ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ 90 ಮೀಟರ್‌ ಗುರಿ ದಾಟುವೆ: ಒಲಿಂಪಿಕ್ ಚಿನ್ನದ ಪದಕ ನೀರಜ್ ಚೋಪ್ರಾ ವಿಶ್ವಾಸ

ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ 90 ಮೀಟರ್‌ ಗುರಿ ದಾಟುವೆ: ಒಲಿಂಪಿಕ್ ಚಿನ್ನದ ಪದಕ ನೀರಜ್ ಚೋಪ್ರಾ ವಿಶ್ವಾಸ

Neeraj Chopra : ಜುಲೈ ಮತ್ತು ಆಗಸ್ಟ್​​ನಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್​​ಗೂ ಮುನ್ನ 90 ಮೀಟರ್​ ಗಡಿಯನ್ನು ದಾಟುತ್ತೇನೆ ಎಂದು ಭಾರತದ ಸ್ಟಾರ್​ ಜಾವೆಲಿನ್ ಥ್ರೋ ಪಟು ನೀರಜ್​ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ ಚಿನ್ನದ ಪದಕ ನೀರಜ್ ಚೋಪ್ರಾ
ಒಲಿಂಪಿಕ್ ಚಿನ್ನದ ಪದಕ ನೀರಜ್ ಚೋಪ್ರಾ

ಪ್ಯಾರಿಸ್​ನಲ್ಲಿ ಜರುಗುವ ಒಲಿಂಪಿಕ್ಸ್​ಗೆ ಮುನ್ನವೇ 90 ಮೀಟರ್​ ದೂರ ಎಸೆಯುವುದಾಗಿ ದಾಟುವ ವಿಶ್ವಾಸ ಇದೆ ಎಂದು ಭಾರತದ ಸ್ಟಾರ್​ ಜಾವೆಲಿನ್ ಥ್ರೋ ಪಟು ಹಾಗೂ ಟೋಕಿಯೊ ಒಲಿಂಪಿಕ್​​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಾಧನೆ ಮಾಡಲು ನಾನು ತುಂಬಾ ಕಠಿಣ ತರಬೇತಿ ಪಡೆಯುತ್ತಿದ್ದೇನೆ ಎಂದು ಚೋಪ್ರಾ ತಿಳಿಸಿದ್ದಾರೆ.

89.94 ಮೀಟರ್​ ದೂರ ಎಸೆದಿರುವುದೇ ನೀರಜ್​ ಚೋಪ್ರಾ ಅವರ ಶ್ರೇಷ್ಠ ನಿರ್ವಹಣೆಯಾಗಿದೆ. ಇದನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದು ದಾಖಲೆ ಬರೆದಿದ್ದರು. ಅಭ್ಯಾಸ ಮಾಡುವ ಸಂದರ್ಭದಲ್ಲಿ ಚೋಪ್ರಾ​ ಅನೇಕ ಬಾರಿ 90 ಮೀಟರ್​ ಗಡಿಯನ್ನು ದಾಟಿದ್ದಾರೆ. ಆದರೆ ಟೂರ್ನಮೆಂಟ್​ ಮತ್ತು ಸ್ಪರ್ಧೆಗಳಲ್ಲಿ ಈ ದಾಖಲೆ ಬರೆಯಲು ಸಾಧ್ಯವಾಗಿಲ್ಲ. ಈ ಸಲ ಅದನ್ನು ಸಾಧಿಸಿಯೇ ತೀರುತ್ತೇನೆ ಎಂದು ಜಾವೆಲಿನ್ ಪಟು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2023ರ ಏಷ್ಯನ್​ ಗೇಮ್ಸ್​ ಬಳಿಕ ಯಾವುದೇ ಟೂರ್ನಿಯಲ್ಲಿ ಕಣಕ್ಕಿಳಿಯದ 26 ವರ್ಷದ ಕ್ರೀಡಾಪಟು ನೀರಜ್ ಚೋಪ್ರಾ, ಮುಂದಿನ ತಿಂಗಳು ಮೇ 10ರಂದು ದೋಹಾ ಡೈಮಂಡ್​ ಲೀಗ್​ನಲ್ಲಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದಾದ ಬಳಿಕ ಜೂನ್​ 18ರಂದು ಫಿನ್​ಲ್ಯಾಂಡ್​ನ ಪಾವೊ ನುರ್ಮಿ ಗೇಮ್ಸ್​ನಲ್ಲೂ ಕಣಕ್ಕಿಳಿಯಲಿದ್ದಾರೆ. ಈ ಎರಡೂ ಸ್ಪರ್ಧೆಗಳಲ್ಲಿ 90 ಮೀಟರ್​ ಗಡಿ ದಾಟಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

ಕಠಿಣ ತರಬೇತಿ ನಡೆಸುತ್ತಿದ್ದೇನೆ ಎಂದ ನೀರಜ್ ಚೋಪ್ರಾ

ಪ್ರಸ್ತುತ ನಾನು ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ನನಗೆ ವಿಶ್ವಾಸ ಕೂಡ ಇದೆ. ನನಗಿರುವ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನವನ್ನು ನಾನಿನ್ನೂ ನೀಡಿಲ್ಲ ಎಂದು ಭಾವಿಸುತ್ತೇನೆ. ಅದಕ್ಕಾಗಿ ಈ ಹಿಂದೆಂದಿಗಿಂತಲೂ ಕಠಿಣ ತರಬೇತಿ ಪಡೆಯುತ್ತಿದ್ದೇನೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗುವ ವಿಶ್ವಾಸವೂ ಇದೆ. ಈ ಟೂರ್ನಿಯಲ್ಲಿ ಉಳಿಸಿಕೊಳ್ಳಲು ಯತ್ನಿಸುತ್ತೇನೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತುಂಬಾ ಆನಂದಿಸುತ್ತೇನೆ ಎಂದು ನೀರಜ್ ಹೇಳಿದ್ದಾರೆ.

ಜುಲೈ 26 ರಿಂದ ಒಲಿಂಪಿಕ್ಸ್ ಆರಂಭ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಸ್ವರ್ಣ ಜಯಿಸಿ ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ, ಈ ಬಾರಿಯ ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಈ ವರ್ಷ ಆಗಸ್ಟ್​​ನಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್​ ಅತಿ ದೊಡ್ಡ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳಿಂದ 10,000 ಕ್ರೀಡಾಪಟುಗಳು ಸ್ಪರ್ಧಿಸುವ ಸಾಧ್ಯತೆ ಇದೆ. 1900 ಮತ್ತು 1924ರ ನಂತರ ಪ್ಯಾರಿಸ್ ಮೂರನೇ ಬಾರಿಗೆ ಒಲಿಪಿಂಕ್ಸ್​ಗೆ ಆತಿಥ್ಯ ವಹಿಸಲು ಸಜ್ಜಾಗಿದೆ.

ಜುಲೈ 26 ರಿಂದ ಆಗಸ್ಟ್ 11ರವರೆಗೂ ಟೂರ್ನಿ ನಡೆಯಲಿದ್ದು, 32 ಕ್ರೀಡೆಗಳು, 329 ಈವೆಂಟ್​ಗಳು ನಡೆಯಲಿವೆ. ನೀರಜ್​ ಚೋಪ್ರಾ 2023ರಲ್ಲಿ ಜರುಗಿದ್ದ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಜಯಿಸಿದ್ದರು. ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದ ನೀರಜ್ ಚೋಪ್ರಾ, ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.