ಕನ್ನಡ ಸುದ್ದಿ  /  Sports  /  Fir Filed Against Badminton Player Lakshya Sen For Age Fraud

FIR against Lakshya Sen: ವಯಸ್ಸಿನ ಕುರಿತು ಸುಳ್ಳು ಮಾಹಿತಿ; ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಿರುದ್ಧ ಎಫ್‌ಐಆರ್

ವಯೋಮಿತಿಯ ಈವೆಂಟ್‌ಗಳಲ್ಲಿ ಪಂದ್ಯಗಳು ಮತ್ತು ಪಂದ್ಯಾವಳಿಗಳನ್ನು ಗೆಲ್ಲುವ ಮೂಲಕ, ಲಕ್ಷ್ಯ ಮತ್ತು ಚಿರಾಗ್ ಸರ್ಕಾರದ ಪ್ರಯೋಜನಗಳನ್ನು ಪಡೆದಿದ್ದಾರೆ. ಆ ಮೂಲಕ ಸರ್ಕಾರವನ್ನು ವಂಚಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸರಿಯಾದ ವಯಸ್ಸಿನ ಗುಂಪಿನಲ್ಲಿ ಆಡಿದ ಕರ್ನಾಟಕದ ಇತರ ಹಲವಾರು ಆಟಗಾರರನ್ನು ವಂಚಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ .

ಲಕ್ಷ್ಯ ಸೇನ್
ಲಕ್ಷ್ಯ ಸೇನ್ (Getty)

ಬೆಂಗಳೂರು: ವಯಸ್ಸಿನ ಕುರಿತು ಸುಳ್ಳು ಮಾಹಿತಿ(age fraud) ನೀಡಿದ ಆರೋಪದಡಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಿರುದ್ಧ ಗುರುವಾರ ತಡರಾತ್ರಿ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ.

ಲಕ್ಷ್ಯ ಅವರೊಂದಿಗೆ, ಅವರ ತಂದೆ ಧೀರೇಂದ್ರ ಕುಮಾರ್, ಸಹೋದರ ಚಿರಾಗ್, ತಾಯಿ ನಿರ್ಮಲಾ ಮತ್ತು ತರಬೇತುದಾರ ಯು ವಿಮಲ್ ಕುಮಾರ್ ವಿರುದ್ಧವೂ ವಂಚನೆ (ಸೆಕ್ಷನ್ 420), ನಕಲಿ ದಾಖಲೆ (468), ನಕಲಿ ದಾಖಲೆಯನ್ನು ಅಸಲಿಯೆಂದಿ ಬಿಂಬಿಸಿರುವುದು (471) ಸೇರಿದಂತೆ ಭಾರತೀಯ ದಂಡ ಸಂಹಿತೆ(IPC)ಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ನಾಗರಾಜ ಎಂ ಜಿ ಎಂಬವರು ನೀಡಿದ ದೂರಿನ ಪ್ರತಿಯನ್ನು ಹಿಂದೂಸ್ತಾನ್ ಟೈಮ್ಸ್ ಪರಿಶೀಲಿಸಿದೆ.

ಕಳೆದ 2010ರಿಂದ ವಯೋಮಿತಿ ಆಧಾರದಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಡುವ ಉದ್ದೇಶದಿಂದ, ಸೇನ್ ಕುಟುಂಬವು ಲಕ್ಷ್ಯ ಮತ್ತು ಚಿರಾಗ್ ಅವರ ಜನನ ಪ್ರಮಾಣಪತ್ರವನ್ನು ನಕಲಿ ಮಾಡಿ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಜೂನಿಯರ್ ಹಂತದಲ್ಲಿ, ಒಂದು ನಿರ್ದಿಷ್ಟ ವಯಸ್ಸಿನ ವಿಭಾಗದ ಪಂದ್ಯಾವಳಿಯಲ್ಲಿ ಆಡುವ ಆಟಗಾರನು ಇತರರ ವಿರುದ್ಧ ಪ್ರಯೋಜನವನ್ನು ಪಡೆಯುತ್ತಾನೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಪ್ರಕಾರ, ಲಕ್ಷ್ಯ ಅವರು ಪ್ರಸ್ತುತ 21 ವರ್ಷ ವಯಸ್ಸಿನವರಾಗಿದ್ದಾರೆ. ಅದರಂತೆ ಅವರ ಜನ್ಮ ದಿನಾಂಕ 2001ರ ಆಗಸ್ಟ್ 16. ಇದೇ ವೇಳೆ ಚಿರಾಗ್ ಜನ್ಮದಿನಾಂಕವು 1998, ಜುಲೈ 22. ಆ ಪ್ರಕಾರ ಅವರ ವಯಸ್ಸು 24 ಎಂದು ತೋರಿಸಲಾಗಿದೆ.

ವಯೋಮಿತಿಯ ಈವೆಂಟ್‌ಗಳಲ್ಲಿ ಪಂದ್ಯಗಳು ಮತ್ತು ಪಂದ್ಯಾವಳಿಗಳನ್ನು ಗೆಲ್ಲುವ ಮೂಲಕ, ಲಕ್ಷ್ಯ ಮತ್ತು ಚಿರಾಗ್ ಸರ್ಕಾರದ ಪ್ರಯೋಜನಗಳನ್ನು ಪಡೆದಿದ್ದಾರೆ. ಆ ಮೂಲಕ ಸರ್ಕಾರವನ್ನು ವಂಚಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸರಿಯಾದ ವಯಸ್ಸಿನ ಗುಂಪಿನಲ್ಲಿ ಆಡಿದ ಕರ್ನಾಟಕದ ಇತರ ಹಲವಾರು ಆಟಗಾರರನ್ನು ವಂಚಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ .

ಈ ಮೂಲಕ ಸೇನ್ ಕುಟುಂಬ ಮತ್ತು ಕುಮಾರ್ ಅವರು ವಂಚನೆಗೊಳಗಾದ ಮತ್ತು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಅನೇಕ ಮಕ್ಕಳ ಪ್ರತಿಭೆಯನ್ನು "ಹಾಳು" ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಹೀಗಾಗಿ ಐವರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದೇ ವಿಚಾರವಾಗಿ ಪದೇ ಪದೇ ಕರೆ ಮಾಡಿದರೂ ಸೇನ್ ಕುಟುಂಬ ಹಾಗೂ ವಿಮಲ್ ಕುಮಾರ್ ಸಂಪರ್ಕಕ್ಕೆ ಸಿಕ್ಕಿಲ್ಲ.

ಲಕ್ಷ್ಯ ಅವರಿಗೆ ಬುಧವಾರ ರಾಷ್ಟ್ರಪತಿ ಭವನದಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು. ಅವರು ಪ್ರಸ್ತುತ ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ 6ನೇ ಸ್ಥಾನದಲ್ಲಿ ಅತ್ಯುನ್ನತ ಶ್ರೇಯಾಂಕದ ಭಾರತೀಯ ಪುರುಷರ ಸಿಂಗಲ್ಸ್ ಷಟ್ಲರ್ ಆಗಿದ್ದಾರೆ.

ಸ್ಪೇನ್‌ನ ಹುಯೆಲ್ವಾದಲ್ಲಿ ನಡೆದ 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದ ಬಳಿಕ, ಲಕ್ಷ್ಯ ಜನವರಿಯಲ್ಲಿಇಂಡಿಯಾ ಓಪನ್ ಗೆಲ್ಲುವ ಮೂಲಕ ವರ್ಷ ಅದ್ಭುತವಾಗಿ ಆರಂಭಿಸಿದರು. ಅವರು ಮಾರ್ಚ್‌ನಲ್ಲಿ ಜರ್ಮನ್ ಓಪನ್ ಮತ್ತು ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದರು.

ಇದೇ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ಗೆಲ್ಲುವ ಮೂಲಕ ಮತ್ತೊಂದು ಇತಿಹಾಸ ಬರೆದರು. ಅದಕ್ಕೂ ಮೊದಲು ಮೇ ತಿಂಗಳಲ್ಲಿ ಪ್ರತಿಷ್ಠಿತ ಥಾಮಸ್ ಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು.

ಜೂನಿಯರ್ ವಿಭಾಗದಲ್ಲೂ, ಲಕ್ಷ್ಯ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 2018ರಲ್ಲಿ ಬ್ಯೂನಸ್ ಐರಿಸ್‌ನಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆ ಬಳಿಕ ಕೆನಡಾದ ಮಾರ್ಕಮ್‌ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು. 2016ರಲ್ಲಿ ಕಂಚು ಮತ್ತು 2018ರಲ್ಲಿ ಚಿನ್ನ ಸೇರಿದಂತೆ ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ.