Vishal about his Marriage: ತಮ್ಮ ಮದುವೆ ಬಗ್ಗೆ ವಿಶಾಲ್ ನೀಡಿದ ಮಾಹಿತಿಗೆ ಆಶ್ಚರ್ಯ ವ್ಯಕ್ತಪಡಿಸಿದ ಫ್ಯಾನ್ಸ್..ಅವರು ಹೇಳಿದ್ದಿಷ್ಟು!
Nov 08, 2022 04:46 PM IST
ತಮ್ಮ ಮದುವೆ ಬಗ್ಗೆ ಮಾಹಿತಿ ನೀಡಿದ ನಟ ವಿಶಾಲ್
- ನಿಮ್ಮ ಮದುವೆ ಬಗ್ಗೆ ಹೇಳಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ವಿಶಾಲ್, ''ಆಕ್ಟರ್ಸ್ ಯೂನಿಯನ್ ಕೆಲಸ ಆರಂಭವಾಗಿ ಸುಮಾರು ಮೂರು ವರ್ಷಗಳು ಆಗಿವೆ. ಮೊದಲು ಈ ಕಾಮಗಾರಿ ಮುಗಿಯಬೇಕು. ಈ ಜವಾಬ್ದಾರಿ ಮುಗಿದ ನಂತರ ನಾನು ಖಂಡಿತ ಮದುವೆಯಾಗುತ್ತೇನೆ. ಹಾಗೇ ಇದು ಲವ್ ಮ್ಯಾರೇಜ್ ಆಗಿರಲಿದೆ'' ಎಂದು ಉತ್ತರಿಸಿದ್ದಾರೆ.
ತಮಿಳು ನಟ ವಿಶಾಲ್ ಹಾಗೂ ನಟಿ ಅಭಿನಯ ಪ್ರೀತಿಸುತ್ತಿದ್ದು ಇಬ್ಬರೂ ಮದುವೆಯಾಗುತ್ತಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ವಿಶಾಲ್, ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಆದರೆ ನಟಿ ಅಭಿನಯ ಇದನ್ನು ನಿರಾಕರಿಸಿದ್ದರು. ಇದೀಗ ತಮ್ಮ ಮದುವೆ ಬಗ್ಗೆ ನಟ ವಿಶಾಲ್ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ನನ್ನದು ಖಂಡಿತ ಲವ್ ಮ್ಯಾರೇಜ್ ಎಂದು ಹೇಳಿದ್ದಾರೆ.
ವಿಶಾಲ್, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಹೆಸರು ಮಾಡಿರುವುದರ ಜೊತೆಗೆ ಸಮಾಜಸೇವೆಯಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಮಕ್ಕಳ್ ನಲಾ ಇಯಕ್ಕಂ ಹೆಸರಿನಲ್ಲಿ ತಮ್ಮದೇ ಟ್ರಸ್ಟ್ ಒಂದನ್ನು ಸ್ಥಾಪಿಸಿ, ಅದರ ಮೂಲಕ ಕಷ್ಟದಲ್ಲಿರುವ ಸಾವಿರಾರು ಜನರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ನವೆಂಬರ್ 6 ರಂದು ಈ ಟ್ರಸ್ಟ್ ವತಿಯಿಂದ ಚೆನ್ನೈನಲ್ಲಿ ಸುಮಾರು 11 ಜೋಡಿಗಳಿಗೆ ಸರಳ ವಿವಾಹವಾಗಲು ವಿಶಾಲ್ ಸಹಾಯ ಮಾಡಿದ್ದಾರೆ. ಮದುವೆಯಲ್ಲಿ ಎಲ್ಲಾ ಜೋಡಿಗೂ ಉಚಿತ ಮಾಂಗಲ್ಯ ಕೂಡಾ ನೀಡಿದ್ದಾರೆ. ಜೊತೆಗೆ ಮದುವೆಯ ಸಂಪೂರ್ಣ ವೆಚ್ಚವನ್ನ ಭರಿಸಿದ್ದು ಈ ಮದುವೆ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾರ್ಯಕ್ರಮದ ನಂತರ ಮಾತನಾಡಿದ ವಿಶಾಲ್, 'ಸಾಮೂಹಿಕ ಮದುವೆ ಮಾತ್ರವಲ್ಲದೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಾ ನಾನು ಸಹಾಯ ಮಾಡಲು ಸಿದ್ಧನಿದ್ದೇನೆ' ಎಂದರು. ನಿಮ್ಮ ಮದುವೆ ಬಗ್ಗೆ ಹೇಳಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ವಿಶಾಲ್, ''ಆಕ್ಟರ್ಸ್ ಯೂನಿಯನ್ ಕೆಲಸ ಆರಂಭವಾಗಿ ಸುಮಾರು ಮೂರು ವರ್ಷಗಳು ಆಗಿವೆ. ಮೊದಲು ಈ ಕಾಮಗಾರಿ ಮುಗಿಯಬೇಕು. ಈ ಜವಾಬ್ದಾರಿ ಮುಗಿದ ನಂತರ ನಾನು ಖಂಡಿತ ಮದುವೆಯಾಗುತ್ತೇನೆ. ಹಾಗೇ ಇದು ಲವ್ ಮ್ಯಾರೇಜ್ ಆಗಿರಲಿದೆ'' ಎಂದು ಉತ್ತರಿಸಿದ್ದಾರೆ. ವಿಶಾಲ್ ಅವರ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ. ಜೊತೆಗೆ ಅವರ ಉತ್ತರ ಕೇಳಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ವಿಶಾಲ್ ಕೈ ಹಿಡಿಯುವ ಹುಡುಗಿ, ಸಿನಿಮಾ ನಟಿಯೋ, ಸಿನಿಮಾದಿಂದ ಹೊರಗೆ ಇರುವವರೋ ಎಂಬ ಚರ್ಚೆ ಆರಂಭವಾಗಿದೆ.
ಸಾಕಷ್ಟು ಚರ್ಚೆಯಾಗ್ತಿದೆ ವಿಶಾಲ್ ಪ್ರೀತಿ, ಮದುವೆ ವಿಚಾರ
ಬಹಳ ವರ್ಷಗಳ ಹಿಂದೆ ನಟ ವಿಶಾಲ್ ಮತ್ತು ತಮಿಳು ನಟಿ ವರಲಕ್ಷ್ಮಿ ಶರತ್ಕುಮಾರ್ ಇಬ್ಬರೂ ಪ್ರೀತಿಸುತ್ತಿದ್ದಾರೆ, ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಸುದ್ದಿ ನಿಜವಾಗಲಿಲ್ಲ. ಇದಾದ ನಂತರ ಹೈದರಾಬಾದ್ ಮೂಲದ ಯುವತಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎನ್ನಲಾತ್ತು. ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರೂ ಮದುವೆಗೂ ಮುನ್ನ ಈ ನಿಶ್ಚಿತಾರ್ಥ ರದ್ದಾಗಿತ್ತು. ವಿಶಾಲ್, ನಟಿ ಅಭಿನಯ ಅವರನ್ನು ಪ್ರೀತಿಸುತ್ತಿದ್ದು ಇಬ್ಬರೂ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.
ಅಭಿನಯ ಮಾತು ಬಾರದ, ಕಿವಿ ಕೇಳದ ಹುಡುಗಿ. 2008ರಲ್ಲಿ 'ನೇನಿಂತೇ' ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಈ ಹುಡುಗಿ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಹುಡುಗರು' ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ತಂಗಿಯಾಗಿ ನಟಿಸಿದ್ದ ಈ ಚೆಲುವೆ, ನಂತರ ಕಿಚ್ಚು, ಆಟೋ ರಾಮಣ್ಣ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ತೆಲುಗಿನ ಕಿಂಗ್, ಶಂಭೋ ಶಿವ ಶಂಭೋ, ದಮ್ಮು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ನಾಡೋಡಿಗಳ್, ಈಶನ್, ವೀರಮ್, ಪೂಜಾರಿ, ಕುಟ್ರಮ್ 23 ಸಿನಿಮಾಗಲ್ಲಿ ನಟಿಸಿದ್ದಾರೆ. ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇಷ್ಟೆಲ್ಲಾ ಹೆಸರು ಗಳಿಸಿರುವ ಅಭಿನಯ ಕೂಡಾ, ವಿಶಾಲ್ ಅವರನ್ನು ಪ್ರೀತಿಸುತ್ತಿದ್ದು ಇಬ್ಬರೂ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅಭಿನಯ ಈ ಸುದ್ದಿಯನ್ನು ನಿರಾಕರಿಸಿದ್ದರು. ''ಮಾರ್ಕ್ ಆಂಟೋನಿ ಸಿನಿಮಾದಲ್ಲಿ ನಾನು ವಿಶಾಲ್ ಅವರ ಪತ್ನಿಯಾಗಿ ನಟಿಸುತ್ತಿದ್ದೇನೆ. ರೀಲ್ ಲೈಫ್ನಲ್ಲಿ ಹೆಂಡತಿಯಾಗಿ ನಟಿಸಿದ ಮಾತ್ರಕ್ಕೆ ರಿಯಲ್ ಲೈಫ್ನಲ್ಲೂ ಹೆಂಡತಿಯಾಗಲು ಸಾಧ್ಯವೇ..?'' ಎಂದು ಅಭಿನಯ ಗಾಸಿಪ್ ಹಬ್ಬಿಸುತ್ತಿರುವವರನ್ನು ಪ್ರಶ್ನಿಸಿದ್ದರು. ಆದರೆ ಇದೀಗ ವಿಶಾಲ್, ನಾನು ಲವ್ ಮ್ಯಾರೇಜ್ ಆಗುತ್ತಿದ್ದೇನೆ ಎಂದು ಹೇಳಿರುವ ಮಾತುಗಳು ಮತ್ತೆ ಅನುಮಾನ ಸೃಷ್ಟಿಸಿದೆ. ವಿಶಾಲ್ ಸದ್ಯಕ್ಕೆ 'ಲಾಠಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಅವರು ತುಪರಿವಾಲನ್ 2, ಮಾರ್ಕ್ ಆಂಟನಿ ಚಿತ್ರದಲ್ಲಿ ಕೂಡಾ ಬ್ಯುಸಿಯಾಗಿದ್ದಾರೆ.