ಕನ್ನಡ ಸುದ್ದಿ  /  Sports  /  Lionel Messi Wins Fifa Best Mens Player Award

FIFA Awards 2023: 2ನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದ​ ಮೆಸ್ಸಿ.! ಇದರ ವಿಶೇಷತೆ, ಇತಿಹಾಸ ಏನು ಗೊತ್ತಾ.?

ಕತಾರ್​​​​​ನಲ್ಲಿ ನಡೆದ ಫಿಫಾ ಫುಟ್​​​ಬಾಲ್​ ವಿಶ್ವಕಪ್ ಚಾಂಪಿಯನ್​ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್​ ಮೆಸ್ಸಿ ಅವರಿಗೆ ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಪ್ರಶಸ್ತಿ ಲಭಿಸಿದೆ. ಮೆಸ್ಸಿ ಎರಡನೇ ಬಾರಿಗೆ ಈ ಪ್ರಶಸ್ತಿ ಗೆದ್ದಿದ್ದಾರೆ.

ಲಿಯೊನೆಲ್​ ಮೆಸ್ಸಿ
ಲಿಯೊನೆಲ್​ ಮೆಸ್ಸಿ (Twitter)

ಕಳೆದ ವರ್ಷ ಕತಾರ್​​​​​ನಲ್ಲಿ ನಡೆದ ಕ್ರೀಡಾ ಲೋಕದ ಅತಿ ದೊಡ್ಡ ಹಬ್ಬ ಫಿಫಾ ಫುಟ್​​​ಬಾಲ್​ ವಿಶ್ವಕಪ್ ಟೂರ್ನಿಯಲ್ಲಿ ಲಿಯೊನೆಲ್​ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಇದೀಗ ಈ ತಂಡದ ನಾಯಕ ಲಿಯೊನೆಲ್​ ಮೆಸ್ಸಿ ಅವರಿಗೆ ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಪ್ರಶಸ್ತಿ ಲಭಿಸಿದೆ.

ಪ್ಯಾರಿಸ್​​ನಲ್ಲಿ ಜರುಗಿದ ಅದ್ಧೂರಿ ಪ್ರಶಸ್ತಿ ಸಮಾರಂಭದಲ್ಲಿ ಲಿಯೊನೆಲ್​ ಮೆಸ್ಸಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಗಾಗಿ ಒಟ್ಟು 14 ಆಟಗಾರರು ನಾಮನಿರ್ದೇಶನಗೊಂಡಿದ್ದರು. ಅದರಲ್ಲೂ ಫಿಫಾ ಫೈನಲ್​ ಪಂದ್ಯದಲ್ಲಿ ಹ್ಯಾಟ್ರಿಕ್​ ಗೋಲುಗಳ ಸಾಧನೆ ಮಾಡಿದ್ದ ಕೈಯಲಿನ್​ ಎಂಬಾಪೆ, ಮೆಸ್ಸಿಗೆ ನೇರ ಫೈಟ್​ ನೀಡಿದ್ದರು.

ಆದರೆ ಅಂತಿಮವಾಗಿ ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಮೆಸ್ಸಿ ಪಾಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಮೆಸ್ಸಿ ಎರಡನೇ ಬಾರಿಗೆ ಮುತ್ತಿಕ್ಕಿದ್ದಾರೆ. ಅಲ್ಲದೆ, ಮೂರು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಮಹಿಳಾ ವಿಭಾಗದಲ್ಲಿ ಸ್ಪೇನ್​​​​ನ ಅಲೆಕ್ಸಿಯಾ ಪುಟೆಲ್ಲಾಸ್​​​​​ ಅವರು ಈ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶೇಕಡಾ 52ರಷ್ಟು ವೋಟ್​ ಪಡೆದ ಮೆಸ್ಸಿ

ನಾಮನಿರ್ದೇಶನಗೊಂಡಿದ್ದ 14 ಆಟಗಾರರಿಗೆ ವೋಟಿಂಗ್​ ನಡೆದಿತ್ತು. ಮೂವರ ನಡುವೆ ದೊಡ್ಡ ಪೈಪೋಟಿಯೂ ನಡೆದಿತ್ತು. ಮೆಸ್ಸಿ, ಎಂಬಾಪೆ, ಕರಿಮಾ ಬೆಂಜೆಮಾ ಪ್ರಶಸ್ತಿ ಗೆಲ್ಲುವ ಫೇವರಿಟ್​ ಎನಿಸಿದ್ದರು. ಆದರೆ ಮುಕ್ತಾಯಗೊಂಡ ವೋಟಿಂಗ್​​ನಲ್ಲಿ ಮೆಸ್ಸಿ ಶೇಕಡಾ 52 ರಷ್ಟು ಮತ ಪಡೆದಿದ್ದಾರೆ. 44ರಷ್ಟು ಮತ ಪಡೆದ ಎಂಬಾಪೆ ರನ್ನರ್​ಅಪ್​ ಆಗಿದ್ದರೆ ಬೆಂಜೆಮಾ ಅವರಿಗೆ 34 ರಷ್ಟು ಸಿಕ್ಕಿದ್ದು, 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಎರಡನೇ ಬಾರಿ ಪ್ರಶಸ್ತಿ ಗೆದ್ದ ಮೆಸ್ಸಿ..!

ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮೆಸ್ಸಿ ಗೆದ್ದಿರುವುದು ಇದೇ ಮೊದಲಲ್ಲ. 2019ರಲ್ಲೂ ಅವಾರ್ಡ್​ ತಮ್ಮದಾಗಿಸಿಕೊಂಡಿದ್ದರು. ಆಗ ಕ್ರಿಸ್ಟಿಯಾನೋ ರೊನಾಲ್ಡೋ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನೀಡಿದ್ದರು. ಜೊತೆಗೆ ವರ್ಜಿಲ್​ ವ್ಯಾನ್​ ಡಿಜ್ಕ್​ ಕೂಡ ರೇಸ್​​​ನಲ್ಲಿದ್ದರು. ಆದರೆ ಮೆಸ್ಸಿ 46 ವೋಟ್​ ಪಡೆದು ವಿನ್ನರ್​ ಆದರೆ, ಡಿಜ್ಕ್​​​​​ 38 ರಷ್ಟು ಮತ ಪಡೆದು ರನ್ನರ್​ಅಪ್​ ಆದರು. ತೀವ್ರ ಪೈಪೋಟಿ ನೀಡಿದ್ದ ರೊನಾಲ್ಡೋ 3ನೇ ಸ್ಥಾನಕ್ಕೆ ಸಂತೃಪ್ತರಾದರು.

ಮೂರು ಬಾರಿ ರನ್ನರ್​ ಅಪ್​​

2016ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಅಂದಿನಿಂದ ಇಂದಿನವರೆಗೂ ಮೆಸ್ಸಿ 2 ಬಾರಿ ಪ್ರಶಸ್ತಿ ಗೆದ್ದಿದ್ದಾರೆ. ಜೊತೆಗೆ ಕ್ರಿಸ್ಟಿಯಾನೋ ರೊನಾಲ್ಡೋ ಸಹ ಎರಡು (2016, 2017 ರಲ್ಲಿ) ಬಾರಿ ಹಿಂದಿದೆಯೇ ಪ್ರಶಸ್ತಿ ಜಯಿಸಿದ್ದರು. ಆದರೆ ಈ ಎರಡು ಸಲವೂ ಮೆಸ್ಸಿ ರನ್ನರ್​​ ಅಪ್​ ಆಗಿದ್ದರು. ಕಳೆದ ವರ್ಷವೂ ಮೆಸ್ಸಿ 2ನೇ ಸ್ಥಾನ ಪಡೆದಿದ್ದರು. 2020 ರಲ್ಲಿ 3ನೇ ಸ್ಥಾನ ಪಡೆಯಲಷ್ಟೇ ಶಕ್ತರಾಗಿದ್ದರು. ರಾಬರ್ಟ್​ ಲೆವಾಂಡೋಸ್ಕಿ 2 ಬಾರಿ ಪ್ರಶಸ್ತಿ ಗೆದ್ದಿರುವುದು ವಿಶೇಷ.

ವೋಟ್​ ಮಾಡುವುದು ಯಾರು.?

ವೋಟಿಂಗ್​ ಹೇಗೆ ಇರುತ್ತದೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಮಾಧ್ಯಮ ಪ್ರತಿನಿಧಿಗಳು, ರಾಷ್ಟ್ರೀಯ ತಂಡದ ತರಬೇತುದಾರರು ಮತ್ತು ರಾಷ್ಟ್ರೀಯ ತಂಡದ ನಾಯಕರ ವೋಟಿಂಗ್​ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. 2016ರ ಅಕ್ಟೋಬರ್‌ನಲ್ಲಿ ಸಾರ್ವಜನಿಕರ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಕತಾರ್​​​ನಲ್ಲಿ ಕಪ್​​ ಗೆದ್ದಿದ್ದ ಮೆಸ್ಸಿ.!

ಕತಾರ್​​​ನಲ್ಲಿ ನಡೆದ ಫಿಫಾ ಫುಟ್​ಬಾಲ್​ ಫೈನಲ್​ ಪಂದ್ಯದಲ್ಲಿ ಫ್ರಾನ್ಸ್​​ ವಿರುದ್ಧ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ಗೆದ್ದು ಫಿಫಾ ವಿಶ್ವಕಪ್​ 2022ರ ಚಾಂಪಿಯನ್​ ಆಗಿತ್ತು. 3-3 ಗೋಲ್​ಗಳ ಮೂಲಕ ಪಂದ್ಯ ಟೈ ಆದಾಗ ಪೆನಾಲ್ಟಿ ಶೂಟ್​ಔಟ್​ನಲ್ಲಿ 4-2 ಅಂತರದಿಂದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಅರ್ಜೆಂಟಿನಾ ತಂಡ ಮೆಸ್ಸಿಗೆ ಗೆಲುವಿನ ಉಡುಗೊರೆ ನೀಡಿದೆ. ಜೊತೆಗೆ 36 ವರ್ಷಗಳ ಬಳಿಕ ಅರ್ಜೆಂಟೀನಾ ವಿಶ್ವಕಪ್​​ ಗೆದ್ದಂತಾಯ್ತು.

ಗೋಲ್ಡನ್​ ಬಾಲ್​, ಬೂಟ್​ ಗೆದ್ದಿದ್ದ ಎಂಬಾಪ್ಪೆ, ಮೆಸ್ಸಿ.!

ಫಿಫಾ ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದು ಅಂದರೆ ಮೆಸ್ಸಿ ಮತ್ತು ಎಂಬಾಪೆ. ಫೈನಲ್​​​​ನಲ್ಲಿ ಇಬ್ಬರೂ ಗೋಲುಗಳ ಮಳೆ ಸುರಿಸಿದರು. ಎಂಬಾಪೆ 3 ಗೋಲು ಗಳಿಸಿ ಮಿಂಚಿದರು. ಟೂರ್ನಿಯಲ್ಲಿ 8 ಗೋಲು ಗಳಿಸಿದ ಎಂಬಾಪ್ಪೆ ಗೋಲ್ಡನ್​ ಬೂಟ್​ ಗೆದ್ದಿದ್ದರು. ಫೈನಲ್​​​ನಲ್ಲಿ 2 ಗೋಲು ಸಿಡಿಸಿದ ಮೆಸ್ಸಿ, ಟೂರ್ನಿಯಲ್ಲಿ ಮೆಸ್ಸಿ 7 ಗೋಲು ಗಳಿಸಿ ಗೋಲ್ಡನ್​ ಬಾಲ್​ ಜಯಿಸಿದ್ದರು.

14 ಆಟಗಾರರ ಹೆಸರು ನಾಮ ನಿರ್ದೇಶನ.!

ಜೂಲಿಯನ್ ಅಲ್ವಾರೆಜ್, ಜೂಡ್ ಬೆಲ್ಲಿಂಗ್​ಹ್ಯಾಮ್​, ಕರೀಮ್ ಬೆಂಜೆಮಾ, ಕೆವಿನ್ ಡಿ ಬ್ರೂಯ್ನೆ, ಎರ್ಲಿಂಗ್ ಹಾಲೆಂಡ್, ಅಚ್ರಾಫ್ ಹಕಿಮಿ, ರಾಬರ್ಟ್ ಲೆವಾಂಡೋಸ್ಕಿ, ಸ್ಯಾಡಿಯೋ ಮಾನೆ, ಕೈಲಿಯನ್ ಎಂಬಾಪ್ಪೆ, ಲಿಯೊನೆಲ್ ಮೆಸ್ಸಿ, ಲುಕಾ ಮೊಡ್ರಿಕ್, ನೇಮರ್, ಮೊಹಮ್ಮದ್ ಸಲಾಹ್, ವಿನಿಸಿಯಸ್ ಜೂನಿಯರ್. ಆದರೆ 14 ಆಟಗಾರರ ಹೆಸರು ನಾಮ ನಿರ್ದೇಶನಗೊಂಡಿದ್ದರೂ, ಪೈಪೋಟಿ ಇದ್ದದ್ದು ಮಾತ್ರ ಮೆಸ್ಸಿ ಮತ್ತು ಎಂಬಾಪ್ಪೆ ನಡುವೆ ಮಾತ್ರ ಎಂಬುದು ವಿಶೇಷ.

2016ರಿಂದ ಹೆಸರು ಬದಲಿಸಲಾಗಿದೆ!

ಅತ್ಯುತ್ತಮ FIFA ಪುರುಷರ ಆಟಗಾರ ಎಂಬುದು ಅಸೋಸಿಯೇಷನ್ ​​ಫುಟ್‌ಬಾಲ್ ಪ್ರಶಸ್ತಿಯಾಗಿದೆ. ಕ್ರೀಡಾ ಆಡಳಿತ ಮಂಡಳಿ ಈ ಪ್ರಶಸ್ತಿ ನೀಡುತ್ತದೆ. 2016 ರಿಂದ, ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 1991ರಿಂದ 2009 ರವರೆಗೆ FIFA ವಿಶ್ವ ಆಟಗಾರ ಪ್ರಶಸ್ತಿ ಎಂಬ ಹೆಸರಿನಲ್ಲಿತ್ತು. ಬಳಿಕ ಹೆಸರನ್ನು ಬದಲಿಸಿ 2016 ರಿಂದ ಫಿಫಾದ ಅತ್ಯುತ್ತಮ ವರ್ಷದ ಆಟಗಾರ ಎಂದು ನಾಮಕರಣ ಮಾಡಲಾಗಿದೆ.