logo
ಕನ್ನಡ ಸುದ್ದಿ  /  ಕ್ರಿಕೆಟ್  /  ಖುಷಿ-ಅಚ್ಚರಿ-ನಿರಾಳ, 16 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ; ಚೊಚ್ಚಲ ಕಿರೀಟ ತೊಟ್ಟ ಆರ್​​ಸಿಬಿ, ‘ಈ ಸಲ ಕಪ್ ನಮ್ದೇ’

ಖುಷಿ-ಅಚ್ಚರಿ-ನಿರಾಳ, 16 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ; ಚೊಚ್ಚಲ ಕಿರೀಟ ತೊಟ್ಟ ಆರ್​​ಸಿಬಿ, ‘ಈ ಸಲ ಕಪ್ ನಮ್ದೇ’

Prasanna Kumar P N HT Kannada

Mar 17, 2024 10:40 PM IST

ವುಮೆನ್ಸ್ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಚಾಂಪಿಯನ್

    • DC vs RCB WPL Final : ಎರಡನೇ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್​ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಮತ್ತು ಸೋಫಿ ಮೊಲಿನೆಕ್ಸ್ ಅವರ ಸ್ಪಿನ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ.
ವುಮೆನ್ಸ್ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಚಾಂಪಿಯನ್
ವುಮೆನ್ಸ್ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಚಾಂಪಿಯನ್

ಹೌದು, ನಿಜವಾಗಲೂ ಈ ಸಲ ಕಪ್​ ನಮ್ದೇ. ಖುಷಿ, ಅಚ್ಚರಿಯ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕೊನೆಗೂ ನಿರಾಳರಾಗಿದ್ದಾರೆ. 16 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ವಿಶ್ವ ಕ್ರಿಕೆಟ್​ನಲ್ಲಿ ನಿಷ್ಠಾವಂತ ಅಭಿಮಾನಿಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯುತ್ತಿದೆ. ಕಪ್ ಯಾವಾಗ, ಕಪ್ ಯಾವಾಗ ಎಂದು ಕೇಳುತ್ತಿದ್ದವರ ಪ್ರಶ್ನೆಗೆ ಅಭಿಮಾನಿಗಳು ತಲೆ ಎತ್ತಿ ಉತ್ತರಿಸುವ ದಿನ ಬಂದೇ ಬಿಟ್ಟಿದೆ.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಐಪಿಎಲ್​ನಲ್ಲಿ ತಂಡ ಹುಟ್ಟಿ 16 ವರ್ಷಗಳಾದರೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮಹಿಳಾ ಪ್ರೀಮಿಯರ್ ಲೀಗ್​​ 2ನೇ ಆವೃತ್ತಿಯಲ್ಲೇ ಚೊಚ್ಚಲ ಕಿರೀಟಕ್ಕೆ ಮುತ್ತಿಕ್ಕಿ ಹೊಸ ಇತಿಹಾಸ ನಿರ್ಮಿಸಿದೆ. ಕೋಟ್ಯಂತರ ಅಭಿಮಾನಿಗಳ ಕನಸನ್ನು ಸಾಕಾರಗೊಳಿಸಿದೆ. ಭಾರತವಲ್ಲ, ವಿಶ್ವದಲ್ಲೇ ಆರ್​​ಸಿಬಿ ಗೆಲುವನ್ನು ಫ್ಯಾನ್ಸ್​ ಸಂಭ್ರಮಿಸುತ್ತಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್​-2024 ಫೈನಲ್ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ (12/4) ಮತ್ತು ಸೋಫಿ ಮೊಲಿನೆಕ್ಸ್ (20/3) ಅವರ ಖಡಕ್ ಸ್ಪಿನ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಧೂಳೀಪಟಗೊಳಿಸಿದ ಆರ್​ಸಿಬಿ, ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇತಿಹಾಸ ಪುಟಗಳಲ್ಲಿ ಮಾರ್ಚ್ 17 ಅನ್ನು ನೆನಪಿಡುವಂತೆ ಮಾಡಿದೆ.

ಆರ್​​ಸಿಬಿ ರೋಚಕ 8 ವಿಕೆಟ್​ಗಳ ಗೆಲುವು ಸಾಧಿಸಿದರೆ, ಡಬ್ಲ್ಯುಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪ್ರಶಸ್ತಿ ಕನಸು ಮತ್ತೆ ಭಗ್ನಗೊಂಡಿತು. ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು. 2023ರ ಆವೃತ್ತಿಯಲ್ಲೂ ಡೆಲ್ಲಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮೊದಲ ಆವೃತ್ತಿಯಲ್ಲಿ ಲೀಗ್​ನಿಂದ ಹೊರ ಬಿದ್ದಿದ್ದ ಆರ್​ಸಿಬಿ ಈ ಬಾರಿ ಟ್ರೋಫಿ ಗೆದ್ದು ಬೀಗಿದೆ.

ಅಂತಿಮ ಹಣಾಹಣಿಯಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ, ನಿರೀಕ್ಷೆಯತೆಯೇ ಅಬ್ಬರದ ಆರಂಭ ಪಡೆಯಿತು. ಶಫಾಲಿ ವರ್ಮಾ ಎಂದಿನಂತೆ ಬಿರುಸಿನ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಕಲೆ ಹಾಕುವ ಭರವಸೆ ಹುಟ್ಟು ಹಾಕಿದರು. ಮೊದಲ ವಿಕೆಟ್​ಗೆ 7 ಓವರ್​​ಗಳಲ್ಲಿ ಭರ್ಜರಿ 64 ರನ್​​ಗಳು ಹರಿದು ಬಂದವು. ಶಫಾಲಿ 27 ಬಾಲ್​ಗಳಲ್ಲಿ 44 ರನ್ ಬಾರಿಸಿ ಅರ್ಧಶತಕದ ಅಂಚಿನಲ್ಲಿದ್ದರು.

ಓವರ್​​ನಲ್ಲಿ 3 ವಿಕೆಟ್ ಪಡೆದ ಸೋಫಿ ಮೊಲಿನೆಕ್ಸ್

ಆದರೆ, ಉತ್ತಮ ಆರಂಭ ಪಡೆದ ಡೆಲ್ಲಿಗೆ ಸೋಫಿ ಮೊಲಿನೆಕ್ಸ್ ತ್ರಿಬಲ್ ಆಘಾತ ನೀಡಿದರು. ಸತತ ಬೌಂಡರಿ, ಸಿಕ್ಸರ್​​ಗಳ ಸುರಿಮಳೆಗೈಯುತ್ತಿದ್ದ ಶಫಾಲಿ 8ನೇ ಓವರ್​​ನ ಮೊದಲ ಎಸೆತದಲ್ಲೇ ಔಟಾದರು. ಆದರೆ ಅಲ್ಲಿಂದ ಡೆಲ್ಲಿ ಪತನ ಆರಂಭವಾಯಿತು. ಮೊಲಿನೆಕ್ಸ್​ನ ಅದೇ ಓವರ್​ನ 3ನೇ ಮತ್ತು 4ನೇ ಎಸೆತದಲ್ಲಿ ಜೆಮಿಮಾ ರೋಡ್ರಿಗಸ್, ಅಲೀಸ್ ಕ್ಯಾಪ್ಸಿ ಅವರು ಕ್ಲೀನ್​ ಬೋಲ್ಡ್​ ಆದರು. ಬಳಿಕ ಸ್ಕೋರ್​ ವೇಗ ಕೂಡ ಇಳಿಮುಖಗೊಂಡಿತು. ಈ ಓವರ್​​ ಆರ್​ಸಿಬಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು.

ಶ್ರೇಯಾಂಕಾ ಪಾಟೀಲ್ ಮ್ಯಾಚ್​ ಟರ್ನಿಂಗ್ ಬೌಲಿಂಗ್

ಮೂರು ವಿಕೆಟ್ ಕಳೆದುಕೊಂಡು ಆಘಾತದಲ್ಲಿದ್ದ ಡೆಲ್ಲಿಗೆ ದಾಳಿಗಿಳಿದ ಶ್ರೇಯಾಂಕಾ ಪಾಟೀಲ್, ಮತ್ತೆ ಆಘಾತ ನೀಡಿದರು. ಮೊಲಿನೆಕ್ಸ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದ ಕನ್ನಡತಿ, ತಂಡದ ದಿಢೀರ್ ಕುಸಿತಕ್ಕೆ ಕಾರಣರಾದರು. ಮೆಗ್​ ಲ್ಯಾನಿಂಗ್ (23), ಮಿನ್ನು ಮಣಿ (5), ಅರುಂಧತಿ ರೆಡ್ಡಿ (10), ತಾನಿಯಾ ಭಾಟಿಯಾ ಅವರನ್ನು (0) ಔಟ್ ಮಾಡಿದರು. ಆಶಾ ಶೋಭನಾ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಸರ್ವಪತನ ಕಂಡಿತು. ಆರ್​ಸಿಬಿಗೆ ಸಣ್ಣ ಗುರಿಯನ್ನು ಡೆಲ್ಲಿ ನೀಡಿತು.

ಈ ಗುರಿ ಬೆನ್ನಟ್ಟಿದ ಆರ್​ಸಿಬಿ, ನಿಧಾನಗತಿಯ ಆರಂಭ ಪಡೆಯಿತು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಸೋಫಿ ಡಿವೈನ್ ಮತ್ತು​​ ಸ್ಮೃತಿ ಮಂಧಾನ ಅವರು ಪವರ್​​ಪ್ಲೇನಲ್ಲಿ ಕೇವಲ 25 ರನ್​ ಕಲೆ ಹಾಕಿದರು. ಆದರೆ 7ನೇ ಓವರ್​​ನಲ್ಲಿ ಡಿವೈನ್​ ಸಿಡಿದೆದ್ದರು 3 ಬೌಂಡರಿ, 1 ಸಿಕ್ಸರ್​ ಬಾರಿಸಿ ಆರ್​ಸಿಬಿಗೆ ಮುನ್ನಡೆ ತಂದುಕೊಟ್ಟರು. ಆದರೆ 9ನೇ ಓವರ್​​ನಲ್ಲಿ ಸೋಫಿ ಅವರು ಶಿಖಾ ಬೌಲಿಂಗ್​ನಲ್ಲಿ ಔಟಾದರು. 32 ರನ್ ಗಳಿಸಿದರು.

ಬಳಿಕ ಸ್ಮೃತಿ ಮಂಧಾನ ಜೊತೆ ಜೊತೆಯಾಟ ಆರಂಭಿಸಿದ ಎಲ್ಲಿಸ್ ಪೆರ್ರಿ, ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರು. ಆತುರಕ್ಕೆ ಬೀಳದೆ ಮತ್ತೆ ನಿಧಾನಗತಿಯ ಆಟವಾಡಿದರು. ಎಲ್ಲೂ ಒತ್ತಡಕ್ಕೆ ಒಳಗಾಗದೆ ಎದುರಾಳಿ ತಂಡದ ಆತ್ಮವಿಶ್ವಾಸವನ್ನು ಕಸಿದರು. ಆದರೆ ಸ್ಮೃತಿ ಮಂಧಾನ 39 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಪೆರ್ರಿ ಕೊನೆಯವರೆಗೂ ಕ್ರೀಸ್​ನಲ್ಲಿ ಉಳಿದು ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಜೇಯ 35 ರನ್ ಗಳಿಸಿದರೆ, ರಿಚಾ ಘೋಷ್ ಅಜೇಯ 17 ರನ್ ಗಳಿಸಿದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ