logo
ಕನ್ನಡ ಸುದ್ದಿ  /  ಕ್ರಿಕೆಟ್  /  ಚೆನ್ನೈ ರಾಜರಿಗೆ ಸೋಲುಣಿಸಿದ ಪಂಜಾಬ್ ರಾಜರು; ಸಿಎಸ್​ಕೆಗೆ ಆಘಾತ ನೀಡಿದ ಪಿಬಿಕೆಎಸ್​ಗೆ ಪ್ಲೇಆಫ್ ಆಸೆ ಜೀವಂತ

ಚೆನ್ನೈ ರಾಜರಿಗೆ ಸೋಲುಣಿಸಿದ ಪಂಜಾಬ್ ರಾಜರು; ಸಿಎಸ್​ಕೆಗೆ ಆಘಾತ ನೀಡಿದ ಪಿಬಿಕೆಎಸ್​ಗೆ ಪ್ಲೇಆಫ್ ಆಸೆ ಜೀವಂತ

Prasanna Kumar P N HT Kannada

May 01, 2024 11:47 PM IST

google News

ಚೆನ್ನೈ ರಾಜರಿಗೆ ಸೋಲುಣಿಸಿದ ಪಂಜಾಬ್ ರಾಜರು; ಸಿಎಸ್​ಕೆಗೆ ಆಘಾತ ನೀಡಿದ ಪಿಬಿಕೆಎಸ್​ಗೆ ಪ್ಲೇಆಫ್ ಆಸೆ ಜೀವಂತ

    • PBKS beat CSK : ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿದೆ.
ಚೆನ್ನೈ ರಾಜರಿಗೆ ಸೋಲುಣಿಸಿದ ಪಂಜಾಬ್ ರಾಜರು; ಸಿಎಸ್​ಕೆಗೆ ಆಘಾತ ನೀಡಿದ ಪಿಬಿಕೆಎಸ್​ಗೆ ಪ್ಲೇಆಫ್ ಆಸೆ ಜೀವಂತ
ಚೆನ್ನೈ ರಾಜರಿಗೆ ಸೋಲುಣಿಸಿದ ಪಂಜಾಬ್ ರಾಜರು; ಸಿಎಸ್​ಕೆಗೆ ಆಘಾತ ನೀಡಿದ ಪಿಬಿಕೆಎಸ್​ಗೆ ಪ್ಲೇಆಫ್ ಆಸೆ ಜೀವಂತ (AP)

ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತ ಬಳಿಕ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್​, ತವರು ಮೈದಾನದಲ್ಲಿ ಮತ್ತೊಂದು ಸೋಲಿಗೆ ಶರಣಾಗಿದೆ. ಬಲಿಷ್ಠ ಸಿಎಸ್​ಕೆ ತಂಡವನ್ನೇ 7 ವಿಕೆಟ್​​ಗಳಿಂದ ಮಣಿಸಿದ ಪಂಜಾಬ್ ಕಿಂಗ್ಸ್ ಸತತ ಎರಡನೇ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಸೆಮಿಫೈನಲ್ ಕನಸನ್ನು ಮತ್ತಷ್ಟು ಜೀವಂತವಾಗಿಟ್ಟುಕೊಂಡಿದೆ. ಉಳಿದ 4ರಲ್ಲಿ ಗೆದ್ದರೆ 16 ಅಂಕ ಪಡೆದು ಪಿಬಿಕೆಎಸ್ ಪ್ಲೇಆಫ್ ಪ್ರವೇಶಿಸಲಿದೆ. ಆದರೆ, ಇಲ್ಲಿ ಉಳಿದ ತಂಡಗಳ ಸೋಲು-ಗೆಲುವು ಸಹ ಪ್ರಮುಖ ಪಾತ್ರವಹಿಸಲಿದೆ. ಈ ಸೋಲಿನೊಂದಿಗೆ ಸಿಎಸ್​ಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಎಂ ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್​ಕೆ ಉತ್ತಮ ಆರಂಭ ಪಡೆಯಿತಾದರೂ ಅದನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಲು ವಿಫಲವಾಯಿತು. ಮತ್ತೊಮ್ಮೆ ಜವಾಬ್ದಾರಿಯುತ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್ 62 ರನ್ ಸಿಡಿಸಿ ಮಿಂಚಿದರು.

ನಿಧಾನಗತಿಯ ಪಿಚ್​​​ನಲ್ಲಿ ಯಲ್ಲೋ ಆರ್ಮಿ 20 ಓವರ್​​ಗೆ 7 ವಿಕೆಟ್ ನಷ್ಟಕ್ಕೆ 162 ರನ್​​ಗಳ ಸಾಧಾರಣ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ಬ್ಯಾಟರ್​ಗಳು ಅದ್ಭುತ ಪ್ರದರ್ಶನ ನೀಡಿದರು. ಹೀಗಾಗಿ 17.5 ಓವರ್​​ಗಳಲ್ಲೇ ಗೆಲುವಿನ ನಗೆ ಬೀರಿತು. ನಿಧಾನಗತಿಯ ಪಿಚ್​​ನಲ್ಲಿ ಪಂಜಾಬ್ ಅದ್ಭುತ ಪ್ರದರ್ಶನ ತೋರಿತು.

ಪಂಜಾಬ್ ಬ್ಯಾಟಿಂಗ್

163 ರನ್​ಗಳ ಗುರಿ ಹಿಂಬಾಲಿಸಿದ ಪಂಜಾಬ್ ಕಿಂಗ್ಸ್, ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕಳೆದ ಪಂದ್ಯದಲ್ಲಿ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಪ್ರಭುಸಿಮ್ರಾನ್ ಸಿಂಗ್ 13 ರನ್​ಗೆ ಸುಸ್ತಾದರು. ತದನಂತರ ಜಾನಿ ಬೈರ್​ಸ್ಟೋ ಮತ್ತು ರಿಲಿ ರೋಸೋ ತಂಡಕ್ಕೆ ಚೇತರಿಕೆ ನೀಡಿದರು. ಅಲ್ಲದೆ, 64 ರನ್​ಗಳ ಪಾಲುದಾರಿಕೆ ನೀಡುವ ಮೂಲಕ ಸಿಎಸ್​ಕೆ ಗೆಲುವಿಗೆ ಅಡ್ಡಿಯಾದರು.

ಜಾನಿ 30 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ ಸಹಿತ 46 ರನ್ ಗಳಿಸಿದರು. ರೋಸೋ 23 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 43 ರನ್ ಬಾರಿಸಿದರು. ಕೊನೆಯಲ್ಲಿ ಶಶಾಂಕ್ ಸಿಂಗ್ ಅಜೇಯ 25, ಸ್ಯಾಮ್ ಕರನ್ 26 ರನ್ ಗಳಿಸಿ ಔಟಾಗದೆ ಉಳಿದರು. ನಾಲ್ಕನೇ ವಿಕೆಟ್​ಗೆ ಅಜೇಯ 50 ರನ್​ಗಳ ಪಾಲುದಾರಿಕೆ ನೀಡಿದರು.

ಚೆನ್ನೈ ಸೂಪರ್ ಕಿಂಗ್ಸ್​ ಬ್ಯಾಟಿಂಗ್

ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್​ಕೆ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 64 ರನ್​ಗಳು ಹರಿದುಬಂದವು. ಆದರೆ ಅಜಿಂಕ್ಯ ರಹಾನೆ ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಲು ವಿಫಲವಾದರು. ನಾಯಕ ಋತುರಾಜ್ ಗಾಯಕ್ವಾಡ್ ಕೂಡ ಬಿರುಸಿನ ಆಟಕ್ಕೆ ಕೈಹಾಕಲಿಲ್ಲ. ಸ್ಲೋ ಪಿಚ್​​​ನಲ್ಲಿ ಪಿಬಿಕೆಎಸ್ ಬೌಲರ್ಸ್ ಮಾರಕ ದಾಳಿ ನಡುವೆಯೂ ಆಕರ್ಷಕ ಅರ್ಧಶತಕ ಬಾರಿಸಿದರು.

ಆದರೆ ಪವರ್​​​ಪ್ಲೇ ಬಳಿಕ ರನ್ ಗಳಿಸಲು ಪರದಾಡಿದ ಋತು, 48 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ ಸಹಿತ 62 ರನ್ ಕಲೆ ಹಾಕಿದರು. ರಹಾನೆ ಬಳಿಕ ಕಣಕ್ಕಿಳಿದ ಶಿವಂ ದುಬೆ ಡಕೌಟ್ ಆದರೆ, ರವೀಂದ್ರ ಜಡೇಜಾ 2 ರನ್​ಗೆ ಆಟ ಮುಗಿಸಿದರು. ಸಮೀರ್​ ರಿಜ್ವಿ 21, ಮೊಯಿನ್ ಅಲಿ 15, ಎಂಎಸ್ ಧೋನಿ 14 ರನ್​ಗಳ ಕಾಣಿಕೆ ನೀಡಿದರು. ಹರ್ಪ್ರೀತ್ ಬ್ರಾರ್​ ಮತ್ತು ರಾಹುಲ್ ಚಹರ್​ ತಲಾ 2 ವಿಕೆಟ್ ಪಡೆದು ಮಿಂಚಿದರು.

ಪಂದ್ಯದ ನಂತರ ಅಂಕಪಟ್ಟಿಯಲ್ಲಿ ಉಭಯ ತಂಡಗಳ ಸ್ಥಾನ ಹೇಗಿದೆ

ಚೆನ್ನೈ ಸೂಪರ್​ ಕಿಂಗ್ಸ್ ಸೋತರೂ ನಾಲ್ಕನೇ ಸ್ಥಾನದಲ್ಲೇ ಉಳಿದಿದೆ. ಆಡಿರುವ 10 ಪಂದ್ಯಗಳಲ್ಲಿ 5 ಗೆಲುವು, 5 ಸೋಲು ಕಂಡಿದೆ. 10 ಪಡೆದು ನಾಲ್ಕರಲ್ಲೇ ಉಳಿದಿದೆ. ಇನ್ನು ಗೆದ್ದ ಪಂಜಾಬ್ ಕಿಂಗ್ಸ್, 8ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. ಆಡಿರುವ 10 ಪಂದ್ಯಗಳಲ್ಲಿ 6 ಸೋಲು, 4 ಗೆಲುವು ಸಾಧಿಸಿದೆ. 8 ಅಂಕ ಪಡೆದಿದೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ