Chaitra Vasudevan: ಮುರಿದು ಬಿತ್ತು ನಟಿ, ನಿರೂಪಕಿ ಚೈತ್ರಾ ವಾಸುದೇವನ್ ದಾಂಪತ್ಯ; ಕೇವಲ 6 ವರ್ಷದ ಬಂಧಕ್ಕೆ ವಿಚ್ಛೇದನದ ಮುದ್ರೆ
Jul 28, 2023 04:45 PM IST
ಮುರಿದು ಬಿತ್ತು ನಟಿ ಚೈತ್ರಾ ವಾಸುದೇವನ್ ದಾಂಪತ್ಯ; ಕೇವಲ 6 ವರ್ಷದ ಬಂಧಕ್ಕೆ ವಿಚ್ಛೇದನದ ಮುದ್ರೆ
- ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ, ನಿರೂಪಕಿ ಚೈತ್ರಾ ವಾಸುದೇವನ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಪತಿ ಸತ್ಯ ನಾಯ್ಡು ಜತೆ ವಿಚ್ಛೇದನದ ವಿಚಾರವನ್ನು ಚೈತ್ರಾ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.
Chaitra Vasudevan: ಕನ್ನಡ ಕಿರುತೆರೆ, ಸಿನಿಮಾ, ಯೂಟ್ಯೂಬ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿದ್ದಾರೆ ನಟಿ ಚೈತ್ರಾ ವಾಸುದೇವನ್. ಬಿಗ್ ಬಾಸ್ ಸೀಸನ್ 7ರಲ್ಲಿ ಕಾಣಿಸಿಕೊಂಡು ಟಿವಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು ಈ ಚೆಲುವೆ. ಇದೆಲ್ಲದರ ಜತೆಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಚೈತ್ರಾ ಕೆಲಸ ಮಾಡಿದ್ದಾರೆ. ಈಗ ಇದೆಲ್ಲದರ ಆಚೆಗಿನ ವೈಯಕ್ತಿಕ ವಿಚಾರದ ಸಲುವಾಗಿ ಚೈತ್ರಾ ಸುದ್ದಿಯಲ್ಲಿದ್ದಾರೆ. ಪತಿ ಸತ್ಯ ನಾಯ್ಡು ಜತೆಗಿನ ಬಂಧವನ್ನು ಕಡಿದುಕೊಂಡಿದ್ದಾರೆ.
ಮುರಿದು ಬಿತ್ತು ದಾಂಪತ್ಯ
2017ರಲ್ಲಿ ಉದ್ಯಮಿ ಸತ್ಯ ಎಂಬುವವರ ಜತೆಗೆ ಚೈತ್ರಾ ಅವರ ವಿವಾಹ ನೆರವೇರಿತ್ತು. ಅದ್ದೂರಿಯಾಗಿ ನೆರವೇರಿದ ಈ ಕಲ್ಯಾಣ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಆಪ್ತರು ಹಾಜರಿ ಹಾಕಿ ನವ ಜೋಡಿಗೆ ಶುಭ ಹಾರೈಸಿದ್ದರು. ಇದೀಗ ಮದುವೆಯಾಗಿ ಕೇವಲ ಆರೇ ವರ್ಷಕ್ಕೆ ಈ ಜೋಡಿ ಬೇರೆ ಬೇರೆಯಾಗಲು ನಿರ್ಧರಿಸಿದೆ. ಈ ಹಿಂದೆ ಇದು ಕೇವಲ ವದಂತಿಗಳೆಂದು ಹೇಳಲಾಗಿತ್ತು. ಆದರೆ, ಸೋಷಿಯಲ್ ಮೀಡಿಯಾ ಮೂಲಕ ಬಂದ ಚೈತ್ರ, ನಿಜ ವಿಚಾರವನ್ನು ನೇರವಾಗಿ ಎಲ್ಲರ ಮುಂದಿಟ್ಟಿದ್ದಾರೆ. ನಾನು ಮತ್ತು ಸತ್ಯ ಬೇರೆ ಬೇರೆಯಾಗಿದ್ದೇವೆ ಎಂದಿದ್ದಾರೆ. ಹೀಗಿದೆ ಅವರ ಇನ್‌ಸ್ಟಾಗ್ರಾಂ ಪೋಸ್ಟ್.
ಸಾಕಷ್ಟು ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ..
"ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಇವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನು ಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಪೋಸ್ಟ್ ಹಾಕಿದ್ದಾರೆ.
ಎಲ್ಲೆಂದರಲ್ಲಿ ಓಡಾಡಿಕೊಂಡು ಖುಷಿ ಖುಷಿಯಾಗಿದ್ದ ಈ ಜೋಡಿಯ ನಡುವೆ ಅದ್ಯಾವ ವಿಚಾರ ಭುಗಿಲೆದ್ದು ವಿಚ್ಛೇದನಕ್ಕೆ ದಾರಿ ಮಾಡಿಕೊಟ್ಟಿತೋ ಗೊತ್ತಿಲ್ಲ. ಈ ಬಗ್ಗೆ ಸ್ವತಃ ಚೈತ್ರಾ ಸ್ಪಷ್ಟನೆ ನೀಡಿಲ್ಲ. ಅದರ ಬದಲು, ದಯಮಾಡಿ ಯಾರೂ ನಿಂದನೆ /ದ್ವೇಷ ಮಾಡಬೇಡಿ. ನನ್ನ ಈ ಸ್ಥಿತಿಯಿಂದ ಹೊರಬರಲು ನಾನು ಕಷ್ಟ ಪಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮೂಲತಃ ಕುಂದಾಪುರದವರು
ಚೈತ್ರಾ ಮೂಲತಃ ಕುಂದಾಪುರ ಮೂಲದವರು. ಅವರ ತಂದೆ ಹೊಟೇಲ್ ಉದ್ಯಮದಲ್ಲಿದ್ದಾರೆ. ಇತ್ತ ಚೈತ್ರಾ ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ ಜತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ತುಂಬ ಸ್ಟ್ರಾಂಗ್. ಯೂಟ್ಯೂಬ್‌ನಲ್ಲಿಯೂ ಇವರು ಪರಿಚಿತ. ಇದೆಲ್ಲದರ ಜತೆಗೆ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ತೆರೆದು ಅಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಹಲವು ಕಡೆಗಳಲ್ಲಿ ದುಡಿಯುತ್ತಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ