ಕನ್ನಡ ಸುದ್ದಿ  /  Sports  /  Dinesh Chandimal Suggests Team India On Suryakumar Yadav

Dinesh Chandimal: 'ಅವರನ್ನು ಏಕದಿನದಲ್ಲೂ ಆಡಿಸಿ, ಎದುರಾಳಿಗಳು ಹತಾಶರಾಗುತ್ತಾರೆ'; ಭಾರತಕ್ಕೆ ಲಂಕಾ ಮಾಜಿ ನಾಯಕನ ಸಲಹೆ

ಭಾರತದ ಮುಂದಿನ ಪಂದ್ಯಗಳ ಬಗ್ಗೆ ಮಾತನಾಡಿದ ಶ್ರೀಲಂಕಾ ಮಾಜಿ ನಾಯಕ ದಿನೇಶ್ ಚಂಡಿಮಲ್, ಸೂರ್ಯಕುಮಾರ್ ಯಾದವ್ ಅವರಿಗೆ ಮ್ಯಾನೇಜ್‌ಮೆಂಟ್ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಟೀಮ್‌ ಇಂಡಿಯಾ ಆಟಗಾರರು
ಟೀಮ್‌ ಇಂಡಿಯಾ ಆಟಗಾರರು (ANI )

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸರಣಿ ಗೆದ್ದುಕೊಂಡಿದ್ದು, ಮೂರು ಪಂದ್ಯಗಳ ಸರಣಿಯ ಅಂತಿಮ ಪಂದ್ಯವು ಆತಿಥೇಯ ಭಾರತದ ಪಾಲಿಗೆ ಅಷ್ಟೇನೂ ರೋಚಕವಾಗಿ ಉಳಿದಿಲ್ಲ. ರೋಹಿತ್ ಶರ್ಮಾ ಬಳಗವು ಮೊದಲ ಏಕದಿನ ಪಂದ್ಯವನ್ನು 67 ರನ್‌ಗಳ ಅಂತರದಿಂದ ಗೆದ್ದಿತು. ಆ ಬಳಿಕ ಎರಡನೇ ಪಂದ್ಯವನ್ನು ನಾಲ್ಕು ವಿಕೆಟ್‌ಗಳ ಅಂತರದಿಂದ ಗೆದ್ದು, ಸರಣಿ ವಶಪಡಿಸಿಕೊಂಡಿತು.

ಮೂರನೇ ಏಕದಿನ ಪಂದ್ಯವು ನಾಳೆ ನಡೆಯಲಿದ್ದು, ನಾಯಕ ರೋಹಿತ್ ಮತ್ತು ತಂಡದ ಮ್ಯಾನೇಜ್‌ಮೆಂಟ್‌ ಆಡುವ ಬಳಗದಲ್ಲಿ ಪ್ರಯೋಗ ಮಾಡುತ್ತಾರೆ ಎಂದು ಅಭಿಮಾನಿಗಳು ಮತ್ತು ತಜ್ಞರು ನಿರೀಕ್ಷಿಸುತ್ತಿದ್ದಾರೆ. ಆಟಗಾರರ ಕ್ರಮಾಂಕದಲ್ಲಿ ಬದಲಾವಣೆ ಸೇರಿದಂತೆ ಹೊಸ ಸಂಯೋಜನೆಗಳನ್ನು ಪ್ರಯತ್ನಿಸುವ ಸಾಧ್ಯತೆ ಇದೆ.

ಮುಂದಿನ ಪಂದ್ಯಗಳ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಶ್ರೀಲಂಕಾ ಮಾಜಿ ನಾಯಕ ದಿನೇಶ್ ಚಂಡಿಮಲ್, ಸೂರ್ಯಕುಮಾರ್ ಯಾದವ್ ಅವರಿಗೆ ಮ್ಯಾನೇಜ್‌ಮೆಂಟ್ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ 50 ಓವರ್‌ಗಳ ಸ್ವರೂಪದಲ್ಲಿ ಭಾರತದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಹೊರಹೊಮ್ಮಿರುವ ಶ್ರೇಯಸ್ ಅಯ್ಯರ್‌ಗೆ ಭಾರತವು ಆದ್ಯತೆ ನೀಡಿದ ಕಾರಣ, ಟಿ20ಯ ನಂಬರ್‌ ವನ್‌ ಆಟಗಾರ ಮೊದಲ ಮತ್ತು ಎರಡನೇ ಏಕದಿನಗಳಲ್ಲಿ ಕಾಣಿಸಿಕೊಂಡಿಲ್ಲ.

“ಈ ಭಾರತ ತಂಡವನ್ನು ನೋಡಿದರೆ, ಬೆಂಚ್‌ನಲ್ಲಿ ಎಷ್ಟು ಸಾಮರ್ಥ್ಯ ಇದೆ ಎಂಬುದನ್ನು ಇದು ತೋರಿಸುತ್ತದೆ. ಸೂರ್ಯ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು ಎಂದು ನನಗೆ ಇನ್ನೂ ಅನಿಸುತ್ತದೆ” ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಶ್ರೀಲಂಕಾ ತಂಡದ ಭಾಗವಾಗಿಲ್ಲದ ಚಂಡಿಮಲ್, ಸೂರ್ಯ ತ್ವರಿತವಾಗಿ ಸ್ಕೋರ್ ಮಾಡುವ ಮೂಲಕ ಎದುರಾಳಿಗಳನ್ನು ನಿರಾಶೆಗೊಳಿಸಬಹುದು ಎಂದು ಹೇಳಿದರು.

“ಅವರು ಇತರ ಬ್ಯಾಟರ್‌ಗಳಿಗಿಂತ ಭಿನ್ನ. ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅವರಂತಹ ಆಟಗಾರ ಬೇಕು. ಅವರು ಕೇವಲ 30 ರಿಂದ 50 ರನ್ ಗಳಿಸುವ ಮೂಲಕ ಆಟವನ್ನು ಬದಲಾಯಿಸಬಹುದು. ಅವರು ಗಳಿಸುವ ವೇಗದಿಂದ ಎದುರಾಳಿ ತಂಡವು ಹತಾಶರಾಗಬಹುದು. ಅವರು ಏಕದಿನ ಪಂದ್ಯಗಳಲ್ಲಿ ಆಡಬೇಕು ಎಂದು ನನಗೆ ಈಗಲೂ ಅನಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಭಾನುವಾರ ತಿರುವನಂತಪುರದ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ, ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಗಳಿಸಿ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 373 ರನ್ ಗಳಿಸಲು ಸಹಾಯ ಮಾಡಿದರು. 374 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ, ದಸುನ್ ಶನಕ ಅವರ ಅಜೇಯ ಶತಕದ ಹೊರತಾಗಿಯೂ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 306 ರನ್ ಗಳಿಸಲಷ್ಟೇ ಶಕ್ತವಾಯಿತು. ಉಮ್ರಾನ್ ಮಲಿಕ್ ಉತ್ತಮ ಫಾರ್ಮ್‌ನಲ್ಲಿದ್ದರು. ಅಲ್ಲದೆ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ 1-0 ಮುನ್ನಡೆ ಸಾಧಿಸಲು ನೆರವಾದರು.

ಎರಡನೇ ಏಕದಿನ ಪಂದ್ಯದಲ್ಲಿ 216 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ, 43.2 ಓವರ್‌ಗಳಲ್ಲಿ 6 ವಿಕೆಟ್‌ಗೆ 219 ರನ್ ಗಳಿಸಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು. ಕೆ ಎಲ್ ರಾಹುಲ್ 103 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿ ಕೋಲ್ಕತ್ತಾದಲ್ಲಿ ಆತಿಥೇಯ ತಂಡಕ್ಕೆ ಗೆಲುವು ತಂದುಕೊಟ್ಟರು. ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್‌ ಕುಲದೀಪ್ ಯಾದವ್ ಅವರ ಮೂರು ವಿಕೆಟ್‌ಗಳ ನೆರವಿನಿಂದ ಭಾರತವು ಶ್ರೀಲಂಕಾವನ್ನು 39.4 ಓವರ್‌ಗಳಲ್ಲಿ 215ಕ್ಕೆ ನಿರ್ಬಂಧಿಸಿತ್ತು.‌