logo
ಕನ್ನಡ ಸುದ್ದಿ  /  ಕ್ರಿಕೆಟ್  /  Wpl2024: ಸತತ ನಾಲ್ಕು ಸೋಲಿನ ಬಳಿಕ ಕೊನೆಗೂ ಗೆಲುವು ಕಂಡ ಗುಜರಾತ್‌ ಜೈಂಟ್ಸ್; ಆರ್‌ಸಿಬಿಗೆ 19 ರನ್‌ ಸೋಲು

WPL2024: ಸತತ ನಾಲ್ಕು ಸೋಲಿನ ಬಳಿಕ ಕೊನೆಗೂ ಗೆಲುವು ಕಂಡ ಗುಜರಾತ್‌ ಜೈಂಟ್ಸ್; ಆರ್‌ಸಿಬಿಗೆ 19 ರನ್‌ ಸೋಲು

Jayaraj HT Kannada

Mar 06, 2024 10:54 PM IST

ಸತತ ನಾಲ್ಕು ಸೋಲಿನ ಬಳಿಕ ಕೊನೆಗೂ ಗೆಲುವು ಕಂಡ ಗುಜರಾತ್‌ ಜೈಂಟ್ಸ್

    • Gujarat Giants vs Royal Challengers Bangalore Women: ವಿಮೆನ್ಸ್‌ ಪ್ರೀಮಿಯರ್‌ ಲೀಗ್ ಎರಡನೇ ಆವೃತ್ತಿಯಲ್ಲಿ‌ ಗುಜರಾತ್‌ ಜೈಂಟ್ಸ್‌ ಮೊದಲ ಗೆಲುವು ಸಾಧಿಸಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಬೆತ್‌ ಮೂನಿ ಪಡೆ ಗೆದ್ದು ಬೀಗಿದೆ.
ಸತತ ನಾಲ್ಕು ಸೋಲಿನ ಬಳಿಕ ಕೊನೆಗೂ ಗೆಲುವು ಕಂಡ ಗುಜರಾತ್‌ ಜೈಂಟ್ಸ್
ಸತತ ನಾಲ್ಕು ಸೋಲಿನ ಬಳಿಕ ಕೊನೆಗೂ ಗೆಲುವು ಕಂಡ ಗುಜರಾತ್‌ ಜೈಂಟ್ಸ್ (PTI)

ವಿಮೆನ್ಸ್ ಪ್ರೀಮಿಯರ್ ಲೀಗ್ (WPL 2024)ನ ಎರಡನೇ ಆವೃತ್ತಿಯಲ್ಲಿ ಬೆತ್‌ ಮೂನಿ ನೇತೃತ್ವದ ಗುಜರಾತ್‌ ಜೈಂಟ್ಸ್‌ ತಂಡವು ಮೊಟ್ಟ ಮೊದಲ ಜಯ ಸಾಧಿಸಿದೆ. ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ಗುಜರಾತ್, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Gujarat Giants vs Royal Challengers Bangalore Women) ವಿರುದ್ಧ ಗೆದ್ದು ಬೀಗಿದೆ. ಆ ಮೂಲಕ ಡಬ್ಲ್ಯೂಪಿಎಲ್‌ 2024ರಲ್ಲಿ ಕೊನೆಗೂ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಆರ್‌ಸಿಬಿ, ದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 19 ಅಂತರದಿಂದ ಸೋಲು ಕಂಡಿದೆ.

ಟ್ರೆಂಡಿಂಗ್​ ಸುದ್ದಿ

ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

ಬಹುನಿರೀಕ್ಷಿತ ಟಿ20 ವಿಶ್ವಕಪ್​ಗೆ ಪಾಕಿಸ್ತಾನ ಬಿಟ್ಟು 19 ತಂಡಗಳ ಪಟ್ಟಿ ಪ್ರಕಟ; ಇಲ್ಲಿದೆ ಆಟಗಾರರ ಸಂಪೂರ್ಣ ವಿವರ

Babar Azam: ಜಸ್ಪ್ರೀತ್ ಬುಮ್ರಾ ಅಲ್ವಂತೆ; ನನಗೆ ಈ ಬೌಲರ್ ಎಂದರೆ ಭಯವೆಂದ ಪಾಕಿಸ್ತಾನದ ನಾಯಕ ಬಾಬರ್ ಅಜಮ್

ವಿಶ್ವದ ಅತ್ಯುತ್ತಮ ತಂಡ; ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಸರಣಿ ಗೆದ್ದ ನಂತರ ತಮ್ಮನ್ನು ತಾವೇ ಹೊಗಳಿಕೊಂಡ ಪಿಸಿಬಿ ಅಧ್ಯಕ್ಷ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌, ನಾಯಕಿ ಬೆತ್‌ ಮೂನಿ ಹಾಗೂ ಲಾರಾ ವೊಲ್ವಾರ್ಡ್ಟ್ ಆಕರ್ಷಕ ಶತಕದ (140) ಜೊತೆಯಾಟದ ನೆರವಿನಿಂದ 5 ವಿಕೆಟ್‌ ಕಳೆದುಕೊಂಡು 199 ರನ್‌ ಕಲೆ ಹಾಕಿತು. ಬೃಹತ್‌ ಗುರಿ ಬೆನ್ನಟ್ಟಿದ ಆರ್‌ಸಿಬಿ, ಜಾರ್ಜಿಯಾ ವೇರ್‌ಹ್ಯಾಮ್‌ (48) ವೀರೋಚಿತ ಹೋರಾಟದ ಹೊರತಾಗಿಯೂ ಗುರಿ ತಲುಪಲು ಸಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡವು 180 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಆ ಮೂಲಕ ಸ್ಮೃತಿ ಮಂಧಾನ ಪಡೆಯು ಮೂರನೇ ಸೋಲು ಕಂಡಿತು.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾದವು. ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿ ಬೆತ್‌ ಮೂನಿ ಪಡೆ, ನಿರೀಕ್ಷೆಯಂತೆಯೇ ಅಬ್ಬರದಾಟವಾಡಿತು. ಆರಂಭಿಕರಾದ ಬೆತ್‌ ಮೂನಿ ಹಾಗೂ ವೊಲ್ವಾರ್ಡ್ಟ್ ಮೊದಲ 13 ಓವರ್‌ಗಳ ಕಾಲ ಇಬ್ಬರೇ ಬ್ಯಾಟಿಂಗ್‌ ನಡೆಸಿದರು. ಮೊದಲ ವಿಕೆಟ್‌ಗೆ ಬರೋಬ್ಬರಿ 140 ರನ್‌ ಕಲೆ ಹಾಕಿದರು. ಇದು ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ರಕ್ಷಣಾತ್ಮಕ ಆಟವಾಡಿದ ವೊಲ್ವಾರ್ಡ್ಟ್ 76 ರನ್‌ ಗಳಿಸಿ ರನೌಟ್‌ ಆದರು. ಆದರೆ ನಾಯಕಿ ಮೂನಿ ಅಜೇಯ 85 ರನ್‌ ಸಿಡಿಸಿದರು. ಇವರಿಬ್ಬರ ಆಟವೇ ತಂಡದಲ್ಲಿ ನಿರ್ಣಾಯಕವಾಯ್ತು. ಲಿಚ್‌ಫೀಲ್ಡ್‌ 18 ರನ್‌ ಗಳಿಸಿ ಔಟಾದರು. ಡೆತ್‌ ಓವರ್‌ಗಳಲ್ಲಿ ತಂಡವು ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡ ಕಾರಣ ರನ್‌ ರೇಟ್‌ ತುಸು ಕಡಿಮೆಯಾಯ್ತು.

ಇದನ್ನೂ ಓದಿ | ವನಿತೆಯರ ಕ್ರಿಕೆಟ್‌ನಲ್ಲೇ ಅತಿ ವೇಗದ ಎಸೆತ; ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವೇಗಿ ಶಬ್ನಿಮ್ ಇಸ್ಮಾಯಿಲ್ ದಾಖಲೆ

200 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಆರ್‌ಸಿಬಿ, ಆರಂಭದಲ್ಲೇ ನಾಯಕಿಯನ್ನು ಕಳೆದುಕೊಂಡಿತು. ಸ್ಮೃತಿ ಮಧಾನ 24 ರನ್‌ ಗಳಿಸಿ ಔಟಾದರೆ, ಮೇಘನಾ 4 ರನ್‌ ಗಳಿಸಿ ರನೌಟ್‌ ಆದರು. ಸ್ಫೋಟಕ ಆಟಕ್ಕೆ ಕೈ ಹಾಕಿದ ಸೋಫಿ ಡಿವೈನ್‌ 23 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಪೆರ್ರಿ ಆಟ 24 ರನ್‌ಗಳಿಗೆ ಅಂತ್ಯವಾಯ್ತು. ಅಬ್ಬರಿಸಿದ ರಿಚಾ ಘೋಷ್‌ 30 ರನ್‌ ಗಳಿಸಿ ಔಟಾದರು.

ಡೆತ್‌ ಓವರ್‌ಗಳಲ್ಲಿ ತಂಡದ ಗೆಲುವಿಗೆ ಶತಾಯ ಗತಾಯ ಪ್ರಯತ್ನ ಹಾಕಿದ ಜಾರ್ಜಿಯಾ ವೇರ್‌ಹ್ಯಾಮ್‌ 22 ಎಸೆತಗಳಲ್ಲಿ 48 ರನ್‌ ಸಿಡಿಸಿದರು. ಆದರೆ, ಇವರು ಕೂಡಾ ರನೌಟ್‌ ಆದರು. ಪಂದ್ಯದಲ್ಲಿ ಒಟ್ಟು 7 ಆಟಗಾರ್ತಿಯರು ರನೌಟ್‌ ಆಗಿದ್ದು ವಿಶೇಷ. ಕೊನೆಗೆ ಬೃಹತ್‌ ಗುರಿ ತಲುಪಲು ತಂಡದಿಂದ ಸಾಧ್ಯವಾಗಲಿಲ್ಲ. ಹೀಗಾಗಿ 19 ರನ್‌ಗಳಿಂದ ಸೋತಿತು. ಪಂದ್ಯದ ಬಳಿಕ ಆರ್‌ಸಿಬಿಯು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಆರ್‌ಸಿಬಿ ತಂಡ

ಸಬ್ಬಿನೇನಿ ಮೇಘನಾ, ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ ಕೀಪರ್), ಸೋಫಿ ಡಿವೈನ್, ಸೋಫಿ ಮೊಲಿನ್, ಜಾರ್ಜಿಯಾ ವೇರ್‌ಹ್ಯಾಮ್, ಏಕ್ತಾ ಬಿಶ್ತ್, ಸಿಮ್ರಾನ್ ಬಹದ್ದೂರ್, ಆಶಾ ಸೋಭಾನಾ, ರೇಣುಕಾ ಠಾಕೂರ್ ಸಿಂಗ್.

ಗುಜರಾತ್ ಜೈಂಟ್ಸ್ ತಂಡ

ಬೆತ್ ಮೂನಿ‌ (ನಾಯಕಿ ಮತ್ತು ವಿಕೆಟ್‌ ಕೀಪರ್), ಲಾರಾ ವೊಲ್ವಾರ್ಡ್ಟ್, ಫೋಬೆ ಲಿಚ್‌ಫೀಲ್ಡ್, ವೇದಾ ಕೃಷ್ಣಮೂರ್ತಿ, ದಯಾಲನ್ ಹೇಮಲತಾ, ಆಶ್ಲೀಗ್ ಗಾರ್ಡ್ನರ್, ಕ್ಯಾಥರಿನ್ ಬ್ರೈಸ್, ತನುಜಾ ಕನ್ವರ್, ಮೇಘನಾ ಸಿಂಗ್, ಮನ್ನತ್ ಕಶ್ಯಪ್, ಶಬ್ನಮ್ ಎಂಡಿ ಶಕಿಲ್.

ಮಹಿಳಾ ಪ್ರೀಮಿಯರ್ ಲೀಗ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ