ಲೋಕಸಭಾ ಚುನಾವಣೆ 2024; ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾನ ಜಾಗೃತಿಯ ಮೂಲಕ ಗಮನ ಸೆಳೆದ ಸನ್ನಿಧಿ ಕಶೆಕೋಡಿ
May 24, 2024 07:30 AM IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾನ ಜಾಗೃತಿಯ ಮೂಲಕ ಗಮನ ಸೆಳೆದ ಸನ್ನಿಧಿ ಕಶೆಕೋಡಿ ಮತ್ತು ಸ್ನೇಹಿತರು
ಲೋಕಸಭಾ ಚುನಾವಣೆ 2024; ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾನ ಜಾಗೃತಿಯ ಮೂಲಕ ದಕ್ಷಿಣ ಕನ್ನಡದ ಬಾಲಕಿ ಸನ್ನಿಧಿ ಕಶೆಕೋಡಿ ದೇಶದ ಗಮನಸೆಳೆದರು. ಅವರ ಈ ಅಭಿಯಾನದ ಕಿರುನೋಟ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಲೋಕಸಭೆ ಚುನಾವಣೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಮುಗಿದುಹೋಗಲಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಮತದಾನ ಜಾಗೃತಿ ನಡೆಸುವ ಮೂಲಕ ದಕ್ಣಿಣ ಕನ್ನಡದ ಹುಡುಗಿ ಗಮನ ಸೆಳೆದಿದ್ದಾಳೆ.
ರಾಜಧಾನಿ ದೆಹಲಿಯಲ್ಲಿ ಆರನೇ ಹಂತದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲಡ, ಈ ಚುನಾವಣೆಯ ಭಾಗವಾಗಿ ಮಾಣಿ, ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಕಶೆಕೋಡಿ ತನ್ನ ತಂಡದೊಂದಿಗೆ ಮೇ 17 ಮತ್ತು 18 ರಂದು ನಡೆಸಿದ ಮತದಾನ ಜಾಗೃತಿ ಕಾರ್ಯಕ್ರಮವು ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿತ್ತು.
ಇಂಡಿಯಾ ಗೇಟ್ ಬಳಿ ಸನ್ನಿಧಿ ಕಶೆಕೋಡಿ ಮತದಾನ ಜಾಗೃತಿ
ದೆಹಲಿಯ ಇಂಡಿಯಾ ಗೇಟ್, ಮುಖ್ಯ ಚುನಾವಣಾ ಆಯೋಗದ ಆಯುಕ್ತರ ಕಚೇರಿ, ಆರ್ಟ್ ಗ್ಯಾಲರಿ ಮ್ಯೂಸಿಯಂ, ಜಂತರ್ ಮಂತರ್, ಲಜ್ ಪತ್ ನಗರ, ಹಜ್ರತ್ ನಿಜಾಮುದ್ದಿನ್ ರೈಲ್ವೇ ನಿಲ್ದಾಣ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನ ಮುಖ್ಯ ಕಛೇರಿ, ಆಕಾಶವಾಣಿ, ಮೆಟ್ರೋ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಎರಡು ದಿನಗಳ ಕಾಲ ಈ ಮತದಾನದ ಬಗ್ಗೆ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಭಾಷಣ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವನ್ನು ಮೂಡಿಸಿ ಅಲ್ಲಿನ ಉನ್ನತ ಅಧಿಕಾರಿ ವರ್ಗದವರ ಮೆಚ್ಚುಗೆಯನ್ನು ಗಳಿಸಿದ್ದು ಮಾತ್ರವಲ್ಲದೆ ಅವರ ಪ್ರಶಂಸೆಯ ನುಡಿಗಳಿಗೆ, ಸನ್ಮಾನಗಳಿಗೆ ಈ ವಿದ್ಯಾರ್ಥಿಗಳು ಪಾತ್ರರಾದರು.
ದೆಹಲಿಯ ಆರ್ಟ್ ಗ್ಯಾಲರಿ ಮ್ಯೂಸಿಯಂನಲ್ಲಿ ಮೇ 18 ರಂದು ರಾಷ್ಟ್ರೀಯ ಮ್ಯೂಸಿಯಂ ದಿನದ ಅಂಗವಾಗಿ ನಡೆಸಿದ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕಿಂತಲೂ ಅಧಿಕ ದೆಹಲಿಯ ವಿವಿಧ ಶಾಲಾ - ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಮತದಾನ ಮಾಡುವವರಾಗಿದ್ದರು.
ಹೆಚ್ಚಿನ ಉತ್ಸಾಹದಲ್ಲಿದ್ದ ಆ ವಿದ್ಯಾರ್ಥಿಗಳು ಸ್ವ ಪ್ರೇರಿತರಾಗಿ ಸನ್ನಿಧಿ ಹಾಗೂ ತಂಡದವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು, ಧ್ವನಿವರ್ಧಕದ ವ್ಯವಸ್ಥೆ ಮಾಡಿಕೊಡುವ ಮೂಲಕ ಮತದಾನದ ಬಗ್ಗೆ ಈ ಮಕ್ಕಳಿಂದ ತಿಳಿದುಕೊಳ್ಳುವ ಆಸಕ್ತಿಯನ್ನು ಮೂಡಿಸಿದ್ದು ಗಮನಾರ್ಹ.
ಸನ್ನಿಧಿ ಕಶೆಕೋಡಿ ಯಾರು
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿಯ ಲೋಕೇಶ್ ಗೌಡ ಮತ್ತು ಶೀಲಾವತಿ ದಂಪತಿಗಳ ಪುತ್ರಿಯಾಗಿರುವ ಸನ್ನಿಧಿ ತನ್ನ ಎಳೆಯ ವಯಸ್ಸಿನಲ್ಲಿಯೇ ಮತದಾನದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದು ಈಗಾಗಲೇ ಕರ್ನಾಟಕದ ವಿವಿಧೆಡೆ ಹಾಗೂ ಕೇರಳ, ಗೋವಾ ರಾಜ್ಯಗಳಲ್ಲೂ ಕೊಂಕಣಿ ಮತ್ತು ಮಳೆಯಾಲಂ ಭಾಷೆಯಲ್ಲಿ ಜಾಗೃತಿ ಮೂಡಿಸುವ ಸತ್ಕಾರ್ಯವನ್ನು ಮಾಡಿರುತ್ತಾಳೆ. ದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದನ್ನು ಮನಗಂಡು, ತನ್ನ ಪೋಷಕರಲ್ಲಿ ಮತದಾನದ ಮಹತ್ವದ ಬಗ್ಗೆ ತಿಳಿದುಕೊಂಡಿದ್ದಳು.
ದೆಹಲಿಯಲ್ಲಿ ಮತದಾನ ಜಾಗೃತಿಯನ್ನು ನಡೆಸಬೇಕೆನ್ನುವ ಸನ್ನಿಧಿಯ ಕನಸನ್ನು ಅರಿತುಕೊಂಡ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯು ಅವರ ಪೋಷಕರ ಸಹಕಾರದೊಂದಿಗೆ ನನಸು ಮಾಡಿಸುವಲ್ಲಿ ಯಶಸ್ವಿಯಾಯಿತು.
ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಪೋಷಕರ ಉಪಸ್ಥಿತಿಯಲ್ಲಿ ನಡೆಸಿದ ಈ ಮತದಾನ ಜಾಗೃತಿ ತಂಡದಲ್ಲಿ ಸನ್ನಿಧಿಯೊಂದಿಗೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಶಾರ್ವಿ ಸ್ಕಂದ, ಸಮೃದ್ಧಿ ಎಲ್ ಎಸ್, ವರ್ಷಿತ್ ಬಿ ಎಂ, ಪ್ರಮುಖ್ ಅಂಚನ್ ಸಹಕರಿಸಿದ್ದರು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.