logo
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ, ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್‌

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನ, ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್‌

Umesh Kumar S HT Kannada

Apr 26, 2024 09:33 AM IST

google News

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್ ಮಾಡಿದರು.

  • ಲೋಕಸಭಾ ಚುನಾವಣೆಯ ಎರಡನೇ ಹಂತ ದೇಶದಲ್ಲಿ ನಡೆಯುತ್ತಿದ್ದು, ಕರ್ನಾಟಕದಲ್ಲಿ ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಇಂದು ಮತದಾನ ಶುರುವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್‌ ಮಾಡಿದ್ದಾರೆ. ಯಾರು ಏನು ಹಾರೈಸಿದ್ದಾರೆ. ಇಲ್ಲಿದೆ ವಿವರ.

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್ ಮಾಡಿದರು.
ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಶುಭ ಹಾರೈಸಿ ಟ್ವೀಟ್ ಮಾಡಿದರು.

ಬೆಂಗಳೂರು/ನವದೆಹಲಿ: ಭಾರತದಲ್ಲಿ ಇಂದು (ಏಪ್ರಿಲ್ 26) ಎರಡನೇ ಹಂತದ ಮತದಾನ ಶುರುವಾಗಿದೆ. 13 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 89 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಗತಿಯಲ್ಲಿದೆ. ಈ ಪೈಕಿ ಕರ್ನಾಟಕದಲ್ಲಿ ಮೊದಲನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದ್ದು, ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಯನ್ನು ಮತದಾರರು ಮಾಡುತ್ತಿದ್ದಾರೆ.

ಈ ನಡುವೆ, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಇತರರು ಮತದಾನ ಮಾಡುವಂತೆ ಕೋರಿ ಮತದಾರರಿಗೆ ಶುಭ ಹಾರೈಸಿದ್ದಾರೆ. ಈ ಪೈಕಿ ಆಯ್ದ 5 ಶುಭ ಹಾರೈಕೆಗಳು ಹೀಗಿವೆ ನೋಡಿ.

ನಿಮ್ಮ ಮತ ನಿಮ್ಮ ಧ್ವನಿ - ಪ್ರಧಾನಿ ಮೋದಿ

ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಹೆಚ್ಚಿನ ಪ್ರಮಾಣದ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ ಕೋರುತ್ತೇನೆ. ನಿಮ್ಮ ಮತ ನಿಮ್ಮ ಧ್ವನಿ! ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಚುನಾವಣೆ- ರಾಹುಲ್ ಗಾಂಧಿ

ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಚುನಾವಣೆ. ಒಂದೆಡೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಜಾಪ್ರಭುತ್ವ ನಾಶ ಮಾಡಲು, ಸಂವಿಧಾನವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿವೆ. ಮತ್ತೊಂದೆಡೆ, ಕಾಂಗ್ರೆಸ್ ಮತ್ತು INDIA ಮೈತ್ರಿಕೂಟ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟದಲ್ಲಿದೆ. ಭಾರತ ಐಕ್ಯತಾ ಯಾತ್ರೆ ವೇಳೆ ನಿಮ್ಮ ಜೊತೆ ಮಾತನಾಡಿ, ನಿಮ್ಮ ಹೃದಯದಲ್ಲಿ ಏನಿದೆ ಎನ್ನುವುದನ್ನು ಅರಿತು ನಾವು ಕ್ರಾಂತಿಕಾರಕ ಪ್ರಣಾಳಿಕೆ ರಚಿಸಿದ್ದೇವೆ. ಇದು ನಿಮ್ಮ ಪ್ರಣಾಳಿಕೆ, ಇದು ನಿಮ್ಮ ಧ್ವನಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮನೆಯಲ್ಲಿರಬೇಡಿ, ಮತಗಟ್ಟೆ ಬನ್ನಿ ಮತ ಹಾಕಿ- ಸುಧಾ ಮೂರ್ತಿ

ರಾಜ್ಯಸಭಾ ಸದಸ್ಯೆ ಲೇಖಕಿ ಸುಧಾ ಮೂರ್ತಿ ಬೆಂಗಳೂರಿನಲ್ಲಿ ಇಂದು ಲೋಕಸಭಾ ಚುನಾವಣೆಗೆ ಮತದಾನ ಮಾಡಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, “ಮನೆಯಲ್ಲಿ ಕುಳಿತುಕೊಳ್ಳಬೇಡಿ, ಹೊರಗೆ ಬಂದು ಮತ ಚಲಾಯಿಸಿ, ನಿಮ್ಮ ನಾಯಕನನ್ನು ಆಯ್ಕೆ ಮಾಡಿ. ಗ್ರಾಮೀಣ ಪ್ರದೇಶದವರಿಗೆ ಹೋಲಿಸಿದರೆ ನಗರ ಪ್ರದೇಶದ ಜನರು ಕಡಿಮೆ ಮತ ಚಲಾಯಿಸುತ್ತಾರೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಯುವಕರು ಹೊರಗೆ ಬಂದು ಮತ ಚಲಾಯಿಸುವಂತೆ ವಿನಂತಿಸುತ್ತೇನೆ.” ಎಂದು ಹೇಳಿದರು.

ಸಾಮಾನ್ಯ ದಿನವಲ್ಲ, ಮತದಾನದ ದಿನ- ಬೆಂಗಳೂರು ನಗರ ಪೊಲೀಸ್

“ಬೆಂಗಳೂರಿಗರೇ..! ಇಂದು ಸಾಮಾನ್ಯವಾದ ದಿನವಲ್ಲ. ಮತದಾನದ ದಿನ! ನಿಮ್ಮ ಆಯ್ಕೆ ಮೂಲಕ ನಿಮ್ಮ ಶಕ್ತಿ ಪ್ರದರ್ಶಿಸಿ, ನೀವು ನಂಬಿರುವ ಭವಿಷ್ಯವನ್ನು ರೂಪಿಸಿಕೊಳ್ಳಿ. ಮನೆಯಿಂದ ಹೊರಬಂದು ಮತ ಚಲಾಯಿಸಿ!” ಎಂದು ಬೆಂಗಳೂರು ನಗರ ಪೊಲೀಸ್ ಟ್ವೀಟ್ ಮಾಡಿದೆ.

ಮತಗಟ್ಟೆಗೆ ಬನ್ನಿ ಮತಚಲಾಯಿಸಿ- ಮಲ್ಲಿಕಾರ್ಜುನ ಖರ್ಗೆ

“ನಾವು, ಭಾರತದ ಜನರು' - ಭಾರತದ ಸಂವಿಧಾನದ ಈ ಆತ್ಮ, ನೀವು ಮತದಾನದ ಗುಂಡಿಯನ್ನು ಒತ್ತುವ ಮೊದಲು ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಪ್ರತಿಧ್ವನಿಸಬೇಕು. ಇದು ಸಾಮಾನ್ಯ ಚುನಾವಣೆಯಲ್ಲ ಎಂಬುದನ್ನು ಮರೆಯಬೇಡಿ.ಇದು ಸರ್ವಾಧಿಕಾರದ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಚುನಾವಣೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ