Pratap Simha: ಫೈರ್ ಬ್ರಾಂಡ್ ಸಂಸದ ಪ್ರತಾಪಸಿಂಹಗೆ ಮೈಸೂರು ಕೊಡಗು ಟಿಕೆಟ್ ತಪ್ಪಲು 10 ಕಾರಣಗಳು
Mar 13, 2024 09:31 PM IST
ಪ್ರತಾಪ ಸಿಂಹಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ
- ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಚೆನ್ನಾಗಿ ಕೆಲಸ ಮಾಡಿಯೂ ಟಿಕೆಟ್ ತಪ್ಪಿಸಿಕೊಳ್ಳಲು ಕಾರಣವೇನು.. ಇಲ್ಲಿದೆ ವಿವರ
ಪ್ರತಾಪ ಸಿಂಹಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ
ಮೈಸೂರು: ಹತ್ತು ವರ್ಷದ ಹಿಂದೆ ನೇರವಾಗಿ ಪತ್ರಿಕಾ ಕಚೇರಿಯಿಂದಲೇ ಬಂದು ಒಂದು ತಿಂಗಳಿನಲ್ಲಿಯೇ ಗೆದ್ದು ಸಂಸತ್ ಪ್ರವೇಶಿಸಿ ಎರಡನೇ ಬಾರಿಯೂ ಭಾರೀ ಅಂತರದಿಂದ ಗೆದ್ದು ಮೈಸೂರಿನಲ್ಲಿ ಗಮನ ಸೆಳೆದಿದ್ದ ಪ್ರತಾಪಸಿಂಹ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಕ್ಷೇತ್ರದಲ್ಲಿ ಸಕ್ರಿಯವಾಗಿದ್ದುಕೊಂಡು, ಹತ್ತು ವರ್ಷದಲ್ಲಿ ಕಣ್ಣಿಗೆ ಕಾಣುವಂತಹ ಕೆಲಸ ಮಾಡಿದ್ದರೂ ರಾಜಕೀಯ ಕಾರಣಗಳಿಗೆ ಸಿಂಹಗೆ ಟಿಕೆಟ್ ತಪ್ಪಿದೆ.
ಅವರಿಗೆ ಟಿಕೆಟ್ ತಪ್ಪಲು ಕಾರಣವೇನು ಎನ್ನುವ ಅಂಶಗಳು ಇಲ್ಲಿವೆ
- ಪ್ರತಾಪಸಿಂಹ ಕೆಲಸಗಾರ ನಿಜ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಮೂರನೇ ಬಾರಿಗೆ ಟಿಕೆಟ್ ಪಡೆಯಲು ವಿಫಲರಾದರು. ಮೂರನೇ ಅವಧಿಗೆ ಅವಕಾಶ ಸಿಗಲಿಲ್ಲ.
- ಮೈಸೂರಿನ ಮಹಿಷ ದಸರಾ ವಿಚಾರದಿಂದ ಹಿಡಿದು ಹಲವಾರು ವಿಚಾರದಲ್ಲಿ ಪ್ರತಾಪಸಿಂಹ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಕೂಡ ಅವರ ರಾಜಕೀಯ ಭವಿಷ್ಯಕ್ಕೆ ಅಡ್ಡಗಾಲಾಗಿರುವಂತೆ ಕಂಡು ಬರುತ್ತಿದೆ.
- ಮೈಸೂರು ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ವಿಚಾರದಲ್ಲಿ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಕಾರ್ಯಕರ್ತರೊಂದಿಗೂ ಒಡನಾಟ ಹೊಂದಿರಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇದ್ದವು.
- ಎರಡೂ ಜಿಲ್ಲೆಗಳ ನಾಯಕರೊಂದಿಗೂ ಅಂತಹ ಉತ್ತಮ ಸಂಬಂಧ ಇರಲಿಲ್ಲ. ಮೈಸೂರಿನ ಇಬ್ಬರು ಶಾಸಕರಾಗಿದ್ದ ರಾಮದಾಸ್ ಹಾಗೂ ನಾಗೇಂದ್ರ ಬಹಿರಂಗವಾಗಿಯೇ ಸಿಂಹ ವಿರುದ್ದ ಹೇಳಿಕೆ ನೀಡಿದ್ದರು
- ಕಳೆದ ಬಾರಿ ಬಿ.ಎಲ್.ಸಂತೋಷ್ ಅವರೊಂದಿಗೆ ಸೇರಿಕೊಂಡು ಮೈಸೂರು, ಕೊಡಗಿನ ಬಿಜೆಪಿಯ ಹಲವಾರು ನಾಯಕರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದ್ದರು. ಅವರು ಈಗ ಪ್ರತಾಪಸಿಂಹ ವಿರುದ್ದ ಸೇಡು ತೀರಿಸಿಕೊಂಡರು ಎನ್ನುವ ಮಾತು ಬಿಜೆಪಿಯಲ್ಲಿಯೇ ಕೇಳಿ ಬರುತ್ತಿದೆ.
- ಪ್ರತಾಪಸಿಂಹ ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್‌ನೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದು, ಆ ಪಕ್ಷದ ನಾಯಕರ ಪರವಾಗಿ ಮಾತನಾಡುತ್ತಿದ್ದುದು ಕೂಡ ಮುಳುವಾಗಿದೆ.
- ಸಂಸದರ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಗೌರವ ಇರಲಿಲ್ಲ. ಪರಿಚಯಸ್ಥರು ಹೋದರೂ ಸರಿಯಾಗಿ ಮಾತನಾಡುತ್ತಿಲ್ಲ ಎನ್ನುವ ದೂರುಗಳು ಸಿಂಹ ವಿರುದ್ದ ಇದ್ದವು.
- ನಾಲ್ಕು ವರ್ಷದ ಹಿಂದೆ ಕೋವಿಡ್ ಕಾಲದಲ್ಲಿ ಪ್ರತಾಪಸಿಂಹ ನಡೆದುಕೊಂಡ ರೀತಿ, ಸಚಿವರಾಗಿದ್ದ ಸೋಮಣ್ಣ ಅವರ ಭಾವಚಿತ್ರ ಹಾಕಿಕೊಂಡಿದ್ದೂ ಕೂಡ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರನ್ನು ಕೆರಳಿಸಿತ್ತು.
- ತಮ್ಮವಿಕ್ರಮ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮರ ಕಡಿದ ವಿಚಾರ ವಿವಾದವಾಗಿತ್ತು. ತಮ್ಮನ ವಿರುದ್ದ ಮೊಕದ್ದಮೆಯೂ ದಾಖಲಾಗಿತ್ತು.
- ಸಂಸತ್ತಿನಲ್ಲಿ ನುಗ್ಗಿ ಗದ್ದಲ ಎಬಿಸಿದ್ದ ಯುವಕರಲ್ಲಿ ಮೈಸೂರಿನ ಮನೋರಂಜನ್ ಎಂಬ ಯುವಕನಿಗೆ ಪ್ರತಾಪಸಿಂಹ ಪಾಸ್ ನೀಡಿದ್ದು ತೀವ್ರ ವಿವಾದ ಹುಟ್ಟು ಹಾಕಿತ್ತು. ಇದು ಕೂಡ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿತ್ತು