Anil Kumble Kannada Love: ಹಿಂದಿ ಬೇಡ, ಕನ್ನಡ ಹಾಡ್ತೀನಿ...ಆಪ್ ಜಾಹೀರಾತಿನಲ್ಲಿ ಶಂಕರ್‌ನಾಗ್ ಚಿತ್ರದ ಹಾಡು ಹಾಡಿದ ಅನಿಲ್ ಕುಂಬ್ಳೆ
Dec 25, 2022 02:18 PM IST
ಆಪ್ ಜಾಹೀರಾತಿನಲ್ಲಿ ಕನ್ನಡ ಹಾಡು ಹಾಡಿದ ಅನಿಲ್ ಕುಂಬ್ಳೆ
- ನೀವು ನನಗೆ 80ರ ದಶಕದ ಹೀರೋನಂತೆ ಕಾಸ್ಟ್ಯೂಮ್ ಹಾಕಲು ಹೇಳಿ ಬಾಲಿವುಡ್ ಹಾಡಲು ಹೇಳುತ್ತಿದ್ದೀರಿ. ಬಾಲಿವುಡ್ ಬೇಡ, 80ರ ಫೇಮಸ್ ಕನ್ನಡ ಹಾಡನ್ನು ಹಾಡುತ್ತೇನೆ'' ಎಂದು ಡೈಲಾಗ್ ಆರಂಭಿಸುವ ಕುಂಬ್ಳೆ, ಕರಾಟೆ ಕಿಂಗ್ ಶಂಕರ್‌ನಾಗ್ ಅಭಿನಯದ 'ಗೀತಾ' ಚಿತ್ರದ ಹಾಡು ಹಾಡುತ್ತಾರೆ.
ಸಿನಿಮಾಗೂ, ಕ್ರಿಕೆಟಿಗರಿಗೂ ಅವಿನಾಭಾವ ಸಂಬಂಧ ಇರುವುದು ತಿಳಿದ ವಿಚಾರ. ಕ್ರಿಕೆಟಿಗರು ತಾವೂ ಒಬ್ಬರು ಸೆಲೆಬ್ರಿಟಿಗಳಾಗಿ ಸಿನಿಮಾ ತಾರೆಯರನ್ನು ಬಹಳ ಇಷ್ಟಪಡುತ್ತಾರೆ, ಅವರ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ತಮ್ಮಿಷ್ಟದ ಹಾಡುಗಳನ್ನು ಹಾಡಿ ಎಂಜಾಯ್ ಮಾಡುತ್ತಾರೆ. ಅದೇ ರೀತಿ ಟೀಂ ಇಂಡಿಯಾ ದಿಗ್ಗಜ, ಸ್ಪಿನ್ನರ್, ಪಂಜಾಬ್ ಕಿಂಗ್ಸ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಕೂಡಾ ಈಗ ಕನ್ನಡ ಹಾಡೊಂದನ್ನು ಹಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಕಳೆದ ವರ್ಷ ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಅನಿಲ್ ಕುಂಬ್ಳೆ, ಕಿಚ್ಚನ ಕಾಮನ್ ಡಿಪಿ ಬಿಡುಗಡೆ ಮಾಡುವ ಮೂಲಕ ಸುದೀಪ್‌ಗೆ ಹುಟ್ಟುಹಬ್ಬದ ಶುಭ ಕೋರಿದ್ದರು. ''ನನ್ನ ಸ್ನೇಹಿತ, ಸಿನಿಮಾ ದಿಗ್ಗಜ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡುತ್ತಿರುವುದು ನನಗೆ ಖುಷಿಯ ವಿಚಾರ. ಹೀಗೇ ನೀವು ಎಲ್ಲರಿಗೂ ಸ್ಫೂರ್ತಿಯಾಗಿರಿ'' ಎಂದು ಟ್ವೀಟ್ ಮಾಡಿದ್ದರು. ಕುಂಬ್ಳೆ ಮಾಡಿದ್ದ ಈ ಟ್ವೀಟ್ ಬಹಳ ವೈರಲ್ ಆಗಿತ್ತು. ಇದೇ ವರ್ಷ ತೆರೆ ಕಂಡ ಸುದೀಪ್ ಅವರ 'ವಿಕ್ರಾಂತ್ ರೋಣ' ಸಿನಿಮಾ ನೋಡಿ , ಅದನ್ನು ಮೆಚ್ಚಿ ಚಿತ್ರದ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಕಳೆದ ವರ್ಷ, ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಿಗಳ ಹಾಡನ್ನು ಕೇಳಿ ತಲೆದೂಗಿದ್ದರು. ತಾವೂ ಕೂಡಾ ವೇದಿಕೆ ಏರಿ, ಡಾ.ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ನಟನೆಯ 'ದೇವರಗುಡಿ' ಚಿತ್ರದ ಮಾಮರವೆಲ್ಲೋ...ಕೋಗಿಲೆಯೆಲ್ಲೋ... ಹಾಡನ್ನು ಹಾಡಿ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದರು. ಇದೀಗ ಇಂಗ್ಲೀಷ್ ಜಾಹೀರಾತೊಂದರಲ್ಲಿ ಅನಿಲ್ ಕುಂಬ್ಳೆ, ಕನ್ನಡ ಹಾಡು ಹಾಡಿ ಮತ್ತೊಮ್ಮೆ ಎಲ್ಲರ ಹೃದಯ ಗೆದ್ದಿದ್ದಾರೆ.
ಇತ್ತೀಚೆಗೆ ಅನಿಲ್ ಕುಂಬ್ಳೆ, ಖಾಸಗಿ ಕಂಪನಿಯ ಆಪ್ ಒಂದರ ಜಾಹೀರಾತಿನಲ್ಲಿ ಭಾಗವಹಿಸಿದ್ದಾರೆ. ವಿಶೇಷ ಎಂದರೆ ಈ ಜಾಹೀರಾತಿನಲ್ಲಿ ಕಂಪನಿಯು ಖ್ಯಾತ ಭಾರತೀಯ ಫುಟ್‌ಬಾಲ್ ಆಟಗಾರ ಸುನಿಲ್ ಛೆಟ್ರಿ, ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್, ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರನ್ನು ಕೂಡಾ ಬಳಸಿಕೊಂಡಿದೆ. ಅನಿಲ್ ಕುಂಬ್ಳೆ ಆರಂಭದಲ್ಲಿ ಬರುತ್ತಾರೆ. ''ನೀವು ನನಗೆ 80ರ ದಶಕದ ಹೀರೋನಂತೆ ಕಾಸ್ಟ್ಯೂಮ್ ಹಾಕಲು ಹೇಳಿ ಬಾಲಿವುಡ್ ಹಾಡಲು ಹೇಳುತ್ತಿದ್ದೀರಿ. ಬಾಲಿವುಡ್ ಬೇಡ, 80ರ ಫೇಮಸ್ ಕನ್ನಡ ಹಾಡನ್ನು ಹಾಡುತ್ತೇನೆ'' ಎಂದು ಡೈಲಾಗ್ ಆರಂಭಿಸುವ ಕುಂಬ್ಳೆ, ಕರಾಟೆ ಕಿಂಗ್ ಶಂಕರ್‌ನಾಗ್ ಅಭಿನಯದ 'ಗೀತಾ' ಚಿತ್ರದ ಸಂತೋಷಕ್ಕೆ ಹಾಡು ಸಂತೋಷಕ್ಕೆ...ಕುಣಿದು , ತಾಳಕ್ಕೆ ಕುಣಿದು..ಎಂದು ಚಿಟಿಕೆ ಹಾಕುತ್ತಾ ಹಾಡು ಹೇಳುವ ಮೂಲಕ ಆಪ್ ಕುರಿತು ಮಾತನಾಡುತ್ತಾರೆ.
ವಿಶ್ವನಾಥನ್ ಆನಂದ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ಬಹಳ ವೈರಲ್ ಆಗುತ್ತಿದೆ. ''ಅನಿಲ್ ಕುಂಬ್ಳೆ, ನೀವು ಮತ್ತೆ ಮತ್ತೆ ಕನ್ನಡ ಪ್ರೀತಿಯನ್ನು ತೋರುತ್ತಲೇ ಇದ್ದೀರಿ. ಎಷ್ಟು ಸಾರಿ ಅಂತ ನಮ್ಮ ಹೃದಯ ಕದಿಯುತ್ತೀರಿ'' ಎಂದು ಕ್ರೀಡಾಭಿಮಾನಿಗಳು, ಸಿನಿಪ್ರಿಯರು ಕಮೆಂಟ್ಸ್ ಮಾಡುತ್ತಿದ್ದಾರೆ.
ದುಬೈ ಪ್ರವಾಸದಲ್ಲೂ ಕನ್ನಡ ಹಾಡು ಹಾಡಿದ್ದ ಅನಿಲ್ ಕುಂಬ್ಳೆ
ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮುಂದುವರೆದ ಭಾಗವನ್ನು 2021 ಸೆಪ್ಟೆಂಬರ್‌ನಲ್ಲಿ ದುಬೈನಲ್ಲಿ ಆಯೋಜಿಸಲಾಗಿತ್ತು. ದುಬೈಗೆ ತಲುಪಿದ ನಂತರ ಎಲ್ಲಾ ಆಟಗಾರರು ಕ್ವಾರಂಟೈನ್‌ನಲ್ಲಿದ್ದರು. ಎಲ್ಲರಿಗೂ ಮನರಂಜನೆ ನೀಡುವ ಉದ್ಧೇಶದಿಂದ ಆಯೋಜಕರು ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ವೇಳೆ ಕೂಡಾ ಅನಿಲ್ ಕುಂಬ್ಳೆ, ಮ್ಯೂಸಿಕ್ ಟ್ರ್ಯಾಕ್ ಜೊತೆ ಮಾಮರವೆಲ್ಲೋ... ಕೋಗಿಲೆಯೆಲ್ಲೋ..ಹಾಡನ್ನು ರಾಗಬದ್ಧವಾಗಿ ಹಾಡಿ ನೆರೆದಿದ್ದವರನ್ನು ರಂಜಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಅನಿಲ್ ಕುಂಬ್ಳೆ ಅವರ ಕನ್ನಡ ಸಿನಿಮಾ ಮೇಲಿನ ಅಭಿಮಾನವನ್ನು ಕೊಂಡಾಡಿದ್ದರು.