ಪತ್ನಿ ಮಹಾಲಕ್ಷ್ಮೀಗೆ ದುರಹಂಕಾರಿ ಪಟ್ಟ ಕೊಟ್ಟ ರವೀಂದರ್ ಚಂದ್ರಶೇಖರನ್; ಪ್ರೀತಿ ವಿಚಾರದಲ್ಲಿ ಅರ್ಹತೆಯ ಪಾಠ ಮಾಡಿದ ನಿರ್ಮಾಪಕ
Sep 02, 2023 01:22 PM IST
ಪತ್ನಿ ಮಹಾಲಕ್ಷ್ಮೀಗೆ ದುರಹಂಕಾರಿ ಪಟ್ಟ ಕೊಟ್ಟ ರವೀಂದರ್ ಚಂದ್ರಶೇಖರನ್; ವಿಶೇಷ ಬರಹ ಹಂಚಿಕೊಂಡ ನಿರ್ಮಾಪಕ
- ಕಾಲಿವುಡ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತು ಮಹಾಲಕ್ಷ್ಮೀ ಮೊದಲ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ಕ್ಷಣದಲ್ಲಿ ಪತ್ನಿಗೆ ವಿಶೇಷ ಬರಹವೊಂದನ್ನು ಅರ್ಪಿಸಿದ್ದಾರೆ. ಹೀಗಿದೆ ಆ ಪತ್ರ.
Ravindar Chandrasekaran: ಕಾಲಿವುಡ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತು ಮಹಾಲಕ್ಷೀ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿ ಜೋಡಿ. ಒಳ್ಳೆಯ ವಿಚಾರಕ್ಕಿಂತ ನೆಗೆಟಿವ್ ವಿಚಾರಕ್ಕೇ ಈ ಜೋಡಿ ಹೆಚ್ಚು ಸದ್ದು ಮಾಡಿತ್ತು. ಸೋಷಿಯಲ್ ಮೀಡಿಯಾದಲ್ಲಿಯೂ ಇಬ್ಬರು ಹಾಟ್ ಟಾಪಿಕ್ ಆಗಿದ್ದರು. ಇದೀಗ ಇದೇ ಜೋಡಿ ಮೊದಲ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಪತಿ ರವೀಂದರ್ ಪತ್ನಿಗೆ ವಿಶೇಷ ಪತ್ರದ ಮೂಲಕ ಶುಭಾಶಯ ಕೋರಿದ್ದಾರೆ.
ತಮಿಳು ಸಿನಿಮಾ ನಿರ್ಮಾಪಕ ರವೀಂದರ್ ಮತ್ತು ಮಹಾಲಕ್ಷ್ಮೀ ಜೋಡಿ ಕಳೆದ ವರ್ಷದ ಸೆ. 1ರಂದು ಅದ್ದೂರಿ ಮದುವೆಯಾಗಿತ್ತು. ಈ ಜೋಡಿಗೆ ಶುಭಾಶಯಗಳಿಗಿಂತ ನೆಗೆಟಿವ್ ಮಾತುಗಳೇ ಕೇಳಿಬಂದಿದ್ದೇ ಹೆಚ್ಚು. ಈ ಜೋಡಿ ಬಗ್ಗೆ ಕಟುವಾಗಿ ಕಾಮೆಂಟ್ ಮಾಡಿದವರೇ ಹೆಚ್ಚು. ಅದ್ಯಾವ ಮಟ್ಟಿಗೆ ಎಂದರೆ, ಈ ಜೋಡಿ ಮೂರು ತಿಂಗಳ ಬಾಳಿಕೆ ಬಂದರೆ ಹೆಚ್ಚು ಎಂದಿದ್ದರು. ಇದೀಗ ಹಾಗೇ ಕೆಟ್ಟ ಮಾತುಗಳನ್ನಾಡಿರುವವರಿಗೆ ಟಾಂಗ್ ಕೊಡುವ ಮೂಲಕವೇ ವಿವಾಹ ವಾರ್ಷಿಕೋತ್ಸವದ ಬಗ್ಗೆ ಪತ್ರ ಬರೆದುಕೊಂಡಿದ್ದಾರೆ ರವೀಂದರ್.
ಹೀಗಿದೆ ರವೀಂದರ್ ಬರೆದ ಪತ್ರ
“ಹೇಗೆ ಶುರು ಮಾಡಬೇಕು, ಯಾವಾಗ ಹೇಳಬೇಕು.. ಒಂದು ವರ್ಷ ತುಂಬಾ ವೇಗವಾಗಿ ಹೋಗಿದೆ. ಅದಕ್ಕೆಲ್ಲಾ ಹೊಣೆ ಯಾರು ಗೊತ್ತಾ? ಕಳೆದ ವರ್ಷ, ನಮ್ಮ ಮದುವೆ ಆಗಿದ್ದೇ ರಾಷ್ಟ್ರದ ಬಹು ದೊಡ್ಡ ಸಮಸ್ಯೆಯಾಗಿತ್ತು. ಇದು ಹಣಕ್ಕಾಗಿ, ಈ ಸಂಬಂಧ 3 ತಿಂಗಳು ಬಾಳಿಕೆ ಬರುವುದಿಲ್ಲ, ಎಷ್ಟು ದಿನ ಈ ಸಂಬಂಧ ಮುಂದುವರಿಯಲಿದೆ.. ಎಂದು ಹೇಳಿದವರೇ ಹೆಚ್ಚು. ಇದೆಲ್ಲದರ ಬಗ್ಗೆ ಒಂದು ವಿಡಿಯೋ ಸಂದರ್ಶನವನ್ನು ಶೀಘ್ರದಲ್ಲಿ ನೀಡುವೆ.
ನನಗೂ ನನ್ನ ಪತ್ನಿಯ ವರ್ತನೆ ಅಚ್ಚರಿ ಎನಿಸಿತು. ನನ್ನ ಮನೆಕೆಲಸ, ಕಾಫಿ, ಅಡುಗೆ ಎಲ್ಲವನ್ನು ಮನೆ ಕೆಲಸದವರೇ ಮಾಡಬೇಕು ಎಂದುಕೊಂಡೆ. ಆದರೆ, ನನ್ನವಳು ಹಾಗೆ ಆಗಲು ಬಿಡಲಿಲ್ಲ. ಬೆಳಗ್ಗೆ ಬೇಗ ಎದ್ದು ಮನೆಯಂಗಳ ಶುಚಿಗೊಳಿಸಿ, ರಂಗೋಲಿ ಹಾಕಿ, ಕಾಫಿ ಮಾಡಿ ಕೊಡುತ್ತಾಳೆ. ಒಮ್ಮೊಮ್ಮೆ ಕೆಟ್ಟದಾದ ಅಡುಗೆ ಮಾಡಿದ್ದೂ ಇದೆ. ಬಳಿಕ ನಾವು ಸ್ವಿಗ್ಗಿ ಮತ್ತು ಜೊಮ್ಯಾಟೋ ಬಳಕೆ ಆರಂಭಿಸಿದೆವು.
ಅವಳು ಕೊಂಚ ದುರಹಂಕಾರಿ.. ಆದರೆ..
ಟಿವಿಯಲ್ಲಿ ಕಾಣುವಂತೆ ಆಕೆ ಕಾಣಿಸುವುದಿಲ್ಲ. ಅವಳಿಗೆ ಕೊಂಚ ಆಟಿಟ್ಯೂಡ್ ಇದೆ. ಅವಳ ಪ್ರೀತಿ ಕೊಂಚ ಒರಟು. ದುರಂಹಕಾರಿಯೂ ಹೌದು. ಆದರೆ, ನನ್ನ ಮೇಲೆ ಅತಿಯಾದ ಪ್ರೀತಿ ಬಂದಾಗ, ಆಕೆ ನೇರವಾಗಿ ಅಡುಗೆ ಮನೆಗೆ ಹೋಗುತ್ತಾಳೆ. ನನಗಾಗಿ ಏನಾದರೂ ಮಾಡಿ ತರುತ್ತಾಳೆ. ನಾವು ಬೇರ್ಪಟ್ಟಿದ್ದೇವೆ, ದೂರವಾಗಿದ್ದೇವೆ ಎಂದು ಯೂಟ್ಯೂಬ್‌ಗಳಲ್ಲಿ ಸುದ್ದಿಗಳು ಬಂದಾಗ, ನಾವು ಅವರೆಲ್ಲರ ಮುಂದೆ ಬಾಳಿ ಬದುಕಬೇಕು ಎಂದು ಹೇಳುತ್ತಾಳೆ. ಅದನ್ನು ನಾವು ಸಾಬೀತುಪಡಿಸಬೇಕು ಎನ್ನುತ್ತಾಳೆ.
ನಾನು ಅವಳ ಪ್ರೀತಿಗೆ ಅರ್ಹನಲ್ಲ
ನಾನು ಅವಳ ನಿಜವಾದ ಮತ್ತು ಪ್ರಾಮಾಣಿಕ ಪ್ರೀತಿಗೆ ಅರ್ಹನಲ್ಲ. ಆದರೂ ಪರವಾಗಿಲ್ಲ ನಮ್ಮ ಜೀವನ ತುಂಬ ಸುಂದರವಾಗಿದೆ. ಸಂತೋಷದಲ್ಲಿ ನಮ್ಮನ್ನು ನಗಿಸುವ ಹುಡುಗಿ ಮತ್ತು ಸಂತೋಷದಲ್ಲಿ ನಮ್ಮನ್ನು ಅಳುವಂತೆ ಮಾಡುವ ಹುಡುಗಿ ಮಾತ್ರ ನಮಗೆ ಅತ್ಯುತ್ತಮವಾದ ಜೀವನವನ್ನು ನೀಡಬಲ್ಲಳು. ನನ್ನ ಬಂಗಾರ ನನ್ನ ಮಹಾಲಕ್ಷ್ಮೀ. ಒಳ್ಳೆಯ ಹೆಂಡತಿ ಆಗುವುದು ಅದು ದೇವರ ವರ ಎಂದು ಸುದೀರ್ಘವಾದ ಪತ್ರ ಬರೆದುಕೊಂಡಿದ್ದಾರೆ.