Sikandar ka Muqaddar: ಹಾವ-ಭಾವದಲ್ಲಿ ಅವ್ಯಕ್ತವಾಗಿ ಅಭಿವ್ಯಕ್ತಿ, ಸಿಕಂದರ್ ಕಾ ಮುಕದ್ದರ್ ಸಿನಿಮಾ ಕುರಿತು ಡಾ ರೂಪಾ ರಾವ್ ಬರಹ
Dec 03, 2024 03:07 PM IST
ಸಿಕಂದರ್ ಕಾ ಮುಕದ್ದರ್ ಸಿನಿಮಾ ಕುರಿತು ಡಾ ರೂಪಾ ರಾವ್ ಬರಹ
- ಡಾ ರೂಪಾ ರಾವ್ ಬರಹ ಸಿಕಂದರ್ ಕಾ ಮುಕದ್ದರ್ ಸಿನಿಮಾ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಹಾವಭಾವದಲ್ಲಿ ಅವ್ಯಕ್ತವಾಗಿ ಸಂಗತಿಗಳ ಅಭಿವ್ಯಕ್ತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ ಓದಿ.
ಸಿಕಂದರ್ ಕಾ ಮುಕದ್ದರ್ ಸಿನಿಮಾ ಕುರಿತು HT ಕನ್ನಡ ಅಂಕಣಕಾರ್ತಿ ರೂಪಾ ರಾವ್ ಅವರು ಬರೆದ ಈ ಅನನ್ಯ ಬರಹ ನಿಮ್ಮ ಮನಮುಟ್ಟುತ್ತದೆ. ಈ ಸಿನಿಮಾದಲ್ಲಿನ ಹಾವ ಭಾವ. ನಟರ ಅಭಿವ್ಯಕ್ತಿ, ಅಭಿನಯದ ಕುರಿತು ಅವರು ಹಂಚಿಕೊಂಡ ಮಾಹಿತಿಯನ್ನು ಯಥಾವತ್ತಾಗಿ ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಮೊದಲಿಗೆ ನನ್ನ ನೆಚ್ಚಿನ ಜಿಮ್ಮಿ ಶಾರ್ಗಿಲ್ ಮತ್ತು ಆತ ಇದರಲ್ಲಿ ಕಾಪ್ ಹಾಗಾಗಿ ಈ ಸಿನಿಮಾ ನೋಡಲು ಶುರುಮಾಡಿದ್ದು. ಸಿನಿಮಾದ ಕಥೆ ಆವರೇಜ್, ಯಾರು ನಿಜವಾದ ಕಳ್ಳ ಅಂತಲೂ ಗೆಸ್ ಸಹಾ ಬೇಗ ಮಾಡಬಹುದು. ಆಗಾಗ ಆ ಗೆಸ್ ಸರಿಯೋ ತಪ್ಪೋ ಅನ್ನುವ ಯೋಚನೆ ಬರುತ್ತದೆ. ಸಿನಿಮಾ ಕಥೆ ಹಾಗು ನಿರೂಪಣೆ ಚೆಂದವೇ ಆದರೆ ಬಿಟ್ಟು ಸೈಕಾಲಜಿ ವಿದ್ಯಾರ್ಥಿಯಾಗಿ ನನಗೆ ಈ ಚಿತ್ರದ ದೃಶ್ಯೀಕರಣ ಹಾಗು ಸ್ಟೈಲ್ ಭಾವಾಭಿನಯ ತುಂಬಾ ಕುತೂಹಲಕರವಾಗಿ ನೋಡಿಸಿಕೊಂಡು ಹೋಯಿತು. ಮೊದಲು ಇದರ ನಿರ್ದೇಶಕರು ಪ್ರತೀ ಪಾತ್ರದ ಬಾಡಿ ಲಾಂಗ್ವೇಜ್ ಅನ್ನು ಅವ್ಯಕ್ತ ರೀತಿಯಲ್ಲಿ ವ್ಯಕ್ತಪಡಿಸಿದ ರೀತಿ.
ಎಚ್ಚರಿಕೆ: ಇಲ್ಲಿಂದ ಸ್ಪಾಯಿಲರ್ ಇದೆ. ಉದಾಹರಣೆಗೆ-ಕಥೆಯ ಕಾಪ್ ತನ್ನ ಇನ್ಸ್ಟಿಂಕ್ಟ್ ಅನ್ನು ನೆಚ್ಚುವ ರೀತೀ. ಎಲ್ಲರಿಗೂ ಇದು ಅತಿರೇಕ ಅನಿಸುತ್ತದೆ. ಆದರೆ ಬಾಡಿ ಲಾಂಗ್ವೇಜ್ ಹಾಗೂ ಅವ್ಯಕ್ತ ದೇಹಭಾಷೆಯನ್ನು ಅರ್ಥ ಮಾಡಿಕೊಂಡವರಿಗೆ ಅವನು ಸರಿ ಹೇಳುತ್ತಿದ್ದಾನೆ ಅನಿಸುತ್ತದೆ.
ಇದನ್ನು ನಾವು ಮೊದಲ ದೃಶ್ಯದಿಂದಲೇ ನೋಡಬಹುದು. ತಮನ್ನಾ ಏನೋ ಯೋಚಿಸುತ್ತಾ ಬರುತ್ತಿದ್ದಾರೆ , ಏನೋ ಸಮಸ್ಯೆ ಇದೆ ಅಂತ ಅವರು ಹಾವಭಾವದಲ್ಲಿ ಅವ್ಯಕ್ತವಾಗಿ ಅಭಿವ್ಯಕ್ತಿಗೊಳಿಸುತ್ತಾರೆ. ಆ ಸನ್ನಿವೇಶದಲ್ಲಿ ಪ್ಯಾನಿಕ್ ಆಗಿ ಹಾಗೆ ಬಿಹೇವ್ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಇತರರಿಗಿಂತ ಬೇರೆಯೇ ಬಾಡಿ ಲಾಂಗ್ವೇಜ್ ಅವರದ್ದು. ಇನ್ನು ಕಂಪ್ಯೂಟರ್ ಟೆಕ್ನಿಷಿಯನ್ ಬಗ್ಗೆ ಕಾಪ್ ಗೆ ಸಂಶಯ ಬರಲು ಕಾರಣ ಅವನು ಹರೀಡ್ನೆಸ್ (ಅವಸರದ ನಡುವಳಿಕೆ) ಅಂತ ನೋಡುಗರಿಗೆ ಅನಿಸುತ್ತೆ ಆದ್ರೆ ಕೊಂಚ ಆಳವಾಗಿ ಅವನ ವರ್ತನೆಯನ್ನು ಆ ಸಮಯದಲ್ಲಿ ನೋಡಿದಾಗ ಆತ ಕನ್ಫ್ಯೂಸ್ ಆಗಿದ್ದು ನಿಜವಲ್ಲ ಅದು ಆಗಿರುವಂತೆ ನಟಿಸಿದ್ದು ಎಂದು ತಿಳಿಯುತ್ತದೆ.
ಸಾಮಾನ್ಯವಾಗಿ ಒಬ್ಬ ನಿಜವಾದ ಅಪರಾಧಿ ಯಾವುದೇ ಭಯಗೊಳ್ಳುವ ಸನ್ನಿವೇಶದಲ್ಲಿ ತೀರಾ ಸಬ್ಮಿಸ್ಸೀವ್ ಆಗಿರುತ್ತಾನೆ ಇಲ್ಲ ಅಗ್ರೆಸೀವ್ ಆಗಿಬಿಡುತ್ತಾನೆ. ಇದೂ ಸಹಾ ಇಲ್ಲಿ ಕಂಪ್ಯೂಟರ್ ಟೆಕ್ನಿಷಿಯನ್ (ಸಿಕಂದರ್ ಶರ್ಮಾ) ವರ್ತನೆಯಲ್ಲಿ ಅವ್ಯಕ್ಯವಾಗಿ ( ಸಟಲ್) ಆಗಿ ವ್ಯಕ್ತಪಡಿಸಿದ್ದಾರೆ.
ಸಿಕಂದರ್ ಅಬುದಾಬಿ ಇಂದ ಮರಳಿ ಬರುವಾಗಲೂ, ಕಾರಿನಲ್ಲಿ ಅವನ ಗೆಳೆಯನೊಂದಿಗೆ ಕೂತಾಗಲೂ ಅವನ ಬಾಡಿ ಲಾಂಗ್ವೇಜ್ ಅವನು ಏನೋ ಬಚ್ಚಿಡುವಂತೆಯೇ ಇರುತ್ತೆ. ಈ ಸಮಯದಲ್ಲಿಯೇ ನಾನು ಮಗಳಿಗೆ ಹೇಳಿದೆ. ಇವನ ಬಾಡಿ ಲಾಂಗ್ವೇಜ್ ಬೇರೇನೋ ಹಿಂಟ್ ಕೊಡುತ್ತಿದೆ ಎಂದು.
ಬಾಡಿ ಲಾಂಗ್ವೇಜ್
ಅದಾದ ನಂತರ ಕಾಪ್ ತನ್ನ ಇನ್ಸ್ಟಿಂಕ್ಟ್ ತಪ್ಪಾಗಿತ್ತು ಎಂದು ಹದಿನೈದು ವರ್ಷಗಳ ನಂತರ ಹೇಳಿದಾಗ ಸಿಕಂದರ್ ಮುಖಭಾವದಲ್ಲಿ ಕೇವಲ ನಿರಾಳತೆ ಇರಲ್ಲ ಅಲ್ಲೊಂದು ಕಾಯುವಿಕೆಯ ಅಂತಿಮ ಫಲಿತಾಂಶ ಪಡೆಯುವಿಕೆಯ ಹಪಾಹಪಿ ಕಾಣುತ್ತೆ. ಇನ್ನು ತಮನ್ನಾ ಅವರಲ್ಲಿಯೂ ಭಯ ಆಗಾಗ ಕಾಣುತ್ತಿರುತ್ತದೆ. ಆದರೆ ಅವರು ಜೊತೆಗಿನ ಇನ್ನೊಬ್ಬ ಆರೋಪಿ ವಯಸ್ಸಾದ ವ್ಯಕ್ತಿ ಅವರಲ್ಲಿ ಭಯಕ್ಕಿಂತ ಒಂದು ರೀತಿಯ ಮುಕ್ತ ಮನಸು ಕಾಣುತ್ತದೆ.
ಭಾವಾಭಿನಯದ ಕಡೆ ಗಮನವಿತ್ತು
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಸಸ್ಪೆನ್ಸ್ ಕಥೆ ಹೇಳುವಾಗ ಅದೃಶ್ಯ ಅವ್ಯಕ್ತ ಭಾವಾಭಿನಯದ ಕಡೆ ಗಮನ ಕೊಡುವುದು ಬಹಳ ಕಡಿಮೆ ಆ ನಿಟ್ಟಿನಲ್ಲಿ ಇದೊಂದು ವಿಭಿನ್ನ ರೀತಿಯ ಪ್ರಯತ್ನ. ಈ ಸಿನಿಮಾ ನೋಡುವಾಗ ಆ ಸಟಲ್ ಅಥವಾ ಮೈಕ್ರೋ ಭಾವಾಭಿನಯ ಕಡೆ ಗಮನ ಕೊಡಿ ನೋಡೋಣ ನೀವು ಯಾವ ಯಾವ ರೀತಿಯ ಅವ್ಯಕ್ತ ಭಾವಭಿನಯವನ್ನು ಕಂಡು ಹಿಡಿಯಬಹುದು ಅಂತ.
ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.