logo
ಕನ್ನಡ ಸುದ್ದಿ  /  ಮನರಂಜನೆ  /  Karnataka Budget Analysis: ಬಜೆಟ್‌ನಲ್ಲಿ ಚಿತ್ರರಂಗಕ್ಕಿಲ್ಲ ನಯಾಪೈಸೆ, ಈ ಸಲವೂ ನಿರಾಸೆಯ ಕಾರ್ಮೋಡ; ವಿಶ್ಲೇಷಣೆ

Karnataka Budget Analysis: ಬಜೆಟ್‌ನಲ್ಲಿ ಚಿತ್ರರಂಗಕ್ಕಿಲ್ಲ ನಯಾಪೈಸೆ, ಈ ಸಲವೂ ನಿರಾಸೆಯ ಕಾರ್ಮೋಡ; ವಿಶ್ಲೇಷಣೆ

Jul 08, 2023 10:32 AM IST

google News

ಬಜೆಟ್‌ನಲ್ಲಿ ಚಿತ್ರರಂಗಕ್ಕಿಲ್ಲ ನಯಾಪೈಸೆ, ಈ ಸಲವೂ ನಿರಾಸೆಯ ಕಾರ್ಮೋಡ; ವಿಶ್ಲೇಷಣೆ

    • ಬಜೆಟ್‌ನಲ್ಲಿ ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದು ಇದೇ ಮೊದಲೇನಲ್ಲ. ಪ್ರತಿ ಸಲದ ಬಜೆಟ್‌ ಮಂಡಣೆಗೂ ಮುನ್ನವೇ ಚಿತ್ರರಂಗದ ಒಂದಷ್ಟು ಬೇಡಿಕೆಗಳನ್ನು ಸಿಎಂ ಮುಂದೆ ಇಡುತ್ತಲೇ ಬರಲಾಗುತ್ತಿದೆ. ಆದರೆ, ಬಜೆಟ್‌ ಘೋಷಣೆ ದಿನ ಒಂದೇ ಒಂದು ಬೇಡಿಕೆಯನ್ನೂ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳದಿರುವುದು ವಿಪರ್ಯಾಸ. ಈ ಸಲವೂ ಮೂಗಿಗೆ ತುಪ್ಪ ಸವರಲಾಗಿದೆ. 
ಬಜೆಟ್‌ನಲ್ಲಿ ಚಿತ್ರರಂಗಕ್ಕಿಲ್ಲ ನಯಾಪೈಸೆ, ಈ ಸಲವೂ ನಿರಾಸೆಯ ಕಾರ್ಮೋಡ; ವಿಶ್ಲೇಷಣೆ
ಬಜೆಟ್‌ನಲ್ಲಿ ಚಿತ್ರರಂಗಕ್ಕಿಲ್ಲ ನಯಾಪೈಸೆ, ಈ ಸಲವೂ ನಿರಾಸೆಯ ಕಾರ್ಮೋಡ; ವಿಶ್ಲೇಷಣೆ

Karnataka Budget Analysis: ಸರ್ಕಾರದ ಕಣ್ಣಿಗೆ ಸಿನಿಮಾರಂಗ ನಿರ್ಲಕ್ಷ್ಯದ ಕ್ಷೇತ್ರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬಹುಮತದಿಂದ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಜೋಡಿಯ ಕಾಂಗ್ರೆಸ್‌ ಸರ್ಕಾರ, ಈ ಸಲ ಸಿನಿಮಾ ಕ್ಷೇತ್ರದ ಕಡೆಗೂ ತಿರುಗಲಿದೆ, ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ನಿನ್ನೆ (ಜುಲೈ 7) ಮಂಡಿಸಿದ ಬಜೆಟ್‌ನಲ್ಲಿ ಚಿತ್ರೋದ್ಯಮಕ್ಕೆ ಸಿಕ್ಕಿದ್ದು ಆಶ್ವಾಸನೆ ಮಾತ್ರವೇ ಹೊರತು ಅನುದಾನವಲ್ಲ.

ಹಾಗಂತ ಈ ರೀತಿ ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದು ಇದೇ ಮೊದಲೇನಲ್ಲ. ಪ್ರತೀ ಬಾರಿಯೂ , ಪ್ರತಿ ಸಲದ ಬಜೆಟ್‌ ಮಂಡಣೆಗೂ ಮುನ್ನವೇ ಚಿತ್ರರಂಗದ ಒಂದಷ್ಟು ಬೇಡಿಕೆಗಳನ್ನು ಸಿಎಂ ಮುಂದೆ ಇಡುತ್ತಲೇ ಬರಲಾಗುತ್ತಿದೆ. ಆದರೆ, ಬಜೆಟ್‌ ಘೋಷಣೆ ದಿನ ಒಂದೇ ಒಂದು ಬೇಡಿಕೆಯನ್ನೂ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳದಿರುವುದು ವಿಪರ್ಯಾಸ. ಅದು ಈ ಸಲದ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿಯೂ ಮುಂದುವರಿದಿದೆ. ಈ ಸಲದ ಬಜೆಟ್‌ನಲ್ಲಿ ಏನಾದರೂ ಸಿಗಬಹುದು ಎಂದು ಕಾದದ್ದೇ ಬಂತೇ ವಿನಃ, ಸಿಕ್ಕಿದ್ದು ಮಾತ್ರ ಮತ್ತದೇ ನಿರಾಸೆ!

ಮೊನ್ನೆ ಮೇ ತಿಂಗಳಲಷ್ಟೇ ವಿಧಾನಸಭೆ ಚುನಾವಣೆ ನಡೆಯಿತು. ಎಲ್ಲ ರಾಜಕೀಯ ಪಕ್ಷದವರೂ ಪ್ರಚಾರದ ಉದ್ದೇಶದಿಂದ ಸಿನಿಮಾ ಮಂದಿಯ ಮೊರೆ ಹೋಗಿದ್ದರು. ಸ್ಟಾರ್‌ ಪ್ರಚಾರಕರನ್ನು ಕರೆದುಕೊಂಡು ಇಡೀ ರಾಜ್ಯ ಸುತ್ತಿಸಿದ್ದರು. ಹೀಗೆ ಸಿನಿಮಾ ಮಂದಿಯನ್ನು ಬಳಸಿಕೊಳ್ಳುವ ರಾಜಕಾರಣಿಗಳು, ಚುನಾವಣೆ ಮುಗಿದ ಬಳಿಕ ಅದೇ ಚಿತ್ರೋದ್ಯಮವನ್ನು ನಿರ್ಲಕ್ಷಿಸುವುದೇಕೆ? ಗೆದ್ದು ಬೀಗಿದ ಮೇಲೆ ಚಿತ್ರೋದ್ಯಮವನ್ನು ನಡು ನೀರಲ್ಲಿ ಕೈ ಬಿಡುವುದೇಕೆ?

ಹೌದು, ಇದೆಲ್ಲವನ್ನು ನೋಡುತ್ತಿದ್ದರೆ, ಕರ್ನಾಟಕದಲ್ಲಿ ಚಿತ್ರೋದ್ಯಮ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರ ಎನಿಸದೇ ಇರದು. ಪ್ರತಿ ಬಾರಿಯೂ ಒಂದಷ್ಟು ಸಮಸ್ಯೆಗಳ ಗಂಟನ್ನು ಹಿಡಿದು ಸಿಎಂ ಮುಂದೆ ಬಂದು ನಿಂತಾಗ, ಅವರಿಗೆ ಒಂದು ಕಪ್‌ ಕಾಪಿ ನೀಡಿ, ಉಭಯಕುಶಲೋಪರಿ ವಿಚಾರಿಸಿ, ಆಶ್ವಾಸನೆ ನೀಡಿ ಕಳಿಸಿದ್ದೇ ಬಂತೇ ವಿನಃ ಬೇಡಿಕೆ ಈಡೇರಿಕೆಗೆ ಸರ್ಕಾರ ಮುಂದಾದ ಉದಾಹರಣೆಯೇ ಇಲ್ಲ.

ಮೈಸೂರು ಚಿತ್ರನಗರಿಗೆ ಇನ್ನೆಷ್ಟು ವರ್ಷ?

2015-2016ರ ಅವಧಿಯಲ್ಲಿ ಅಂದಿನ ಬಜೆಟ್‌ನಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣದ ಬಗ್ಗೆ ಘೋಷಿಸಲಾಗಿತ್ತು. ಅಂದಿನಿಂದ ಪ್ರತಿ ವರ್ಷ ಬಜೆಟ್‌ನಲ್ಲಿ ಅದನ್ನೇ ಪುನರುಚ್ಛರಿಸುವುದೇ ನಡೆದು ಬಂದಿದೆ. ಈ ಸಲವೂ ಸಿದ್ದರಾಮಯ್ಯನವರು ಅದನ್ನೇ ಹೇಳಿದ್ದಾರೆ. ಮೈಸೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ. ಖುಷಿಯ ವಿಚಾರ ಏನೆಂದರೆ ಆ ಚಿತ್ರನಗರಿಗೆ ಪುನೀತ್‌ ರಾಜ್‌ಕುಮಾರ್‌ ಹೆಸರಿಡಲಾಗುದೆಂದೂ ತೀರ್ಮಾನಿಸಲಾಗಿದೆ. ಆದರೆ, ಈ ಕೆಲಸಗಳು ಯಾವಾಗ ಶುರು, ಅನುದಾನದ ಮೊತ್ತವೆಷ್ಟು? ಇದ್ಯಾವುದಕ್ಕೂ ಸದ್ಯಕ್ಕೆ ಉತ್ತರವಿಲ್ಲ.

ಬಾಕಿ ಉಳಿದ ಸಿನಿಮಾ ಸಬ್ಸಿಡಿ ಕಥೆ ಏನು?

ಚಿತ್ರರಂಗದಲ್ಲಿ ಕಳೆದ ಮೂರು ವರ್ಷಗಳಿಂದ ಗುಣಾತ್ಮಕ ಸಿನಿಮಾಗಳನ್ನು ಗುರುತಿಸಿ ಸಹಾಯಧನ ನೀಡುವ ಯೋಜನೆ ಚಾಲ್ತಿಯಲ್ಲಿಲ್ಲ. ಇದೀಗ ಆ ಕೆಲಸವನ್ನು ಈ ವರ್ಷದಿಂದ ಮತ್ತೆ ಆರಂಭಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದೊಂದು ರೀತಿ ಮೂಗಿಗೆ ತುಪ್ಪ ಸವರಿದಂತೇ ವಿನಃ ಮತ್ತೇನಲ್ಲ. ಕಳೆದ ಮೂರು ವರ್ಷಗಳಿಂದ ಹಾಗೆ ಅರ್ಜಿ ಸಲ್ಲಿಕೆಯಾದ ಸಿನಿಮಾಗಳು ನೂರಾರು. ಅವೆಲ್ಲವುಗಳ ವೀಕ್ಷಣೆಗಾಗಿ ಒಂದು ಸಮಿತಿ ರಚನೆ ಮಾಡಬೇಕು. ಅವರೆಲ್ಲರೂ ಆ ಸಿನಿಮಾಗಳ ವೀಕ್ಷಣೆ ಮಾಡಿ, ಈ ಸಿನಿಮಾಕ್ಕೆ ಸಹಾಯಧನ ನೀಡಬಹುದು ಎಂದು ಸರ್ಕಾರಕ್ಕೆ ಕಳುಹಿಸಬೇಕು. ಅಲ್ಲಿಂದ ಮನ್ನಣೆ ಪಡೆದು ನಿರ್ಮಾಪಕನ ಖಾತೆಗೆ ಹಣ ಬೀಳಬೇಕೆಂದರೆ ಮತ್ತೆಷ್ಟು ವರ್ಷ ಕಳೆಯುವುದೋ!

ವಸ್ತು ಸಂಗ್ರಹಾಲಯಕ್ಕೆ ಎಷ್ಟು ವರ್ಷ ಬೇಕೋ?

ಇನ್ನು ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್‌ಕುಮಾರ್‌ ಸಮಾಧಿ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯ ನಿರ್ಮಿಸುವುದಾಗಿ ಹೇಳಿದೆ. ಈ ಯೋಜನೆ ಅನುಷ್ಠಾನಕ್ಕೆ ಬರಲು ಇನ್ನೆಷ್ಟು ವರ್ಷಗಳು ಬೇಕೋ? ಏಕೆಂದರೆ, ವರನಟ ಡಾ. ರಾಜ್‌ ಅವರ ಸ್ಮಾರಕ ನಿರ್ಮಾಣ ಮಾಡುವುದಕ್ಕೇ ಈ ಸರ್ಕಾರಗಳಿಗೆ ಒಂದು ದಶಕ ಬೇಕಾಯಿತು. ಒಟ್ಟಿನಲ್ಲಿ ಕನ್ನಡ ಸಿನಿಮಾರಂಗ ಸರ್ಕಾರದ ಕಣ್ಣಿಗೆ ಇಂದಿಗೂ ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರವಾಗಿಯೇ ಮುಂದುವರಿದಿದೆ. ಸಮಸ್ಯೆಗಳನ್ನು ಹೊತ್ತು ಸಿಎಂ ಮುಂದೆ ಆ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟರೂ, ನಿರೀಕ್ಷಿತ ಘೋಷಣೆಗಳು ಮಾತ್ರ ಚಂದನವನನ್ನು ತಲುಪುತ್ತಿಲ್ಲ.

ಇನ್ನಷ್ಟು ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ