Seetha Rama Serial: ಹಲ್ಲು ಮಸಿಯುತ್ತಲೇ ಎಂಟ್ರಿ ಕೊಟ್ಟ ರುದ್ರಪ್ರತಾಪ್! ರಾಮನ ಜೀವಕ್ಕೆ ಸಂಚಕಾರ ತಂದಿಡ್ತಾನಾ ಲಾಯರ್?
Feb 09, 2024 06:30 AM IST
Seetha Raama Serial: ಹಲ್ಲು ಮಸಿಯುತ್ತಲೇ ಎಂಟ್ರಿ ಕೊಟ್ಟ ರುದ್ರಪ್ರತಾಪ್! ರಾಮನ ಜೀವಕ್ಕೆ ಸಂಚಕಾರ ತಂದಿಡ್ತಾನಾ ಲಾಯರ್?
- Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್ ದಿನದಿಂದ ದಿನಕ್ಕೆ ಕುತೂಹಲದತ್ತ ಸಾಗುತ್ತಿದೆ. ಗುರುವಾರದ ಏಪಿಸೋಡ್ನಲ್ಲಿ ಅಚ್ಚರಿಯ ಘಟನೆಗಳು ನಡೆದಿವೆ. ಲಾಯರ್ ರುದ್ರಪ್ರತಾಪನ ಆಗಮನವಾಗಿದೆ. ರಾಮ ಮತ್ತು ಸೀತೆಯ ಹತ್ಯೆಗೆ ಅಲ್ಲಿಂದಲೇ ಸಂಚು ರೂಪಿಸುತ್ತಿದ್ದಾನೆ ಲಾಯರ್.
Seetha Rama Serial: ಭಾರ್ಗವಿಗೆ ಮಾವ ಸೂರ್ಯಪ್ರಕಾಶ್ ದೇಸಾಯಿ ಮಾತು ಕೇಳಿ ಶಾಕ್ ಆಗಿದ್ದಾಳೆ. ರಾಮ ಮತ್ತು ಸೀತಾ ನಡುವಿನ ಸಂಬಂಧದ ಬಗ್ಗೆ ಭಾರ್ಗವಿ ಮುಂದೆ ಬಾಯ್ಬಿಟ್ಟಿದ್ದಾನೆ ಮಾವಯ್ಯ. ರಾಮ ಇಷ್ಟಪಟ್ಟ ಹುಡುಗಿ ಬೇರೆ ಯಾರೂ ಅಲ್ಲಮ್ಮ, ನಮ್ಮ ಆಫೀಸ್ನ ಸೀತಾ. ನಮ್ಮ ಮನೆಗೆ ಹೇಳಿ ಮಾಡಿಸಿದ ಸೊಸೆ ಎಂದು ಸೂರ್ಯಪ್ರಕಾಶ್ ಹೇಳಿದ್ದಾನೆ. ಅಲ್ಲಿಗೇ, ಭಾರ್ಗವಿಯ ಕಡುಕೋಪದ ಕಟ್ಟೆಯೊಡೆದಿದೆ.
ರುದ್ರಪ್ರತಾಪನ ಮದುವೆ ಆಮಂತ್ರಣ ಪತ್ರ ಹಿಡಿದುಕೊಂಡು, ಸೀತಾಳ ಬಗ್ಗೆ ನಿಗಿ ನಿಗಿ ಕೆಂಡದಂತಾಗಿದ್ದಾಳೆ ಭಾರ್ಗವಿ. ರುದ್ರಪ್ರತಾಪ್ನ ಬಗ್ಗೆಯೂ ಮಾತನಾಡುತ್ತಿದ್ದಾಳೆ. ಜೈಲಿಗೆ ಹೋದ ಆ ರುದ್ರಪ್ರತಾಪನಿಗೆ ಸೀತಾಳ ಮೇಲೂ ಅದೆಷ್ಟು ಕೋಪ ಇರಬಹುದು? ಒಂದು ಸಣ್ಣ ಬೆಂಕಿ ಕಿಡಿ ಹಚ್ಚಿದರೆ, ಏನೆಲ್ಲ ಆಗಬಹುದು? ಸೀತಾಳ ಜೀವನ ಧಗ ಧಗ ಅಂತ ಉರಿಯುತ್ತೆ. ಅದನ್ನ ನೋಡಿ, ನನ್ನ ರಾಮನ ಕನಸು ಭಸ್ಮವಾಗುತ್ತೆ ಎಂದು ಬೀಗಿದ್ದಾಳೆ.
ಇಷ್ಟೆಲ್ಲ ಬೆಳವಣಿಗೆ ಬಳಿಕವೇ ಸೀತಾ ರಾಮ ಸೀರಿಯಲ್ ಇದೀಗ ಮತ್ತೊಂದು ಹೊರಳಿಗೆ ಸಾಕ್ಷಿಯಾಗಿದೆ. ಈ ವರೆಗೂ ಎಲ್ಲವೂ ಸಾಂಗವಾಗಿಯೇ ಹೋಗುತ್ತಿದ್ದ ಧಾರಾವಾಹಿಯಲ್ಲಿ, ಈಗ ಲಾಯರ್ ರುದ್ರಪ್ರತಾಪನ ಎಂಟ್ರಿಯಾಗಿದೆ. ಜೈಲಿನಲ್ಲಿ ಇದ್ದುಕೊಂಡೇ, ಸೀತಾ ಮತ್ತು ರಾಮನ ವಿರುದ್ಧವೇ ಹಲ್ಲು ಮಸಿಯುತ್ತಿದ್ದಾನೆ ರುದ್ರಪ್ರತಾಪ್. ಅಷ್ಟೇ ಅಲ್ಲ ಆ ರಾಮನನ್ನು ಸುಮ್ಮನೆ ಬಿಡಲ್ಲ, ಮುಗಿಸಿ ಬಿಡ್ತಿನಿ ಎಂದು ಕೆಂಡ ಉಗುಳುತ್ತಿದ್ದಾನೆ.
ಇತ್ತ ಅಚ್ಚರಿಯ ರೀತಿಯಲ್ಲಿ ಅಶೋಕನ ತಂಗಿ ಅಂಜಲಿ ಮತ್ತು ಪ್ರಿಯಾ ಒಂದೇ ಪಿಜಿ ಸೇರಿದ್ದಾರೆ. ಒಂದೇ ಪಿಜಿಯ ಒಂದೇ ರೂಮ್ ಸಿಕ್ಕಿದೆ. ಆಕೆಗೆ ಇವಳು ಯಾರೆಂಬುದು ಗೊತ್ತಿಲ್ಲ. ಈಕೆಗೆ ಅವಳು ಯಾರೆಂಬುದು ಗೊತ್ತಿಲ್ಲ. ಪ್ರಿಯಾ ತನ್ನ ಹಳೇ ಪಿಜಿಗೆ ಆಗಮಿಸುತ್ತಿದ್ದಂತೆ ಕೋಣೆಯಿಂದ ಬೆಳಗಿನ ಸುಪ್ರಭಾತ ಕೇಳಿದೆ. ಯಾರಿರಬಹುದೆಂದು ನೋಡಿದಾಗ ಅಂಜಲಿ ಕಂಡಿದ್ದಾಳೆ. ಈ ಮೂಲಕ ಇನ್ನು ಮುಂದೆ ಅಶೋಕನ ಕಥೆ ಒಂದು ರೀತಿ ಮಜವಾಗಿಯೇ ಸಾಗಲಿದೆ.
ನಿಮಗೆ ಬೇಲ್ ಕೊಡಿಸ್ತಿವಿ ಎಂದು ಪತಿ ಜತೆ ಲಾಯರ್ ಇದ್ದ ಜೈಲಿಗೆ ಹೋಗಿದ್ದಾಳೆ ಸುಲೋಚನಾ. ನಿಮ್ಮನ್ನು ಆದಷ್ಟು ಬೇಗ ಹೊರ ಕರೆತರುತ್ತೀವಿ. ನೀವು ಚಿಂತೆ ಮಾಡಬೇಡಿ ಇದಕ್ಕಾಗಿ ಆ ರಾಮನ ಬಳಿಯೇ ಹಣ ಎಗರಿಸುತ್ತಿದ್ದೇವೆ ಎಂದಿದ್ದಾಳೆ. ಇದಕ್ಕೆ ಕೋಪದಲ್ಲಿಯೇ ಉತ್ತರಿಸಿದ ರುದ್ರಪ್ರತಾಪ್, ಮದುವೆ ದಿನವೇ ನೀವು ಉಲ್ಟಾ ಹೊಡೆದ್ರಿ. ಆವತ್ತೇ ನೀವು ನಾಲಾಯಕ್ ಎಂದು ಗೊತ್ತಾಯ್ತು. ನಿಮ್ಮನ್ನು ನಂಬೋಕೆ ಆಗಲ್ಲ. ನಾನು ಜೈಲಿನಲ್ಲಿ ಇದ್ದ ಮಾತ್ರಕ್ಕೆ, ನನ್ನ ಪ್ರತಾಪ ನಿಲ್ಲೋದಿಲ್ಲ ಅಂತ ಹೇಳೋದಕ್ಕೆ ಇಲ್ಲಿಗೆ ಕರೆಸಿದ್ದೇನೆ ಎಂದಿದ್ದಾನೆ.
ಆ ರಾಮ, ಆ ಸೀತಾ ಆ ಸಿಹಿಯನ್ನು ನಾನು ಜೀವಂತವಾಗಿ ಉಳಿಸಲ್ಲ. ಬದುಕಿರುವಾಗಲೇ ಅವರಿಗೆ ನರಕ ಏನು ಅಂತ ನಾನು ತೋರಿಸ್ತಿನಿ ಎಂದಿದ್ದಾನೆ. ಸೀತಾ ನನ್ನವಳು, ನನಗೆ ಸೀತಾ ಬೇಕು ಎಂದು ಕೂಗಿ ಹೇಳಿದ್ದಾನೆ. ಅಲ್ಲಿಗೆ ಸೀತಾ ಮತ್ತು ರಾಮನ ಮೇಲೆ ನಿಗಿ ನಿಗಿ ಕೆಂಡದಂತಾಗಿದ್ದಾನೆ ರುದ್ರಪ್ರತಾಪ್. ಹಾಗಾದರೆ, ರಾಮನ ಹತ್ಯೆಗೆ ಸಂಚು ರೂಪಿಸಿದ್ದು ಇದೇ ಲಾಯರಾ? ಸಿಹಿ ಅಪಹರಣ ಮಾಡಿದ್ದೂ ಇದೇ ಲಾಯರ್ ರುದ್ರಪ್ರತಾಪ್ ಇರಬಹುದಾ? ಇದಕ್ಕೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.