ಕನ್ನಡ ಸುದ್ದಿ  /  Sports  /  Nat Sciver Brunt Issy Wong Help Mumbai Indians Advance To Final Set Up Blockbuster Clash Against Delhi Capitals

MI vs UPW Eliminator: ಇಸ್ಸಿ ವಾಂಗ್ ಹ್ಯಾಟ್ರಿಕ್ ಪವರ್, ಯುಪಿಗೆ ಸೋಲು; ಫೈನಲ್​ಗೇರಿದ ಮುಂಬೈ!

ಎಲಿಮಿನೇಟರ್ ಪಂದ್ಯದಲ್ಲಿ ಆಲ್​ರೌಂಡ್​ ಪ್ರದರ್ಶನ ನೀಡಿದ ಮುಂಬೈ ತಂಡದ ಎದುರು ಯುಪಿ ತಂಡವು 72 ರನ್​ಗಳಿಂದ ಶರಣಾಗಿದೆ. 20 ಓವರ್​​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಹರ್ಮನ್​ ಪಡೆ, 182 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿತ್ತು. ಆದರೆ ಈ ಗುರಿ ಬೆನ್ನಟ್ಟಿದ ಯುಪಿ, ಅಲ್ಪಮೊತ್ತಕ್ಕೆ ಕುಸಿತ ಕಂಡಿತು. 17.4 ಓವರ್​​ಗಳಲ್ಲಿ 110 ರನ್​ಗಳಿಗೆ ಸರ್ಪಪತನ ಕಂಡಿತು.

 ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ (WPL/Twitter)

ಇಸ್ಸಿ ವಾಂಗ್​​​ ಹ್ಯಾಟ್ರಿಕ್​ ಪವರ್​​​​​​​​​​​​​​​​ ಮತ್ತು ನಟಾಲಿ ಸೀವರ್​​ ಭರ್ಜರಿ ಬ್ಯಾಟಿಂಗ್​​ ನೆರವಿನಿಂದ ಉದ್ಘಾಟನಾ ಆವೃತ್ತಿಯ ಮಹಿಳಾ ಪ್ರೀಮಿಯರ್​​ ಲೀಗ್​​​ನಲ್ಲಿ ಮುಂಬೈ ಇಂಡಿಯನ್ಸ್​ ಫೈನಲ್​​ಗೆ ಭರ್ಜರಿ ಪ್ರವೇಶ ನೀಡಿದೆ. ಆ ಮೂಲಕ ಫೈನಲ್​​​ಗೆ ಅಧಿಕೃತ ಮುದ್ರೆ ಒತ್ತಿದ 2ನೇ ತಂಡ ಎನಿಸಿದೆ. ಡಿವೈ ಪಾಟೀಲ್​ ಮೈದಾನದಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಮಣಿಸಿದ ಮುಂಬೈ, ಫೈನಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಮಾರ್ಚ್​​ 26ರಂದು ಫೈನಲ್​ ಪಂದ್ಯ ನಡೆಯಲಿದೆ.

ಎಲಿಮಿನೇಟರ್ ಪಂದ್ಯದಲ್ಲಿ ಆಲ್​ರೌಂಡ್​ ಪ್ರದರ್ಶನ ನೀಡಿದ ಮುಂಬೈ ತಂಡದ ಎದುರು ಯುಪಿ ತಂಡವು 72 ರನ್​ಗಳಿಂದ ಶರಣಾಗಿದೆ. ನಟಾಲಿ ಸೀವರ್ ಅವರ​​ ಅಜೇಯ ಅರ್ಧಶತಕದ ನೆರವಿನಿಂದ 20 ಓವರ್​​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಹರ್ಮನ್​ ಪಡೆ, 182 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಯುಪಿ, ಅಲ್ಪಮೊತ್ತಕ್ಕೆ ಕುಸಿಯಿತು. 17.4 ಓವರ್​​ಗಳಲ್ಲಿ 110 ರನ್​ಗಳಿಗೆ ಸರ್ಪಪತನ ಕಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ, ಉತ್ತಮ ಆರಂಭ ಪಡೆಯಿತು. ಮುಂಬೈ ಪರ ಆರಂಭಿಕರಾಗಿ ಹೀಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್​ಗೆ ಈ ಜೋಡಿ 31 ರನ್​ ಕಲೆ ಹಾಕಿತು. ಆದರೆ ಯಾಸ್ತಿಕಾ 21 ರನ್​​, ಹೀಲಿ ಮ್ಯಾಥ್ಯೂಸ್ 26 ರನ್ ಗಳಿಸಿ ಔಟಾದರು. ನಂತರ ನಾಯಕಿ ಹರ್ಮನ್​ ಪ್ರೀತ್​ ಕೌರ್ 14 ರನ್​ಗಳಿಗೆ ಆಟ ಮುಗಿಸಿದರು.​​

ಸತತ ವಿಕೆಟ್​ಗಳ ನಡುವೆಯೂ ಯುಪಿ ಬೌಲರ್​​ಗಳ ಚಳಿ ಬಿಡಿಸಿದ ನಟಾಲಿ ಸೀವರ್​​​, ಮಹತ್ವದ ಪಂದ್ಯದಲ್ಲಿ ಸಖತ್​ ಇನ್ನಿಂಗ್ಸ್​ ಕಟ್ಟಿದರು. ಎದುರಾಳಿ ಬೌಲರ್​​ಗಳಿಗೆ ಹಿಗ್ಗಾಮುಗ್ಗಾ ದಂಡಿಸಿದ ಸೀವರ್​​​​, 50ರ ಗಡಿ ದಾಟಿದರು. ಸೀವರ್​​ಗೆ ಅಮೆಲಿಯಾ ಕೇರ್ (29) ಅದ್ಭುತ ಸಾಥ್​ ನೀಡಿದರು. ಈ ಜೋಡಿ 5ನೇ ವಿಕೆಟ್​ಗೆ 60 ರನ್​​ ಜೊತೆಯಾಟ ಕಟ್ಟಿತು. 38 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ ಅಜೇಯ 78 ರನ್​ ಗಳಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್​ 20 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 182 ರನ್​ಗಳಿಸಿದೆ. ಯುಪಿ ಪರ ಸೋಫಿ ಎಕ್ಲಸ್ಟನ್​​​ 2 ವಿಕೆಟ್​, ಪಾರ್ಶ್ವಿ ಚೋಪ್ರಾ, ಅಂಜಲಿ ಸರ್ವಾಣಿ ತಲಾ 1 ವಿಕೆಟ್​ ಪಡೆದರು.

ಇನ್ನು ಬೃಹತ್​ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್​ ಆರಂಭದಲ್ಲೇ ತ್ರಿಬಲ್​​​​ ಆಘಾತಕ್ಕೆ ಒಳಗಾಯಿತು. ಶ್ವೇತಾ ಸೆಹ್ರಾವತ್​ (1), ಅಲೀಸಾ ಹೀಲಿ (11), ತಹಿಲಾ ಮೆಕ್​ಗ್ರಾತ್​ (7) ಬೇಗನೇ ನಿರ್ಗಮಿಸಿ ತಂಡಕ್ಕೆ ಆಘಾತ ನೀಡಿದರು. ಕಿರಣ್​ ನವಿಗೆರೆ ಕೆಲ ಹೊತ್ತು ಹೋರಾಟ ನಡೆಸಿದರೂ, ಗೆಲುವನ್ನು ಖಚಿತಪಡಿಸುವಲ್ಲಿ ವಿಫಲರಾದರು. ಅಬ್ಬರದ 43 ರನ್​ ಸಿಡಿಸಿ ತಂಡದ ಪರ ಗರಿಷ್ಠ ಸ್ಕೋರರ್​ ಎನಿಸಿದರು.

WPL ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್​​

ಮುಂಬೈ ತಂಡದ ಇಸ್ಸಿ ವಾಂಗ್​​​, ಮಹಿಳಾ ಪ್ರೀಮಿಯರ್​ ಲೀಗ್​​ನಲ್ಲಿ ನೂತನ ದಾಖಲೆ ಬರೆದಿದ್ದಾರೆ. WPL ಇತಿಹಾಸದಲ್ಲಿ ಚೊಚ್ಚಲ ಹ್ಯಾಟ್ರಿಕ್​ ಸಾಧಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಕಿರಣ್​ ನವಿಗೆರೆ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟನ್ ಅವರು ಮೊದಲ ಹ್ಯಾಟ್ರಿಕ್​​​ನಲ್ಲಿ ಬಲಿಯಾದ ಆಟಗಾರ್ತಿಯಾಗಿದ್ದಾರೆ. 13ನೇ ಓವರ್​​​ನಲ್ಲಿ ಈ ದಾಖಲೆ ದಾಖಲಾಯಿತು. ಸತತ ವಿಕೆಟ್​ಗಳ ನಡುವೆಯೂ ತಂಡದ ಗೆಲುವಿಗಾಗಿ ಯಾರೂ ಕೂಡ ಸಾಥ್​ ನೀಡಲಿಲ್ಲ. ಅಂತಿಮವಾಗಿ ಯುಪಿ ವಾರಿಯರ್ಸ್​​ 17.4 ಓವರ್​ಗಳಲ್ಲಿ 110 ರನ್​ಗಳಿಗೆ ಆಲೌಟ್​ ಆಯಿತು. 72 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಯುಪಿ ವಾರಿಯರ್ಸ್ ಪ್ಲೇಯಿಂಗ್​ ಇಲೆವೆನ್​

ಅಲಿಸ್ಸಾ ಹೀಲಿ, ಕಿರಣ್ ಪ್ರಭು ನವಗಿರೆ, ತಹಿಲಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಸಿಮ್ರಾನ್ ಶೇಖ್, ಶ್ವೇತಾ ಶೆರಾವತ್, ಪಾರ್ಶ್ವಿ ಚೋಪ್ರಾ, ಸೋಫಿ ಎಕ್ಲೆಸ್ಟನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್​ ಇಲೆವೆನ್​

ಹೀಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಟಾಲಿ ಸೀವರ್, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಅಮೆಲಿಯಾ ಕೆರ್, ಪೂಜಾ ವಸ್ತಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂತಿಮಣಿ ಕಲಿತಾ, ಸೈಕಾ ಇಸಾಕ್