logo
ಕನ್ನಡ ಸುದ್ದಿ  /  ಮನರಂಜನೆ  /  ಕರ್ನಾಟಕದ ಪ್ರಸಿದ್ಧ10 ರಂಗಭೂಮಿ ಕಲಾವಿದರ ಜೀವನಗಾಥೆ; ಬದುಕಿಗೆ ಬಣ್ಣಹಚ್ಚಿ ರಂಜಿಸಿದವರಿವರು

ಕರ್ನಾಟಕದ ಪ್ರಸಿದ್ಧ10 ರಂಗಭೂಮಿ ಕಲಾವಿದರ ಜೀವನಗಾಥೆ; ಬದುಕಿಗೆ ಬಣ್ಣಹಚ್ಚಿ ರಂಜಿಸಿದವರಿವರು

Suma Gaonkar HT Kannada

Nov 01, 2024 04:55 PM IST

google News

ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರು

    • ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರ ಬಗ್ಗೆ ನಾವಿಲ್ಲಿ ನೀಡಿದ್ದೇವೆ. ಹಳೆ ಕಾಲದಿಂದ ಹೊಸ ತಲೆಮಾರಿನವರೆಗೆ ಯಾರೆಲ್ಲ ಕಲೆಯನ್ನು ಕರಗತ ಮಾಡಿಕೊಂಡು ಜನರ ಮನಸಿನಲ್ಲಿ ನೆಲೆಯೂರಿದ್ದಾರೋ ಅಂತಹ ಕೆಲ ನಟ, ನಟಿಯರ ಕಿರುಪರಿಚಯ ಇಲ್ಲಿದೆ ಗಮನಿಸಿ. 
ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರು
ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರು

ಅಭಿನಯ ಎಲ್ಲ ಕಲಾ ಪ್ರಕಾರಗಳಲ್ಲಿ ಮಹತ್ವದ ಮನ್ನಣೆ ಪಡೆದಿರುವ ಪ್ರಮುಖ ಕಲೆ. ನಟನೆ ಕೆಲವರಲ್ಲಿ ರಕ್ತಗತವಾಗಿ ಅಂತರ್ಗತವಾಗಿರುತ್ತಾದರೂ ಇನ್ನು ಹಲವರಿಗೆ ಕಲಿಕೆಯಿಂದ ಒಡಮೂಡಿರುತ್ತದೆ. ಅಭಿನಯವನ್ನು ಸಂಪೂರ್ಣ ಕರಗತ ಮಾಡಿಕೊಂಡವರು ಮಾತ್ರ ಹೆಚ್ಚಿನ ಹೆಸರು ಮಾಡಲು ಸಾಧ್ಯ. ಈ ಕಲಾವಿದ ವೇದಿಕೆಯಲ್ಲಿದ್ದರೆ ಮಾತ್ರ ತಪ್ಪದೆ ನಾಟಕ ನೋಡುತ್ತೇನೆ ಎನ್ನುವ ರೀತಿಯಲ್ಲಿ ವೀಕ್ಷಕರಿಂದ ಮನ್ನಣೆಯನ್ನು ಕೆಲವರು ಗಳಿಸಿರುತ್ತಾರೆ. ಕರ್ನಾಟಕದಲ್ಲಿ ರಂಗಭೂಮಿ ಎಂದಾಕ್ಷಣ ನೀಲಕಂಠೇಶ್ವರ ನಾಟ್ಯ ಸಂಘ (ನೀನಾಸಂ), ರಂಗಾಯಣ, ರಂಗಶಂಕರ, ಗುಬ್ಬಿ ವೀರಣ್ಣ ನಾಟಕ ಕಂಪನಿ, ಬೆನಕ ಹೀಗೆ ನಾಟಕಕ್ಕೆ ಸಂಬಂಧಿಸಿದ ಹಲವು ಹೆಸರುಗಳು ನೆನಪಿಗೆ ಬರುತ್ತದೆ. ಅದೇ ರೀತಿ ಕೆಲವು ರಂಗಭೂಮಿ ಕಲಾವಿದರ ಹೆಸರೂ ನೆನಪಾಗುತ್ತದೆ. ಕನ್ನಡ ರಾಜ್ಯೋತ್ಸವದ ಈ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದರ ಕಿರು ಪರಿಚಯವನ್ನು ನಾವಿಲ್ಲಿ ನಿಮಗೆಂದೇ ನೀಡಿದ್ದೇವೆ.

ಗುಬ್ಬಿ ವೀರಣ್ಣ

ಕರ್ನಾಟಕ ನಾಟಕ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಗುಬ್ಬಿ ವೀರಣ್ಣನವರದು. ಡಾ. ರಾಜ್‌ಕುಮಾರ್‌, ನರಸಿಂಹ ರಾಜು, ಜಿ ವಿ ಐಯ್ಯರ್, ಉದಯ್‌ ಕುಮಾರ್, ಗಿರೀಶ್‌ ಕಾರ್ನಾಡ್‌ ಈ ಎಲ್ಲ ಮೇರು ನಟರನ್ನು ಸಿನಿರಂಗಕ್ಕೆ ನೀಡಿದವರು ಗುಬ್ಬಿ ವೀರಣ್ಣನವರು. ಗುಬ್ಬಿ ಶ್ರೀ ಚನ್ನಬಸವೇಶ್ವರ ನಾಟಕ ಕಂಪನಿ ಸ್ಥಾಪಿಸಿ ಹಲವಾರು ನಟರನ್ನು ಬೆಳೆಸಿದವರಿವರು. ಗುಬ್ಬಿ ವೀರಣ್ಣ ನಾಟಕ ಕಂಪನಿಯು ಕರ್ನಾಟಕದ ಮೊದಲ ನಾಟಕ ಕಂಪನಿ. ಅವರು ಮಾಡದೇ ಇರುವ ಪ್ರಯೋಗಗಳಿಲ್ಲ ಎಂದೇ ಪ್ರಸಿದ್ಧರಾಗಿದ್ದರು. ನಾಟಕಗಳಲ್ಲಿ ವೇದಿಕೆಯ ಮೇಲೆ ಜೀವಂತ ಆನೆ, ಕುದುರೆಗಳನ್ನು ವೇದಿಕೆಗೆ ತಂದ ಹೆಗ್ಗಳಿಕೆ ಅವರದು. ಅಷ್ಟೇ ಅಲ್ಲ, ರಂಗಭೂಮಿಯೊಂದೇ ಅಲ್ಲದೇ, ಸಿನಿಮಾ ರಂಗಕ್ಕೂ ಕಾಲಿಟ್ಟ ಗುಬ್ಬಿ ವೀರಣ್ಣನವರು ಮೂಕಿ ಚಿತ್ರಗಳನ್ನು ನಿರ್ಮಿಸುತ್ತಾರೆ. ತಮ್ಮ ನಾಟಕ ಕಂಪನಿಯನ್ನು ವಿಸ್ತರಿಸುತ್ತಾರೆ. ಜನರಿಗೆ ಉಚಿತವಾಗಿ ನಾಟಕವಾಡಿ ತೋರಿಸುತ್ತಾರೆ. ಸದಾರಮೆ ಮತ್ತು ಎಚ್ಚಮ ನಾಯಕ ಗುಬ್ಬಿ ವೀರಣ್ಣನವರ ಪ್ರಸಿದ್ಧ ನಾಟಕಗಳು. ರಂಗಭೂಮಿಯಲ್ಲಿ ಗುಬ್ಬಿ ವೀರಣ್ಣನವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, 1972ರಲ್ಲಿ ಇವರು ಇಹಲೋಕ ತ್ಯಜಿಸಿದರು. ಅವರ ಸ್ಮರಣಾರ್ಥ ಇಂದಿಗೂ ಇವರ ಹೆಸರಿನಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ.

ಕೆ.ವಿ.ಸುಬ್ಬಣ್ಣ

ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು. ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತಿಯೆತ್ತಿರುವ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ರಂಗ ಸಂಸ್ಥೆ ಇವರದ್ದೇ ಕನಸು. ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನಸೆಳೆದವರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದ ಮಹಾನುಭಾವರು. ಇಂದಿಗೂ ರಂಗಭೂಮಿ, ನಾಟಕ ಎಂದರೆ ನೀನಾಸಂ ನೆನಪಾಗುತ್ತದೆ. ಗಾರ್ಗಿಯ ಕಥೆಗಳು, ರಾಜಕೀಯದ ಮಧ್ಯೆ ಬಿಡುವು, ಅಭಿಜ್ಞಾನ ಶಾಕುಂತಲ, ಸೂಳೆ ಸನ್ಯಾಸಿ ಇವುಗಳು ಅವರು ರಚಿಸಿದ ಜನಪ್ರಿಯ ನಾಟಕಗಳು. ಅವರು ಸ್ಥಾಪಿಸಿದ ‘ಅಕ್ಷರ ಪ್ರಕಾಶನ’ ಸಂಸ್ಥೆಯ ಮೂಲಕ 500ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಮಾಸ್ಟರ್ ಹಿರಣ್ಣಯ್ಯ

ನರಸಿಂಹಮೂರ್ತಿ ಎಂಬ ಈ ಪುಟ್ಟ ಬಾಲಕ ಮುಂದೆ ಪ್ರಸಿದ್ಧರಾಗಿದ್ದು ಮಾಸ್ಟರ್ ಹಿರಣ್ಣಯ್ಯ ಎಂಬ ಹೆಸರಿನಿಂದ! ತಂದೆಯಿಂದಲೇ ರಂಗಭೂಮಿ ಶಿಕ್ಷಣ ಪಡೆದ ಇವರು ಮೂಲತಃ ಮೈಸೂರು ಮೂಲದವರು. ಬಾಲ್ಯದಲ್ಲಿ ತಂದೆ ಮದ್ರಾಸ್ಗೆ ಕರೆದೊಯ್ದ ಕಾರಣ ಅಲ್ಲಿನ ಬಹುಭಾಷಾ ವಾತಾವರಣದಿಂದ ತಮಿಳು, ತೆಲುಗು ಮತ್ತು ಇಂಗ್ಲೀಷ್ ಪರಿಚಯವಾಯಿತು. ಇವರ ಅಪ್ಪ ಕೆ. ಹಿರಣ್ಣಯ್ಯನವರು ರಚಿಸಿ, ನಿರ್ದೇಶನ ಮಾಡಿದ ವಾಣಿ ಎಂಬ ಸಿನಮಾ ಮೂಲಕ ಮಾಸ್ಟರ್ ಹಿರಣ್ಣಯ್ಯನವರ ಸಿನಿಮಾ ಪ್ರವೇಶವೂ ಆಯಿತು. ತಂದೆಯವರ ಮರಣದ ನಂತರ ಅವರ ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ ಎಂಬ ನಾಟಕ ಕಂಪನಿಯನ್ನು ತಾವೇ ಮುನ್ನಡೆಸಿ ಅಲ್ಲಿ ಲಂಚಾವತಾರ ನಾಟಕವನ್ನು ಪ್ರಯೋಗಿಸಿದರು. ಇನ್ನೂ ಅನೇಕ ನಾಟಕಗಳ ಮೂಲಕ ಮಾಸ್ಟರ್ ಹಿರಣ್ಣಯ್ಯ ಪ್ರಸಿದ್ಧರಾದರೂ ಅವರ ಹೆಸರಿಗೆ ಬಹುದೊಡ್ಡ ಹಿರಿಮೆ ತಂದುಕೊಟ್ಟದ್ದು ಮಾತ್ರ ಇದೇ ಲಂಚಾವತಾರ ನಾಟಕ. ಈ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಹೊಂದಿದೆ.

ಉಮಾಶ್ರೀ

ಕನ್ನಡ ಸಿನಿಮಾ ನಟಿಯಲ್ಲಿ ಬಹು ಜನಪ್ರಿಯತೆ ಗಳಿಸಿದ್ದರೂ ರಂಗಭೂಮಿಯಲ್ಲಿ ಅಭಿನೇತ್ರಿಯಾಗಿ ಮಿಂಚಿದವರು. ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿ ಕಡು ಬಡತನದಲ್ಲಿ ಹುಟ್ಟಿ ತಿನ್ನಲು ಚಿತ್ರಾನ್ನ ಸಿಗುತ್ತದೆ ಎಂಬ ಕಾರಣಕ್ಕೆ ನಾಟಕದಲ್ಲಿ ಅಭಿನಯಿಸಲು ಮುಂದಾದವರು. ಉಮಾಶ್ರೀ ಅವರ ಒಡಲಾಳ ನಾಟಕದ ಸಾಕವ್ವನ ಅಭಿನಯ ಅವರನ್ನು ಬಹು ಜನಪ್ರಿಯತೆ ನೀಡಿತ್ತು. ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಮುಂತಾದ ಖ್ಯಾತನಾಮ ನಿರ್ದೇಶಕರ ಗರಡಿಯಲ್ಲಿ ಪಳಗಿದ ಉಮಾಶ್ರೀಯವರು ಮುಂದೆ ಸಿನಿಮಾ ಒಂದೇ ಅಲ್ಲದೇ, ಕಿರುತೆರೆಯಲ್ಲೂ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದಾರೆ. ಗುಲಾಬಿ ಟಾಕೀಸ್ ಸಿನಿಮಾದಲ್ಲಿ ಅವರ ಅಭಿನಯಲ್ಲಿ ರಾಷ್ಟ್ರ ಪ್ರಶಸ್ತಿಯೂ ಸಂದಿದೆ.

ಮುಖ್ಯಮಂತ್ರಿ ಚಂದ್ರು

ಕರ್ನಾಟಕದಲ್ಲಿ ಯಾರೇ ಮುಖ್ಯಮಂತ್ರಿಯಾಗಿ ಬದಲಾದರೂ ಇವರು ಮಾತ್ರ ಆ ಪಟ್ಟದಲ್ಲಿ ತೆರವಾಗುವುದೇ ಇಲ್ಲ! ಯಾಕಂದ್ರೆ ಇವ್ರು ಕರ್ನಾಟಕದ ಖಾಯಂ ಮುಖ್ಯಮಂತ್ರಿ! ಹೆಸರಲ್ಲೆ ಮುಖ್ಯಮಂತ್ರಿಯನ್ನು ಇಟ್ಟುಕೊಂಡಿರುವ ಮುಖ್ಯಮಂತ್ರಿ ಚಂದ್ರು ಅವರ ಮೂಲ ಹೆಸರು ಚಂದ್ರಶೇಖರ್. ಅನಿರೀಕ್ಷಿತವಾಗಿ ಬೇರೊಬ್ಬ ಕಲಾವಿದರು ಬರದೇ ಅವರ ಪಾತ್ರದಲ್ಲಿ ಅಭಿನಯಿಸುವಂತಾಗಿ ನಾಟಕ ರಂಗಕ್ಕೆ ಬಂದ ಇವರು ಮುಂದೆ ಕಲಾವಿದ ಲೋಹಿತಾಶ್ವ ಅವರ ಅನಾರೋಗ್ಯದಿಂದ ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಾಯಿತು. ಮುಖ್ಯಮಂತ್ರಿ, ತಾಯಿ, ಕತ್ತಲೆ ದಾರಿದೂರ, ಘಾಸಿರಾಂ ಕೊತ್ವಾಲ್, ಕಾಲಿಗುಲ, ನಮ್ಮೊಳಗೊಬ್ಬ ನಾಜೂಕಯ್ಯ, ಆಸ್ಫೋಟ ಮುಂತಾದ ನಾಟಕಗಳಲ್ಲಿ ಇವರ ಪಾತ್ರ ಅನನ್ಯ. ಮುಂದೆ ಸಿನಿಮಾ ಮತ್ತು ರಾಜಕೀಯ ಕ್ಷೇತ್ರಗಳು ಸಹ ಮುಖ್ಯಮಂತ್ರಿ ಚಂದ್ರು ಅವರನ್ನು ಬರಸೆಳೆದುಕೊಂಡವು.

ಮಂಡ್ಯ ರಮೇಶ್

ಮಂಡ್ಯ ಅಂದತಕ್ಷಣ ನೆನಪಾಗುವುದು ಹೆಸರುಗಳಲ್ಲಿ ಮಂಡ್ಯ ರಮೇಶ್ ಕೂಡ ಒಂದು. ತಾವು ತಂಗಭೂಮಿ ಕಲಾವಿದರಾಗಿದ್ದೊಂದೇ ಅಲ್ಲದೇ, ನೂರಾರು ಯುವಕ ಯುವತಿಯರನ್ನು ಪರಿಣಿತ ಕಲಾವಿದರನ್ನಾಗಿ ತಯಾರು ಮಾಡುತ್ತಿರುವ ಹಿರಿಮೆ ಇವರದ್ದು. ನೀನಾಸಂನಿಂದ ಪದವಿ ಪಡೆದ ಮಂಡ್ಯ ರಮೇಶ್, ರಂಗಾಯಣದಲ್ಲಿ ಕಲಾವಿದರಾಗಿ ಇನ್ನಷ್ಟು ಪಳಗಿದರು. ಸಂಕ್ರಾಂತಿ

ಮಹಿಮಾಪುರ, ಮಾರನಾಯಕ, ಬಂಕಾಪುರದ ಬಯಲಾಟ, ಚೋರ ಚರಣದಾಸ, ನಾಗಮಂಡಲ, ಅಗ್ನಿ ಮತ್ತು ಮಳೆ, ಹರಕೆಯ ಕುರಿ, ಆಲಿಬಾಬ, ಯುಗಾಂತ, ಐಲುದೊರೆ, ಚಾಮಚೆಲುವೆ, ಸಾಯೋ ಆಟ, ವಲಸೆ ಹಕ್ಕಿಯ ಹಾಡು, ಈ ಕೆಳಗಿನವರು, ಊರುಭಂಗ, ಸುಭದ್ರಾ ಕಲ್ಯಾಣ, ರತ್ನಪಕ್ಸಿ

ಅಂಧಯುಗ ಮುಂತಾದ ನಾಟಕಗಳ ಮೂಲಕ ಹೆಸರು ಪಡೆದವರು. ಚಿತ್ರರಂಗದಲ್ಲಿ, ಧಾರಾವಾಹಿಗಳಲ್ಲಿ ತಮ್ಮದೇ ಆದ ವಿಶಿಷ್ಟ ಅಭಿನಯದಿಂದ ಹೆಸರಾದವರು. ಇದೀಗ ನಟನ ಎಂಬ ರಂಗಶಾಲೆಯ ಮೂಲಕ ರಂಗಭೂಮಿ ತರಬೇತಿ ನೀಡುತ್ತಿದ್ದಾರೆ.

ರಂಗಾಯಣ ರಘು
ತಮ್ಮ ಹೆಸರಿನಲ್ಲೇ ರಂಗಾಯಣ ಸೇರಿಸಿಕೊಂಡಿರುವ ಇವರ ಹೆಸರು ಕೊಟ್ಟುರು ಚಿಕರಂಗಪ್ಪ ರಘುನಾಥ್. ಆದರೆ ಇವರು ರಂಗಾಯಣ ರಘು ಎಂಬ ಹೆಸರಿನಲ್ಲೇ ಪ್ರಸಿದ್ಧರಾಗಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಇವರು ಯಾವುದೇ ಸಿನಿಮಾದಲ್ಲಿ ಪಾತ್ರ ಮಾಡಿದರೂ ಜನ ಮೆಚ್ಚಿ ನೋಡುತ್ತಾರೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗಳ ಸಾಲೇ ಇವರ ಹಿಂದಿದೆ. 70 ಕ್ಕೂ ಅಧಿಕ ಸಿನಿಮಾಗಳಲ್ಲಿ ಇವರು ನಟನೆ ಮಾಡಿದ್ದಾರೆ.

ಪ್ರಕಾಶ್ ಬೆಳವಾಡಿ

ಹೊಸ ತಲೆಮಾರು ಅಚ್ಚುಮೆಚ್ಚಿನಿಂದ ಕೇಳುವ ವಿಚಾರಗಳನ್ನು ಹಂಚಿಕೊಳ್ಳುವುದರಲ್ಲಿ ಇವರದ್ದು ದೊಡ್ಡ ಹೆಸರು, ಪ್ರಕಾಶ್ ಬೆಳವಾಡಿ ಮೂಲತಃ ರಂಗಭೂಮಿ ಹಿನ್ನೆಲೆಯ ಕುಟುಂಬದವರು. ಇವರ ತಂದೆ ಬೆಳವಾಡಿ ನಂಜುಂಡಯ್ಯ ನಾರಾಯಣ ಸಹ ಕನ್ನಡ ರಂಗಭೂಮಿ ಕಲಾವಿದರು. ಕೆಲವು ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮೇಕಪ್ ಮಾನ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದ ಇವರು ಮೇಕಪ್ ನಾಣಿ ಎಂದೇ ಪ್ರಖ್ಯಾತಿ ಹೊಂದಿದ್ದರು. ತಾಯಿ ಭಾರ್ಗವಿ ಕೂಡ ರಂಗಭೂಮಿ ಕಲಾವಿದ, ಇವರ ಒಡಹುಟ್ಟಿದ ಸುಧಾ ಬೆಳವಾಡಿ, , ಸುಜಾತ ಬೆಳವಾಡಿ ಮತ್ತು ಪ್ರದೀಪ್ ಬೆಳವಾಡಿಯವರೂ ರಂಗದ ನಂಟಿನವರೇ. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಸುಚಿತ್ರ ಫಿಲಂ ಸ್ಕೂಲ್ ಆಫ್ ಆರ್ಟ್ಸ್ ಸ್ಥಾಪಿಸಿದ್ದಾರೆ. ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪನವರ ಮಹೋನ್ನತ ಕೃತಿ ‘ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿ, ‘ಪರ್ವ’ನಾಟಕ ನಿರ್ದೇಶಿಸಿ ಯಶಸ್ಸು ಕಂಡಿದ್ದಾರೆ. ಸಿನಿಮಾ, ರಂಗಭೂಮಿಯ ಮೂಲಕ ಕನ್ನಡವೊಂದೇ ಅಲ್ಲದೇ ಹಲವು ಭಾಷೆಗಳ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಸುಧಾ ಬೆಳವಾಡಿ

ಪ್ರಕಾಶ್ ಬೆಳವಾಡಿಯವರ ಸಹೋದರಿ ಸುಧಾ ಬೆಳವಾಡಿ ಅವರಿಗೆ ರಂಗಭೂಮಿಗೆ ಹುಟ್ಟಿನಿಂದಲೇ ರಕ್ತಗತವಾಗಿತ್ತು. ಕಿರುತೆರೆ, ಹಿರಿತೆರೆಗಳಲ್ಲೂ ಅವರು ಸಕ್ರಿಯರು. ಮಂಥನ, ಮನ್ವಂತರ, ಮಹಾಪರ್ವ, ಮಗಳು ಜಾನಕಿ ಮುಂತಾದ ಧಾರಾವಾಹಿಗಳಿಂದಲೂ ಅವರು ಖ್ಯಾತಿ ಹೊಂದಿದ್ದಾರೆ.

ಬಿ ಜಯಶ್ರೀ
ಒಬ್ಬ ಹಿರಿಯ ಭಾರತೀಯ ರಂಗಭೂಮಿ ನಟಿ, ನಿರ್ದೇಶಕಿ ಮತ್ತು ಗಾಯಕಿಯಾಗಿ ಕಲಾ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಅಪಾರ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗಳು. ಇಂದಿಗೂ ರಂಗಭೂಮಿ ಕಲಾವಿದೆಯಾಗಿ ಜನಮನ ಗೆಲ್ಲುತ್ತಿದ್ದಾರೆ. ಅವರ ಹಾಡುಗಳು ಹಾಗೂ ಅವರು ಅಭಿನಯಿಸಿದ ಸಿನಿಮಾಗಳನ್ನು ನೋಡುವ ಪ್ರತ್ಯೇಕ ಅಭಿಮಾನಿಗಳ ಗುಂಪೊಂದಿದೆ. ಆ ಮಟ್ಟಿಗೆ ಅವರು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಜೀವನ ಚಕ್ರ ಈ ಬಂಧ ಅನುಬಂಧ, ಸುಂದರ ಸ್ವಪ್ನಗಳು, ಮಾಲ್ಗುಡಿ ಡೇಸ್ಕೊ, ಟ್ರೇಶಿ ಕನಸು, ನಾಗಮಂಡಲ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಭಗವಾನ್, ಜೋಗಿ, ಮಾತಾ, ದುರ್ಗಿ ಮುಂತಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯನ ಮಾಡಿದ್ದಾರೆ.

ಗಿರೀಶ್ ಕಾರ್ನಾಡ್, ಸುಬ್ಬಯ್ಯ ನಾಯ್ಡು, ನಿನಾಸಂ ಸತೀಶ್‌, ಸಂಚಾರಿ ವಿಜಯ್, ಮೈಮ್ ರಮೇಶ್, ಡಾಲಿ ಧನಂಜಯ್‌, ಗುಳೇದಗುಡ್ಡದ ಗಂಗೂಬಾಯಿ, ಅಂಬುಜಮ್ಮ,ಆರ್.ನಾಗರತ್ನಮ್ಮ ಹೀಗೆ ಸಾಕಷ್ಟು ಕಲಾವಿದರಿದ್ದಾರೆ. ರಂಗಭೂಮಿಯನ್ನೆ ತಮ್ಮುಸಿರು ಎಂದುಕೊಂಡು ಬದುಕಿದ ಹಲವರಿದ್ದಾರೆ.

ಗಮನಿಸಿ: ನಾವಿಲ್ಲಿ ಕೆಲವು ಹೆಸರುಗಳನ್ನು ಮಾತ್ರ ನೀಡಿದ್ದೇವೆ. ರಂಗಭೂಮಿ ಮತ್ತು ಕಲೆ ಇವು ಇಷ್ಟಕ್ಕೆ ಸೀಮಿತ ಎಂದಲ್ಲ. ಇದು ಮಿತಿ ಇಲ್ಲದ ವಿಶಾಲ ಕ್ಷೇತ್ರ. ನಾವು ಕೆಲವರ ಹೆಸರುಗಳನ್ನು ಮಾತ್ರ ನೀಡಿದ್ದೇವೆ ಎಂದ ಮಾತ್ರಕ್ಕೆ ಇಷ್ಟೇ ಜನ ಪ್ರಸಿದ್ಧರು ಎಂದಲ್ಲ. ಇನ್ನೂ ಸಾಕಷ್ಟು ಕಲಾವಿದರು ಅಪಾರ ಕೊಡುಗೆ ನೀಡಿದ್ದಾರೆ ಮತ್ತು ಈಗಲೂ ನೀಡುತ್ತಿದ್ದಾರೆ.


    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ