ಕನ್ನಡ ಸುದ್ದಿ  /  ಕ್ರೀಡೆ  /  Matheesha Pathirana: ಐಪಿಎಲ್‌ನಲ್ಲಿ ಮಿಂಚಿದ ಪತಿರಾನಾಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ; ವಿಶ್ವಕಪ್‌ಗೆ ಸಜ್ಜುಗೊಳಿಸುತ್ತಿದೆ ಶ್ರೀಲಂಕಾ

Matheesha Pathirana: ಐಪಿಎಲ್‌ನಲ್ಲಿ ಮಿಂಚಿದ ಪತಿರಾನಾಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ; ವಿಶ್ವಕಪ್‌ಗೆ ಸಜ್ಜುಗೊಳಿಸುತ್ತಿದೆ ಶ್ರೀಲಂಕಾ

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 20 ವರ್ಷದ ಮಥೀಶ ಪತಿರಾನ ಶ್ರೀಲಂಕಾ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಮಥೀಶ ಪತಿರಾನ
ಮಥೀಶ ಪತಿರಾನ (PTI)

ಐಪಿಎಲ್‌ನಲ್ಲಿ ಹಲವಾರು ಯುವ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಇದೇ ವೇಳೆ ನೆರೆಯ ಶ್ರೀಲಂಕಾ ಕೂಡಾ ತನ್ನ ದೇಶದ ಅದ್ಭುತ ಪ್ರತಿಭೆಯೊಂದನ್ನು ಐಪಿಎಲ್‌ನಲ್ಲಿ ಕಂಡುಕೊಂಡಿದೆ. ಜೂನಿಯರ್‌ ಲಸಿತ್‌ ಮಾಲಿಂಗಾ ಎಂಬುದಾಗಿ ಗಮನ ಸೆಳೆದಿರುವ ಮಥೀಶ ಪತಿರಾನ (Matheesha Pathirana), ಇದೀಗ ರಾಷ್ಟ್ರೀಯ ತಂಡದ ಪರ ಮಿಂಚು ಹರಿಸಲು ಸಿದ್ಧರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶುಕ್ರವಾರ (ಜೂನ್‌ 2)ರಿಂದ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ, 20 ವರ್ಷದ ಮಥೀಶ ಪತಿರಾನ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಪತಿರಾನಾ, ಶ್ರೀಲಂಕಾ ಪರ ಕೇವಲ ಒಂದು ಟಿ20 ಪಂದ್ಯ ಆಡಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಅವರ ಅದ್ಭುತ ಪ್ರದರರ್ಶನವು ಅವರ ಮೇಲಿನ ಭರವಸೆಯನ್ನು ಹೆಚ್ಚಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್‌ ಪಟ್ಟ ಅಲಂಕರಿಸುವಲ್ಲಿ ಪತಿರಾನ ಪಾತ್ರ ಪ್ರಮುಖವಾಗಿತ್ತು. ಇದು ಈಗ ಅವರ ರಾಷ್ಟ್ರೀಯ ತಂಡದ ಭರವಸೆಯನ್ನು ಕೂಡಾ ಹೆಚ್ಚಿಸಿದೆ.

ಪತಿರಾನ ತಮ್ಮ ವಿಶಿಷ್ಟ ಶೈಲಿಯ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ಈ ತಿಂಗಳ ಕೊನೆಯಲ್ಲಿ ಜಿಂಬಾಬ್ವೆಯಲ್ಲಿ ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯಲಿವೆ. ಇದರಲ್ಲಿ ಶ್ರೀಲಂಕಾ ಕೂಡಾ ಆಡಲಿದ್ದು, ಪತಿರಾನಾ ತಂಡಕ್ಕೆ ನೆರವಾಗಿದ್ದಾರೆ ಎಂಬ ಭರವಸೆಯಿದೆ. 1996ರ ಏಕದಿನ ವಿಶ್ವಕಪ್ ಗೆದ್ದಿರುವ ಶ್ರೀಲಂಕಾ, ಇತ್ತೀಚೆಗೆ ಏಕದಿನ ಮಾದರಿಯಲ್ಲಿ ತನ್ನ ಶ್ರೇಯಾಂಕ ಕಳೆದುಕೊಂಡಿದೆ. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಕುಸಿತ ಕಂಡ ಕಾರಣ ಅರ್ಹತಾ ಸುತ್ತಿನಲ್ಲಿ ಗೆದ್ದ ಬಳಿಕವೇ ವಿಶ್ವಕಪ್‌ಗೆ ಪ್ರವೇಶ ಪಡೆಯಲಿದೆ.

ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ, ಈಗಾಗಲೇ ಅಫ್ಘಾನಿಸ್ತಾನವು ನೇರವಾಗಿ ಅರ್ಹತೆ ಪಡೆದಿದೆ. ಹೀಗಾಗಿ ತಂಡಕ್ಕೆ ಲಂಕಾದಂತಹ ಒತ್ತಡವಿಲ್ಲ.

ಅಫ್ಘಾನಿಸ್ತಾನ ತಂಡಕ್ಕೆ ತನ್ನ ಬೌಲಿಂಗ್ ಪ್ರಮುಖ ಶಕ್ತಿಯಾಗಿದ್ದು, ಐಸಿಸಿ ಶ್ರೇಯಾಂಕದ ಪ್ರಕಾರ ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಮೂವರು ಆಫ್ಘಾನ್ ಆಟಗಾರರು ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾ ತಂಡವು ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅಫ್ಘಾನ್‌ ಹಾಗೂ ಶ್ರೀಲಂಕಾ ನಡುವಿನ ಸರಣಿಯನ್ನು ತರಾತುರಿಯಲ್ಲಿ ಆಯೋಜಿಸಲಾಗಿದೆ. ಜೂನ್ 10ಕ್ಕೂ ಮುನ್ನ ಲಂಕಾ ಆಟಗಾರರ ಪಟ್ಟಿಯನ್ನು ಅಲ್ಲಿನ ಕ್ರಿಕೆಟ್‌ ಮಂಡಳಿಯು ಐಸಿಸಿಗೆ ಸಲ್ಲಿಸಬೇಕಾಗಿದೆ. ಅದಕ್ಕೂ ಮೊದಲು ಆಯ್ಕೆದಾರರಿಗೆ ಕೆಲವು ಆಟಗಾರರ ಆಯ್ಕೆಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಈ ಸರಣಿ ನೆರವಾಗಲಿದೆ.

ಶ್ರೀಲಂಕಾ ಟೆಸ್ಟ್ ನಾಯಕ ದಿಮುತ್ ಕರುಣಾರತ್ನೆ ಅವರನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಪಾದದ ಶಸ್ತ್ರಚಿಕಿತ್ಸೆಯ ನಂತರ ಏಳು ತಿಂಗಳ ಕಾಲ ತಂಡದಿಂದ ಹೊರಬಿದ್ದಿದ್ದ ದುಷ್ಮಂತ ಚಮೀರಾ, ಇದೀಗ ತಂಡಕ್ಕೆ ಮರಳಿದ್ದಾರೆ.

ಏಕದಿನ ಸರಣಿಗೆ ತಂಡಗಳು

ಶ್ರೀಲಂಕಾ: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ) ಪಾತುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ಸದೀರ ಸಮರವಿಕ್ರಮ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ವನಿಂದು ಹಸರಂಗ, ಮಹೀಶ್ ತೀಕ್ಷಣ, ದುಶನ್ ಹೇಮಂತ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ಮಥೀಶ ಪತಿರಾನ, ಲಹಿರು ಕುಮಾರ, ಕಸುನ್ ರಜಿತ

ಅಫ್ಘಾನಿಸ್ತಾನ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಷಾ (ಉಪನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖೈಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್‌ ಅಹ್ಮದ್‌, ಅಬ್ದುಲ್‌ ರಹ್ಮಾನ್‌, ಫಜಲ್ ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್.