Bhagavad Gita: ಭಗವಂತನ ಪರಮಸಂಕಲ್ಪದಿಂದ ಭೂಮಿಯಲ್ಲಿ ಜೀವಿಗಳು ಅಸ್ತಿತ್ವದಲ್ಲಿವೆ; ಗೀತೆಯ ಸಾರಾಂಶ ಹೀಗಿದೆ
Apr 25, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- ಭಗವಂತನ ಪರಮಸಂಕಲ್ಪದಿಂದ ಭೂಮಿಯಲ್ಲಿ ಜೀವಿಗಳು ಅಸ್ತಿತ್ವದಲ್ಲಿವೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 6ನೇ ಶ್ಲೋಕದಲ್ಲಿ ತಿಳಿಯಿರಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 6
ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್ |
ತಥಾ ಸರ್ವಾಣಿ ಭೂತಾನಿ ಮತ್‌ಸ್ಥಾನೀತ್ಯುಪಧಾರಯ ||6||
ಅನುವಾದ: ಎಲ್ಲ ಕಡೆಯೂ ಬೀಸುವ ಬಲಶಾಲಿಯಾದ ಗಾಳಿಯು ಸದಾ ಆಕಾಶದಲ್ಲಿ ಹೇಗೆ ನೆಲೆಸಿರುವುದೋ ಹಾಗೆ ಸೃಷ್ಟಿಯಾದದ್ದೆಲ್ಲವೂ ನನ್ನಲ್ಲಿ ನೆಲೆಸಿರುತ್ತದೆ.
ತಾಜಾ ಫೋಟೊಗಳು
ಭಾವಾರ್ಥ: ಬೃಹತ್ ಐಹಿಕ ಸೃಷ್ಟಿಯು ಭಗವಂತನಲ್ಲಿ ಹೇಗೆ ನೆಲೆಸಿರುತ್ತದೆ ಎನ್ನುವುದನ್ನು ಸಾಮಾನ್ಯ ಮನುಷ್ಯನು ಊಹಿಸಿಕೊಳ್ಳಲಾರ. ಆದರೆ ಇದನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಹಾಯವಾಗಬಹುದಾದಂತಹ ಒಂದು ನಿದರ್ಶನವನ್ನು ಪ್ರಭುವು ಇಲ್ಲಿ ಹೇಳುತ್ತಿದ್ದಾನೆ. ನಾವು ಊಹಿಸಿಕೊಳ್ಳಬಹುದಾದ ಅತ್ಯಂತ ಬೃಹತ್ ಸೃಷ್ಟಿ ಆಕಾಶವೇ ಇರಬಹುದು. ಆ ಆಕಾಶದಲ್ಲಿ ಗಾಳಿ ಅಥವಾ ವಾಯುವು ವಿಶ್ವದ ಅತ್ಯಂತ ಅಭಿವ್ಯಕ್ತಿ. ಗಾಳಿಯ ಚಲನೆಯು ಪ್ರತಿಯೊಂದು ವಸ್ತುವಿನ ಚಲನೆಯ ಮೇಲೆ ಪ್ರಭಾವವನ್ನು ಬೀರುತ್ತದೆ.
ವಾಯವು ಮಹತ್ತರವಾದದ್ದಾದರೂ ಅದು ಆಕಾಶದಲ್ಲಿ ನೆಲೆಸಿದೆ. ವಾಯವು ಆಕಾಶದಾಚೆ ಇಲ್ಲ. ಹಾಗೆಯೇ, ಎಲ್ಲ ಬೆರಗುಗೊಳಿಸುವ ವಿಶ್ವ ಅಭಿವ್ಯಕ್ತಿಗಳೂ ಭಗವಂತನ ಪರಮಸಂಕಲ್ಪದಿಂದ ಅಸ್ತಿತ್ವದಲ್ಲಿವೆ. ಅವೆಲ್ಲವೂ ಪರಮ ಸಂಕಲ್ಪನಕ್ಕೆ ಅಧೀನ. ನಾವು ಸಾಮಾನ್ಯವಾಗಿ ಹೇಳುವಂತೆ, ದೇವೋತ್ತಮ ಪರಮ ಪುರುಷನ ಇಚ್ಛೆಯಿಲ್ಲದೆ ಹುಲ್ಲಿನೆಸಳೂ ಅಲುಗಾಡುವುದಿಲ್ಲ. ಹೀಗೆ ಎಲ್ಲವೂ ಅವನ ಇಚ್ಛೆಯಂತೆ ಚಲಿಸುತ್ತವೆ. ಅವನ ಇಚ್ಛೆಯಿಂದ ಎಲ್ಲವೂ ಸೃಷ್ಟಿಯಾಗುತ್ತವೆ, ಎಲ್ಲದರ ಪಾಲನೆಯಾಗುತ್ತದೆ, ಎಲ್ಲ ನಾಶವಾಗುತ್ತದೆ. ಆದರೂ ಆಕಾಶವೂ ಯಾವಾಗಲೂ ವಾಯುವಿನ ಕ್ರಿಯೆಗಳಿಂದ ದೂರವಿರುವಂತೆ, ಅವನು ಎಲ್ಲದರಿಂದ ದೂರುವಿರುತ್ತಾನೆ.
ಉಪನಿಷತ್ತುಗಳಲ್ಲಿ ಯದ್ ಭೀಷಾ ವಾತಃ ಪವತೇ, ಪರಮ ಪ್ರಭುವಿಗೆ ಹೆದರಿಯೇ ಗಾಳಿ ಬೀಸುತ್ತಿರುವುದು ಎಂದು ಹೇಳಿದೆ. (ತೈತ್ತರೀಯ ಉಪನಿಷತ್ತು, 2.8.1) ಬೃಹದಾರಣ್ಯಕ ಉಪನಿಷತ್ತಿನಲ್ಲಿ (3.8.9) ಹೀದೆ ಹೇಳಿದೆ. (ಏತಸ್ಯ ವಾ ಅಕ್ಷರಸ್ಯ ಪ್ರಶಾಸನೇ ಗಾರ್ಗಿ ಸೂರ್ಯಚನ್ದ್ರಮಸೌ ವಿಧೃತೌ ತಿಷ್ಠತ ಏತಸ್ಯ ವಾ ಅಕ್ಷರಸ್ಯ ಪ್ರಶಾಸನೇ ಗಾರ್ಗಿ ದ್ಯಾವಾಪೃಥಿವ್ಯೌ ವಿಧೃತೌ ತಿಷ್ಠತಃ. ಪರಮ ಆದೇಶದಿಂದ, ದೇವೋತ್ತಮ ಪುರುಷನ ಮೇಲ್ವಿಚಾರಣೆಯಲ್ಲಿ, ಸೂರ್ಯ ಚಂದ್ರ ಮತ್ತಿತರ ಬೃಹತ್ ಗ್ರಹಗಳು ಚಲಿಸುತ್ತವೆ.ಬ್ರಹ್ಮ ಸಂಹಿತೆಯಲ್ಲಿ (5.52) ಸಹ ಹೀಗೆ ಹೇಳಿದೆ -
ಯಚ್ಚಕ್ಷುರ್ ಏಷ ಸವಿತಾ ಸಕಲಗ್ರಹಾಣಾಂ
ರಾಜಾ ಸಮಸ್ತ ಸುರಮೂರ್ತಿರಶೇಷತೇಜಾಃ |
ಯಸ್ಯಾಜ್ಞಯಾ ಭ್ರಮತಿ ಸಂಭೃತ ಕಾಲಚಕ್ರೋ
ಗೋವಿನ್ದಮಾದಿಪುರುಷಂ ತಮ್ ಅಹಂ ಭಜಾಮಿ ||
ಇದು ಸೂರ್ಯನ ಚಲನೆಯ ವರ್ಣನೆ. ಸೂರ್ಯ ಪರಮ ಪ್ರಭುವಿನ ಕಣ್ಣುಗಳಲ್ಲಿ ಒಂದು. ಶಾಖ ಮತ್ತು ಬೆಳಕುಗಳನ್ನು ಪ್ರಸರಿಸುವ ಅಗಾಧ ಶಕ್ತಿ ಅದಕ್ಕಿದೆ ಎಂದು ಹೇಳುತ್ತಾರೆ. ಆದರೂ ಅದು ಗೋವಿಂದನ ಅನುಜ್ಞೆ ಮತ್ತು ಪರಮ ಇಚ್ಛೆಯ ಪ್ರಕಾರ ತನ್ನ ನಿಗದಿತ ಪಥದಲ್ಲಿ ಚಲಿಸುತ್ತದೆ. ಆದುದರಿಂದ, ನಮಗೆ ಬೆರೆಗನ್ನುಂಟುಮಾಡುವ ಮತ್ತು ಮಹತ್ತಾದುದೆಂದು ತೋರುವ ಈ ಐಹಿಕ ಅಭಿವ್ಯಕ್ತಿಯು ದೇವೋತ್ತಮ ಪರಮ ಪುರುಷನ ಸಂಪೂರ್ಣ ಹಿಡಿತದಲ್ಲಿದೆ ಎಂಬುದಕ್ಕೆ ವೈದಿಕ ಸಾಹಿತ್ಯದಲ್ಲಿ ಸಾಕ್ಷ್ಯವನ್ನು ಕಾಣುತ್ತೇವೆ. ಇದನ್ನು ಈ ಅಧ್ಯಾಯದ ಮುಂದಿನ ಶ್ಲೋಕಗಳಲ್ಲಿ ಇನ್ನಷ್ಟು ವಿವರಿಸಿದೆ.