Women's Premier League: ಭಾರತ ನಾಯಕಿ vs ಆಸೀಸ್ ನಾಯಕಿ; ಡಬ್ಲ್ಯೂಪಿಎಲ್‌ನಲ್ಲಿ ಇಂದು ಅಜೇಯ ತಂಡಗಳ ಕಾದಾಟ
ಕನ್ನಡ ಸುದ್ದಿ  /  ಕ್ರೀಡೆ  /  Women's Premier League: ಭಾರತ ನಾಯಕಿ Vs ಆಸೀಸ್ ನಾಯಕಿ; ಡಬ್ಲ್ಯೂಪಿಎಲ್‌ನಲ್ಲಿ ಇಂದು ಅಜೇಯ ತಂಡಗಳ ಕಾದಾಟ

Women's Premier League: ಭಾರತ ನಾಯಕಿ vs ಆಸೀಸ್ ನಾಯಕಿ; ಡಬ್ಲ್ಯೂಪಿಎಲ್‌ನಲ್ಲಿ ಇಂದು ಅಜೇಯ ತಂಡಗಳ ಕಾದಾಟ

ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯಲಿದ್ದು, ಟೂರ್ನಿಯಲ್ಲಿ ಅಜೇಯವಾಗಿ ಮುಂದುವರೆಯಲಿದೆ. ಇದೇ ವೇಳೆ ಯಾವ ತಂಡ ಟೂರ್ನಿಯ ಮೊದಲ ಸೋಲು ಕಾಣಲಿದೆ ಎಂಬುದು ಕೂಡಾ ಇಂದು ಖಚಿತವಾಗಲಿದೆ.

ಹರ್ಮನ್‌ಪ್ರೀತ್‌ ಕೌರ್
ಹರ್ಮನ್‌ಪ್ರೀತ್‌ ಕೌರ್ (AFP)

ವಿಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಎರಡು ಬಲಿಷ್ಠ ತಂಡಗಳು ಕಾದಾಡಲಿವೆ. ಈವರೆಗೆ ನಡೆದ ಪಂದ್ಯಗಳಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಎರಡು ತಂಡಗಳು ಇಂದಿನ ಹೈವೋಲ್ಟೇಜ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಆಸೀಸ್‌ ವನಿತೆಯರ ಕ್ರಿಕೆಟ್‌ ತಂಡದ ನಾಯಕಿ ಮೆಗ್ ಲ್ಯಾನಿಂಗ್ (Meg Lanning) ನಾಯಕತ್ವದಲ್ಲಿ ಬಲಿಷ್ಠವಾಗಿ ಮುನ್ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್(Delhi Capitals), ಗುರುವಾರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸುತ್ತದೆ. ಉಭಯ ತಂಡಗಳು ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದು, ಆಡಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿವೆ. ಆದರೆ, ರನ್‌ ರೇಟ್‌ ಲೆಕ್ಕಾಚಾರದಲ್ಲಿ ಮುಂಬೈ ಇಂಡಿಯನ್ಸ್‌(Mumbai Indians) ಅಗ್ರಸ್ಥಾನದಲ್ಲಿದೆ.

ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯಲಿದ್ದು, ಟೂರ್ನಿಯಲ್ಲಿ ಅಜೇಯವಾಗಿ ಮುಂದುವರೆಯಲಿದೆ. ಇದೇ ವೇಳೆ ಯಾವ ತಂಡ ಟೂರ್ನಿಯ ಮೊದಲ ಸೋಲು ಕಾಣಲಿದೆ ಎಂಬುದು ಕೂಡಾ ಇಂದು ಖಚಿತವಾಗಲಿದೆ.

ಡೆಲ್ಲಿ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಆ ಬಳಿಕ ಯುಪಿ ವಾರಿಯರ್ಜ್ ವಿರುದ್ಧದ ತಮ್ಮ ಕೊನೆಯ ಮುಖಾಮುಖಿಯಲ್ಲೂ ಅದೇ ರೀತಿಯ ಪ್ರದರ್ಶನ ನೀಡಿತು. ಮತ್ತೊಂದೆಡೆ, ಮುಂಬೈ ತನ್ನ ಹಿಂದಿನ ಎರಡೂ ಪಂದ್ಯಗಳಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿದೆ. ಗುಜರಾತ್ ಜೈಂಟ್ಸ್ ಅನ್ನು 143 ರನ್‌ಗಳ ಭರ್ಜರಿ ಅಂತರದಿಂದ ಸೋಲಿಸಿದ ಹರ್ಮನ್‌ಪ್ರೀತ್‌ ಬಳಗವು, ಆ ಬಳಿಕ ಆಲ್‌ರೌಂಡ್ ಪ್ರದರ್ಶನದಿಂದ ಆರ್‌ಸಿಬಿ ತಂಡವನ್ನು ಕೂಡಾ ಸೋಲಿಸಿತು.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಸ್ಪಿನ್ನರ್ ಸೈಕಾ ಇಶಾಕ್, ಕೇವಲ 2 ಪಂದ್ಯಗಳಲ್ಲಿ 6.16ರ ಸರಾಸರಿಯಲ್ಲಿ 6 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಬಂಗಾಳದ ಈ ಪ್ರತಿಭೆ ಈ ಟೂರ್ನಿಯಲ್ಲಿ ಅಗ್ರ ವಿಕೆಟ್ ಟೇಕರ್ ಆಗಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವುದು ಮಾತ್ರವಲ್ಲದೆ, ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಂಡದ ಗೆಲುವಿನಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಇಶಾಕ್ ಅವರ ಕೌಶಲ್ಯವು ಮುಂಬೈ ಇಂಡಿಯನ್ಸ್‌ ಅದ್ವಿತೀಯ ಗೆಲುವುಗಳನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಲೈವ್ ಸ್ಟ್ರೀಮಿಂಗ್‌ ವಿವರ

ಇಂದಿನ ರೋಚಕ ಪಂದ್ಯವು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು ಗುರುವಾರ (ಮಾರ್ಚ್ 9)ದಂದು ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ. ಈ ಪಂದ್ಯವು ಭಾರತದಲ್ಲಿ Sports18 ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.‌

ಸಂಭಾವ್ಯ ಆಡುವ ಬಳಗ

ಡೆಲ್ಲಿ ಕ್ಯಾಪಿಟಲ್ಸ್‌: ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಮರಿಝನ್ನೆ ಕಪ್, ಜೆಮಿಮಾ ರೋಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್

ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸ್ಸಿವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

Whats_app_banner