ಕನ್ನಡ ಸುದ್ದಿ  /  Sports  /  Cricket News Virender Sehwag Names Top 5 Batters Of Ipl 2023 Virat Kohli Shubman Gill Suryakumar Yadav Jra

IPL 2023: ಪ್ರಸಕ್ತ ಐಪಿಎಲ್ ಆವೃತ್ತಿಯ ಅಗ್ರ ಐವರು ಬ್ಯಾಟರ್‌ಗಳನ್ನು ಹೆಸರಿಸಿದ ಸೆಹ್ವಾಗ್; ಗಿಲ್, ಕೊಹ್ಲಿಗೆ ಸ್ಥಾನವಿಲ್ಲ

Virender Sehwag: ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಐವರು ಬ್ಯಾಟರ್‌ಗಳನ್ನು, ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಕೆಲವು ಆಟಗಾರರಿಗೆ ಸ್ಥಾನ ನೀಡಲಾಗಿದ್ದು, ವಿರಾಟ್‌, ಗಿಲ್‌ರಂತಹ ಶತಕವೀರರಿಗೆ ವೀರೂ ಸ್ಥಾನ ನೀಡಿಲ್ಲ.

ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್

ಐಪಿಎಲ್ 2023ನೇ ಆವೃತ್ತಿಯು ಅಂತಿಮ ಘಟ್ಟಕ್ಕೆ ಬಂದಿದೆ. ಭಾನುವಾರ (ಮೇ 28) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ (IPL finals) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ನಡುವೆ ಪ್ರಸಕ್ತ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಹಲವು ಆಟಗಾರರು ಗಮನಸೆಳೆದಿದ್ದಾರೆ. ಅದರಲ್ಲೂ ಕೆಲವು ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಹಿರಿಯ ಆಟಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ಹಲವರು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿವೆ. ಅದರಲ್ಲೂ ಮುಖ್ಯವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಗಮನಸೆಳೆಯುವಂತಹ ಪ್ರದರ್ಶನಗಳು ಆಟಗಾರರಿಂದ ಹೊರಬಂದಿವೆ. ಫೈನಲ್‌ ಪ್ರವೇಶಿಸಿರುವ ಗುಜರಾತ್‌ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿ‌ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೆ ಇವರು ಬಹುತೇಕ ಆರೇಂಜ್‌ ಕ್ಯಾಪ್‌ ಗೆಲ್ಲುವುದು ಖಚಿತವಾಗಿದೆ. 16 ಪಂದ್ಯಗಳಲ್ಲಿ ಮೂರು ಶತಕ ಮತ್ತು ನಾಲ್ಕು ಅರ್ಧಶತಕಗಳೊಂದಿಗೆ ಅವರು 851 ರನ್ ಗಳಿಸಿದ್ದಾರೆ. ಗಿಲ್ ಹೊರತುಪಡಿಸಿ, ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಕೂಡಾ ಎರಡು ಶತಕಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಸದ್ಯ ಲೀಗ್‌ ಹಾಗೂ ಕ್ವಾಲಿಫೈಯರ್ ಪಂದ್ಯಗಳು ಮುಗಿದಿದ್ದು, ಸದ್ಯ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಐಪಿಎಲ್ 2023ರಲ್ಲಿ ಉತ್ತಮ ಪ್ರದರ್ಶನ ನೀಡಿದ ಅಗ್ರ-ಐದು ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ.

ಈ ಕುರಿತಾಗಿ ಕ್ರಿಕ್‌ಬಜ್‌ ಜೊತೆಗೆ ಮಾತನಾಡಿದ ಅವರು, ಐವರು ಆಟಗಾರರ ಹೆಸರು ಬಹಿರಂಗಪಡಿಸಿದ್ದಾರೆ. “ನನ್ನ ಪ್ರಕಾರ ಪಂಚ ಪಾಂಡವರು ಉತ್ತಮ ಪ್ರದರ್ಶನ ನೀಡಿದ್ದಾರೆ. ನಾನು ಹೆಚ್ಚಿನ ಆರಂಭಿಕರನ್ನು ಆಯ್ಕೆ ಮಾಡಿಲ್ಲ. ಏಕೆಂದರೆ ಅವರಿಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆ. ಹೀಗಾಗಿ, ನನ್ನ ನೆನಪಿಗೆ ಬರುವ ಮೊದಲ ಬ್ಯಾಟರ್ ರಿಂಕು ಸಿಂಗ್‌. ಇದಕ್ಕೆ ನೀವು ಕಾರಣ ಕೇಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಬ್ಯಾಟರ್ ಒಬ್ಬ ಸತತ ಐದು ಸಿಕ್ಸರ್‌ಗಳನ್ನು ಸಿಡಿಸಿ ತಂಡವನ್ನು ಗೆಲ್ಲಿಸಿರುವುದು ಇದುವರೆಗೂ ಸಂಭವಿಸಿಲ್ಲ. ರಿಂಕು ಸಿಂಗ್ ಮಾತ್ರ ಅದನ್ನು ಮಾಡಿದ್ದಾರೆ” ಎಂದು ಸೆಹ್ವಾಗ್‌ ಹೇಳಿದ್ದಾರೆ.

“ಎರಡನೇ ಮಧ್ಯಮ ಕ್ರಮಾಂಕದ ಬ್ಯಾಟರ್ ಶಿವಂ ದುಬೆ. ಅವರು 33 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅಲ್ಲದೆ ಅವರ ಸ್ಟ್ರೈಕ್-ರೇಟ್ 160 ದಾಟಿದೆ. ಕಳೆದ ಕೆಲವು ಸೀಸನ್‌ಗಳು ಅವರ ಪಾಲಿಗೆ ವಿಶೇಷವಾಗಿರಲಿಲ್ಲ. ಆದರೆ ಈ ವರ್ಷ ಅವರು ಮೈದಾನಕ್ಕೆ ಬಂದು ಸಿಕ್ಸರ್ ಹೊಡೆಯಲೇಬೇಕು ಎಂಬ ಸ್ಪಷ್ಟ ಮನಸ್ಥಿತಿಯೊಂದಿಗೆ ಬಂದಿದ್ದಾರೆ” ಎಂದು ಸೆಹ್ವಾಗ್‌ ಹೇಳಿದರು.

ಇದೇ ವೇಳೆ ಸೆಹ್ವಾಗ್ ಅವರು ಯಶಸ್ವಿ ಜೈಸ್ವಾಲ್ ಆಟದ ಬಗ್ಗೆಯೂ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನನ್ನ ಆಯ್ಕೆಯ ಮೂರನೆಯ ಆಟಗಾರ ಅದ್ಭುತ ಓಪನರ್. ಅವರ ಅದ್ಭುತ ಬ್ಯಾಟಿಂಗ್, ನಾನು ಅವರ ಹೆಸರನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಅವರೇ ಯಶಸ್ವಿ ಜೈಸ್ವಾಲ್. ಅವರ ನಂತರ ಸ್ಕೈ ಹೆಸರನ್ನು ತೆಗೆದುಕೊಳ್ಳುತ್ತೇನೆ. ನಾನು ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ತೆಗೆದುಕೊಳ್ಳಲು ಕಾರಣ, ಅವರು ಫಾರ್ಮ್‌ನಲ್ಲಿರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಶೂನ್ಯಕ್ಕೆ ಔಟಾಗುತ್ತಿದ್ದರು. ಐಪಿಎಲ್‌ನಲ್ಲಿಯೂ ಅವರ ಆರಂಭ ಉತ್ತಮವಾಗಿರಲಿಲ್ಲ. ಆದರೆ ನಂತರ ಅವರು ಉತ್ತಮ ಪ್ರದರ್ಶನ ನೀಡಲು ಪ್ರಾರಂಭಿಸಿದರು” ಎಂದು ಹೇಳಿದರು.

“ಕೊನೆಯದಾಗಿ, ನಾನು ಟಾಸ್ ಮಾಡುವ ಮೂಲಕ ಯಾರನ್ನಾದರೂ ಆಯ್ಕೆ ಮಾಡಬಹುದು. ಏಕೆಂದರೆ ಹಲವಾರು ಮಂದಿ ಇದ್ದಾರೆ. ಆದರೆ ನಾನು ಇನ್ನೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟರ್ ಅನ್ನು ಆಯ್ಕೆ ಮಾಡುತ್ತೇನೆ. ಅವರ ಹೆಸರು ಹೆನ್ರಿಚ್ ಕ್ಲಾಸೆನ್. ಮಧ್ಯಮ ಕ್ರಮಾಂಕದಲ್ಲಿ ಅವರು ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು. ಸ್ಪಿನ್ ಮತ್ತು ವೇಗದ ಬೌಲಿಂಗ್ ವಿರುದ್ಧ ಹೊಡೆಯುವ ಅವರ ಸಾಮರ್ಥ್ಯವು ವಿದೇಶಿ ಆಟಗಾರರಲ್ಲಿ ‌ತುಂಬಾ ಅಪರೂಪ” ಎಂದು ಸೆಹ್ವಾಗ್ ಹೇಳಿದರು.‌

ಸೆಹ್ವಾಗ್ ಅವರು ಹೆಸರಿಸಿದ ಆಟಗಾರರ ಪಟ್ಟಿಯಲ್ಲಿ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರು ಕೂಡಾ ಇದ್ದಾರೆ. ಆದರೆ, ಪ್ರಸಕ್ತ ಆವೃತ್ತಿಯಲ್ಲಿ ಶತಕಗಳೊಂದಿಗೆ ಹೆಚ್ಚು ಸದ್ದು ಮಾಡಿದ ಗಿಲ್, ಕೊಹ್ಲಿ, ಫಾಫ್ ಡು ಪ್ಲೆಸಿಸ್, ಡೆವೊನ್ ಕಾನ್ವೇ ಅಥವಾ ರುತುರಾಜ್ ಗಾಯಕ್‌ವಾಡ್ ಅವರಂತಹ ಆಟಗಾರರು ಸ್ಥಾನವನ್ನೇ ಪಡೆದಿಲ್ಲ ಎನ್ನುವುದು ಅಚ್ಚರಿ ತರುವಂತಿದೆ.