Meena Vidyasagar: ಶ್ವಾಸಕೋಶ ಸೋಂಕಿನಿಂದ ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ಸಾವು!
Jun 29, 2022 08:04 AM IST
ಶ್ವಾಸಕೋಶ ಸೋಂಕಿನಿಂದ ಬಹುಭಾಷಾ ನಟಿ ಮೀನಾ ಅವರ ಪತಿ ಸಾವು
- ಕಳೆದ ಕೆಲ ದಿನಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾಸಾಗರ್‌ಗೆ ಚೆನ್ನೈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ, ಕೊನೆಯುಸಿರೆಳೆದಿದ್ದಾರೆ.
ಚೆನ್ನೈ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಮಂಗಳವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದ ವಿದ್ಯಾಸಾಗರ್, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾಸಾಗರ್‌ಗೆ ಚೆನ್ನೈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ, ಕೊನೆಯುಸಿರೆಳೆದಿದ್ದಾರೆ. ಅಂದಹಾಗೆ, ಇದೇ ವರ್ಷದ ಆರಂಭದಲ್ಲಿ ಮೀನಾ ಅವರ ಇಡೀ ಕುಟುಂಬಕ್ಕೆ ಕೋವಿಡ್ ಸೋಂಕು ತಗುಲಿತ್ತು.
ಇತ್ತ ವಿದ್ಯಾಸಾಗರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದಕ್ಷಿಣ ಭಾರತದ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಚೆನ್ನೈನಲ್ಲಿ ವಿದ್ಯಾಸಾಗರ್ ಅಂತ್ಯ ಸಂಸ್ಕಾರ ನಡೆಯಲಿದ್ದು, ಚಿತ್ರೋದ್ಯಮದವರೂ ಭಾಗವಹಿಸಲಿದ್ದಾರೆ.
ಶ್ವಾಸಕೋಶ ಕಸಿ ಮಾಡುವ ಪ್ರಕ್ರಿಯೆ ಈಡೇರಲಿಲ್ಲ..
ವಿದ್ಯಾಸಾಗರ್ ಕೆಲ ವರ್ಷಗಳಿಂದಲೇ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು. ಅದಕ್ಕೆ ಸಂಬಂಧಿಸಿದಂತೆ ನಿಯಮಿತ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಕೋವಿಡ್ ಸೋಂಕು ತಗುಲಿದ್ದರಿಂದ ಶ್ವಾಸಕೋಶ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು. ಇತ್ತೀಚಿನ ಕೆಲ ದಿನಗಳ ಹಿಂದೆ ಶ್ವಾಸಕೋಶ ಕಸಿ ಮಾಡುವ ಬಗ್ಗೆಯೂ ವೈದ್ಯರು ಮುಂದಾಗಿದ್ದರು. ಶ್ವಾಸಕೋಶ ಕಸಿಗೆ ಮೆದುಳು ನಿಷ್ಕ್ರೀಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಶ್ವಾಸಕೋಶವೇ ಬೇಕಿತ್ತು. ಆದರೆ, ಆ ರೀತಿಯ ದಾನಿ ಸಿಗದ ಹಿನ್ನೆಲೆಯಲ್ಲಿ ಔಷಧಿ ಮೂಲಕ ಗುಣಪಡಿಸಲು ಮುಂದಾದರೂ ಚಿಕಿತ್ಸೆ ಫಲಿಸಲಿಲ್ಲ.
2009 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ಜತೆ ವಿವಾಹ
ಅಂದಹಾಗೆ, ವಿದ್ಯಾಸಾಗರ್ ಬೆಂಗಳೂರು ಮೂಲದವರು. ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. 2009ರಲ್ಲಿಮೀನಾ ಅವರನ್ನು ವರಿಸಿದ್ದರು. ಈ ಜೋಡಿಗೆ ನೈನಿಕಾ ಹೆಸರಿನ ಮಗಳು ಇದ್ದಾಳೆ. ತಮಿಳು ನಟ ದಳಪತಿ ವಿಜಯ್ ನಟನೆಯ 'ತೇರಿ' ಚಿತ್ರದಲ್ಲಿ ವಿಜಯ್ ಅವರ ಮಗಳಾಗಿ ನೈನಿಕಾ ನಟಿಸಿದ್ದಾರೆ.
ಬಹುಭಾಷಾ ನಟಿ ಮೀನಾ ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಬಹು ಬೇಡಿಕೆಯ ನಾಯಕಿಯರಲ್ಲಿ ಒಬ್ಬರು. ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಮೀನಾ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲ ನಟಿಯಾಗಿ ಸಿನಿಮಾರಂಗಕ್ಕೆ ಬಂದು, ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿಯೂ ನಟಿಸಿದ್ದಾರೆ. ಪುಟ್ನಂಜ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಮೀನಾವರನ್ನು ಕನ್ನಡಿಗರು ಸ್ವೀಕರಿಸಿದರು. ಅದಾದ ಮೇಲೆ "ಚೆಲುವ", "ಮೊಮ್ಮಗ", "ಶ್ರೀ ಮಂಜುನಾಥ", ಗ್ರಾಮ ದೇವತೆ, ಸಿಂಹಾದ್ರಿಯ ಸಿಂಗ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ತೆರೆಗೆ ಬಂದಿದ್ದ ಹೆಂಡ್ತಿರ್ ದರ್ಬಾರ್ ಅವರ ಕನ್ನಡದಲ್ಲಿ ಕೊನೇ ಸಿನಿಮಾ.