logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri: ಶಿವನಿಗಾಗಿ ಎರಡೂ ಕಣ್ಣುಗಳನ್ನು ಕಿತ್ತುಕೊಂಡಿದ್ದ ಬೇಡರ ಕಣ್ಣಪ್ಪ; ಇಲ್ಲಿದೆ ಸಂಪೂರ್ಣ ಕಥೆ

Maha Shivaratri: ಶಿವನಿಗಾಗಿ ಎರಡೂ ಕಣ್ಣುಗಳನ್ನು ಕಿತ್ತುಕೊಂಡಿದ್ದ ಬೇಡರ ಕಣ್ಣಪ್ಪ; ಇಲ್ಲಿದೆ ಸಂಪೂರ್ಣ ಕಥೆ

HT Kannada Desk HT Kannada

Feb 28, 2024 06:25 PM IST

ಮಹಾಶಿವ

    • Bedara Kannappa Story in Kannada: ಶಿವರಾತ್ರಿಯ ಬಗ್ಗೆ ಸೊಗಸಾದ ಕಥೆಯೊಂದಿದೆ. ಆ ಶಿವಭಕ್ತನ ಹೆಸರು ಕಣ್ಣಪ್ಪ. ಶಿವನಿಗಾಗಿ ಈತ ಎರಡೂ ಕಣ್ಣುಗಳನ್ನು ಕಿತ್ತುಕೊಂಡಿದ್ದ. ಈ ಕಥೆ ಇಲ್ಲಿದೆ. (ಲೇಖನ: ಎಚ್‌. ಸತೀಶ್‌, ಜ್ಯೋತಿಷಿ)
ಮಹಾಶಿವ
ಮಹಾಶಿವ

ಹೆಸರೇ ತಿಳಿಸುವಂತೆ ಶಿವರಾತ್ರಿಯ ಆಚರಣೆಯನ್ನು ರಾತ್ರಿಯ ವೇಳೆ ಮಾಡಬೇಕು. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ದಿನದಂದು ಮಹಾಶಿವರಾತ್ರಿಯನ್ನು ಆಚರಿಸಬೇಕು. ಈ ವರ್ಷ ಮಾರ್ಚ್​ 8 ರಂದು ಶಿವರಾತ್ರಿ ಬಂದಿದೆ. ಸೂರ್ಯ ಮುಳುಗುವ ವೇಳೆ ಕೆಲ ಸಮಯ ಚತುರ್ದಶಿ ಇದ್ದರೂ ಅಂದೆ ಶಿವರಾತ್ರಿಯನ್ನು ಆಚರಿಸಬೇಕಾಗುತ್ತದೆ. ಆ ದಿನ ಪ್ರದೋಷವು ಇರುತ್ತದೆ. ಅಂದು ನಾಲ್ಕು ಝಾವದ ಪೂಜೆಯನ್ನು ಮಾಡಬೇಕು. ಆ ದಿನ ಜಾಗರಣೆ ಮಾಡುವುದು ಅತಿ ಮುಖ್ಯ. ಉಪವಾಸವನ್ನು ಸಹ ಆಚರಿಸಬೇಕು. ಮಹಾಶಿವರಾತ್ರಿಯಂದು ಪೂಜೆಯನ್ನು ಮಾಡಿದರೆ, ಅಶ್ವಮೇಧಯಾಗ ಮಾಡಿದ ಪುಣ್ಯವು ಲಭಿಸುತ್ತದೆ.

ತಾಜಾ ಫೋಟೊಗಳು

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಕೆಲವೊಂದು ಧರ್ಮ ಗ್ರಂಥಗಳ ಪ್ರಕಾರ ಶಿವನು ಈ ದಿನದಂದು ಕೋಟಿ ಸೂರ್ಯರಿಗೆ ಸಮನಾದ ಪ್ರಭೆ ಉಳ್ಳವನಾಗಿ ಲಿಂಗ ರೂಪದಲ್ಲಿ ಭೂಮಿಯ ಮೇಲೆ ಪ್ರಕಟನಾದನು ಎಂದು ತಿಳಿದು ಬರುತ್ತದೆ. ಒಂದೇ ದಿನದಲ್ಲಿ ತ್ರಯೋದಶಿ ಮುಗಿದು ಚತುರ್ದಶಿ ಆರಂಭವಾಗಿರಬೇಕು. ಅಂದು ಮಾತ್ರ ಶಿವರಾತ್ರಿ ಪೂಜೆ ಮಾಡಬೇಕು. ಹಿಂದು ಮುಂದಿನ ದಿನಗಳಂದು ಶಿವರಾತ್ರಿ ಪೂಜೆಯನ್ನು ಆಚರಿಸಿದರೆ ಆಯುಷ್ಯ ಕ್ಷೀಣಿಸುತ್ತದೆ. ಧಾರಿಧ್ಯ ಮನೆ ಮಾಡುತ್ತದೆ. ಇದರ ಬಗ್ಗೆ ಸ್ಕಂದ ಪುರಾಣದಲ್ಲಿ ಸಂಪೂರ್ಣ ವಿವರಣೆ ಇದೆ. ಈ ದಿನದ ಚತುರ್ದಶಿಯಲ್ಲಿ ಜಯಯೋಗ ಉಂಟಾಗುತ್ತದೆ.

ಈ ದಿನದಂದು ಉಪವಾಸ ಮಾಡಿದರೆ ಭೂ ಮಂಡಲದಲ್ಲಿ ಇರುವ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಿದ ಪುಣ್ಯ ದೊರೆಯುತ್ತದೆ. ಧರ್ಮ ಗ್ರಂಥಗಳಲ್ಲಿ ತಿಳಿಸಿರುವಂತೆ ಶಿವನಿಗಿಂತ ಮತ್ತು ಶಿವನ ಪೂಜೆಯಿಂದ ಆಗಲಿ ಶ್ರೇಷ್ಠವಾದದ್ದು ಪ್ರಪಂಚದಲ್ಲಿ ಯಾವುದು ಇಲ್ಲ. ಈ ದಿನದಂದು ಯಾರು ಪೂಜೆ ಮಾಡುವುದಿಲ್ಲವೋ ಅವರು ಸಾವಿರಾರು ವರ್ಷಗಳು ಆಹಾರ ನೀರು ಇಲ್ಲದೆ ಅಲೆಯುತ್ತಾರೆ ಎಂಬ ಮಾತುಗಳು ಧಾರ್ಮಿಕ ಗ್ರಂಥಗಳಿಂದ ತಿಳಿದುಬರುತ್ತದೆ. ಶಿವರಾತ್ರಿಯಂದು ಪೂಜೆ ಮಾಡಿದರೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಪಡೆಯಬಹುದು ಎಂದು ಬಲ್ಲವರು ತಿಳಿಸುತ್ತಾರೆ.

ಈ ವ್ರತವನ್ನು ಕನಿಷ್ಠಪಕ್ಷ 12 ಅಥವಾ 24 ವರ್ಷಗಳು ಮಾಡಬೇಕೆಂಬ ಉಲ್ಲೇಖವಿದೆ. ಈ ದಿನದಂದು ವೃಷಭದ ಮೇಲೆ ಕುಳಿತಿರುವ ಶಿವ ಪಾರ್ವತಿಯನ್ನು ಪೂಜಿಸಬೇಕು. ಈ ಮೂರ್ತಿಯು ಬೆಳ್ಳಿ ಬಂಗಾರದಿಂದ ಮಾಡಿದ್ದಲ್ಲಿ ವಿಶೇಷ ಫಲಗಳು ಲಭ್ಯವಾಗಲಿವೆ. ಧರ್ಮ ಶಾಸ್ತ್ರಗಳ ಪ್ರಕಾರ ಶಿವ ಪಾರ್ವತಿಯರಿಗೆ ಕನಿಷ್ಠ ಪಕ್ಷ 25 ಕಳಶಗಳ ನೀರಿನಿಂದ ಅಭಿಷೇಕ ಮಾಡಬೇಕಾಗುತ್ತದೆ. ಅಂದಿನ ಕಾಲದಲ್ಲಿ ಉಡುವ ಮತ್ತು ಹೊದೆಯುವ ವಸ್ತ್ರಗಳನ್ನು ಮತ್ತು 12 ಹಸುಗಳನ್ನು ರಾಜಾಧಿರಾಜರು ದಾನ ಮಾಡುತ್ತಿದ್ದರು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ವಸ್ತ್ರಗಳು ಮತ್ತು ಒಂದು ಹಸುವಿನ ಪ್ರತಿಮೆಯನ್ನು ದಾನ ನೀಡಬಹುದು. ದಂಪತಿಗಳಿಗೆ ಭೋಜನ ವ್ಯವಸ್ಥೆಯನ್ನು ಮಾಡಬೇಕು.

ಬೇಡರ ಕಣ್ಣಪ್ಪನ ಕಥೆ

ಶಿವರಾತ್ರಿಯ ಬಗ್ಗೆ ಸೊಗಸಾದ ಕಥೆಯೊಂದಿದೆ. ಆ ಶಿವಭಕ್ತನ ಹೆಸರು ಕಣ್ಣಪ್ಪ. ಜನ್ಮದಿಂದ ಬೇಡನಾದ ಕಾರಣ ಬೇಡರ ಕಣ್ಣಪ್ಪ ಎಂಬ ಹೆಸರು ಪಡೆಯುತ್ತಾನೆ. ಈ ಕಥೆ ನಡೆದದ್ದು ಶ್ರೀ ಕಾಳಹಸ್ತಿಯಲ್ಲಿ. ಅಲ್ಲೊಂದು ಶಿವನ ದೇವಸ್ಥಾನ. ಆ ದೇವಾಲಯದಲ್ಲಿ ದಿನನಿತ್ಯ ಅರ್ಚಕರೊಬ್ಬರಿಂದ ಪೂಜೆ ಪುರಸ್ಕಾರಗಳು ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿತ್ತು. ಸೂರ್ಯೋದಯದ ವೇಳೆಯಲ್ಲಿ ಸ್ನಾನಾದಿಗಳನ್ನು ಮುಗಿಸಿ ಶಿವನನ್ನು ಹೂಗಳು ಮತ್ತು ಬಿಲ್ವಪತ್ರೆಗಳಿಂದ ಅರ್ಚಿಸುತ್ತಿದ್ದರು. ರುಚಿಕರವಾದ ಆಹಾರ ಪದಾರ್ಥಗಳು ಮತ್ತು ಹಣ್ಣು ಹಂಪಲುಗಳನ್ನು ನೈವೇದ್ಯ ಮಾಡುತ್ತಿದ್ದರು. ಲಿಂಗ ರೂಪದ ಶಿವನು ನೋಡಲು ಸುಂದರವಾಗಿ ಕಾಣಲೆಂದು ಬಗೆ ಬಗೆಯ ಹೂಗಳಿಂದ ಅಲಂಕರಿಸುತ್ತಿದ್ದನು. ಆ ದೇವಸ್ಥಾನವು ಕಾಡಿನಂತಹ ಪ್ರದೇಶದಲ್ಲಿ ಇತ್ತು.

ಅಲ್ಲೊಂದು ಕೆಟ್ಟತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ಗುಂಪೊಂದು ನೆಲೆಸಿತ್ತು. ಆ ಗುಂಪಿನ ನಾಯಕನ ಹೆಸರೇ ಕಣ್ಣಪ್ಪ. ಪ್ರತಿನಿತ್ಯ ಪ್ರಾಣಿಗಳ ಬೇಟೆಯನ್ನಾಡಿ ಜೀವನ ನಡೆಸುವುದೇ ಇವರ ಅಭ್ಯಾಸ. ಆದರೆ ಕಣ್ಣಪ್ಪನ ಕನಸಿನಲ್ಲಿ ಒಮ್ಮೊಮ್ಮೆ ಶಿವನು ಕಾಣಿಸುತ್ತಿರುತ್ತಾನೆ. ಇದೇ ವೇಳೆ ಬೇಟೆಗೆಂದು ಬಂದ ಕಣ್ಣಪ್ಪನು ರಾತ್ರಿ ಆಗುವುದನ್ನು ಗಮನಿಸಿದೆ ಕಾಡಿನಲ್ಲಿಯೇ ಕಾಲ ಕಳೆಯುತ್ತಾನೆ. ನಾನಾ ಪ್ರಾಣಿಗಳಿಗೆ ಹೆದರಿ ಅಲ್ಲಿಯೇ ಹತ್ತಿರದಲ್ಲಿದ್ದ ಮರವನ್ನು ಏರಿ ಕುಳಿತು ಬಿಡುತ್ತಾನೆ. ದೈವ ಲಿಖಿತದಿಂದ ಆ ಮರವು ಬಿಲ್ವಪತ್ರೆಯ ಮರವಾಗಿರುತ್ತದೆ. ರಾತ್ರಿ ಆಗುತ್ತಿದ್ದಂತೆ ಆತನನ್ನು ನಿದ್ರೆ ಆವರಿಸಿರುತ್ತದೆ. ಆದ್ದರಿಂದ ಆ ನಿದ್ದೆಯಿಂದ ಪಾರಾಗಲು ಮರದಲ್ಲಿದ್ದ ಎಲೆಗಳನ್ನು ನೆಲದ ಮೇಲೆ ಎಸೆಯುತ್ತಿರುತ್ತಾನೆ.

ಅದೃಷ್ಟವೆಂಬಂತೆ ಅಲ್ಲೊಂದು ಶಿವಲಿಂಗವಿರುತ್ತದೆ. ಈ ಬಿಲ್ವಪತ್ರೆಗಳು ಆ ಲಿಂಗದ ಮೇಲೆ ಬೀಳುತ್ತಿರುತ್ತವೆ. ಬೆಳಗಾಗಿದ್ದು ಮರದಿಂದ ಇಳಿದು ಬಂದ ಬೇಡಪ್ಪನಿಗೆ ಅಲ್ಲಿದ್ದ ಶಿವಲಿಂಗವನ್ನು ಕಂಡು ಆಶ್ಚರ್ಯವಾಗುತ್ತದೆ. ಮಾತ್ರವಲ್ಲದೆ ಇವನ ಕನಸಿನಲ್ಲಿ ಕಾಣುತ್ತಿದ್ದ ದೇವರು ಸಹ ಶಿವನೇ ಎಂದು ತಿಳಿದು ಬರುತ್ತದೆ. ಅತಿಯಾದ ಭಕ್ತಿಯಿಂದ ಕಣ್ಣಪ್ಪನು ಆ ಲಿಂಗವನ್ನು ತನ್ನ ಕೈಗಳಿಂದ ಅಪ್ಪಿ ಮುದ್ದಾಡುತ್ತಾನೆ. ಶಿವಲಿಂಗವನ್ನು ಪೂಜಿಸಬೇಕೆಂದು ನಿಶ್ಚಯಿಸುತ್ತಾನೆ.

ಪ್ರತಿದಿನ ಬೆಳಗಿನ ವೇಳೆ ಅರ್ಚಕನು ಪೂಜಿಸಿ, ಹಣ್ಣು ಹಂಪಲನ್ನು ನೈವೇದ್ಯವನ್ನು ಮಾಡಿ, ಹೂವಿನಿಂದ ಅಲಂಕರಿಸಿ ಹೋಗುತ್ತಾನೆ. ಆನಂತರ ಕಣ್ಣಪ್ಪನು ಆಂತರ್ಯದಲ್ಲಿ ಯಾವುದೇ ಲೋಪವಿಲ್ಲದೆ, ಶಿವಲಿಂಗದ ಜೊತೆ ಮಾತನಾಡುತ್ತಾನೆ. ಆನಂತರ ಶಿವನಿಗೆ ನೀರನ್ನು ಸಂಪ್ರೋಕ್ಷಿಸಿ ಕಾಡಿನಲ್ಲಿ ಸಿಗುವ ಯಾವುದೋ ಒಂದು ಪ್ರಾಣಿಯ ಮಾಂಸವನ್ನು ನೈವೇದ್ಯವನ್ನಾಗಿ ಅರ್ಪಿಸುತ್ತಾನೆ. ಅರ್ಚಕನು ಮಾರನೆ ದಿನ ಬೆಳಗಿನ ವೇಳೆ ಪೂಜೆಗೆ ಆಗಮಿಸಿದಾಗ ಅಚ್ಚರಿ ಕಾದಿರುತ್ತದೆ. ತಾನು ಶಿವನಿಗೆ ಅರ್ಪಿಸಿದ್ದ ಹೂವು, ಹಣ್ಣು ಹಂಪಲು ಇರುವುದಿಲ್ಲ. ಅಲ್ಲಿದ್ದ ಸೊಪ್ಪು ಮತ್ತು ಮಾಂಸದ ತುಂಡುಗಳನ್ನು ದೂರ ಎಸೆದು ಲಿಂಗವನ್ನು ಶುಚಿಗೊಳಿಸಿ ಮತ್ತೊಮ್ಮೆ ಎಂದಿನಂತೆ ಪೂಜೆಯನ್ನು ಮಾಡುತ್ತಾನೆ. ಈ ರೀತಿಯ ಕೆಲಸ ಕಾರ್ಯಗಳು ದಿನಂಪ್ರತಿ ಪುನರಾವರ್ತನೆಗೊಳ್ಳುತ್ತದೆ.

ಇದರಿಂದ ಬೇಸತ್ತ ಅರ್ಚಕನು ಒಂದು ದಿನ ಮರೆಯಲ್ಲಿ ನಿಂತು ಕಣ್ಣಪ್ಪನ ಪೂಜಾವಿಧಿಗಳನ್ನು ಗಮನಿಸುತ್ತಾನೆ. ಇದನ್ನು ಕಂಡ ಅರ್ಚಕನು ಸಿಡುಕುತನದಿಂದ ಕಣ್ಣಪ್ಪನನ್ನು ಶಿಕ್ಷಿಸಲು ಅನುವಾಗುತ್ತಾನೆ. ಈ ಮಧ್ಯೆ ಶಿವಲಿಂಗದ ಒಂದು ಕಣ್ಣಿನಿಂದ ನೀರು ಬರಲು ಆರಂಭವಾಗುತ್ತದೆ. ಇದನ್ನು ಕಂಡ ಕಣ್ಣಪ್ಪನು ನೋವು ಮತ್ತು ಭಯದಿಂದ ಶಿವನನ್ನು ಸಂತೈಸುತ್ತಾನೆ. ಆದರೆ ಶಿವನ ಕಣ್ಣಿನಿಂದ ಬರುವ ನೀರು ನಿಲ್ಲುವುದೇ ಇಲ್ಲ. ಬೇರೆ ದಾರಿಯೇ ಇಲ್ಲದೆ ಕಣ್ಣಪ್ಪನು ಅಧಿಕವಾದ ಭಕ್ತಿಯಿಂದ ತನ್ನ ಬಳಿ ಇದ್ದ ಬಾಣದಿಂದ ತನ್ನ ಒಂದು ಕಣ್ಣನ್ನು ಕೀಳುತ್ತಾನೆ. ಅದೇ ಕಣ್ಣನ್ನು ಶಿವನಿಗೆ ಇಟ್ಟು ಸಂತೈಸುತ್ತಾನೆ. ಆಗ ಕಣ್ಣಿನಿಂದ ಬರುತ್ತಿದ್ದ ನೀರು ನಿಲ್ಲುತ್ತದೆ. ಇದನ್ನು ಕಂಡ ಅರ್ಚಕನಿಗೆ ಆಶ್ಚರ್ಯ ಮತ್ತು ಭಯ ಉಂಟಾಗುತ್ತದೆ. ಆದರೆ ಶಿವನ ಮತ್ತೊಂದು ಕಣ್ಣಿನಿಂದ ಕಣ್ಣೀರು ಬರಲು ಆರಂಭವಾಗುತ್ತದೆ. ಇದನ್ನು ಕಂಡ ಕಣ್ಣಪ್ಪನಿಗೆ ಅಪಾರ ನೋವು ಉಂಟಾಗುತ್ತದೆ. ಆದರೆ ಇರುವ ಮತ್ತೊಂದು ಕಣ್ಣನ್ನು ಶಿವನಿಗೆ ಅರ್ಪಿಸಲು ಮುಂದಾಗುತ್ತಾನೆ.

ಆಗ ಕಣ್ಣು ಕಿತ್ತ ನಂತರ ಶಿವನಿಗೆ ಕಣ್ಣು ಇಡುವ ಬಗೆ ಹೇಗೆ ಎಂಬ ಯೋಚನೆ ಬರುತ್ತದೆ. ಆ ಕ್ಷಣದಲ್ಲಿ ಕಣ್ಣಪ್ಪನು ತನ್ನ ಕಾಲನ್ನು ಶಿವಲಿಂಗದ ಮೇಲಿನ ಕಣ್ಣಿರುವ ಜಾಗದಲ್ಲಿ ಇಡುತ್ತಾನೆ. ಆನಂತರ ಕಣ್ಣನ್ನು ಕಿತ್ತು ಶಿವನಿಗೆ ಅರ್ಪಿಸುತ್ತಾನೆ. ಆ ಕ್ಷಣದಲ್ಲಿ ಲಿಂಗದಿಂದ ಮೇಲಿದ್ದು ಬಂದ ಶಿವ ಪಾರ್ವತಿಯರು ಕಣ್ಣಪ್ಪನನ್ನು ಅಪ್ಪಿ ಹಿಡಿದು ಕಣ್ಣುಗಳನ್ನು ಮರಳಿ ನೀಡುತ್ತಾರೆ.ತಾನು ನಂಬಿದ ಶಿವನನ್ನು ಪ್ರತ್ಯಕ್ಷವಾಗಿ ನೋಡಿ ಸಂತೋಷಗೊಳ್ಳುತ್ತಾನೆ. ಆದ್ದರಿಂದ ಇದೇ ದಿನವನ್ನು ನಾವು ಶಿವರಾತ್ರಿಯಾಗಿ ಆಚರಿಸುತ್ತೇವೆ. ಶಿವ ಪಾರ್ವತಿಯರು ವರಗಳನ್ನು ನೀಡಿ ಕಣ್ಣಪ್ಪನನ್ನು ಹಾರೈಸುತ್ತಾರೆ. ಶಿವ ಪಾರ್ವತಿಯರು ಅದೃಶ್ಯರಾದ ನಂತರ ಅರ್ಚಕನ ಕಣ್ಣಪ್ಪನನ್ನು ಅಪ್ಪಿಹಿಡಿದು ಅಭಿನಂದಿಸುತ್ತಾನೆ. ಈ ಕಥೆ ಕೇಳುವುದರಿಂದಲೂ ಓದುವುದರಿಂದಲೂ ಸಕಲ ಸಂಪತ್ತನ್ನು ಶಿವನು ಅನುಗ್ರಹಿಸುತ್ತಾನೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ