Kannada News  /  Sports  /  Shaheen Afridi Gets Married To Daughter Of Shahid Afridi
ಶಹೀನ್ ಅಫ್ರಿದಿ ಮದುವೆ
ಶಹೀನ್ ಅಫ್ರಿದಿ ಮದುವೆ (Twitter)

Shaheen Afridi marriage: ವಿವಾಹ ಬಂಧನಕ್ಕೊಳಗಾದ ಪಾಕ್‌ ವೇಗಿ; ಶಹೀನ್‌ ಅಫ್ರಿದಿ ಈಗ ಶಾಹಿದ್‌ ಅಳಿಯ

04 February 2023, 15:05 ISTHT Kannada Desk
04 February 2023, 15:05 IST

ಈ ವರ್ಷ ಮದುವೆಯಾಗುತ್ತಿರುವ ಪಾಕಿಸ್ತಾನದ ಮೂರನೇ ಕ್ರಿಕೆಟಿಗ ಅಫ್ರಿದಿ. ಈ ಹಿಂದೆ ವೇಗದ ಬೌಲರ್ ಹ್ಯಾರಿಸ್ ರೌಫ್ ಮತ್ತು ಆಲ್ ರೌಂಡರ್ ಶಾದಾಬ್ ಖಾನ್ ಕಳೆದ ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಪಾಕಿಸ್ತಾನದ ವೇಗದ ಬೌಲರ್ ಶಹೀನ್ ಅಫ್ರಿದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಕ್ರವಾರ ಕರಾಚಿಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಅವರು, ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಶಾ ಅವರನ್ನು ಮದುವೆಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸ್ಥಳೀಯ ವರದಿಗಳ ಪ್ರಕಾರ, ಮದುವೆ ಕಾರ್ಯಕ್ರಮದ ಬಳಿಕ ಆರತಕ್ಷತೆ ನಡೆದಿದೆ. ಇದರಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ಆಟಗಾರರು ಭಾಗವಹಿಸಿದ್ದರು. ನವದಂಪತಿಯ ಮೆಹಂದಿ ಕಾರ್ಯಕ್ರಮವು ಗುರುವಾರ ನಡೆದಿತ್ತು. ಇವರಿಬ್ಬರೂ ಎರಡು ವರ್ಷಗಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಈ ವರ್ಷ ಮದುವೆಯಾಗುತ್ತಿರುವ ಪಾಕಿಸ್ತಾನದ ಮೂರನೇ ಕ್ರಿಕೆಟಿಗ ಅಫ್ರಿದಿ. ಈ ಹಿಂದೆ ವೇಗದ ಬೌಲರ್ ಹ್ಯಾರಿಸ್ ರೌಫ್ ಮತ್ತು ಆಲ್ ರೌಂಡರ್ ಶಾದಾಬ್ ಖಾನ್ ಕಳೆದ ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಪಾಕ್ ನಾಯಕ ಬಾಬರ್ ಅಜಮ್, ಮಾಜಿ ನಾಯಕ ಸರ್ಫರಾಜ್ ಅಹ್ಮದ್, ವೇಗದ ಬೌಲರ್ ನಸೀಮ್ ಶಾ ಮತ್ತು ಮಾಜಿ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ಅವರೊಂದಿಗೆ ಶಾಹೀನ್ ಅವರ ಆರತಕ್ಷತೆಯಲ್ಲಿ ಶಾದಾಬ್ ಕೂಡ ಹಾಜರಿದ್ದರು. ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ‌ ಸದ್ದು ಮಾಡುತ್ತಿವೆ.

2018ರ ಏಪ್ರಿಲ್‌ನಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಾಹೀನ್ ಅಫ್ರಿದಿ ಪದಾರ್ಪಣೆ ಮಾಡಿದ್ದರು. ಅವರು‌ ಪಾಕ್‌ ಪರ 25 ಟೆಸ್ಟ್, 32 ಏಕದಿನ ಹಾಗೂ 47 ಟಿ20 ಪಂದ್ಯಗಳನ್ನು ಆಡಿದ್ದಾರೆ. ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಅವರು, ಉತ್ತಮ ರೇಟಿಂಗ್ ಪಡೆದಿದ್ದಾರೆ. 22ರ ಹರೆಯದ ಅವರು, ಟೆಸ್ಟ್‌ನಲ್ಲಿ 99, ಏಕದಿನದಲ್ಲಿ 62 ಮತ್ತು ಟಿ20ಯಲ್ಲಿ 58 ವಿಕೆಟ್‌ಗಳನ್ನು ಪಡೆದಿದ್ದಾರೆ.

ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯ ಸಮಯದಲ್ಲಿ ಅಫ್ರಿದಿ ಅವರ ಮೊಣಕಾಲಿನ ಗಾಯಗಳಾಗಿತ್ತು. ಆ ಬಳಿಕ ಅವರು ಏಷ್ಯಾಕಪ್‌ನಿಂದ ಹೊರಗುಳಿಯಬೇಕಾಯ್ತು. ತಂಡದೊಂದಿಗೆ ಪ್ರಯಾಣಿಸಿದ್ದರೂ, ಅವರು ಆಡಿರಲಿಲ್ಲ.

ಈ ನಡುವೆ ಅಫ್ರಿದಿ ಅವರ ಗಾಯವನ್ನು ಪಿಸಿಬಿಯು ಲಘುವಾಗಿ ಪರಿಗಣಿಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಅವರು ಅಂತಿಮವಾಗಿ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. ಪಾಕಿಸ್ತಾನ ತಂಡವು ನಾಕೌಟ್‌ ಹಂತಕ್ಕೆ ಮತ್ತು ಫೈನಲ್‌ಗೆ ಲಗ್ಗೆ ಇಡುವಲ್ಲಿ ಇವರ ಅತ್ಯುತ್ತಮ ಫಾರ್ಮ್ ಕೂಡಾ ಕಾರಣ. ಆದರೆ, ಫೈನಲ್ ಪಂದ್ಯದಲ್ಲಿ 13ನೇ ಓವರ್‌ನಲ್ಲಿ ಇಂಗ್ಲೆಂಡ್ ಚೇಸಿಂಗ್‌ ವೇಳೆ ಕ್ಯಾಚ್ ತೆಗೆದುಕೊಳ್ಳುವಾಗ ಅವರು ಮತ್ತೆ ಗಾಯಗೊಂಡರು. ಅವರು 16ನೇ ಓವರ್ ಬೌಲ್ ಮಾಡುವ ಮುಂಚೆ ರೆಸ್ಟ್‌ ಮಾಡಿದ್ದರು. ಆದರೆ, ಕೇವಲ ಒಂದು ಬಾಲ್‌ ಎಸೆದು ಕುಂಟುತ್ತಾ ಮೈದಾನದಿಂದ ಹೊರನಡೆದರು.