ಲಾರೆನ್ಸ್ ಬಿಷ್ಣೋಯ್ ಎದುರು ಯಾವ ನಟನೂ ಸುಂದರವಾಗಿ ಕಾಣ್ತಿಲ್ಲ; ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್
Oct 16, 2024 02:30 PM IST
ಲಾರೆನ್ಸ್ ಬಿಷ್ಣೋಯ್ ಎದುರು ಯಾವ ನಟನೂ ಸುಂದರವಾಗಿ ಕಾಣ್ತಿಲ್ಲ ಎಂದು ಟ್ವೀಟ್ ಮಾಡಿದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಪ್ರತಿದಿನದ ಹಾಗು ಹೋಗುಗಳ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆಯುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಲ್ಮಾನ್ ಖಾನ್ ಭದ್ರತೆ ವಿಚಾರವಾಗಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಎದುರು ಯಾವ ನಟನೂ ಸುಂದರವಾಗಿ ಕಾಣ್ತಿಲ್ಲ ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರನ್ನು ಹತ್ಯೆ ಮಾಡಿದ್ದು ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಘಟನೆ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಿನಿಮಾ ಚಿತ್ರೀಕರಣ, ಬಿಗ್‌ಬಾಸ್ ಸೆಟ್, ಮನೆ, ಫಾರ್ಮ್ ಹೌಸ್ ಸೇರಿದಂತೆ ಸಲ್ಮಾನ್ ಖಾನ್ ಹೋದಲ್ಲಿ, ಬಂದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಸಲ್ಮಾನ್ ಖಾನ್ ಭದ್ರತೆ ಬಗ್ಗೆ ಆರ್‌ಜಿವಿ ಸರಣಿ ಟ್ವೀಟ್
ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯ್ ವಿಚಾರವಾಗಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದು ಲಾರೆನ್ಸ್ ಮುಂದೆ ಯಾವ ಬಾಲಿವುಡ್ ನಟನೂ ಇಲ್ಲ ಎಂದಿದ್ದಾರೆ. ಪ್ರತಿದಿನದ ಹಾಗುಹೋಗುಗಳ ಬಗ್ಗೆ ಟ್ವೀಟ್ ಮಾಡಿ ತಮ್ಮದೇ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಆರ್‌ಜಿವಿ ಈಗ ಸಲ್ಮಾನ್ ಖಾನ್ ವಿಚಾರವಾಗಿಯೂ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಬಗ್ಗೆ ರಾಮಗೋಪಾಲ್ ವರ್ಮಾ ಪ್ರತಿದಿನ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಅಲ್ಲದೆ ಸಲ್ಮಾನ್ ಖಾನ್‌ಗೆ ಸಲಹೆ ಕೂಡಾ ನೀಡಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಅವರ ಎಚ್ಚರಿಕೆಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಮೂಲ ತಾವು ಹೇಡಿಯಲ್ಲ ಎಂಬುದನ್ನು ಸಲ್ಮಾನ್ ಖಾನ್ ಸಾಬೀತುಪಡಿಸಬೇಕು ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.
"ನನ್ನ ಪ್ರಕಾರ ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯ್‌ಗೆ ಸೂಪರ್ ಕೌಂಟರ್ ಬೆದರಿಕೆ ಹಾಕಬೇಕು. ಇಲ್ಲದಿದ್ದರೆ ಆತ ಹೇಡಿಯಂತೆ ಕಾಣಿಸುತ್ತಾನೆ. ಬಿಷ್ಣೋಯ್‌ಗೆ ಹೋಲಿಸಿದರೆ ಸಲ್ಮಾನ್ ಖಾನ್, ತನ್ನ ಅಭಿಮಾನಿಗಳ ಮುಂದೆ ತಾನು ದೊಡ್ಡ ಸೂಪರ್ ಹೀರೋ ಎಂದು ಸಾಬೀತುಪಡಿಸಬೇಕಾಗಿದೆ" ಎಂದು ಆರ್‌ಜಿವಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಫೋಟೋವೊಂದನ್ನು ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಬಿಷ್ಣೋಯ್ ನೋಡಲು ಸುಂದರವಾಗಿದ್ದಾನೆ, ಅವನ ಮುಂದೆ ಚೆಂದವಾಗಿ ಕಾಣುವ ಯಾವ ಬಾಲಿವುಡ್ ನಟರೂ ನನಗೆ ನೆನಪಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಮುಂದೆ ಯಾವ ನಟನೂ ಇಲ್ಲ ಎಂದ ರಾಮ್‌ಗೋಪಾಲ್ ವರ್ಮಾ
1998ರಲ್ಲಿ ಸಲ್ಮಾನ್ ಖಾನ್, ಕೃಷ್ಣಮೃಗವನ್ನು ಬೇಟೆಯಾಡಿದಾಗ ಲಾರೆನ್ಸ್ ಬಿಷ್ಣೋಯ್‌ಗೆ ಕೇವಲ 5 ವರ್ಷ ವಯಸ್ಸು, ಇಂತಹ ವ್ಯಕ್ತಿ 25 ವರ್ಷಗಳಿಂದ ಸಲ್ಮಾನ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಅಚ್ಚರಿ ಮೂಡಿಸಿದೆ, ನನ್ನ X ನಲ್ಲಿ 6.2 ಮಿಲಿಯನ್ ಫಾಲೋವರ್‌ಗಳಿದ್ದಾರೆ. ಈ ಟ್ವೀಟ್ 6.2 ಮಿಲಿಯನ್ ವ್ಯೂವ್ಸ್ ಪಡೆದಿದೆ. ಇಷ್ಟು ಜನರು ಬಿಷ್ಣೋಯ್‌ಗೆ ಸಂಬಂಧಿಸಿದ ಟ್ವೀಟ್ ನೋಡಿರುವುದು ಅವರ ಪ್ರಸ್ತುತ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಆರ್‌ಜಿವಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
1998 ರಲ್ಲಿ, ಹಮ್ ಸಾಥ್ ಸಾಥ್ ಹೈ ಚಿತ್ರದ ಶೂಟಿಂಗ್ ಸಮಯದಲ್ಲಿ, ಸಲ್ಮಾನ್ ಖಾನ್ ರಾಜಸ್ಥಾನದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಬಿಷ್ಣೋಯ್ ಸಮುದಾಯ ದೇವರಂತೆ ಆರಾಧಿಸುವ ಕೃಷ್ಣಮೃಗವನ್ನು ಕೊಂದು ಸಲ್ಮಾನ್ ಖಾನ್ ತಪ್ಪು ಮಾಡಿದ್ದಾರೆ. ಬಿಕಾನೇರ್ ದೇವಸ್ಥಾನಕ್ಕೆ ಹೋಗಿ ಆತ ಬಹಿರಂಗವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯ್, ಹಲವು ವರ್ಷಗಳಿಂದ ಸಲ್ಮಾನ್ ಹಾಗೂ ಆತನ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ.