Flashback Column: 30ರ ಈ ವಯಸ್ಸೇ ಕೆಟ್ಟದ್ದಾ? ಅಪಘಾತ, ಅನಾರೋಗ್ಯ, ಆತ್ಮಹತ್ಯೆ; ಚಂದನವನ ಯಾವತ್ತೂ ಮರೆಯದ ದುರಂತ ಸಾವುಗಳು
Jul 15, 2023 10:39 AM IST
30ರ ಈ ವಯಸ್ಸೇ ಕೆಟ್ಟದ್ದಾ? ಅಪಘಾತ, ಅನಾರೋಗ್ಯ, ಆತ್ಮಹತ್ಯೆ; ಚಂದನವನ ಯಾವತ್ತೂ ಮರೆಯದ ದುರಂತ ಸಾವುಗಳು
- 70, 80ರ ದಶಕದಲ್ಲಿ ಕನ್ನಡ ಚಿತ್ರೋದ್ಯಮ ಬೆಳಗಿದ ಯುವ ಕಲಾವಿದರು ಅನಿರೀಕ್ಷಿತ ದುರಂತಗಳಲ್ಲಿ ಸಾವಿಗೀಡಾಗಿದ್ದಾರೆ. ಕೆಲವರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ, ಇನ್ನು ಕೆಲವರು ಆತ್ಮಹತ್ಯೆ ದಾರಿ ಹಿಡಿದಿದ್ದರು. ಹೀಗಿದೆ ಅವರ ವಿವರ.
Flashback Column: ಚಂದನವನ ಇದೀಗ ಬೆಳೆದು ಹೆಮ್ಮರವಾಗಿದೆ. ಹೊಸ ಹೊಸ ಕಲಾವಿದರ ಆಗಮನದಿಂದ, ನಿರ್ದೇಶಕರು, ತಂತ್ರಜ್ಞರ ಕೈ ಚಳಕದಿಂದ ಇತರ ಭಾಷೆಯ ಸಿನಿಮಾಗಳಿಗೂ ನಾವೂ ಕಡಿಮೆಯೇನಿಲ್ಲ ಎನ್ನುವ ಉತ್ಸಾಹ ಹೆಚ್ಚಾಗಿದೆ. ಹೀಗಿರುವಾಗ ಕನ್ನಡ ಚಿತ್ರೋದ್ಯಮ ಈ ಮಟ್ಟಕ್ಕೇರಲು ಹಳೇ ತಲೆಮಾರಿನ ಸಿನಿಮಾ ಮಂದಿಯ ಶ್ರಮ ದೊಡ್ಡದು ಎಂಬ ಮಾತು ಇಲ್ಲಿ ನೆನೆಯಲೇಬೇಕು. ಅವರು ನೆಟ್ಟ ಸಸಿಯೇ ಇಂದು ಎಲ್ಲರಿಗೂ ನೆರಳಾಗಿದೆ. ಇದೀಗ ನಾವಿಲ್ಲಿ ಕನ್ನಡ ಸಿನಿಮಾರಂಗದಲ್ಲಿ ಚಿಕ್ಕ ವಯಸ್ಸಲ್ಲಿ, ಕಿರು ಅವಧಿಯಲ್ಲಿಯೇ ಮಹತ್ತರವಾದುದ್ದನ್ನು ಸಾಧಿಸಿ, ಇಹಲೋಕಕ್ಕೆ ಪ್ರಯಾಣ ಬೆಳೆಸಿದ ಆಯ್ದ ಕೆಲವು ಕಲಾವಿದರನ್ನು ಮತ್ತೊಮ್ಮೆ ಫ್ಲಾಷ್‌ಬ್ಯಾಕ್ ಅಂಕಣದಲ್ಲಿ ನೆನೆಯೋಣ.
ಶಂಕರ್‌ನಾಗ್
ಶಂಕರ್‌ನಾಗ್ ಬಗ್ಗೆ ಹೆಚ್ಚು ಹೇಳುವುದಕ್ಕೆ ಏನೂ ಉಳಿದಿಲ್ಲ. ಆದರೆ, ಅವರಿಲ್ಲದೇ ಮೂರು ದಶಕ ಉರುಳಿದರೂ, ಇಂದಿಗೂ ಕನ್ನಡ ನಾಡಿನಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ನೆಲೆನಿಂತಿದೆ. ವ್ಯಕ್ತಿ ಮಾತನಾಡಬಾರದು, ಅವರ ವ್ಯಕ್ತಿತ್ವ ಮತ್ತು ಕೆಲಸ ಮಾತನಾಡಬೇಕು ಎಂಬ ಮಾತಿಗೆ ಹೇಳಿಮಾಡಿಸಿದಂತಿದ್ದವರು ಶಂಕರ್‌ನಾಗ್. ಸದಾ ಕೆಲಸ, ಕೆಲಸ ಎಂದು ಚೂರು ಬಿಡುವು ಪಡೆದುಕೊಳ್ಳದೇ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಿನಿಮಾ ಹಿಂದೆಯೇ ಓಡುತ್ತಿದ್ದ ಶಂಕರ್‌ನಾಗ್, ಕೇವಲ 35 ವರ್ಷಕ್ಕೆ ಕಣ್ಮುಚ್ಚಿದರು. ದಾವಣಗೆರೆ ಬಳಿ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದರು. ಆ ಸಮಯದಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಇವರು, ಕನ್ನಡ ಚಿತ್ರೋದ್ಯಮಕ್ಕೆ ಕೆಲವು ಹೊಸತುಗಳನ್ನು ಪರಿಚಯಿಸಿದ್ದರು. ಚೆನ್ನೈನಲ್ಲಿದ್ದ ಸಿನಿಮಾ ಉದ್ಯಮವನ್ನು ಬೆಂಗಳೂರಿಗೆ ತಂದ ಶ್ರೇಯವೂ ಇವರಿಗೆ ಸಲ್ಲುತ್ತದೆ. 1984ರಲ್ಲಿ ಒಂದೇ ವರ್ಷದ ಅವಧಿಯಲ್ಲಿ 15 ಸಿನಿಮಾಗಳಲ್ಲಿ ಶಂಕರ್‌ನಾಗ್ ನಟಿಸಿದ್ದರು.
ಮಿನುಗುತಾರೆ ಕಲ್ಪನಾ
ಸ್ಯಾಂಡಲ್‌ವುಡ್‌ನ ಮಿನುಗುತಾರೆ ಎಂದೇ ಖ್ಯಾತಿ ಪಡೆದಿದ್ದು ನಟಿ ಕಲ್ಪನಾ. 60-70ರ ದಶಕದಲ್ಲಿ ತಮ್ಮ ನಟನೆಯ ಮೂಲಕವೇ ಕನ್ನಡ ಚಿತ್ರರಂಗದ ಖ್ಯಾತಿಯನ್ನು ಎತ್ತರಕೇರಿಸಿದವರು. ಸಾಕು ಮಗಳು ಸಿನಿಮಾ ಮೂಲಕ 1963ರಲ್ಲಿ ಚಿತ್ರರಂಗ ಪ್ರವೇಶಿಸಿದ ಕಲ್ಪನಾಗೆ ಬೆಳ್ಳಿ ಮೋಡ ಚಿತ್ರ ದೊಡ್ಡ ಹೆಸರು ತಂದುಕೊಟ್ಟಿತು. ಅದಾದ ಮೇಲೆ ಮತ್ತೆಂದೂ ಹಿಂದೆ ತಿರುಗಿ ನೋಡದ ಈ ಮಿನುಗುತಾರೆ, ಹಿಟ್ ಸಿನಿಮಾಗಳನ್ನೇ ಮುಡಿಗೇರಿಸಿಕೊಳ್ಳುತ್ತ ಹೋದರು. ನೆನಪಿರಲಿ, ಬಣ್ಣದ ಲೋಕದ ಜತೆಗೆ ಅದರಾಚೆಗಿನ ಬದುಕಿನಲ್ಲಿಯೂ ಕಲ್ಪನಾ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಕಣ್ಣೀರಲ್ಲಿ ಕೈ ತೊಳೆದಿದ್ದಾರೆ. ಚಿತ್ರಜೀವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಕಲ್ಪನಾ, ಮಾನಸಿಕವಾಗಿಯೂ ನೊಂದಿದ್ದರು. ಬೆಳಗಾವಿ ಜಿಲ್ಲೆ, ಸಂಕೇಶ್ವರದ ಗೋಟೂರಿನಲ್ಲಿ ಕುಮಾರ ರಾಮ ನಾಟಕದಲ್ಲಿ ಭಾಗವಹಿಸಿದ್ದರು. ಬಣ್ಣದ ಲೋಕದ ಅದೇ ಅವರ ಕೊನೆಯ ನಾಟಕವಾಗಿತ್ತು. ನಾಟಕ ಮುಗಿದ ಆ ರಾತ್ರಿಯೇ ಸರಿಸುಮಾರು 56 ನಿದ್ದೆ ಮಾತ್ರೆ ನುಂಗಿ 1979ರಲ್ಲಿ ಶಾಶ್ವತವಾಗಿ ಕಣ್ಮುಚ್ಚಿದ್ದರು. ಆಗ ಇವರ ವಯಸ್ಸು ಕೇವಲ 35.
ಮಂಜುಳಾ
70-80ರ ದಶಕದಲ್ಲಿ ಕನ್ನಡ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡ ನಟಿ ಮಂಜುಳಾ. 1966ರಲ್ಲಿ ಮನೆ ಕಟ್ಟಿ ನೋಡು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಪಡೆದು ಜನಪ್ರಿಯಗೊಂಡರು. ಅಲ್ಲಿಂದ ಶುರುವಾದ ಅವರ ಸಿನಿಮಾ ಪಯಣದಲ್ಲಿ ಡಾ. ರಾಜ್‌ಕುಮಾರ್, ಶಂಕರ್‌ನಾಗ್, ವಿಷ್ಣುವರ್ಧನ್ ಸೇರಿ ಹತ್ತಾರು ನಟರ ಜತೆಗೆ ಸಿನಿಮಾ ಮಾಡಿದರು. 1981ರಷ್ಟೊತ್ತಿಗೆ ಮಂಜುಳಾ ಬರೋಬ್ಬರಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ತೆಲುಗು, ತಮಿಳಿನಲ್ಲಿಯೂ ಸಿನಿಮಾ ಮಾಡಿದರು. ಆದರೆ, ದೇಹ ತೂಕ ಹೆಚ್ಚುತ್ತಲೇ ಹೋಯಿತು. ಆ ಸಮಸ್ಯೆಯಿಂದ ಸಿನಿಮಾರಂಗದಿಂದಲೇ ಮಂಜುಳಾ ದೂರ ಸರಿದರು. ಚಿಕ್ಕವಯಸ್ಸಿನಲ್ಲಿಯೇ ಅತಿಯಾದ ದೇಹತೂಕದಿಂದ ಖಿನ್ನತೆಗೆ ಜಾರಿದರು. ಹಣಕಾಸಿನ ಸಮಸ್ಯೆಯೂ ಹೆಚ್ಚಾದವು. ಹೀಗಿರುವಾಗ ಒಂದು ದಿನ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೋವ್ ಆನ್ ಮಾಡಿ ಬೆಂಕಿಗೆ ಆಹುತಿಯಾದರು. ತನಿಖೆ ಬಳಿಕ ಇದು ಆತ್ಮಹತ್ಯೆ ಎಂದು ಸಾಬೀತಾಯಿತು. ಕೇವಲ 31ನೇ ವಯಸ್ಸಿಗೆ ಮಂಜುಳಾ ಇಲ್ಲವಾದರು.
ಸುನೀಲ್
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಕೇವಲ 4 ವರ್ಷವಾದರೂ, ಇಂದಿಗೂ ಎಲ್ಲರ ನೆನಪಿನ ಸ್ಮೃತಿ ಪಟಲದಲ್ಲಿ ನೆಲೆಸಿದ್ದಾರೆ ಉಡುಪಿ ಮೂಲದ ನಟ ಸುನೀಲ್. 80, 90ರ ಕಾಲಘಟ್ಟದಲ್ಲಿ ಈ ಸ್ಪುರದ್ರುಪಿ ನಟನಿಗೆ ಹೆಚ್ಚಿನ ಬೇಡಿಕೆ. ಬೆಳ್ಳಿ ಕಾಲುಂಗುರ, ಶ್ರುತಿ, ಶಾಂಭವಿ ಸೇರಿ ಹತ್ತಾರು ಕನ್ನಡ ಸಿನಿಮಾಗಳಲ್ಲಿ ಸುನೀಲ್ ನಟಿಸಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಇವರೂ ಕೂಡ ಕನ್ನಡಿಗರಿಗೆ ಕಣ್ಣೀರು ಹಾಕಿಸಿದ್ದಾರೆ. ಸಿನಿಮಾ ಶೂಟಿಂಗ್ ಮುಗಿಸಿ ಬಾಗಲಕೋಟೆಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಸುನೀಲ್ ಸಾವನ್ನಪ್ಪುತ್ತಾರೆ. ಅದೇ ಕಾರಿನಲ್ಲಿ ನಟಿ ಮಾಲಾಶ್ರೀ ಸಹ ಇದ್ದರು. ಆ ಸಮಯದಲ್ಲಿ ಈ ಜೋಡಿ ಇನ್ನೇನು ಮದುವೆ ಆಗಲಿದೆ ಎಂದೇ ಪುಕಾರು ಹಬ್ಬಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. 1994ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿಯೇ ಸುನೀಲ್ ಪ್ರಾಣಬಿಟ್ಟರು.
ಸೌಂದರ್ಯ
ಹೆಸರಿಗೆ ತಕ್ಕಂತೆ ಸೌಂದರ್ಯವತಿಯಾಗಿದ್ದವರು ನಟಿ ಸೌಂದರ್ಯ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ಸೌಂದರ್ಯ. 1992ರಲ್ಲಿ ಗಂಧರ್ವ ಸಿನಿಮಾ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ನಟನೆ ಆರಂಭಿಸಿದ ಸೌಂದರ್ಯ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸರಣಿ ಸಿನಿಮಾ ಅವಕಾಶಗಳು, ಪರಭಾಷೆಯಲ್ಲಿನ ಬೇಡಿಕೆ ಸೌಂದರ್ಯ ಅವರನ್ನು ಕಿರು ಅವಧಿಯಲ್ಲಿಯೇ ಸ್ಟಾರ್ ನಟಿಯನ್ನಾಗಿಸಿತು. ಆ ಕಾಲದ ಸೂಪರ್ ಸ್ಟಾರ್ ನಟರ ಜತೆಗೆ ನಟಿಸಿ ಸೈ ಎನಿಸಿಕೊಂಡರು. ಮಾಡರ್ನ್ ಏಜ್ ಸಾವಿತ್ರಿ ಎಂಬ ಪಟ್ಟವನ್ನೂ ತೆಲುಗು ಸಿನಿಮಾರಂಗದಿಂದ ಪಡೆದುಕೊಂಡರು. ಎಲ್ಲ ಭಾಷೆಗಳಲ್ಲಿ ಒಟ್ಟಾರೆ 120ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ಸೌಂದರ್ಯ, ಆಪ್ತಮಿತ್ರ ಸಿನಿಮಾ ಮುಗಿಸಿ ಅದರ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಸಂದರ್ಭದಲ್ಲಿಯೇ 2004ರಲ್ಲಿ ವಿಮಾನ ಅಪಘಾತದಲ್ಲಿ ಸೌಂದರ್ಯ ಸಾವನ್ನಪ್ಪಿದರು. ಆ ಸಮಯದಲ್ಲಿ ಅವರ ಹೊಟ್ಟೆಯಲ್ಲಿ 5 ತಿಂಗಳ ಕೂಸಿತ್ತು. ವಯಸ್ಸು ಕೇವಲ 31 ಆಗಿತ್ತು.
- ಮಂಜುನಾಥ ಕೊಟಗುಣಸಿ
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಫ್ಯಾಷ್‌ಬ್ಯಾಕ್ ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: manjunath.kotagunasi@htdigital.in, ht.kannada@htdigital.in