Adupurush Poster:'ಆದಿಪುರುಷ್' ಚಿತ್ರಕ್ಕೆ ಮತ್ತೆ ಸಂಕಷ್ಟ... ಪೋಸ್ಟರ್ ಡಿಸೈನ್ ಕದ್ದಿದ್ದಾರೆ ಎಂದು ಆರೋಪಿಸಿದ ಕಾನ್ಸೆಪ್ಟ್ ಆರ್ಟಿಸ್ಟ್
Apr 11, 2023 11:32 AM IST
'ಆದಿಪುರುಷ್' ಚಿತ್ರದ ಪೋಸ್ಟರ್
- ನನ್ನ ಅನುಮತಿ ಇಲ್ಲದೆ ಚಿತ್ರತಂಡದವರು ನನ್ನ ಡಿಸೈನ್ ಕದ್ದು ತಮ್ಮ ಪೋಸ್ಟರ್‌ಗಳಿಗೆ ಬಳಸಿಕೊಂಡಿರುವುದು ಮಾತ್ರವಲ್ಲದೆ ಅದನ್ನು ಚಿತ್ರರಂಡದವರೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಡುಗಡೆಗೂ ಮುನ್ನ ಸಿನಿಮಾ ಹೀಗೆ ಮುಗ್ಗರಿಸುತ್ತಿರುವುದಕ್ಕೆ ಇಂತಹ ಕೆಲಸಗಳೇ ಕಾರಣ
ಅದ್ಯಾವ ಗಳಿಗೆಯಲ್ಲಿ 'ಆದಿಪುರುಷ್' ಚಿತ್ರದ ಟೀಸರ್ ಬಿಡುಗಡೆ ಮಾಡಲಾಯ್ತೋ, ಅಂದಿನಿಂದ ಇಲ್ಲಿವರೆಗೂ ಸಿನಿಮಾಗೆ ಒಂದರ ಹಿಂದೊಂದರಂತೆ ಸಂಕಷ್ಟ ಶುರುವಾಗಿದೆ. ಮೇಕಿಂಗ್, ಟೀಸರ್‌ನಲ್ಲಿ ರಾಮಾಯಣದ ಪಾತ್ರಗಳನ್ನು ತೋರಿಸಿರುವ ಪರಿ ಬಗ್ಗೆ ಜನರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಚಿತ್ರಕ್ಕೆ ಮತ್ತೊಂದು ಕಷ್ಟ ಎದುರಾಗಿದೆ.
ಆದಿಪುರುಷ್ ಪೋಸ್ಟರ್ ಡಿಸೈನ್ ಕದಿಯಲಾಗಿದೆ ಎಂದು ಕಾನ್ಸೆಪ್ಟ್ ಆರ್ಟಿಸ್ಟ್ ಒಬ್ಬರು ಚಿತ್ರತಂಡದ ವಿರುದ್ಧ ಆರೋಪಿಸಿದ್ದಾರೆ. ''ಆದಿಪುರುಷ್ ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳಿಗೆ ಉತ್ತಮ ಅಭಿರುಚಿ ಇಲ್ಲ. ಆದ್ದರಿಂದಲೇ ಇಂತಹ ಚೀಪ್ ಟ್ರಿಕ್‌ಗಳನ್ನು ಫಾಲೋ ಮಾಡುತ್ತಿದ್ದಾರೆ. ನನ್ನ ಅನುಮತಿ ಇಲ್ಲದೆ ಚಿತ್ರತಂಡದವರು ನನ್ನ ಡಿಸೈನ್ ಕದ್ದು ತಮ್ಮ ಪೋಸ್ಟರ್‌ಗಳಿಗೆ ಬಳಸಿಕೊಂಡಿರುವುದು ಮಾತ್ರವಲ್ಲದೆ ಅದನ್ನು ಚಿತ್ರರಂಡದವರೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಡುಗಡೆಗೂ ಮುನ್ನ ಸಿನಿಮಾ ಹೀಗೆ ಮುಗ್ಗರಿಸುತ್ತಿರುವುದಕ್ಕೆ ಇಂತಹ ಕೆಲಸಗಳೇ ಕಾರಣ'' ಎಂದು ಕಾನ್ಸೆಪ್ಟ್ ಆರ್ಟಿಸ್ಟ್ ಪ್ರತೀಕ್ ಸಂಗರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಪ್ರತೀಪ್ ಪೋಸ್ಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಎದುರಾಗಿದೆ. ಪೋಸ್ಟರ್ ರಿಲೀಸ್ ಮಾಡಿದ ದಿನವೇ ಈ ವಿಚಾರವನ್ನು ಏಕೆ ಹೇಳಲಿಲ್ಲ, ಇಷ್ಟು ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಏನು ಕಾರಣ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಪಾತ್ರಧಾರಿಗಳ ಲುಕ್ ಬಗ್ಗೆ ವಿರೋಧ
ಕಳೆದ ವರ್ಷ ಅಕ್ಟೋಬರ್ 3 ರಂದು ಅಯೋಧ್ಯೆಯಲ್ಲಿ 'ಆದಿಪುರುಷ್' ಟೀಸರ್ ಬಿಡುಗಡೆ ಆಗಿತ್ತು. ಈ ಟೀಸರ್‌ನಲ್ಲಿ ರಾಮ, ಹನುಮಂತ ಮತ್ತು ರಾವಣನ ಪಾತ್ರಗಳನ್ನು ತೋರಿಸಿರುವ ರೀತಿಗೆ ಟೀಕೆಗಳು ವ್ಯಕ್ತವಾಗಿತ್ತು. ದೃಶ್ಯಗಳನ್ನು ಬದಲಿಸುವಂತೆ ಒತ್ತಡ ಹೆಚ್ಚಾಗಿತ್ತು. ಅದರಲ್ಲೂ ರಾವಣನ ಪಾತ್ರ ಮಾಡಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್‌ನನ್ನು ಸ್ಟೈಲಿಶ್ ಆಗಿ ಅನಾವರಣ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಟೀಸರ್‌ನಲ್ಲಿ ರಾವಣನನ್ನು ಧಾರ್ಮಿಕ ವ್ಯಕ್ತಿಯಾಗಿ ತೋರದೆ, ಉದ್ದನೆಯ ಗಡ್ಡ ಮತ್ತು ಚರ್ಮದ ಜಾಕೆಟ್‌ನೊಂದಿಗೆ ಮುಸ್ಲಿಂ ದೊರೆಯಂತೆ ಚಿತ್ರಿಸಲಾಗಿದೆ ಎಂಬ ಕಾಮೆಂಟ್‌ಗಳು ವ್ಯಕ್ತವಾಗಿತ್ತು.
ಹಲವರಿಂದ ಬಾಯ್‌ಕಾಟ್ 'ಆದಿಪುರುಷ್' ಅಭಿಯಾನ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ಜೊತೆಗೆ ಬಾಯ್‌ಕಾಟ್ 'ಆದಿಪುರುಷ್' ಅಭಿಯಾನ ಕೂಡಾ ಶುರುವಾಗಿತ್ತು. ಆದ್ದರಿಂದ ನಿರ್ದೇಶಕ ಓಂ ರಾವುತ್, ಇಡೀ ಸಿನಿಮಾವನ್ನು ಮರು ಚಿತ್ರೀಕರಣ ಮಾಡಲು ನಿರ್ಧರಿಸಿದ್ದು ಇದಕ್ಕೆ ಮತ್ತೆ ಸಾಕಷ್ಟು ಸಮಯ ಬೇಕು. 2020 ಆಗಸ್ಟ್‌ನಲ್ಲಿ 'ಆದಿಪುರುಷ್' ಚಿತ್ರವನ್ನು ಅನೌನ್ಸ್ ಮಾಡಲಾಗಿತ್ತು. ಹಾಗೇ ಪ್ರೀ ಪ್ರೊಡಕ್ಷನ್ ಕೆಲಸಗಳ ನಂತರ 2021 ಜನವರಿಯಲ್ಲಿ ಚಿತ್ರೀಕರಣ ಶುರುವಾಯ್ತು. ಸಿನಿಮಾ ಅನೌನ್ಸ್ ಆಗಿ 2 ವರ್ಷಗಳ ನಂತರ ಟೀಸರ್ ಬಿಡುಗಡೆ ಮಾಡಲಾಗಿತ್ತು. ಅಂತದ್ದರಲ್ಲಿ ಮತ್ತೆ ಇಡೀ ಸಿನಿಮಾವನ್ನು ರೀ ಶೂಟ್ ಮಾಡಿ ಬಿಡುಗಡೆ ಮಾಡಲು ಸದ್ಯಕ್ಕೆ ಸಾಧ್ಯವಾಗದ ಮಾತು ಎಂದೆಲ್ಲಾ ಮಾತುಗಳು ಕೇಳಿಬರುತ್ತಿವೆ.
ಹೊಸ ಪೋಸ್ಟರ್ ಬಗ್ಗೆಯೂ ಅಸಮಾಧಾನ
ಇತ್ತೀಚೆಗೆ ಶ್ರೀರಾಮನವಮಿ ಅಂಗವಾಗಿ 'ಆದಿಪುರುಷ್' ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿತ್ತು. ಆದರೆ ಈ ಪೋಸ್ಟರ್‌ಗೆ ಕೂಡಾ ವಿರೋಧ ವ್ಯಕ್ತವಾಗಿತ್ತು. ಹಳೆ ಪೋಸ್ಟರ್‌ಗೂ ಈ ಪೋಸ್ಟರ್‌ಗೆ ಅಂತಹ ವ್ಯತ್ಯಾಸ ಕಾಣುತ್ತಿಲ್ಲ. ಸೀತಾಮಾತೆ ಹಣೆಯಲ್ಲಿ ಕುಂಕುಮ ಇದ್ದರೂ ಇಲ್ಲದಂತಿದೆ ಎಂದು ಬೇಸರ ಹೊರಹಾಕಿದ್ದರು. ಒಟ್ಟಿನಲ್ಲಿ ಈ ವಿರೋಧಗಳ ನಡುವೆ, ವಿವಾದಗಳ ನಡುವೆ 'ಆದಿಪುರುಷ್' ಸಿನಿಮಾ ಯಾವಾಗ ಬಿಡುಗಡೆ ಅಗಲಿದೆ, ರಿಲೀಸ್ ನಂತರ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.