾ!

Stranded Astronauts: ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಮೂವರು ಗಗನಯಾತ್ರಿಗಳು: 'ಹೈ ಟೆನ್ಶನ್‌' ಕಾರ್ಯಾಚರಣೆಗೆ ಮುಂದಾದ ರಷ್ಯಾ!

ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರಬೇಕಿದ್ದ ಮೂಲ ರಿಟರ್ನ್‌ ಕ್ಯಾಪ್ಸುಲ್‌ನ ಕೂಲಿಂಗ್‌ ಸಿಸ್ಟಮ್‌ ಸೋರಿಕೆಯಾಗಿದ್ದರಿಂದ, ಇಬ್ಬರು ರಷ್ಯನ್‌ ಹಾಗೂ ಓರ್ವ ಅಮೆರಿಕನ್‌ ಗಗನಯಾತ್ರಿ ಐಎಸ್‌ಎಸ್‌ನಲ್ಲೇ ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೂವರೂ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು, ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯು ನಭಕ್ಕೆ ಚಿಮ್ಮಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Verified Twitter)

ಮಾಸ್ಕೋ: ಬಾಹ್ಯಾಕಾಶ ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ಅದು ಮಾನವರನ್ನು ಆದರದಿಂದ ಬರಮಾಡಿಕೊಳ್ಳುತ್ತದೆ ಎಂಬುದು ನಿಜವಾದರೂ, ಅವರನ್ನು ಅಷ್ಟೇ ಆದರದಿಂದ ಬೀಳ್ಕೊಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟೀ ಇಲ್ಲ. ರಷ್ಯಾ ಮತ್ತು ಅಮೆರಿಕದ ಒಟ್ಟು ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌)ದಲ್ಲಿ ಸಿಲುಕಿರುವ ಪ್ರಕರಣವೇ ಇದಕ್ಕೆ ಸಾಕ್ಷಿ.

ಟ್ರೆಂಡಿಂಗ್​ ಸುದ್ದಿ

ಹೌದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಮೂವರು ಗಗನಯಾತ್ರಿಗಳು ಸಿಕ್ಕಿಬಿದ್ದಿದ್ದಾರೆ. ಈ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರಬೇಕಿದ್ದ ಮೂಲ ರಿಟರ್ನ್‌ ಕ್ಯಾಪ್ಸುಲ್‌ನ ಕೂಲಿಂಗ್‌ ಸಿಸ್ಟಮ್‌ ಸೋರಿಕೆಯಾಗಿದ್ದರಿಂದ, ಇಬ್ಬರು ರಷ್ಯನ್‌ ಹಾಗೂ ಓರ್ವ ಅಮೆರಿಕನ್‌ ಗಗನಯಾತ್ರಿ ಐಎಸ್‌ಎಸ್‌ನಲ್ಲೇ ಉಳಿದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಐಎಸ್‌ಎಸ್‌ನಲ್ಲಿ ಸಿಲುಕಿರುವ ಮೂವರು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು, ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯು ನಭಕ್ಕೆ ಚಿಮ್ಮಿದೆ. ಈ ಮಾನವರಹಿತ ಸೋಯುಜ್ MS-23 ಬಾಹ್ಯಾಕಾಶ ನೌಕೆಯನ್ನು, ಕಝಾಕಿಸ್ತಾನ್‌ದ ಬೈಕೊನೂರ್ ಬಾಹ್ಯಾಕಾಶ ಕೇಂದ್ರದಿಂದ ಈಗಾಗಲೇ ಉಡಾವಣೆ ಮಾಡಲಾಗಿದೆ. ಐಎಸ್‌ಎಸ್‌ನ್ನು ತಲುಪಲಿರುವ ಈ ಬಾಹ್ಯಾಕಾಶ ನೌಕೆ, ಮುಂಬರುವ ಸೆಪ್ಟೆಂಬರ್‌ನಲ್ಲಿ ಮೂವರೂ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲಿದೆ.

ರಷ್ಯಾದ ಗಗನಯಾತ್ರಿಗಳಾದ ಸೆರ್ಗೆಯ್ ಪ್ರೊಕೊಪಿಯೆವ್ ಮತ್ತು ಡಿಮಿಟ್ರಿ ಪೆಟೆಲಿನ್ ಮತ್ತು ಯುಎಸ್ ಗಗನಯಾತ್ರಿ ಫ್ರಾನ್ಸಿಸ್ಕೊ ​​​​ರುಬಿಯೊ ಕಳೆದ ಮಾರ್ಚ್‌ನಲ್ಲಿ ತಮ್ಮ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕಿತ್ತು. ಆದರೆ ಎರಡು ತಿಂಗಳ ಹಿಂದೆ ಅವರ ಸೋಯುಜ್ ಎಂಎಸ್ -22 ಕ್ಯಾಪ್ಸುಲ್‌ನ ಕೂಲಿಂಗ್ ಸಿಸ್ಟಮ್‌ನಲ್ಲಿ ಸೋರಿಕೆ ಕಂಡುಬಂದಿದ್ದು, ಸುರಕ್ಷತೆಯ ದೃಷ್ಟಿಯಿಂದ ಮೂವರೂ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿದ್ದಾರೆ.

ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್, ಈ ಮೂವರು ಗಗನಯಾತ್ರಿಗಳು ಸೆಪ್ಟೆಂಬರ್‌ನಲ್ಲಿ ಸೋಯುಜ್ ಎಂಎಸ್ -23ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಹಾನಿಗೊಳಗಾದ MS-22 ಬಾಹ್ಯಾಕಾಶ ನೌಕೆಯು ಮುಂಬರುವ ಮಾರ್ಚ್‌ನಲ್ಲಿ ಸಿಬ್ಬಂದಿರಹಿತವಾಗಿ ಭೂಮಿಗೆ ಮರಳಲಿದೆ.

ಮೈಕ್ರೋಮೆಟಿಯೊರಾಯ್ಡ್‌(ಸಣ್ಣ ಉಲ್ಕಾಶಿಲೆ) ಅಪ್ಪಳಿಸಿದ್ದರಿಂದಾಗಿ MS-22 ಬಾಹ್ಯಾಕಾಶ ನೌಕೆಯಲ್ಲಿ ಕಳೆದ ವರ್ಷ ಸೋರಿಕೆ ಕಂಡುಬಂದಿತ್ತು. ಬಾಹ್ಯಾಕಾಶ ಶಿಲೆಯ ಒಂದು ಸಣ್ಣ ಕಣ ಕ್ಯಾಪ್ಸುಲ್‌ಗೆ ಅತ್ಯಂತ ವೇಗವಾಗಿ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರುವುದು ಅಸಾಧ್ಯವಾಗಿದೆ ಎಂದು ನಾಸಾ ಮತ್ತು ರೋಸ್ಕೋಸ್ಮೊಸ್ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಇದೇ ರೀತಿಯ ಮತ್ತೊಂದು ಘಟನೆಯಿಂದಾಗಿ, ಕಳೆದ ವಾರ ಕಕ್ಷೆಯಿಂದ ಹೊರತೆಗೆಯಲಾದ ಪ್ರೋಗ್ರೆಸ್ MS-21 ಸರಕು ನೌಕೆಯ ಕೂಲಿಂಗ್ ಸಿಸ್ಟಮ್‌ನಲ್ಲೂ ಸೋರಿಕೆ ಕಂಡುಬಂದಿದೆ. ಆದರೆ ಇದು ಸರಕು ನೌಕೆಯಾಗಿದ್ದರಿಂದ ಅದನ್ನು ಭೂಮಿಗೆ ಮರಳಿ ಕರೆತರಲಾಗಿದೆ. ಈ ನೌಕೆಗೂ ಬಾಹ್ಯಾಕಾಶ ಶಿಲೆಯ ಸಣ್ಣ ಕಣವೊಂದು ಅಪ್ಪಳಿಸಿತ್ತು ಎನ್ನಲಾಗಿದೆ.

ವೈದ್ಯಕೀಯ ಉಪಕರಣಗಳು, ವೈಜ್ಞಾನಿಕ ಉಪಕರಣಗಳು, ನೀರು, ಆಹಾರ ಮತ್ತು ಇತರ ಸಾಮಾನುಗಳನ್ನು ಒಳಗೊಂಡ ಸುಮಾರು 430 ಕಿಲೋಗ್ರಾಂಗಳಷ್ಟು (950 ಪೌಂಡ್‌) ಸರಕುಗಳನ್ನು ಮತ್ತೊಂದು ಬಾಹ್ಯಾಕಾಶ ನೌಕೆಯಲ್ಲಿ ಐಎಸ್‌ಎಸ್‌ಗೆ ರವಾನಿಸಲಾಗಿದೆ. ಈ ಸಾಮಾನು ಸರಂಜಾಮುಗಳು ಈಗಾಗಲೇ ಐಎಸ್‌ಎಸ್‌ ತಲುಪಿದ್ದು, ಗಗನಯಾತ್ರಿಗಳ ದೈನಂದಿನ ಅಗತ್ಯತೆಗಳನ್ನು ಪೂರೈಸುತ್ತಿದೆ ಎಂದು ನಾಸಾ ಮಾಹಿತಿ ನೀಡಿದೆ.

ಈ ಘಟನೆಗಳು ರೋಸ್ಕೋಸ್ಮಾಸ್ ಮತ್ತು ನಾಸಾವನ್ನು ತಮ್ಮ ಬಾಹ್ಯಾಕಾಶ ಪ್ರಯಾಣದ ವೇಳಾಪಟ್ಟಿಯನ್ನು ಮರುಹೊಂದಿಸಲು ಮತ್ತು ಯೋಜಿತ ಬಾಹ್ಯಾಕಾಶ ನಡಿಗೆಗಳನ್ನು ಮುಂದೂಡುವಂತೆ ಒತ್ತಾಯಿಸಿವೆ ಎಂದು ಮೂಲಗಳು ಖಚಿತಪಡಿಸಿವೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ವಾಸಯೋಗ್ಯ ಉಪಗ್ರಹವಾಗಿದ್ದು, ಇದು ಪ್ರಸ್ತುತವಾಗಿ ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಸುತ್ತುತ್ತಿದೆ. ಬಾಹ್ಯಾಕಾಶ ಸಂಶೋಧನಾ ಪ್ರಯೋಗಾಲಯವಾಗಿ ಇದು ಕಾರ್ಯನಿರ್ವಹಿಸುತ್ತಿದೆ.

IPL_Entry_Point

ವಿಭಾಗ