ಭಾಗ್ಯಾಗೆ ಅನುಮಾನ ಬಂದಿದೆ ಎಂದು ಗೊತ್ತಿದ್ರೂ ಪ್ರೇಯಸಿಯನ್ನು ಭೇಟಿ ಆಗಲು ಹೊರಟ ತಾಂಡವ್
Oct 03, 2023 09:57 AM IST
ಭಾಗ್ಯಲಕ್ಷ್ಮಿ ಧಾರಾವಾಹಿ 283ನೇ ಎಪಿಸೋಡ್
ಭಾಗ್ಯ ಹಾಗೂ ತಾಂಡವ್ ಮಾತನಾಡುವಾಗ ಶ್ರೇಷ್ಠಾ ಕರೆ ಮಾಡುತ್ತಾಳೆ. ಕಾಲ್ ಅವಾಯ್ಡ್ ಮಾಡಿದರೆ ಭಾಗ್ಯಳಿಗೆ ಅನುಮಾನ ಬರಬಹುದು ಎಂಬ ಕಾರಣಕ್ಕೆ ತಾಂಡವ್, ಶ್ರೇಷ್ಠಾ ಕಾಲ್ ರಿಸೀವ್ ಮಾಡುತ್ತಾನೆ.
Bhagyalakshmi Kannada Serial: ವಿಘ್ನ ನಿವಾರಕನ ಮಹಿಮೆಯಿಂದ ಕುಸುಮಾ ಮನೆಯಲ್ಲಿ ಕಳ್ಳತನವಾದ ವಸ್ತುಗಳು ಸಿಕ್ಕಿವೆ. ಕಳ್ಳಿಯೂ ಸಿಕ್ಕಿದ್ದಾಳೆ. ಆದರೆ ಸುಂದರಿ, ತಾನು ಜೈಲಿನಲ್ಲಿಬೇಕಾದರೆ ಇಂತಿಷ್ಟು ಹಣ ಕೊಡಬೇಕು ಎಂದು ತಾಂಡವ್ ಬಳಿ ಸನ್ನೆ ಮೂಲಕವೇ ಒಪ್ಪಂದ ಮಾಡಿಕೊಳ್ಳುತ್ತಾರೆ. ತಾಂಡವ್ ಕೂಡಾ ಸುಂದರಿಗೆ ಹಣ ಕೊಟ್ಟು ಬಾಯಿ ಮುಚ್ಚಿಸುವ ಯತ್ನದಲ್ಲಿದ್ಧಾನೆ.
ಪಟ್ಟು ಬಿಡದ ಭಾಗ್ಯ
ಆದರೆ ಭಾಗ್ಯಳಿಗೆ ಪತಿ ತಾಂಡವ್ ಮೇಲೆ ಅನುಮಾನ. ಆತನ ವರ್ತನೆ ನೋಡಿ ನಮ್ಮಿಂದ ಇವರು ಏನೋ ಮುಚ್ಚಿಡುತ್ತಿದ್ದಾರೆ ಎಂದುಕೊಳ್ಳುತ್ತಾಲೆ. ಆ ಕಾರಣಕ್ಕೆ ತಾಂಡವ್ ಬಳಿ ಬಾಯಿ ಬಿಡಿಸಲು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾಳೆ. ನಿನ್ನೆ ನಾವು ಇಲ್ಲದಿದ್ದಾಗ ಮನೆಯಲ್ಲಿ ಏನೆಲ್ಲಾ ನಡೆಯಿತು ಹೇಳಿ ಎನ್ನುತ್ತಾಳೆ. ಆದರೆ ತಾಂಡವ್ ಮಾತ್ರ ನಿಜ ಒಪ್ಪಿಕೊಳ್ಳಲು ಸಿದ್ಧನಿಲ್ಲ. ನನ್ನ ಮೇಲೆ ಪತ್ತೇದಾರಿಕೆ ಮಾಡಬೇಡ, ನನಗೆ ಈ ರೀತಿ ಪ್ರಶ್ನೆಗಳನ್ನು ಕೇಳಬೇಡ, ನೀನು ಎಷ್ಟು ಸಾರಿ ಕೇಳಿದರೂ ನನ್ನ ಉತ್ತರ ಒಂದೇ ನಾನು ಏನೂ ಮುಚ್ಚಿಡುತ್ತಿಲ್ಲ ಎನ್ನುತ್ತಾನೆ.
ಹಳೆಯ ಘಟನೆಗಳನ್ನು ತಾಂಡವ್‌ಗೆ ನೆನಪಿಸಿದ ಭಾಗ್ಯ
ಭಾಗ್ಯ ಮಾತ್ರ ತಾಂಡವ್ ಉತ್ತರವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹಳೆಯ ದಿನಗಳನ್ನು ತಾಂಡವ್‌ಗೆ ನೆನಪಿಸುತ್ತಾಳೆ. ನೀವು ಸುಳ್ಳು ಹೇಳುತ್ತಿರುವುದು ಯಾರಿಗೇ ಆಗಲಿ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಇದನ್ನು ಮನೆಯಲ್ಲಿ ಕೇಳಿದರೆ ಎಲ್ಲರೂ ನೊಂದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಇಲ್ಲಿ ಕೇಳುತ್ತಿದ್ದೇನೆ. ನಿಮಗೆ ತಂದೆ ತಾಯಿ ಬಗ್ಗೆ ಎಷ್ಟು ಗೌರವ ಇದೆ ಅನ್ನೋದು ನನಗೆ ಗೊತ್ತು. ಒಮ್ಮೆ ಅತ್ತೆಗೆ ಟೈಫಾಯ್ಡ್ ಜ್ವರ ಬಂದಿತ್ತು, ಆಗ ನೀವು ಹೊರ ರಾಜ್ಯದಲ್ಲಿದ್ದವರು ಕೆಲಸ ಅರ್ಧದಲ್ಲೇ ಬಿಟ್ಟು ವಿಮಾನ ಹತ್ತಿ ಕೇವಲ 3 ಗಂಟೆ ಸಮಯದಲ್ಲಿ ಬಂದಿದ್ರಿ, ಆಗ ನಿಮಗೆ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಕೂಡಾ ಎದುರಾಗಿತ್ತು. ಹಾಗೇ ಒಮ್ಮೆ ತನ್ವಿಗೆ ಪೆಟ್ಟಾಗಿದ್ದಾಗ ಕೂಡಾ ಆಫೀಸಿಗೆ ರಜೆ ಹಾಕಿ ಬಂದಿದ್ರಿ ಅಂತದ್ದರಲ್ಲಿ, ಈಗ ಅತ್ತೆಗೆ ಕಾಲು ಪೆಟ್ಟಾಗಿದೆ ಎಂದು ತಿಳಿದೂ, ನೀವು ಮನೆಯಲ್ಲಿ ಇದ್ದರೂ ಏಕೆ ಬರಲಿಲ್ಲ ಎಂದು ಪ್ರಶ್ನಿಸುತ್ತಾಳೆ. ಆದರೆ ತಾಂಡವ್ ಮಾತ್ರ ಭಾಗ್ಯ ಮಾತಿಗೆ ಉತ್ತರಿಸದೆ ಆಕೆಯನ್ನು ಸುಮ್ಮನಿರಿಸುವ ಪ್ರಯತ್ನ ಮಾಡುತ್ತಾನೆ.
ಮತ್ತೆ ಶ್ರೇಷ್ಠಾಳನ್ನು ಭೇಟಿ ಆಗಲು ಹೊರಟ ತಾಂಡವ್
ಭಾಗ್ಯ ಹಾಗೂ ತಾಂಡವ್ ಮಾತನಾಡುವಾಗ ಶ್ರೇಷ್ಠಾ ಕರೆ ಮಾಡುತ್ತಾಳೆ. ಕಾಲ್ ಅವಾಯ್ಡ್ ಮಾಡಿದರೆ ಭಾಗ್ಯಳಿಗೆ ಇನ್ನಷ್ಟು ಅನುಮಾನ ಬರಬಹುದು ಎಂಬ ಕಾರಣಕ್ಕೆ ತಾಂಡವ್, ಶ್ರೇಷ್ಠಾ ಕಾಲ್ ರಿಸೀವ್ ಮಾಡುತ್ತಾನೆ. ನಾನು ಹೇಳಿದ ಲೊಕೇಷನ್‌ಗೆ ನೀನು 10 ನಿಮಿಷದಲ್ಲಿ ಬರಬೇಕು ಇಲ್ಲವಾದರೆ ನಾನು ನಿಮ್ಮ ಮನೆಗೆ ಹೋಗುತ್ತೇನೆ, ನಂತರ ಏನೇ ಆದರೂ ನಾನು ಜವಾಬ್ದಾರಳಲ್ಲ ಎನ್ನುತ್ತಾಳೆ. ತಾಂಡವ್ ತಕ್ಷಣ ಶ್ರೇಷ್ಠಾ ಭೇಟಿ ಮಾಡಲು ಹೊರಡುತ್ತಾನೆ. ಎಲ್ಲಿಗೆ ಎಂದು ಭಾಗ್ಯ ಕೇಳುತ್ತಾಳೆ. ನನಗೆ ಸ್ವಲ್ಪ ಕೆಲಸ ಇದೆ, ನೀನು ಮನೆಗೆ ಹೋಗು ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ನಾನು ಅಂದುಕೊಂಡಂತೆ ಇವರು ಯಾವುದೋ ಸಮಸ್ಯೆಗೆ ಸಿಲುಕಿದ್ದಾರೆ. ಅದೇನೆಂದು ಕಂಡುಹಿಡಿಯಬೇಕು ಎಂದು ಭಾಗ್ಯ ಮನಸ್ಸಿನಲ್ಲಿ ನಿರ್ಧಾರ ಮಾಡುತ್ತಾಳೆ.
ಬೀಗತಿ ಸೇವೆಗೆ ಮುಂದಾದ ಸುನಂದಾ
ಕುಸುಮಾ ಅಜ್ಜಿಗೆ ಕಾಲು ಮುರಿದಿದೆ. ಆಕೆಯನ್ನು ನೋಡಿಕೊಳ್ಳಲು ಮನೆಯಲ್ಲಿ ಅಮ್ಮ ಇರಲೇಬೇಕು, ಆದ್ದರಿಂದ ನಾಳೆಯಿಂದ ಅಮ್ಮ ಸ್ಕೂಲ್‌ಗೆ ಬರುವುದಿಲ್ಲ ಎಂದು ತನ್ವಿ, ತಮ್ಮ ತನ್ಮಯ್‌ಗೆ ಹೇಳುತ್ತಾಳೆ. ಗುಂಡಣ್ಣ ಇದೇ ವಿಚಾರವನ್ನು ಅಜ್ಜಿ ಬಳಿ ಬಂದು ಹೇಳುತ್ತಾನೆ. ಕುಸುಮಾ, ಗುಂಡಣ್ಣ ಹೇಳಿದ ವಿಚಾರದ ಬಗ್ಗೆ ಯೋಚನೆ ಮಾಡುತ್ತಾಳೆ. ಹೌದು, ನಾನು ಈ ವಿಷಯ ಮರೆತಿದ್ದೆ. ಭಾಗ್ಯ ಸ್ಕೂಲ್‌ಗೆ ಹೋದರೆ ನನ್ನನ್ನು ಯಾರು ನೋಡಿಕೊಳ್ಳುವುದು? ಹಾಗಂತ ರಜೆ ಹಾಕಿಸಲು ಕೂಡಾ ಸಾಧ್ಯವಿಲ್ಲ ಏನು ಮಾಡುವುದು ಎಂದು ಪತಿ ಧರ್ಮರಾಜ್ ಜೊತೆ ಮಾತನಾಡುವಾಗ, ಸುನಂದಾ ನಾನು ನೋಡಿಕೊಳ್ಳುತ್ತೇನೆ, ಯೋಚನೆ ಮಾಡಬೇಡಿ ಎನ್ನುತ್ತಾಳೆ. ಇದನ್ನು ಕೇಳಿ ಕುಸುಮಾಗೆ ಖುಷಿ ಆಗುತ್ತದೆ. ಆದರೆ ಸುನಂದಾ ಉದ್ಧೇಶವೇ ಬೇರೆ ಇರುತ್ತದೆ. ಬೀಗತಿಯನ್ನು ನೋಡಿಕೊಳ್ಳುವ ನೆಪದಲ್ಲಿ ಮಗಳಿಗೆ ಅನ್ಯಾಯ ಮಾಡುತ್ತಿರುವ ಅಳಿಯನ ಅಸಲಿ ಮುಖವನ್ನು ಬಯಲಿಗೆ ತರಲು ಸುನಂದಾ ಸರಿಯಾದ ಸಮಯಕ್ಕೆ ಕಾಯುತ್ತಿರುತ್ತಾಳೆ. ಅದೇ ಕಾರಣಕ್ಕೆ ಬೀಗತಿಯ ಸೇವೆ ಮಾಡಲು ಒಪ್ಪಿಕೊಳ್ಳುತ್ತಾಳೆ.
ಶ್ರೇಷ್ಠಾ ಭೇಟಿ ಮಾಡಲು ತಾಂಡವ್ ಎಲ್ಲಿಗೆ ಹೋಗುತ್ತಾಳೆ. ಒಂದೆಡೆ ಭಾಗ್ಯ, ಮತ್ತೊಂದೆಡೆ ಪೂಜಾ ಆತನನ್ನು ಫಾಲೋ ಮಾಡುತ್ತಾರಾ? ಅವರಿಗೆ ನಿಜ ತಿಳಿಯುವುದಾ? ಎನ್ನುವುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.