logo
ಕನ್ನಡ ಸುದ್ದಿ  /  ಮನರಂಜನೆ  /  ಕಂಫರ್ಟ್‌ ಝೋನ್‌ನಿಂದ ಹೊರಬನ್ನಿ, ವಾರಕ್ಕೆ 70 ಗಂಟೆ ಕೆಲಸದ ಕುರಿತು ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಸ್ಪೂರ್ತಿದಾಯಕ ಬರಹ

ಕಂಫರ್ಟ್‌ ಝೋನ್‌ನಿಂದ ಹೊರಬನ್ನಿ, ವಾರಕ್ಕೆ 70 ಗಂಟೆ ಕೆಲಸದ ಕುರಿತು ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಸ್ಪೂರ್ತಿದಾಯಕ ಬರಹ

Praveen Chandra B HT Kannada

Nov 02, 2023 07:42 AM IST

google News

ಕಂಫರ್ಟ್‌ ಝೋನ್‌ನಿಂದ ಹೊರಬನ್ನಿ, 70 ಗಂಟೆ ಕೆಲಸದ ಕುರಿತು ನಟ ಸುನಿಲ್‌ ಶೆಟ್ಟಿ ಬರಹ

    • Sunil Shetty about 70 hour work week: ಇನ್ಪೋಸಿಸ್‌ ಸಹ ಸ್ಥಾಪಕರಾದ ನಾರಾಯಣ ಮೂರ್ತಿಯವರ ವಾರಕ್ಕೆ 70 ಗಂಟೆ ಕೆಲಸದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಇದೇ ಸಮಯದಲ್ಲಿ ಬಾಲಿವುಡ್‌ ನಟ, ನಿರ್ಮಾಪಕ ಸುನಿಲ್‌ ಶೆಟ್ಟಿ ಅವರು ಲಿಂಕ್ಡ್‌ಇನ್‌ನಲ್ಲಿ ಈ ಕುರಿತು ಸ್ಪೂರ್ತಿದಾಯಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.
ಕಂಫರ್ಟ್‌ ಝೋನ್‌ನಿಂದ ಹೊರಬನ್ನಿ, 70 ಗಂಟೆ ಕೆಲಸದ ಕುರಿತು ನಟ ಸುನಿಲ್‌ ಶೆಟ್ಟಿ ಬರಹ
ಕಂಫರ್ಟ್‌ ಝೋನ್‌ನಿಂದ ಹೊರಬನ್ನಿ, 70 ಗಂಟೆ ಕೆಲಸದ ಕುರಿತು ನಟ ಸುನಿಲ್‌ ಶೆಟ್ಟಿ ಬರಹ (Sunil Shetty Linkedin post)

ಭಾರತದ ಯುವಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು, ಇದರಿಂದ ದೇಶದ ಒಟ್ಟಾರೆ ಉತ್ಪಾದಕತೆ ಉತ್ತಮಗೊಳ್ಳುತ್ತದೆ ಎಂದು ಇನ್ಫೋಸಿಸ್‌ ಸ್ಥಾಪಕರಾದ ನಾರಾಯಣ ಮೂರ್ತಿಯವರು ಹೇಳಿರುವ ಮಾತಿನ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಇವರ ಹೇಳಿಕೆಯ ಪರವಿರೋಧ ಚರ್ಚೆಯಾಗುತ್ತಿದೆ. ಕೆಲವರು ಇವರ ಹೇಳಿಕೆಯನ್ನು ಒಪ್ಪಿದರೆ, ಇನ್ನು ಕೆಲವರು ಇದನ್ನು ಕಟುವಾಗಿ ಟೀಕಿಸಿದ್ದಾರೆ. ಈ ವಿಷಯದ ಕುರಿತು ಇದೀಗ ನಟ, ಬಿಸ್ನೆಸ್‌ಮ್ಯಾನ್‌ ಸುನೀಲ್‌ ಶೆಟ್ಟಿಯವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಾರಾಯಣಮೂರ್ತಿಯಂತಹ ವ್ಯಕ್ತಿಗಳು ಏನನ್ನಾದರೂ ಹೇಳಿದಾಗ ಅವರು ವಿಷಯಗಳನ್ನು ನೋಡುವ ರೀತಿಯನ್ನು ಗಮನದಲ್ಲಿಟ್ಟುಕೊಂಡು ಜನರು ಎಚ್ಚರಿಕೆಯಿಂದ ಆಲಿಸಬೇಕು. ಅದನ್ನು ಸ್ವತಃ ವಿಶ್ಲೇಷಣೆ ಮಾಡಬೇಕು. ಅದರಿಂದ ಉತ್ತಮವಾಗಿರುವುದನ್ನು ತೆಗೆದುಕೊಳ್ಳಬೇಕು ಎಂದು ಸನಿಲ್‌ ಶೆಟ್ಟಿ ಹೇಳಿದ್ದಾರೆ. "ಇದು ವಿವಾದದ ವಿಷಯವಾಗಿದ್ದರೂ ಅವರು ನಿಜವಾಗಿಯೂ ಏನು ಹೇಳಿದ್ದಾರೆ ಎಂದು ಯೋಚಿಸುವುದು ನನಗೆ ಮುಖ್ಯವಾಗಿದೆ. ನನಗೆ ಇದು ಗಂಟೆಗಳ ಸಮಸ್ಯೆಯಲ್ಲ, 70 ಗಂಟೆ ಅಥವಾ 100 ಗಂಟೆಯ ವಿಷಯವಲ್ಲ. ನಾನು ಇದನ್ನು ಸರಳವಾಗಿ ಹೀಗೆ ಅರ್ಥ ಮಾಡಿಕೊಂಡಿದ್ದೇನೆ. ವಾರದಲ್ಲಿ 70 ಗಂಟೆ ಕೆಲಸ ಮಾಡುವುದು ಎಂದರೆ, ನಮ್ಮ ಆರಾಮ ವಲಯ ಅಥವಾ ಕಂಫರ್ಟ್‌ ಝೋನ್‌ನಿಂದ ಹೊರಬರುವ ವಿಚಾರವಾಗಿದೆ" ಎಂದು ಸುನಿಲ್‌ ಶೆಟ್ಟಿ ಹೇಳಿದ್ದಾರೆ.

ಸುನೀಲ್‌ ಶೆಟ್ಟಿ ಬರಹ

ಕೆಲಸ- ಜೀವನದ ಸಮತೋಲನದ ಸುತ್ತಲಿನ ಚರ್ಚೆ ಆರಂಭವಾಗಿದೆ. ನಾರಾಯಣ ಮೂರ್ತಿಯಂತಹ ಪ್ರಮುಖ ವ್ಯಕ್ತಿಗಳು ಏನಾದರೂ ಹೇಳಿದಾಗ ನೀವು ಎಚ್ಚರಿಕೆಯಿಂದ ಆಲಿಸಬೇಕು, ವಿಶ್ಲೇಷಿಸಬೇಕು, ಅದರಿಂದ ಉತ್ತಮವಾಗಿರುವುದನ್ನು ತೆಗೆದುಕೊಳ್ಳಬೇಕು ಎಂದು ನಾನು ಹೇಳುತ್ತೇನೆ.

ಇದು ವಿವಾದಾಸ್ಪದ ವಿಷಯವಾಗಿದ್ದರೂ ಅವರು ನಿಜಕ್ಕೂ ಏನು ಹೇಳಿದ್ದಾರೆ ಎಂದು ಆಲೋಚಿಸುವುದು ಮುಖ್ಯವಾಗಿದೆ. ನನಗೆ ಇದು ನಿಜವಾಗಿಯೂ ಗಂಟೆಗಳ ಸಂಖ್ಯೆಯ ವಿಚಾರವಾಗಿ ಕಾಣಿಸುತ್ತಿಲ್ಲ. 70 ಅಥವಾ 100 ಗಂಟೆಯ ವಿಷಯವಲ್ಲ. ನಾನು ಅವರ ಆಲೋಚನೆಗಳನ್ನು ಸರಳವಾಗಿ ಈ ರೀತಿ ಅರ್ಥೈಸಿಕೊಂಡಿದ್ದೇನೆ. ಇದು ನಿಮ್ಮ ಆರಾಮವಲಯದಾಚೆಗೆ ಯೋಚಿಸುವುದು.

ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ, ಚಲನಚಿತ್ರ ಕ್ಷೇತ್ರದಲ್ಲಿ ಅಮಿತಾಬ್‌ ಬಚ್ಚನ್‌, ಬಿಸಿನೆಸ್‌ನಲ್ಲಿ ರತನ್ ಟಾಟಾ ಅಥವಾ ವಿಜ್ಞಾನದಲ್ಲಿ ಅಬ್ದುಲ್‌ ಕಲಾಂ ಅವರನ್ನೇ ನೋಡಿ. ಅವರವರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ವ್ಯಕ್ತಿಗಳೇ ನಮಗೆ ಪ್ರಮುಖ ಉದಾಹರಣೆ.

ಇವರು ತಮ್ಮ ಕಂಫರ್ಟ್‌ ಝೋನ್‌ನಲ್ಲಿದ್ದುಕೊಂಡು ಈ ಸಾಧನೆ ಮಾಡಿದ್ದಾರೆ ಎಂದು ಅನಿಸುವುದೇ, ಇವರೆಲ್ಲರೂ ತಮ್ಮ ವೃತ್ತಿ ಜೀವನದ ಆರಂಭಿಕ ವರ್ಷಗಳಲ್ಲಿ ಕೆಲಸ ಮತ್ತು ಜೀವನದ ನಡುವೆ ನಮಗೆ ಸಮತೋಲನ ಇದೆಯೇ ಎಂದು ಯೋಚಿಸುತ್ತ ಕಾಲ ಕಳೆದಿದ್ದಾರೆ ಎಂದು ಭಾವಿಸಬಹುದೇ?

ಅವರು ಹಾಗೆ ಮಾಡಲಿಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಆರಂಭಿಕ ವರ್ಷಗಳಲ್ಲಿ ಮತ್ತು ನಂತರವೂ ಸುಮಾರು ವರ್ಷಗಳ ಕಾಲ ಅವರು ತಮಗೆ ನಿಗದಿಪಡಿಸಿದ ಮಿತಿಯನ್ನು ಮೀರಿ ಅವರು ಕಾರ್ಯನಿರ್ವಹಿಸಿದ್ದಾರೆ ಎಂದು ನಾನು ಅಂದಾಜುಮಾಡಬಲ್ಲೆ. ಯುವ ಜನತೆ ತಮ್ಮ ಆರಂಭಿಕ ವರ್ಷಗಳಲ್ಲಿ ಗಡಿಯನ್ನು ಮೀರಿ ಕಾರ್ಯನಿರ್ವಹಿಸಬೇಕು ಎಂದು ನಾರಾಯಣ ಮೂರ್ತಿಯವರ ಹೇಳಿಕೆಯನ್ನು ಈ ಅರ್ಥದಲ್ಲಿ ಅರ್ಥಮಾಡಿಕೊಳ್ಳಬೇಕು.

ಕೌಶಲಗಳನ್ನು ಹೊಂದುವುದು, ಹೊಸತನ್ನು ಪಡೆಯುವುದು, ಒತ್ತಡವನ್ನು ನಿಭಾಯಿಸುವುದು, ಇತರೆ ಕೆಲಸಗಳ ಕುರಿತು ಕಲಿಕೆ, ಸಹಯೋಗದ ಪರಿಸರದಲ್ಲಿ ಕಾರ್ಯನಿರ್ವಹಣೆ ಮತ್ತು ಹೆಚ್ಚಿನ ಅವಕಾಶ ಪಡೆದುಕೊಳ್ಳಲು ಪ್ರಯತ್ನಿಸುವುದು ಎಲ್ಲಾ ಯುವ ಜನತೆಯ ಮೊದಲ ಆದ್ಯತೆಯಾಗಬೇಕು.

ವೃತ್ತಿ ಜೀವನದ ಆರಂಭಿಕ ಹಂತದಲ್ಲಿ ಕಲಿಕೆಗೆ ಹೆಚ್ಚಿನ ವೇಗ ಇರುತ್ತದೆ. ಬಹುತೇಕರ ಸಂದರ್ಭದಲ್ಲಿ ಆ ಸಮಯದಲ್ಲಿ ಮದುವೆ, ಮಕ್ಕಳು, ಮನೆ ಸಾಲ ಅಥವಾ ವಯಸ್ಸಾದಂತೆ ಜೀವನದಲ್ಲಿ ಎದುರಾಗುವ ನೂರಾರು ಸಮಸ್ಯೆಗಳ ಕುರಿತು ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಚಿಂತಿಸಬೇಕಿಲ್ಲ.

ನನ್ನ 20ನೆಯ ವಯಸ್ಸಿನಲ್ಲಿಯೇ ಏನಾದರೂ ಬದಲಾವಣೆ ಕಂಡಿದ್ದರೆ, ಅದಕ್ಕೆ ನಾನು 17ನೇ ವಯಸ್ಸಿನಲ್ಲಿ ಪೂರ್ಣ ಸಮಯ ಕೆಲಸ ಮಾಡಿರುವುದು ಕಾರಣ. ವಾರಾಂತ್ಯಗಳು ಮತ್ತು ವಿಶೇಷವಾಗಿ ಹಬ್ಬಗಳ ಸಮಯದಲ್ಲಿ ಮತ್ತು ವಾರದ ಹೆಚ್ಚಿನ ರಾತ್ರಿ ನಾನು ರೆಸ್ಟೂರೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೆ. ಇನ್ನೂ ನನ್ನ ಫಿಟ್‌ನೆಸ್‌ ದಿನಚರಿಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದೇನೆ.

ಖಂಡಿತಾ, ಕೆಲಸವನ್ನೂ ಮೀರಿದ ಜೀವನವಿದೆ, ಇರಲೇಬೇಕು. ನಿಮ್ಮ ಕುಟುಂಬ, ನಿಮ್ಮ ಆರೋಗ್ಯ, ಹವ್ಯಾಸವನ್ನು ಪೋಷಿಸುವುದು, ನಿಮ್ಮ ಸ್ನೇಹಿತರು ಮತ್ತು ನಮಗೆ ಸಂತೋಷವನ್ನು ತರುವ ಮತ್ತು ಜೀವನವನ್ನು ಶ್ರೀಮಂತಗೊಳಿಸುವ ಇತರ ವಿಷಯಗಳಿಗಾಗಿ ಸಮಯವನ್ನು ಹೊಂದಿರುವುದು ಮುಖ್ಯ ಎನ್ನುವುದನ್ನು ನಾನು ಒಪ್ಪುವೆ.

ಆದರೆ ಜಗತ್ತು ವೇಗವಾಗಿ ವಿಕಸನಗೊಳ್ಳುತ್ತಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ. ತಂತ್ರಜ್ಞಾನ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಾವು ಊಹಿಸಿದ್ದಕ್ಕಿಂತ ಹೆಚ್ಚು ವೇಗವಾಗಿ ಜಗತ್ತನ್ನು ಮರುರೂಪಿಸುತ್ತದೆ. ನಾವು ಉತ್ತಮವಾಗುತ್ತಲೇ ಇರಬೇಕಾಗುತ್ತದೆ.

ನನ್ನ ಆತ್ಮೀಯ ಭವಿಷ್ಯದ ನಾಯಕರೇ, ಶ್ರೇಷ್ಠತೆಗಾಗಿ ಅಭಿವೃದ್ಧಿಯಾಗಿ, ಕಠಿಣ ಪರಿಶ್ರಮದಲ್ಲಿ ತೊಡಗಿಸಿಕೊಳ್ಳಿ, ಕೌಶಲ ಉತ್ತಮಪಡಿಸಿ, ಮಾರ್ಗದರ್ಶಕರನ್ನು ಹುಡುಕಿ, ನೆಟ್‌ವರ್ಕ್‌ಗಳನ್ನು ನಿರ್ಮಿಸಿ, ಸಾಫ್ಟ್‌ ಸ್ಕಿಲ್‌ಗೆ ಹೂಡಿಕೆ ಮಾಡಿ, ಉಳಿದವು ತನ್ನಷ್ಟಕ್ಕೆ ಬರುತ್ತವೆ ಎಂದು ಸುನಿಲ್‌ ಶೆಟ್ಟಿ ಅವರು ತಮ್ಮ ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

 

ಸುನಿಲ್‌ ಶೆಟ್ಟಿ ಬರಹವೂ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಕೆಲವರು ಸುನಿಲ್‌ ಶೆಟ್ಟಿ ಮಾತಿಗೆ ಸಹಮತ ಸೂಚಿಸಿದ್ದಾರೆ. ಇನ್ನು ಕೆಲವರು "ನಾರಾಯಣ ಮೂರ್ತಿಯವರ ಹೇಳಿಕೆಯ ಉದ್ದೇಶ ನೀವು ಅಂದುಕೊಂಡಂತೆ ಇಲ್ಲ" ಎಂದು ಬೇರೆಯದ್ದೇ ರೀತಿ ವ್ಯಾಖ್ಯಾನಿಸಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ