logo
ಕನ್ನಡ ಸುದ್ದಿ  /  ಮನರಂಜನೆ  /  Nikhil Kumaraswamy: ರಾಜಕಾರಣದಲ್ಲಿ ಮತ್ತೊಂದು ಸೋಲು; ಬಣ್ಣದ ಲೋಕದತ್ತ ವಾಲಲು ನಿಖಿಲ್‌ ಕುಮಾರಸ್ವಾಮಿ ಒಲವು

Nikhil Kumaraswamy: ರಾಜಕಾರಣದಲ್ಲಿ ಮತ್ತೊಂದು ಸೋಲು; ಬಣ್ಣದ ಲೋಕದತ್ತ ವಾಲಲು ನಿಖಿಲ್‌ ಕುಮಾರಸ್ವಾಮಿ ಒಲವು

May 20, 2023 11:33 AM IST

google News

ರಾಜಕಾರಣದಲ್ಲಿ ಮತ್ತೊಂದು ಸೋಲು; ಬಣ್ಣದ ಲೋಕದತ್ತ ವಾಲಲು ನಿಖಿಲ್‌ ಕುಮಾರಸ್ವಾಮಿ ಒಲವು

    • ಲೋಕಸಭೆ ಮತ್ತು ವಿಧಾನಸಭೆ ಎರಡೂ ಚುನಾವಣೆಯಲ್ಲಿ ಮುಗ್ಗರಿಸಿರುವ ನಿಖಿಲ್‌ ಕುಮಾರಸ್ವಾಮಿ, ಇದೀಗ ಮತ್ತೆ ಬಣ್ಣದ ಲೋಕದ ಕಡೆ ಹೊರಳಲು ಮನಸ್ಸು ಮಾಡಿದ್ದಾರೆ. 
ರಾಜಕಾರಣದಲ್ಲಿ ಮತ್ತೊಂದು ಸೋಲು; ಬಣ್ಣದ ಲೋಕದತ್ತ ವಾಲಲು ನಿಖಿಲ್‌ ಕುಮಾರಸ್ವಾಮಿ ಒಲವು
ರಾಜಕಾರಣದಲ್ಲಿ ಮತ್ತೊಂದು ಸೋಲು; ಬಣ್ಣದ ಲೋಕದತ್ತ ವಾಲಲು ನಿಖಿಲ್‌ ಕುಮಾರಸ್ವಾಮಿ ಒಲವು

Nikhil Kumaraswamy: ಸ್ಯಾಂಡಲ್‌ವುಡ್‌ನ (Sandalwood) ಯಂಗ್‌ ಹೀರೋ ನಿಖಿಲ್‌ ಕುಮಾರ್‌ (Nikhil Kumaraswamy), ಕಳೆದ ಕೆಲ ತಿಂಗಳಿಂದ ಸಿನಿಮಾದಿಂದ ದೂರ ಉಳಿದು ರಾಜಕಾರಣದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಅದಕ್ಕೆ ಕಾರಣ ಈ ಸಲದ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election). ರಾಜ್ಯದಲ್ಲೆಲ್ಲ ಸುತ್ತಾಡಿ ಅಬ್ಬರದ ಪ್ರಚಾರ ಮಾಡಿದರೂ ಜೆಡಿಎಸ್‌ (JDS) ಗಟ್ಟಿಯಾಗಿ ನಿಲ್ಲಲಿಲ್ಲ. ಇತ್ತ ಲೋಕಸಭೆ ಚುನಾವಣೆ ಸೋಲಿನ ಬಳಿಕ ವಿಧಾನಸಭೆ ಚುನಾವಣೆಗೂ ಧುಮುಕಿದ್ದ ನಿಖಿಲ್‌ಗೆ ಅಲ್ಲಿಯೂ ಸೋಲಾಯಿತು.

ಇದೀಗ ಆ ಸೋಲಿನ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಮರಳಲು ನಿಖಿಲ್‌ ಮನಸ್ಸು ಮಾಡಿದ್ದಾರಂತೆ. ಅದ್ದೂರಿ ಬಜೆಟ್‌ನ ಹಲವು ಸಿನಿಮಾಗಳಲ್ಲಿ ನಿಖಿಲ್‌ ನಟಿಸಿದರೂ, ಅಲ್ಲಿಯೂ ಹೇಳಿಕೊಳ್ಳುವಂಥ ಗೆಲುವು ಅವರಿಗೆ ದಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ಅವರೇನು ಸಿನಿಮಾದಿಂದಲೂ ದೂರವಿಲ್ಲ. ಈಗಲೂ ಹಲವು ಸಿನಿಮಾಗಳಿಗೆ ನಿಖಿಲ್‌ ಸಹಿ ಮಾಡಿದ್ದಾರೆ. ಬಿಗ್ ಬಜೆಟ್‌ನಲ್ಲಿಯೇ ಸಿನಿಮಾಗಳು ತಯಾರಾಗುತ್ತಿವೆ. ಹೀಗಿರುವಾಗಲೇ ಚುನಾವಣೆ ಸಲುವಾಗಿ ದೂರ ಉಳಿದಿದ್ದ ನಿಖಿಲ್‌, ಮತ್ತೆ ಬಣ್ಣದ ಲೋಕದ ಕಡೆ ವಾಲಲು ಮನಸು ಮಾಡಿದ್ದಾರೆ.

2016ರಲ್ಲಿಯೇ ಸ್ಯಾಂಡಲ್‌ವುಡ್‌ಗೆ ನಿಖಿಲ್‌ ಎಂಟ್ರಿಯಾದರೂ, ಅಲ್ಲಿಂದ ಇಲ್ಲಿಯವರೆಗೂ ಅವರ ಬತ್ತಳಿಕೆಯಿಂದ ಹೆಚ್ಚು ಸಿನಿಮಾಗಳೇನು ಬಂದಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಏಳು ವರ್ಷದ ಅವಧಿಯಲ್ಲಿ ನಾಲ್ಕು ಸಿನಿಮಾಗಳು ಮಾತ್ರ ಬಿಡುಗಡೆ ಆಗಿವೆ. ಜಾಗ್ವಾರ್‌ ಮೂಲಕ ಆರಂಭವಾದ ಇವರ ಸಿನಿಮಾ ಪಯಣ ಅದಾದ ಮೇಲೆ ಫ್ಯಾಮಿಲಿ ಎಂಟರ್‌ಟೈನರ್‌ ಸೀತಾ ರಾಮ ಕಲ್ಯಾಣ ಚಿತ್ರದಲ್ಲಿಯೂ ನಟಿಸಿದರು. ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡರು. 2021ರಲ್ಲಿ ರೈಡರ್‌ ಮೂಲಕ ಅಬ್ಬರಿಸಿದರಾದರೂ, ಬ್ಲಾಕ್‌ಬಸ್ಟರ್‌ ಹಿಟ್‌ ದಕ್ಕಿಲ್ಲ.

ಹೀಗಿರುವಾಗಲೇ ಕಳೆದ ವರ್ಷದ ಆರಂಭದಲ್ಲಿಯೇ ಯದುವೀರ ಸಿನಿಮಾದಲ್ಲಿ ನಿಖಿಲ್‌ ನಟಿಸಲಿದ್ದಾರೆ ಎಂಬುದು ಅಧಿಕೃತವಾಗಿತ್ತು. ಕೆವಿಎನ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾ ಸದ್ಯ‌ ಶೂಟಿಂಗ್‌ ಹಂತದಲ್ಲಿದೆ. ಒಂದಷ್ಟು ಭಾಗದ ಚಿತ್ರೀಕರಣವೂ ಮುಗಿದಿದೆ ಎನ್ನಲಾಗುತ್ತಿದೆ. ಮಂಜು ಅಥರ್ವ ನಿರ್ದೇಶನದ ಈ ಸಿನಿಮಾ ಇದೀಗ ಮತ್ತೆ ಕೆಲಸ ಆರಂಭಿಸುತ್ತಿದೆ. ಕೊಂಚ ಗ್ಯಾಪ್‌ ಪಡೆದುಕೊಂಡಿದ್ದ ನಿಖಿಲ್‌ ಮತ್ತೆ ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರಂತೆ.

ಇನ್ನೊಂದೆಡೆ ಇನ್ನೂ ಎರಡು ಸಿನಿಮಾ ಆಫರ್‌ಗಳು ನಿಕಿಲ್‌ ಎದುರಿಗಿವೆಯಂತೆ. ಬಿಗ್‌ ಬಜೆಟ್‌ನಲ್ಲಿ ಆ ಸಿನಿಮಾಗಳು ಸಿದ್ಧವಾಗಲಿವೆ ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಆ ಎರಡು ಸಿನಿಮಾಗಳನ್ನೂ ನಿಖಿಲ್‌ ಒಪ್ಪಿಕೊಂಡು, ನಟನೆಯತ್ತ ಗಮನ ಹರಿಸಲಿದ್ದಾರೆ. ಅದಕ್ಕಾಗಿ ಮತ್ತೆ ಡಯಟ್‌, ವರ್ಕೌಟ್‌ ಸಹ ಶುರುವಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇನ್ನು ಕುಮಾರಸ್ವಾಮಿ, ಪುತ್ರನಿಗೆ ಸಿನಿಮಾದ ಕಡೆಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ