ಕನ್ನಡ ಸುದ್ದಿ  /  Sports  /  Cricket News Chennai Super Kings Captain Ms Dhoni Has Successfully Undergone Knee Surgery In Mumbai Prs

MS Dhoni: ಮುಂಬೈನಲ್ಲಿ ಎಂಎಸ್ ಧೋನಿ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ; ಸಿಎಸ್​ಕೆ ಸಿಇಒ ಕಾಸೀ ವಿಶ್ವನಾಥನ್​ ಮಾಹಿತಿ

ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಸಿಎಸ್​ಕೆ ಸಿಇಒ ಕಾಸೀ ವಿಶ್ವನಾಥನ್, ಮಹೇಂದ್ರ ಸಿಂಗ್​ ಧೋನಿ ಅವರ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ (MS Dhoni Knee Surgery) ಎಂದು ಮಾಹಿತಿ ನೀಡಿದ್ದಾರೆ

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ
ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ ಅವರ ಮೊಣಕಾಲು ಗಾಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಟೂರ್ನಿಯಲ್ಲಿ ಗಾಯದ ನಡುವೆಯೇ ಕಣಕ್ಕಿಳಿದು ಅಭಿಮಾನಿಗಳನ್ನು ರಂಜಿಸಿದ್ದ ಎಂಎಸ್​ ಧೋನಿ (MS Dhoni) ಅವರು, ತಜ್ಞ ವೈದ್ಯರ ಸಲಹೆ ಮೇರೆಗೆ ಮೊಣಕಾಲು ಸಮಸ್ಯೆಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಸಿಎಸ್​ಕೆ ಸಿಇಒ ಕಾಸೀ ವಿಶ್ವನಾಥನ್ (CSK CEO Kasi Viswanathan)​ ಅವರು ಖಚಿತಪಡಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ಖಚಿತಪಡಿಸಿರುವ ಸಿಇಒ ಕಾಸೀ ವಿಶ್ವನಾಥನ್, ಮಹೇಂದ್ರ ಸಿಂಗ್​ ಧೋನಿ ಅವರ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ (MS Dhoni Knee Surgery) ಎಂದು ಮಾಹಿತಿ ನೀಡಿದ್ದಾರೆ. ಐಪಿಎಲ್​ನಲ್ಲಿ ಧೋನಿ ತಮ್ಮ ಎಡ ಮೊಣಕಾಲು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಇದರ ನಡುವೆಯೂ ಚೆನ್ನೈ ತಂಡವನ್ನು ಮುನ್ನಡೆಸಿದ್ದರು. ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಮೈದಾನಕ್ಕಿಳಿದಿದ್ದಾರೆ.

ಟೂರ್ನಿ ಮುಗಿದ ಬೆನ್ನಲ್ಲೇ ಜೂನ್​ 1ರಂದು ಮುಂಬೈನ ಕೋಕಿಲಾ ಬೆನ್​ ಆಸ್ಪ್ರತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 8 ರಿಂದ 9 ತಿಂಗಳ ಬಳಿಕ ನಿವೃತ್ತಿ ಬಗ್ಗೆ ಯೋಚಿಸುತ್ತೇನೆ. ಮುಂದಿನ ಐಪಿಎಲ್​ ಆಡಬೇಕೇ ಬೇಡವೇ ಎಂಬುದರ ಕುರಿತು ನನ್ನ ಫಿಟ್​ನೆಸ್​ ಮೇಲೆ ನಿಂತಿರುತ್ತದೆ ಎಂದು ಹೇಳಿರುವ ಧೋನಿ, ಈಗ ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಅಚ್ಚರಿ ಮೂಡಿಸಿದೆ. ಚೇತರಿಸಿಕೊಂಡ ಬಳಿಕ ಗುಣಮಟ್ಟದ ಪುನಃಶ್ಚೇತನ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ.

ಚೆನ್ನೈ 5ನೇ ಬಾರಿಗೆ ಚಾಂಪಿಯನ್​​

16ನೇ ಆವೃತ್ತಿಯ ಐಪಿಎಲ್​ ಫೈನಲ್​​ನಲ್ಲಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್​ ಮತ್ತೊಮ್ಮೆ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಫೈನಲ್​ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಸಿಎಸ್​​ಕೆ 5ನೇ ಬಾರಿಗೆ ಐಪಿಎಲ್​ ಟ್ರೋಫಿ ಗೆದ್ದುಕೊಂಡಿತು. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲಿ 5 ಸಲ ಪ್ರಶಸ್ತಿ ಗೆದ್ದಿದ್ದ ಮುಂಬೈ ದಾಖಲೆ ಸರಿಗಟ್ಟಿದೆ.

ಕಳೆದ ವರ್ಷ 9ನೇ ಸ್ಥಾನಕ್ಕೆ ತೃಪ್ತಿ

15ನೇ ಆವೃತ್ತಿಯ ಐಪಿಎಲ್​​ನಲ್ಲಿ ಎಂಎಸ್​ ಧೋನಿ ಅವರು ಕ್ಯಾಪ್ಟನ್ಸಿಯನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟರು. ಆದರೆ ಒತ್ತಡ ನಿಭಾಯಿಸಲು ಜಡೇಜಾ ಕೈಲಿ ಸಾಧ್ಯವಾಗಿಲ್ಲ. ಪರಿಣಾಮ ಎಲ್ಲಾ ಪಂದ್ಯಗಳಲ್ಲೂ ಸೋಲನುಭವಿಸಿದರು. ಆದರೆ ಟೂರ್ನಿಯ ಅಂತಿಮ ಪಂದ್ಯಗಳಲ್ಲಿ ಜಡೇಜಾ, ನಾಯಕತ್ವವನ್ನು ಮತ್ತೆ ಧೋನಿಗೆ ಬಿಟ್ಟುಕೊಟ್ಟರು. ಆದರೆ ಲೀಗ್​ ಹಂತದಲ್ಲೇ ಸಿಎಸ್​ಕೆ ಹೊರಬಿತ್ತು. 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ನಿವೃತ್ತಿ ತಳ್ಳಿ ಹಾಕಿದ ಧೋನಿ

ಐಪಿಎಲ್​ ಪ್ರಶಸ್ತಿ ಗೆದ್ದ ಬಳಿಕ ಎಂಎಸ್​ ಧೋನಿ ಅವರು ವಿದಾಯದ ಮಾತನ್ನು ತಳ್ಳಿ ಹಾಕಿದ್ದರು. ಮತ್ತೊಂದು ಆವೃತ್ತಿಯೂ ಆಡುವ ಬಯಕೆಯನ್ನು ಹೊರಹಾಕಿರುವ ಧೋನಿ, ಫಿಟ್​ನೆಸ್​ ವಿಚಾರ ಗಮನ ಇಟ್ಟುಕೊಂಡು ನಿರ್ಧರಿಸುತ್ತೇನೆ ಎಂದಿದ್ದರು. ನಿವೃತ್ತಿ ಘೋಷಿಸಲು ಇದೇ ಸರಿಯಾದ ಸಮಯ. ಆದರೆ ಅಭಿಮಾನಿಗಳಿಗಾಗಿ ಆಡಬೇಕು ಎನಿಸುತ್ತದೆ. ಮುಂದಿನ ಐಪಿಎಲ್​ಗೆ 8-9 ತಿಂಗಳು, ಕಾಲಾವಕಾಶ ಇದೆ ಎಂದು ಹೇಳಿದ್ದಾರೆ.

ನಿವೃತ್ತಿ ನಿರ್ಧಾರ ಧೋನಿಗೆ ಬಿಟ್ಟದ್ದು

ಮುಂದಿನ ಆವೃತ್ತಿಯಲ್ಲೂ ಧೋನಿಯೇ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದಕ್ಕೆ ಉತ್ತರಿಸಿದ ಫ್ರಾಂಚೈಸ್ ಸಿಇಒ ಕಾಸೀ ವಿಶ್ವನಾಥನ್, ಸಿಎಸ್​ಕೆ ತಂಡದ ಪರ ಆಡುತ್ತಾರೆ ಇಲ್ಲವೇ ಎಂಬ ಭವಿಷ್ಯವನ್ನು ನಿರ್ಧರಿಸುವ ಮೊದಲು ಧೋನಿ ವೈದ್ಯಕೀಯ ಸಲಹೆ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಧೋನಿ ಅವರು ಎಡ ಮೊಣಕಾಲಿನ ಗಾಯಕ್ಕೆ ವೈದ್ಯಕೀಯ ಸಲಹೆ ಪಡೆಯುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ನಿರ್ಧರಿಸುತ್ತಾರೆ. ವರದಿಗಳು ಬಂದ ನಂತರವೇ ಅದನ್ನು ಖಚಿತಪಡಿಸಿಕೊಳ್ಳಬಹುದು. ತಂಡವನ್ನು ಮುನ್ನಡೆಸುತ್ತಾರೆ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ವಿಶ್ವನಾಥನ್​ ಹೇಳಿದ್ದಾರೆ.