logo
ಕನ್ನಡ ಸುದ್ದಿ  /  ಮನರಂಜನೆ  /  ಸಿನಿಸ್ಮೃತಿ: ಅಂದು ಪುಟ್ಟಣ್ಣ ಕಣಗಾಲ್, ಇಂದು ಕೋಡ್ಲು ರಾಮಕೃಷ್ಣ; ಕಥೆ- ಕಾದಂಬರಿಗಳಿಗೆ ಜೀವ ತುಂಬಿದ ನಿರ್ದೇಶಕರಿವರು -ಚೇತನ್ ನಾಡಿಗೇರ್ ಬರಹ

ಸಿನಿಸ್ಮೃತಿ: ಅಂದು ಪುಟ್ಟಣ್ಣ ಕಣಗಾಲ್, ಇಂದು ಕೋಡ್ಲು ರಾಮಕೃಷ್ಣ; ಕಥೆ- ಕಾದಂಬರಿಗಳಿಗೆ ಜೀವ ತುಂಬಿದ ನಿರ್ದೇಶಕರಿವರು -ಚೇತನ್ ನಾಡಿಗೇರ್ ಬರಹ

Nov 06, 2024 07:58 PM IST

google News

ಚೇತನ್ ನಾಡಿಗೇರ್ ಸಿನಿಸ್ಮೃತಿ ಅಂಕಣ ಬರಹ

    • ಸಾಹಿತ್ಯ ಲೋಕದ ಮೌಲಿಕ ಕೃತಿಗಳನ್ನು ಕನ್ನಡದ ನಿರ್ದೇಶಕರು ಸಮರ್ಥವಾಗಿ ಬೆಳ್ಳಿ ಪರದೆಗೆ ತಂದ ಹಲವು ಉದಾಹರಣೆಗಳಿವೆ. ಇದೀಗ ತೆರೆಗೆ ಬರಲು ಸಿದ್ಧವಾಗಿರುವ ಕೋಡ್ಲು ರಾಮಕೃಷ್ಣ ನಿರ್ದೇಶನದ 'ಶಾನುಭೋಗರ ಮಗಳು' ಈ ಪಟ್ಟಿಗೆ ಹೊಸ ಸೇರ್ಪಡೆ. ಇದೇ ನೆಪದಲ್ಲಿ ಕಥೆ-ಕಾದಂಬರಿ ಆಧರಿತ ಗಟ್ಟಿ ಚಿತ್ರಗಳ ನೆನಪುಗಳ ಮೆರವಣಿಗೆ ಇಲ್ಲಿದೆ.
ಚೇತನ್ ನಾಡಿಗೇರ್ ಸಿನಿಸ್ಮೃತಿ ಅಂಕಣ ಬರಹ
ಚೇತನ್ ನಾಡಿಗೇರ್ ಸಿನಿಸ್ಮೃತಿ ಅಂಕಣ ಬರಹ

ಕನ್ನಡ ಸಿನಿಮಾ ಪರಂಪರೆ: ಕನ್ನಡ ಮನರಂಜನಾ ಕ್ಷೇತ್ರದ ಆಗುಹೋಗುಗಳ ಒಳನೋಟ ಕಟ್ಟಿಕೊಡುವ ಅಂಕಣ 'ಸಿನಿಸ್ಮೃತಿ'. ಹಿರಿಯ ಪತ್ರಕರ್ತ ಚೇತನ್ ನಾಡಿಗೇರ್‌ ಬರೆಯುವ ಈ ಅಂಕಣವು ಕನ್ನಡ ಮನರಂಜನಾ ಕ್ಷೇತ್ರದ ಸಮಕಾಲೀನ ವಿದ್ಯಮಾನಗಳನ್ನು ಇತಿಹಾಸದ ನೆನಪುಗಳೊಂದಿಗೆ ಅಲಂಕರಿಸಲಿದೆ. ಸಿನಿಮಾ ಕುರಿತಂತೆ ಕನ್ನಡಿಗರ ಆಶೋತ್ತರಗಳನ್ನೂ, ಭವಿಷ್ಯದ ಕನಸುಗಳನ್ನೂ ಹಂಚಿಕೊಳ್ಳಲಿದೆ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ಸಿನಿಸ್ಮೃತಿ' ಅಂಕಣವು ವಾರದಲ್ಲಿ ಎರಡು ದಿನ ಪ್ರಕಟವಾಗಲಿದೆ. ನೀವು ಸಿನಿಮಾ ಪ್ರೇಮಿಗಳಾಗಿದ್ದರೆ ಖಂಡಿತ ಇದು ನಿಮಗೆ ಹಿಡಿಸುತ್ತೆ, ಈ ಅಂಕಣ ಬರಹವನ್ನು ಪ್ರತಿ ಸಲ ನೀವು ಪೂರ್ತಿ ಓದ್ತೀರಿ ಮತ್ತು ನಿಮ್ಮ ಆಪ್ತರೊಂದಿಗೆ ಖಂಡಿತ ಶೇರ್ ಮಾಡ್ತೀರಿ.

ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಶಾನುಭೋಗರ ಮಗಳು’ ಚಿತ್ರವು ಇತ್ತೀಚೆಗೆ ಸೆನ್ಸಾರ್ ಆಗಿ, ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ. ಇದು ಭಾಗ್ಯ ಕೃಷ್ಣಮೂರ್ತಿ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಚಿತ್ರ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಕೋಡ್ಲು, ಇದು ತಮ್ಮ ನಿರ್ದೇಶನದ 14ನೇ ಕಾದಂಬರಿ ಆಧಾರಿತ ಚಿತ್ರ ಎಂದು ಹೇಳಿಕೊಂಡರು.

ಕೋಡ್ಲು ತಮ್ಮ ಚಿತ್ರಜೀವನದಲ್ಲಿ 32 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಪೈಕಿ 14 ಕಾದಂಬರಿ ಆಧಾರಿತ ಚಿತ್ರಗಳು ಎಂಬುದು ವಿಶೇಷ. ಮಿಕ್ಕಂತೆ ಅವರು ಬೇರೆಯವರು ರಚಿಸಿದ ಕಥೆ, ಚಿತ್ರಕಥೆಗಳನ್ನಾಧರಿಸಿದ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ. ಕೋಡ್ಲು ರಾಮಕೃಷ್ಣ ನಿರ್ದೇಶನದ ಮೊದಲ ಚಿತ್ರವೇ ಕಾದಂಬರಿ ಆಧಾರಿತ ಚಿತ್ರವಾಗಿತ್ತು. ಮಂಗಳಾ ಸತ್ಯನ್‍ ಅವರ ‘ಆಮುಖ’ ಕಾದಂಬರಿಯನ್ನು ಕೋಡ್ಲು ‘ಬಿಸಿಲು ಬೆಳದಿಂಗಳು’ ಹೆಸರಿನಲ್ಲಿ ತೆರೆಗೆ ತಂದಿದ್ದರು. ಆ ನಂತರ ‘ಉದ್ಭವ’, ‘ಯಾರಿಗೂ ಹೇಳ್ಬೇಡಿ’, ‘ನಿಲುಕದ ನಕ್ಷತ್ರ’, ‘ಮಿಸ್‍ ಕ್ಯಾಲಿಫೋರ್ನಿಯಾ’ ಮುಂತಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಇವೆಲ್ಲವೂ ಕನ್ನಡದ ಜನಪ್ರಿಯ ಬರಹಗಾರರ ಕಥೆ-ಕಾದಂಬರಿಗಳನ್ನಾಧರಿಸಿದ ಚಿತ್ರಗಳೇ ಆಗಿದ್ದವು.

ಇನ್ನು, ಕೋಡ್ಲು ರಾಮಕೃಷ್ಣ ನಿರ್ದೇಶನದ ಮುಂದಿನ ಚಿತ್ರ ಸಹ ಕಾದಂಬರಿ ಆಧಾರಿತ ಚಿತ್ರ ಎಂಬುದು ವಿಶೇಷ. ಸದ್ಯ ಕೋಡ್ಲು, ರಕ್ಷಿತ್‍ ತೀರ್ಥಹಳ್ಳಿ ಅವರ ‘ಕಾಡಿನ ನೆಂಟರು’ ಕಥೆಯನ್ನು ಚಿತ್ರ ಮಾಡುತ್ತಿದ್ದಾರೆ. ನಕ್ಸಲ್ ಚಳವಳಿಯ ಕಥೆ ಇದಾಗಿದ್ದು, ಚಿತ್ರದಲ್ಲಿ ದಿಗಂತ್‍ ಮಂಚಾಲೆ, ರಾಕೇಶ್‍ ಅಡಿಗ ಮುಂತಾದವರು ನಟಿಸುತ್ತಿದ್ದಾರೆ. ಕೊಡಚಾದ್ರಿ, ಆಗುಂಬೆ, ಕವಿಶೈಲ, ಮೃಗವಧೆ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ‘ತುಂಗಾ ತೀರದಲ್ಲಿ ಕೆಂಪು ನೆತ್ತರು’ ಎಂದು ಹೆಸರಿಡುವ ಸಾಧ್ಯತೆ ಇದೆ.

ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ

ಕನ್ನಡದಲ್ಲಿ ಮೊದಲ ಕಾದಂಬರಿ ಕಾದಂಬರಿ ಆಧಾರಿತ ಚಿತ್ರ ಬಿಡಗುಡೆಯಾಗಿದ್ದು 1962ರಲ್ಲಿ. ಕೃಷ್ಣಮೂರ್ತಿ ಪುರಾಣಿಕರ ‘ಧರ್ಮದೇವತೆ’ ಕಾದಂಬರಿಯನ್ನಾಧರಿಸಿ, ಟಿ.ವಿ. ಸಿಂಗ್‍ ಠಾಕೂರ್ ಅವರು ‘ಕರುಣೆಯೇ ಕುಟುಂಬದ ಕಣ್ಣು’ ಹೆಸರಿನಲ್ಲಿ ಚಿತ್ರ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಹಲವು ಕಾದಂಬರಿ ಆಧಾರಿತ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಅಷ್ಟೇ ಅಲ್ಲ, ಕನ್ನಡದಲ್ಲಿ ಹಲವು ನಿರ್ದೇಶಕರು ನಿರಂತರವಾಗಿ ಕಾದಂಬರಿ ಆಧಾರಿತ ಚಿತ್ರಗಳನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಕಥೆ-ಕಾದಂಬರಿಗಳು ಯಾವತ್ತೂ ಸಾಹಿತ್ಯ ಮತ್ತು ಚಿತ್ರರಂಗದ ಕೊಂಡಿಯಂತೆ ಕೆಲಸ ಮಾಡಿವೆ. ಒಂದು ಕಥೆ-ಕಾದಂಬರಿ ಚಿತ್ರವಾದಾಗ, ಅದು ಹೇಗೆ ಮೂಡಿಬಂದಿರಬಹುದು ಎಂದು ಸಾಹಿತ್ಯಾಸಕ್ತರು ಕುತೂಹಲದಿಂದ ನೋಡುತ್ತಾರೆ. ಅದೇ ರೀತಿ, ಸಿನಿಮಾಸಕ್ತರು ಒಂದು ಚಿತ್ರ ನೋಡಿ, ಅದರ ಮೂಲ ಹೇಗಿರಬಹುದು ಎಂಬ ಕುತೂಹಲದಿಂದ ಕಥೆ, ಕಾದಂಬರಿಯನ್ನು ಕೊಂಡು ಓದಿರುತ್ತಾರೆ. ಹಾಗಾಗಿ, ಕಥೆ-ಕಾದಂಬರಿಗಳು ಎರಡೂ ಕ್ಷೇತ್ರಗಳನ್ನು ಸೆಳೆಯುತ್ತಾ ಬಂದಿವೆ. ಓದುಗರಿಗೆ ಸಿನಿಮಾ ನೋಡುವ ಹವ್ಯಾಸ ಹಚ್ಚಿದರೆ, ನೋಡುಗರಿಗೆ ಸಾಹಿತ್ಯ ಓದುವ ಅಭಿರುಚಿಯನ್ನು ಬೆಳೆಸುತ್ತಾ ಬಂದಿದೆ.

ನಿರ್ದೇಶಕರಾದ ಟಿ.ಎಸ್‌ ನಾಗಾಭರಣ, ರಾಜೇಂದ್ರ ಸಿಂಗ್‌ ಬಾಬು, ಕೋಡ್ಲು ರಾಮಕೃಷ್ಣ

ಕಥೆಯನ್ನು ತೆರೆಯ ಮೇಲೆ ತರುವುದು ಸವಾಲು

ಹಾಗೆ ನೋಡಿದರೆ, ಪ್ರಕಟವಾದ ಕಥೆಯನ್ನು ಚಿತ್ರ ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ, ಒಂದು ಕಥೆ ಅಥವಾ ಕಾದಂಬರಿಯನ್ನು ಓದುವುದಕ್ಕೂ, ಅದನ್ನು ತೆರೆಯ ಮೇಲೆ ನೋಡುವುದಕ್ಕೂ ವ್ಯತ್ಯಾಸವಿದೆ. ಕಥೆ ಮತ್ತು ಕಾದಂಬರಿಯನ್ನು ಓದುಗರು ತನಗೆ ಬೇಕಾದ ಹಾಗೆ ಮನಸ್ಸಿನಲ್ಲಿ ರೂಪಿಸಿಕೊಂಡಿರುತ್ತಾರೆ. ಪರಿಸರ, ಪಾತ್ರಗಳು ಇವೆಲ್ಲವನ್ನೂ ತನ್ನದೇ ರೀತಿಯಲ್ಲಿ ಕಟ್ಟಿಕೊಂಡಿರುತ್ತಾರೆ. ಎಷ್ಟೋ ಬಾರಿ ತೆರೆಯ ಮೇಲೆ ಬರುವ ಪರಿಸರ ಮತ್ತು ಪಾತ್ರಗಳು ತಾವು ಕಟ್ಟಿಕೊಂಡ ರೀತಿಗೆ ಸಮರ್ಪಕವಾಗಿಲ್ಲ ಎಂದನಿಸಬಹುದು. ಹಾಗಾಗಿ, ಪೇಲವ ಎಂದನಿಸುವ ಸಾಧ್ಯತೆಯೂ ಇರುತ್ತದೆ.

ಎಷ್ಟೋ ಬಾರಿ ಅದನ್ನು ಬರೆದವರಿಗೇ, ತೆರೆಯ ಮೇಲೆ ತಮ್ಮ ಕಥೆಯನ್ನು ನೋಡಿ ಇಷ್ಟವಾಗದಿರಬಹುದು. ‘ನಾಗರಹಾವು’ ಚಿತ್ರವನ್ನು ನೋಡ ಅದರ ಕರ್ತೃ ತ.ರಾ. ಸುಬ್ಬರಾವ್‍ (ತರಾಸು) ಅವರು ಚಿತ್ರವನ್ನು ‘ಕೇರೆ ಹಾವು’ ಎಂದು ಕರೆದಿದ್ದರು ಎಂಬ ಪ್ರತೀತಿ ಇದೆ. ಹಾಗಾಗಿ, ಓದುಗನಿಗೆ ಇಷ್ಟವಾಗುವಂತಹ ಚಿತ್ರಣವನ್ನು ಕಟ್ಟಿಕೊಡುವುದು ಒಬ್ಬ ನಿರ್ದೇಶಕನಿಗೆ ಸವಾಲಿನ ಕೆಲಸ. ಅದಾಗಿಯೂ ಕೆಲವರು ನಿರಂತರವಾಗಿ ಇಂತಹ ಸವಾಲುಗಳನ್ನು ಸ್ವೀಕರಿಸುತ್ತಲೇ ಬಂದಿದ್ದಾರೆ.

ಸವಾಲು ಸ್ವೀಕರಿಸಿದ್ದ ಪುಟ್ಟಣ್ಣ ಕಣಗಾಲ್

ಈ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವವರು ನಿರ್ದೇಶಕ ಪುಟ್ಟಣ್ಣ ಕಣಗಾಲ್‍. ಇದುವರೆಗೂ ಕನ್ನಡದಲ್ಲಿ ಅತೀ ಹೆಚ್ಚು ಕಥೆ-ಕಾದಂಬರಿ ಆಧಾರಿತ ಚಿತ್ರವನ್ನು ನಿರ್ದೇಶನ ಮಾಡಿದ ನಿರ್ದೇಶಕರು ಯಾರಾದರೂ ಇದ್ದಾರೆಂದರೆ ಅದು ಪುಟ್ಟಣ್ಣ ಕಣಗಾಲ್ ಮಾತ್ರ. ಪುಟ್ಟಣ್ಣ ಕನ್ನಡದಲ್ಲಿ ನಿರ್ದೇಶಿಸಿರುವ 24 ಚಿತ್ರಗಳ ಪೈಕಿ 19 ಚಿತ್ರಗಳು ಕಥೆ-ಕಾದಂಬರಿ ಆಧಾರಿಸಿದ ಚಿತ್ರಗಳು ಎಂಬುದು ವಿಶೇಷ. ಅವರು ಕನ್ನಡದಲ್ಲಿ ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರ ‘ಬೆಳ್ಳಿ ಮೋಡ’, ತ್ರಿವೇಣಿ ಅವರ ಅದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರವಾಗಿತ್ತು. ಕೊನೆಯ ಚಿತ್ರ ‘ಮಸಣದ ಹೂವು’, ತರಾಸು ಅವರ ಕಾದಂಬರಿಯನ್ನು ಆಧರಿಸಿತ್ತು.

ಕೋಡ್ಲು ರಾಮಕೃಷ್ಣ ನಿರ್ದೇಶನದ ಶಾನುಭೋಗರ ಮಗಳು ಸಿನಿಮಾ ಫೋಟೋ

ಈ ಮಧ್ಯೆ, ಅವರು ಹಲವು ತರಹದ ಪ್ರಯತ್ನಗಳನ್ನು ಮಾಡಿದರು. ವಿಷ್ಣುವರ್ಧನ್‍ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ನಾಗರಹಾವು’, ತರಾಸು ಅವರ ‘ನಾಗರಹಾವು’, ‘ಒಂದು ಗಂಡು ಎರಡು ಹೆಣ್ಣು’ ಮತ್ತು ‘ಸರ್ಪ ಮತ್ಸರ’ ಕಾದಂಬರಿಗಳನ್ನಾಧರಿಸಿದ್ದವು. ಇನ್ನು, ಪುಟ್ಟಣ್ಣ ನಿರ್ದೇಶನದ ‘ಕಥಾ ಸಂಗಮ’, ಕನ್ನಡ ಚಿತ್ರರಂಗದಲ್ಲೇ ಒಂದು ಮಹತ್ವದ ಪ್ರಯೋಗವಾಗಿತ್ತು. ಗಿರಡ್ಡಿ ಗೋವಿಂದರಾಜ ಅವರ ‘ಹಂಗು’, ವೀಣಾ ಶಾಂತೇಶ್ವರ ಅವರ ‘ಅತಿಥಿ’ ಮತ್ತು ಈಶ್ವರಚಂದ್ರ ಅವರ ‘ಮುನಿತಾಯಿ’ ಎಂಬ ಸಣ್ಣಕಥೆಗಳನ್ನು ಆಧರಿಸಿ ಸಿನಿಮಾ ಮಾಡಿದ್ದರು. ಕನ್ನಡದ ಮೊದಲ ಆ್ಯಂಥಾಲಜಿ (ಸಣ್ಣ ಕಥೆಗಳ ಗುಚ್ಛ) ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಿಕ್ಕಂತೆ ಆ ಕಾಲ ಜನಪ್ರಿಯ ಕಾದಂಬರಿಕಾರರಾದ ಎಂ.ಕೆ. ಇಂದಿರಾ, ಮ.ನ. ಮೂರ್ತಿ, ಭಾರತಿಸುತ, ಆರ್ಯಾಂಭ ಪಟ್ಟಾಭಿ ಮುಂತಾದವರ ಕಾದಂಬರಿಗಳನ್ನು ಪುಟ್ಟಣ್ಣ ತೆರೆಗೆ ತಂದಿದ್ದರು.

ಹಲವು ಕಥೆಗಳನ್ನು ತೆರೆಗೆ ತಂದ ಗಿರೀಶ್ ಕಾಸರವಳ್ಳಿ

ಕಥೆ-ಕಾದಂಬರಿಗಳನ್ನಾಧರಿಸಿದ ಚಿತ್ರಗಳನ್ನು ಮಾಡುತ್ತಿರುವ ಮತ್ತೊಬ್ಬ ಪ್ರಮುಖ ನಿರ್ದೇಶಕ ಪದ್ಮಶ್ರೀ ಪುರಸ್ಕೃತ ಗಿರೀಶ್‍ ಕಾಸರವಳ್ಳಿ. ಅವರು ನಿರ್ದೇಶಿಸಿದ ಮೊದಲ ಚಿತ್ರ ‘ಘಟಶ್ರಾದ್ಧ’, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್. ಅನಂತಮೂರ್ತಿ ಅವರ ‘ಘಟಶ್ರಾದ್ಧ’ ಕಾದಂಬರಿಯನ್ನಾಧರಿಸಿತ್ತು. ಈ ಚಿತ್ರವು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಚಿತ್ರದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಕಾದಂಬರಿಗಳಿಗಿಂತ ಸಣ್ಣಕಥೆಗಳನ್ನಾಧರಿಸಿದ ಚಿತ್ರಗಳನ್ನು ಹೆಚ್ಚು ಮಾಡಿದವರು ಗಿರೀಶ್ ಕಾಸರವಳ್ಳಿ. ‘ಆಕ್ರಮಣ’, ‘ತಬರನ ಕಥೆ’, ‘ಗುಲಾಬಿ ಟಾಕೀಸ್‍’, ‘ಕನಸೆಂಬೋ ಕುದುರೆಯನೇರಿ’, ‘ಕೂರ್ಮಾವತಾರ’, ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಹೀಗೆ ಹಲವು ಸಣ್ಣಕಥೆಗಳನ್ನು ಕಾಸರವಳ್ಳಿ ಅವರು ಚಿತ್ರ ಮಾಡಿದ್ದಾರೆ.

ವಿಶೇಷವೆಂದರೆ, ಕಾಸರವಳ್ಳಿ ಅವರು ಕಥೆ-ಕಾದಂಬರಿಗಳನ್ನು ಯಥಾವತ್ತಾಗಿ ಚಿತ್ರ ಮಾಡಿದವರಲ್ಲ. ಅದನ್ನು ತಮ್ಮದೇ ರೀತಿಯಲ್ಲಿ ಮರುವ್ಯಾಖ‍್ಯಾನಿಸುತ್ತಾ, ವಿಶ‍್ಲೇಷಿಸುತ್ತಾ ಬಂದಿದ್ದಾರೆ. ಈಗ ನಿರ್ದೇಶನ ಮಾಡುತ್ತಿರುವ ‘ಆಕಾಶ ಮತ್ತು ಬೆಕ್ಕು’ ಚಿತ್ರವು ಅನಂತಮೂರ್ತಿ ಅವರ ಜನ್ರಪಿಯ ಕಥೆಯನ್ನಾಧರಿಸಿದೆ. ಬರೀ ಸಿನಿಮಾಗಳಷ್ಟೇ ಅಲ್ಲ, ಎಸ್‍.ಎಲ್‍. ಭೈರಪ್ಪ ಅವರ ಜನಪ್ರಿಯ ಕಾದಂಬರಿಯಾದ ‘ಗೃಹಭಂಗ’ವನ್ನು ಧಾರಾವಾಹಿಯನ್ನಾಗಿ ಮಾಡಿದ್ದರು ಅವರು.

ಗಿರೀಶ್‌ ಕಾಸರವಳ್ಳಿ

ಕನ್ನಡದ ಸಹೃದಯ ನಿರ್ದೇಶಕ ಪರಂಪರೆ

ಪುಟ್ಟಣ್ಣ ಕಣಗಾಲ್‍, ಗಿರೀಶ್‍ ಕಾಸರವಳ್ಳಿ, ಕೋಡ್ಲು ರಾಮಕೃಷ್ಣ ಅಷ್ಟೇ ಅಲ್ಲ, ಕನ್ನಡದಲ್ಲಿ ಕಥೆ-ಕಾದಂಬರಿಗಳನ್ನಾಧರಿಸಿ ಚಿತ್ರ ಮಾಡುವವರ ಸಂಖ್ಯೆ ದೊಡ್ಡದೇ ಇದೆ. ದೊರೈ-ಭಗವಾನ್‍ ಅವರು ಕನ್ನಡದ ಹಲವು ಮಹತ್ವದ ಕೃತಿಗಳನ್ನು ತೆರೆಗೆ ತಂದಿದ್ದರು. ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ, ಟಿ.ಎಸ್‍. ನಾಗಾಭರಣ, ಪಿ. ಶೇಷಾದ್ರಿ, ಕೆ.ವಿ. ಜಯರಾಂ, ಎಸ್.ವಿ. ರಾಜೇಂದ್ರ ಸಿಂಗ್‍ ಬಾಬು, ಡಾ. ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್‍, ಭಾರ್ಗವ, ವಿಶಾಲ್‍ ರಾಜ್‍ ಮುಂತಾದವರು ಅನೇಕ ಪ್ರಮುಖ ಕೃತಿಗಳನ್ನು ತೆರೆಗೆ ತಂದಿದ್ದಾರೆ.

ಸತತವಾಗಿ ಅಥವಾ ಐದಕ್ಕೂ ಹೆಚ್ಚು ಈ ತರಹದ ಪ್ರಯತ್ನಗಳನ್ನು ಮಾಡಿದ ಕೆಲವು ನಿರ್ದೇಶಕರನ್ನು ಮಾತ್ರ ಇಲ್ಲಿ ಹೆಸರಿಸಲಾಗಿದೆ ಅಷ್ಟೇ. ಇನ್ನು, ಒಂದೋ, ಎರಡೋ ಈ ತರಹದ ಪ್ರಯತ್ನಗಳನ್ನು ಮಾಡಿದ ಹಲವರು ಮಂದಿ ಇಲ್ಲಿದ್ದಾರೆ. ಅವರೆಲ್ಲರನ್ನೂ ಹೆಸರಿಸುತ್ತಾ ಹೋದರೆ, ದೊಡ್ಡ ಪಟ್ಟಿಯೇ ಸಿಗುತ್ತದೆ. ಅವರೆಲ್ಲರೂ ತಮ್ಮದೇ ರೀತಿಯಲ್ಲಿ ಸಾಹಿತ್ಯಕ್ಕೆ ಮತ್ತು ಸಿನಿಮಾಗೆ ತಮ್ಮ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ ಮತ್ತು ತಮ್ಮ ಚಿತ್ರಗಳಿಂದ ಹೊಸ ಹೊಸ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಲೇ ಇದ್ದಾರೆ ಎನ್ನುವುದು ವಿಶೇಷ.

ಚೇತನ್ ನಾಡಿಗೇರ್ ಪರಿಚಯ

ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್‍ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್‍ ಅರವಿಂದ್‍ ಅವರ ‘ಖುಷಿಯಿಂದ ರಮೇಶ್‍’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್‍ ಶಾಟ್‍ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್‍ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ