Jay Shah on Rishabh Pant: 'ಕುಟುಂಬಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ; ಪಂತ್ ಆರೋಗ್ಯ ಸ್ಥಿರವಾಗಿದೆ'
ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇದೇ ವಿಚಾರವಾಗಿ ಕ್ರಿಕೆಟಿಗನ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.
ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಕ್ರಿಕೆಟಿಗ ರಿಷಬ್ ಪಂತ್ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಪಂತ್‌ಗೆ ಚಿಕಿತ್ಸೆ ನಡೆಯುತ್ತಿದೆ. ಇಂದು ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿ ಸರ್‌ಪ್ರೈಸ್ ನೀಡಬೇಕೆಂದು ಪ್ಲಾನ್ ಮಾಡಿದ್ದ ವಿಕೆಟ್ ಕೀಪರ್, ಆಸ್ಪತ್ರೆ ಸೇರಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಅಪಘಾತದ ವೇಳೆ ಗಾಯಗೊಂಡಿದ್ದ ಪಂತ್, ಕಾರಿನ ವಿಂಡ್‌ಸ್ಕ್ರೀನ್ ಅನ್ನು ಭೇದಿಸಿ ಹೊರ ಬಂದಿದ್ದಾರೆ. ಅವರು ಹೊರಬಂದ ಕೆಲವೇ ನಿಮಿಷಗಳಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ರೂರ್ಕಿಯ ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ, ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ನುರಿತ ವೈದ್ಯರು ಪಂತ್ ಅವರ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಈ ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇದೇ ವಿಚಾರವಾಗಿ ಕ್ರಿಕೆಟಿಗನ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ಶಾ ಅವರು ಪಂತ್ ಅವರ ಆರೋಗ್ಯದ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ. ಪಂತ್ ಮೊದಲಿನಂತೆಯೇ ಆರೋಗ್ಯಕರವಾಗಿ ಆಸ್ಪತ್ರೆಯಿಂದ ಹೊರಬರುವುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ಎಲ್ಲವನ್ನೂ ಮಾಡುತ್ತದೆ ಎಂಬ ಭರವಸೆ ನೀಡಿದ್ದಾರೆ.
“ರಿಷಬ್ ಪಂತ್ ಚೇತರಿಸಿಕೊಳ್ಳುತ್ತಿದ್ದು, ನನ್ನ ಪ್ರಾರ್ಥನೆ ಅವರೊಂದಿಗೆ ಇದೆ. ನಾನು ಅವರ ಕುಟುಂಬ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತನಾಡಿದ್ದೇನೆ. ರಿಷಭ್ ಸ್ಥಿರವಾಗಿದ್ದಾರೆ. ಸದ್ಯ ಸ್ಕ್ಯಾನ್‌ಗೆ ಒಳಗಾಗುತ್ತಿದ್ದಾರೆ. ನಾವು ಅವರ ಚೇತರಿಕೆಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಅವರಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒದಗಿಸುತ್ತೇವೆ” ಎಂದು ಶಾ ಟ್ವೀಟ್ ಮಾಡಿದ್ದಾರೆ.
ಪಂತ್ ಅವರ ಹಣೆಯ ಮೇಲೆ ಎರಡು ಸೀಳುಗಳಾಗಿವೆ. ಅದರಲ್ಲಿ ಒಂದು ಅವರ ಬಲಗಣ್ಣಿನ ಮೇಲೆ. ಅದೃಷ್ಟವಶಾತ್, ಯಾವುದೇ ಮೂಳೆಗಳು ಮುರಿತಕ್ಕೊಳಗಾಗಿಲ್ಲ. ಅಲ್ಲದೆ ಗಂಭೀರ ಗಾಯಗಳೂ ಆಗಿಲ್ಲ. ಅವರ ಬೆನ್ನು ಮತ್ತು ಬಲ ಮೊಣಕಾಲಿಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ತಂಡವು ಪಂತ್ ಅವರನ್ನು ಮೌಲ್ಯಮಾಪನ ಮಾಡುತ್ತಿದೆ. ಸದ್ಯ ಆರೋಗ್ಯ ಸ್ಥಿರವಾಗಿದ್ದು, ಪ್ರಜ್ಞೆಯಲ್ಲಿದ್ದಾರೆ ಎಂದು ಹೇಳಲಾಗಿದೆ. ಆಸ್ಪತ್ರೆಯಿಂದ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಪಂತ್ ಅವರ ಸಂಪೂರ್ಣ ಪರೀಕ್ಷೆ ಪೂರ್ಣಗೊಂಡ ನಂತರ ಮಾತ್ರ ವಿವರ ಬಿಡುಗಡೆಯಾಗಲಿದೆ.
ಉತ್ತರಾಖಂಡದ ರೂರ್ಕಿಯಲ್ಲಿ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ5:30 ರ ಸುಮಾರಿಗೆ ಅವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಸಿಸಿಟಿವಿ ಫೂಟೇಜ್ ಪ್ರಕಾರ, ಪಂತ್ ಅವರ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಹಲವು ಬಾರಿ ಸುತ್ತು ಹೊಡೆದು ಮತ್ತೊಂದು ದಿಕ್ಕಿನ ರಸ್ತೆಗೆ ಬಂದು ಬಿದ್ದಿದ್ದೆ. ಕೆಲವೇ ನಿಮಿಷಗಗಳಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಗಾಜು ಹೊಡೆದು ತಕ್ಷಣ ಪಂತ್ ಹೊರಕ್ಕೆ ಬಂದಿದ್ದಾರೆ.
ಯುಎಇಯಲ್ಲಿ ಹಾಲಿಡೇ ಮುಗಿಸಿ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಪಂತ್ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ಕಾರಿನಲ್ಲಿ ಅವರೊಬ್ಬರೇ ಇದ್ದರು. ತಕ್ಷಣ ಅವರು ಕಾರಿನಿಂದ ಹೊರಕ್ಕೆ ಬಂದಿರುವುದರಿಂದ ದೊಡ್ಡ ಮಟ್ಟದ ಅಪಾಯ ತಪ್ಪಿದೆ.
"ಆಸ್ಪತ್ರೆಗೆ ಅವರನ್ನು ಕರೆತರುವಾಗ ಅವರಿಗೆ ಸಂಪೂರ್ಣವಾಗಿ ಪ್ರಜ್ಞೆಯಿತ್ತು. ನಾನು ಅವರಲ್ಲಿ ಮಾತನಾಡಿದ್ದೇನೆ. ಮನೆಗೆ ಹೋಗಿ ತನ್ನ ತಾಯಿಗೆ ಸರ್‌ಪ್ರೈಸ್ ನೀಡಲು ಬಯಸಿದ್ದರು" ಎಂದು ಸಕ್ಷಮ್ ಆಸ್ಪತ್ರೆಯಲ್ಲಿ ಪಂತ್‌ಗೆ ಚಿಕಿತ್ಸೆ ನೀಡಿದ ಡಾ. ಸುಶೀಲ್ ನಗರ್ ಹೇಳಿದ್ದಾರೆ.