logo
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; 5ನೇ ಹಂತದ ಮತದಾನ ಶುರು, ರಾಹುಲ್ ಗಾಂಧಿ, ಸ್ಮೃತಿ ಇರಾನಿ ಸೇರಿ ಪ್ರಮುಖರ ಭವಿಷ್ಯ ಇವಿಎಂಗೆ, 10 ಪ್ರಮುಖ ಕ್ಷೇತ್ರಗಳಿವು

ಲೋಕಸಭಾ ಚುನಾವಣೆ; 5ನೇ ಹಂತದ ಮತದಾನ ಶುರು, ರಾಹುಲ್ ಗಾಂಧಿ, ಸ್ಮೃತಿ ಇರಾನಿ ಸೇರಿ ಪ್ರಮುಖರ ಭವಿಷ್ಯ ಇವಿಎಂಗೆ, 10 ಪ್ರಮುಖ ಕ್ಷೇತ್ರಗಳಿವು

Umesh Kumar S HT Kannada

May 20, 2024 07:24 AM IST

google News

ಲೋಕಸಭಾ ಚುನಾವಣೆ; 5ನೇ ಹಂತದ ಮತದಾನ ಶುರುವಾಗಿದೆ. ಬಿಜೆಪಿಯ ಸ್ಮೃತಿ ಇರಾನಿ (ಎಡ ಚಿತ್ರ), ಕಾಂಗ್ರೆಸ್‌ನ ರಾಹುಲ್ ಗಾಂಧಿ (ಮಧ್ಯ ಚಿತ್ರ), ಆರ್‌ಜೆಡಿಯ ರೋಹಿಣಿ ಆಚಾರ್ಯ (ಬಲ ಚಿತ್ರ) ಅವರು ಸೇರಿ ಹಲವು ಪ್ರಮುಖರ ಭವಿಷ್ಯ ಇಂದು ಇವಿಎಂಗೆ ಸೇರಲಿದೆ.

  • ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಶುರುವಾಗಿದೆ. ಈ ಹಂತದಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ರಾಹುಲ್ ಗಾಂಧಿ, ಸ್ಮೃತಿ ಇರಾನಿ ಸೇರಿ ಪ್ರಮುಖರ ಭವಿಷ್ಯ ಇವಿಎಂಗೆ ಸೇರಲಿದೆ. ಈ 5ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಗಮನಸೆಳೆಯುತ್ತಿರುವ 10 ಕ್ಷೇತ್ರಗಳಿವು. 

ಲೋಕಸಭಾ ಚುನಾವಣೆ; 5ನೇ ಹಂತದ ಮತದಾನ ಶುರುವಾಗಿದೆ. ಬಿಜೆಪಿಯ ಸ್ಮೃತಿ ಇರಾನಿ (ಎಡ ಚಿತ್ರ), ಕಾಂಗ್ರೆಸ್‌ನ ರಾಹುಲ್ ಗಾಂಧಿ (ಮಧ್ಯ ಚಿತ್ರ), ಆರ್‌ಜೆಡಿಯ ರೋಹಿಣಿ ಆಚಾರ್ಯ (ಬಲ ಚಿತ್ರ) ಅವರು ಸೇರಿ ಹಲವು ಪ್ರಮುಖರ ಭವಿಷ್ಯ ಇಂದು ಇವಿಎಂಗೆ ಸೇರಲಿದೆ.
ಲೋಕಸಭಾ ಚುನಾವಣೆ; 5ನೇ ಹಂತದ ಮತದಾನ ಶುರುವಾಗಿದೆ. ಬಿಜೆಪಿಯ ಸ್ಮೃತಿ ಇರಾನಿ (ಎಡ ಚಿತ್ರ), ಕಾಂಗ್ರೆಸ್‌ನ ರಾಹುಲ್ ಗಾಂಧಿ (ಮಧ್ಯ ಚಿತ್ರ), ಆರ್‌ಜೆಡಿಯ ರೋಹಿಣಿ ಆಚಾರ್ಯ (ಬಲ ಚಿತ್ರ) ಅವರು ಸೇರಿ ಹಲವು ಪ್ರಮುಖರ ಭವಿಷ್ಯ ಇಂದು ಇವಿಎಂಗೆ ಸೇರಲಿದೆ. (Agencies)

ನವದೆಹಲಿ: ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳನ್ನು ಒಳಗೊಂಡ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಇಂದು ಶುರುವಾಗಿದೆ. ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿ ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದೆ.

ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಐವರು ಕೇಂದ್ರ ಸಚಿವರ ಭವಿಷ್ಯವನ್ನು ಉತ್ತರ ಪ್ರದೇಶ ನಿರ್ಧರಿಸಲಿದೆ. ಲೋಕಸಭಾ ಚುನಾವಣೆಯ ಐದನೇ ಹಂತದ ಪ್ರಚಾರ ಶನಿವಾರ (ಮೇ 18) ಕೊನೆಗೊಂಡಿತು. ಈ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿತ್ತು.

ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿರುವ ಪ್ರಮುಖರು

ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ರಾಹುಲ್ ಗಾಂಧಿಯಿಂದ ಸ್ಮೃತಿ ಇರಾನಿವರೆಗೆ, ಕರಣ್ ಭೂಷಣ್ ಸಿಂಗ್ ರಿಂದ ಚಿರಾಗ್ ಪಾಸ್ವಾನ್ ವರೆಗೆ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಜೀವ್ ಪ್ರತಾಪ್ ರೂಡಿ, ಪಿಯೂಷ್ ಗೋಯಲ್, ಉಜ್ವಲ್ ನಿಕ್ಕಂ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕಿ ರೋಹಿಣಿ ಆಚಾರ್ಯ ಕೂಡ ಇಂದು ತಮ್ಮ ಜನಾದೇಶವನ್ನು ಎದುರುನೋಡುತ್ತಿದ್ಧಾರೆ.

ಐದನೇ ಹಂತದಲ್ಲಿ ಮತದಾನ ನಡೆಯುವ ರಾಜ್ಯಗಳು ಮತ್ತು ಕ್ಷೇತ್ರ ವಿವರ

ಜಾರ್ಖಂಡ್: 14 ಕ್ಷೇತ್ರಗಳ ಪೈಕಿ 3.

ಒಡಿಶಾ: 21 ಕ್ಷೇತ್ರಗಳ ಪೈಕಿ 5.

ಉತ್ತರ ಪ್ರದೇಶ: 80 ಕ್ಷೇತ್ರಗಳ ಪೈಕಿ 14.

ಬಿಹಾರ: 40 ಕ್ಷೇತ್ರಗಳ ಪೈಕಿ 5.

ಮಹಾರಾಷ್ಟ್ರ: 48 ಕ್ಷೇತ್ರಗಳ ಪೈಕಿ 13.

ಪಶ್ಚಿಮ ಬಂಗಾಳ: 42 ಕ್ಷೇತ್ರಗಳ ಪೈಕಿ 7.

ಲಡಾಖ್: 1 ಕ್ಷೇತ್ರ.

ಜಮ್ಮು ಮತ್ತು ಕಾಶ್ಮೀರ: 5 ಕ್ಷೇತ್ರಗಳ ಪೈಕಿ 1

5ನೇ ಹಂತದ ಲೋಕಸಭಾ ಚುನಾವಣೆ; ಗಮನಸೆಳೆಯುತ್ತಿರುವ 10 ಕ್ಷೇತ್ರಗಳಿವು

1) ರಾಯ್ ಬರೇಲಿ, ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಈ ಬಾರಿ ತಾಯಿ ಸೋನಿಯಾ ಗಾಂಧಿ ಬದಲು ಅವರ ಪುತ್ರ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಾಲ್ಕು ಬಾರಿ ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈಗಾಗಲೇ ಮತದಾನ ನಡೆದಿರುವ ಕೇರಳದ ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ಮರು ಆಯ್ಕೆ ಬಯಸಿದ್ದಾರೆ.

2) ಅಮೇಥಿ, ಉತ್ತರ ಪ್ರದೇಶ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರವನ್ನು ಮರಳಿ ಪಡೆಯುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ದಶಕಗಳಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು. ವಿಶೇಷವಾಗಿ ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಗುರುತಿಸಲ್ಪಟ್ಟಿತ್ತು. ಆದರೆ ಕಳೆದ ಬಾರಿ ರಾಹುಲ್ ಗಾಂಧಿ ಬದಲು ಸ್ಮೃತಿ ಇರಾನಿಗೆ ಈ ಕ್ಷೇತ್ರದ ಜನತೆ ಮಣೆಹಾಕಿದ್ದರು.

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಪ್ರತಿನಿಧಿಸಿದ ಕ್ಷೇತ್ರ ಇದು. ಅಷ್ಟೇ ಅಲ್ಲ, 2004, 2009 ಮತ್ತು 2014 ರಲ್ಲಿ ಅಮೇಥಿಯನ್ನು ರಾಹುಲ್ ಗಾಂಧಿ ಪ್ರತಿನಿಧಿಸಿದ್ದರು. 2019 ರಲ್ಲಿ ಸ್ಮೃತಿ ಇರಾನಿ ಅವರನ್ನು ಸೋಲಿಸಿದರು. ಈ ಬಾರಿ ಕಾಂಗ್ರೆಸ್ ನಿಷ್ಠಾವಂತ ಕೆಎಲ್ ಶರ್ಮಾ ಇರಾನಿ ಅವರಿಗೆ ಸವಾಲು ಹಾಕಿದ್ದಾರೆ.

3) ಲಕ್ನೋ, ಉತ್ತರ ಪ್ರದೇಶ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಿಂದ ನಾಲ್ಕನೇ ಅವಧಿಗೆ ಚುನಾವಣಾ ಕಣದಲ್ಲಿದ್ದಾರೆ. ಲಕ್ನೋ ಸೆಂಟ್ರಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಹಾಲಿ ಶಾಸಕ ರವಿದಾಸ್ ಮೆಹ್ರೋತ್ರಾ ವಿರುದ್ಧ ಅವರು ಸ್ಪರ್ಧಿಸುತ್ತಿದ್ದಾರೆ.

4) ಕೈಸರ್‌ಗಂಜ್‌, ಉತ್ತರ ಪ್ರದೇಶ: ಲೈಂಗಿಕ ಕಿರುಕುಳದ ಆರೋಪದ ಮೇಲೆ ದೇಶವ್ಯಾಪಿ ಟೀಕೆಗೆ ಗುರಿಯಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಬಾರಿ ಅವರ ಪುತ್ರ ಕರಣ್ ಭೂಷಣ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.

5) ಫೈಜಾಬಾದ್, ಉತ್ತರ ಪ್ರದೇಶ: ಇದು ಅಯೋಧ್ಯೆ ರಾಮ ಮಂದಿರವನ್ನು ಒಳಗೊಂಡ ಕ್ಷೇತ್ರ. ಇಲ್ಲಿಂದ ಲಲ್ಲು ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದು ಮರು ಆಯ್ಕೆ ಬಯಸುತ್ತಿದ್ದಾರೆ. ಅವರ ಮುಖ್ಯ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್.

6) ಸರನ್, ಬಿಹಾರ: ರಾಜ್ಯದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಸರನ್ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್ ಪ್ರತಾಪ್ ರೂಢಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಲಾಲು ಪ್ರಸಾದ್‌ ಕೂಡ ಈ ಹಿಂದೆ ಈ ಸ್ಥಾನವನ್ನು ಪ್ರತಿನಿಧಿಸಿದ್ದರು. ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳವು ಪ್ರತಿಪಕ್ಷಗಳ ಭಾರತ ಬಣದ ಭಾಗವಾಗಿದೆ.

7) ಹಾಜಿಪುರ, ಬಿಹಾರ: ಲೋಕ ಜನಶಕ್ತಿ ಪಾರ್ಟಿ (ಎಲ್‌ಜೆಪಿ) (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಪರಂಪರೆಯನ್ನು ಮುಂದುವರಿಸುವ ಗುರಿಯೊಂದಿಗೆ ಕಣದಲ್ಲಿದ್ದಾರೆ. ಅವರು ಆರ್‌ಜೆಡಿಯ ಶಿವಚಂದ್ರ ರಾಮ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 1977 ರಿಂದ 2014 ರವರೆಗೆ, ರಾಮ್ ವಿಲಾಸ್ ಪಾಸ್ವಾನ್ ಈ ಸ್ಥಾನವನ್ನು ಎಂಟು ಬಾರಿ ಪ್ರತಿನಿಧಿಸಿದ್ದರು. ಅವರು 1984 ಮತ್ತು 2009 ರಲ್ಲಿ ಕೇವಲ ಎರಡು ಬಾರಿ ಸೋತರು. ಚಿರಾಗ್ ತಮ್ಮ ಕ್ಷೇತ್ರವನ್ನು ಜಮುಯಿಯಿಂದ ಎಲ್‌ಜೆಪಿಯ ಭದ್ರಕೋಟೆಯಾದ ಹಾಜಿಪುರಕ್ಕೆ ಸ್ಥಳಾಂತರಿಸಿದ್ದು, ಈ ನಿರ್ಧಾರದ ಮೂಲಕ ತಂದೆಯ ರಾಜಕೀಯ ಉತ್ತರಾಧಿಕಾರಿಯಾಗಿ ತಮ್ಮ ಸ್ಥಾನವನ್ನು ಪ್ರತಿಪಾದಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

8) ಮುಂಬೈ ಉತ್ತರ ಲೋಕಸಭೆ ಕ್ಷೇತ್ರ, ಮಹಾರಾಷ್ಟ್ರ: ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಇದು ಬಿಜೆಪಿಯ ಭದ್ರಕೋಟೆಯಾಗಿದೆ. ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ನ ಭೂಷಣ್ ಪಾಟೀಲ್ ವಿರುದ್ಧ ಬಿಜೆಪಿ ಪಿಯೂಷ್ ಗೋಯಲ್ ಅವರನ್ನು ಕಣಕ್ಕಿಳಿಸಿದೆ.

9) ಲಡಾಖ್, ಕೇಂದ್ರಾಡಳಿತ ಪ್ರದೇಶ ಲಡಾಖ್: ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ 2019ರಲ್ಲಿ ಬೇರ್ಪಟ್ಟು ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನ ಏಕೈಕ ಕ್ಷೇತ್ರ ಇದು. ಇಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆಗಳಾಗಿವೆ. ಪಕ್ಷವು ತನ್ನ ಹಾಲಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರಿಗೆ ಟಿಕೆಟ್ ನಿರಾಕರಿಸಿದೆ. ಸ್ಥಳೀಯ ಕುಂದುಕೊರತೆಗಳ ಪ್ರಯೋಜನ ಪಡೆಯುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ವಿಶೇಷವಾಗಿ ಈ ಪ್ರದೇಶವನ್ನು ಭಾರತೀಯ ಸಂವಿಧಾನದ ಆರನೇ ಪರಿಚ್ಛೇದದ ಅಡಿಯಲ್ಲಿ ತರಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಈ ಪ್ರದೇಶದ ಬುಡಕಟ್ಟು ಸ್ಥಾನಮಾನವನ್ನು ರಕ್ಷಿಸುವ ವೇಳಾಪಟ್ಟಿಯಲ್ಲಿ ಲಡಾಖ್ ಅನ್ನು ಸೇರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಈ ನಿಬಂಧನೆ ಇಲ್ಲದಿದ್ದರೆ, ತಮ್ಮ ಭೂಮಿ, ಉದ್ಯೋಗ ಮತ್ತು ಶೈಕ್ಷಣಿಕ ಪ್ರಯೋಜನಗಳು ದೇಶದ ಇತರ ಭಾಗಗಳ ಜನರಿಂದ ಬೆದರಿಕೆಗೆ ಒಳಗಾಗಬಹುದು ಎಂದು ಅನೇಕ ಸ್ಥಳೀಯರು ಭಯಪಡುತ್ತಾರೆ.

10) ಬಾರಾಮುಲ್ಲಾ, ಜಮ್ಮು ಮತ್ತು ಕಾಶ್ಮೀರ: ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಮುಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪೀಪಲ್ಸ್ ಕಾನ್ಫರೆನ್ಸ್ (ಪಿಸಿ) ನ ಸಜಾದ್ ಲೋನ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮೀರ್ ಮೊಹಮ್ಮದ್ ಫಯಾಜ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ