Video: ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಟಪಾರ್ ಎಂದು ಬಾರಿಸಿದ ನಾನಾ ಪಾಟೇಕರ್; ಇದೇ ನಟರ ರಿಯಾಲಿಟಿ ಅಂದ್ರು ನೆಟ್ಟಿಗರು
Nov 15, 2023 04:30 PM IST
ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಹೊಡೆದ ನಾನಾ ಪಾಟೇಕರ್
- Nana Patekar: ಈ ವಿಡಿಯೋ ಕಂಡ ನೆಟ್ಟಿಗರು ನಟ ನಾನಾ ಪಾಟೇಕರ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. "ನಾವು ಸಾಮಾನ್ಯ ಜನರು ಭಾರತದಲ್ಲಿ ಈ ನಟರು ಮತ್ತು ಕ್ರಿಕೆಟ್ ಆಟಗಾರರಿಗೆ ದೇವರ ಸ್ಥಾನಮಾನವನ್ನು ನೀಡಿದ್ದೇವೆ, ಆದ್ದರಿಂದ ನಾವು ಹೊಡೆಸಿಕೊಳ್ಳಲು ಮತ್ತು ಒದಿಸಿಕೊಳ್ಳು ಸಿದ್ಧರಾಗಿರಬೇಕು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ನಟಿ ತನುಶ್ರೀ ದತ್ತಾ ಅವರ 'ಮೀಟೂ' ಪ್ರಕರಣದಲ್ಲಿ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ಹಿರಿಯ ನಟ-ನಿದೇರ್ಶಕ ನಾನಾ ಪಾಟೇಕರ್ ಇದೀಗ ಮತ್ತೊಮ್ಮೆ ಆಕ್ರೋಶಕ್ಕೆ ಒಳಗಾಗಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಟಪಾರ್ ಎಂದು ಬುರುಡೆಗೆ ಬಾರಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಚಿತ್ರವೊಂದರ ಶೂಟಿಂಗ್ ನಡೆಯುತ್ತಾ ಇರುತ್ತದೆ. ಈ ವೇಳೆ ಬಾಲಕನೊಬ್ಬ ನಾನಾ ಪಾಟೇಕರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾನೆ. ಆದರೆ ಕೋಪಗೊಂಡ ಪಾಟೇಕರ್ ಬಾಲಕನ ತಲೆಗೆ ಹೊಡೆಯುತ್ತಾರೆ. ಆಗ ಅಲ್ಲಿದ್ದ ಸಿಬ್ಬಂದಿ ಆ ಬಾಲಕನನ್ನು ಕತ್ತು ಹಿಡಿದು ಶೂಟಿಂಗ್ ಸೆಟ್ನಿಂದ ಹೊರ ಕಳುಹಿಸುತ್ತಾನೆ.
ಈ ವಿಡಿಯೋ ಕಂಡ ನೆಟ್ಟಿಗರು ನಟನ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. "ನಾವು ಸಾಮಾನ್ಯ ಜನರು ಭಾರತದಲ್ಲಿ ಈ ನಟರು ಮತ್ತು ಕ್ರಿಕೆಟ್ ಆಟಗಾರರಿಗೆ ದೇವರ ಸ್ಥಾನಮಾನವನ್ನು ನೀಡಿದ್ದೇವೆ, ಆದ್ದರಿಂದ ನಾವು ಹೊಡೆಸಿಕೊಳ್ಳಲು ಮತ್ತು ಒದಿಸಿಕೊಳ್ಳು ಸಿದ್ಧರಾಗಿರಬೇಕು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
"ಮುಂಬೈ ಉಗ್ರ ದಾಳಿ ಕುರಿತ 'The Attacks of 26/11' ಸಿನಿಮಾದಲ್ಲಿ ಈ ವ್ಯಕ್ತಿ (ನಾನಾ ಪಾಟೇಕರ್) ತಾನೊಬ್ಬ ದೊಡ್ಡ ದೇಶಭಕ್ತ ಎಂಬಂತೆ ಮಾತನಾಡುತ್ತಿದ್ದನು, ಆದರೆ ಇದೇ ಈ ಕಲಾವಿದರ ವಾಸ್ತವ. ಸಾಮಾನ್ಯ ಜನರೊಂದಿಗೆ ಇಂತಹ ವರ್ತನೆ ದುರದೃಷ್ಟಕರ. ನಮ್ಮ ನಿಜವಾದ ಹೀರೋಗಳು ಗಡಿಯಲ್ಲಿದ್ದಾರೆ ಹೊರತು ಚಲನಚಿತ್ರ ಪರದೆಯ ಮೇಲೆ ಅಲ್ಲ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. "ಮಕ್ಕಳಿಗೆ ಹೊಡೆಯುವ ಈ ನಾನಾ ಪಾಟೇಕರ್ ಸ್ಟಾರ್‌ಡಮ್ ಎಂಬ ಅಹಂನಿಂದ ಹುಚ್ಚನಾಗಿದ್ದಾರೆ" ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ತೆರೆಕಂಡ ಗದರ್ 2 ಮತ್ತು ದಿ ವ್ಯಾಕ್ಸಿನ್ ವಾರ್ ಚಿತ್ರಗಳಲ್ಲಿ ನಾನಾ ಪಾಟೇಕರ್ ನಟಿಸಿದ್ದಾರೆ. 2009 ರ 'ಹಾರ್ನ್ ಓಕೆ ಪ್ಲೀಸ್' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ನಟಿ ತನುಶ್ರೀ ದತ್ತಾ ಅವರು ನಾನಾ ಪಾಟೇಕರ್ ವಿರುದ್ಧ ಆರೋಪಿಸಿದ್ದರು. ಈ ಪ್ರಕರಣ ದೇಶಾದ್ಯಂತ 'ಮೀಟೂ' ಹೋರಾಟದ ಆರಂಭಕ್ಕೆ ಕಾರಣವಾಗಿತ್ತು.